
ಪುತ್ತೂರು ಸೈಡಿನ ಬುಳೇರಿಕಟ್ಟೆ ಗಣೇಶ ಮೆರವಣಿಗೆ ಬಗ್ಗೆ ಹತ್ತಿರದ ಊರಿನ ಚೌತಿ ಪೆಂಡಾಲ್ ನಲ್ಲಿ ಮೈಕ್ ಸಿಕ್ಕಿದ ಸಡಗರದಲ್ಲಿ ವ್ಯಕ್ತಿಯೊಬ್ಬರು ಬ್ರೇಕ್ ಫೇಲಾದ ನಾಲಿಗೆಯಿಂದ ಅವಹೇಳನಕಾರಿಯಾಗಿ ಮಾತನಾಡಿದ ಬಗ್ಗೆ ತಿಳಿದು ಬಂದಿದೆ. ಅನಂತರ ಆ ಜನ ಕ್ಷಮೆ ಕೇಳಿ ಬಚಾವಾದ ಬಗ್ಗೆ ಮಾಹಿತಿ ಇದೆ. ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ಡಿಶುಂ ಡಿಶುಂ ಕೂಡ ನಡೆದ ಬಗ್ಗೆ ಗುಸುಗುಸು ಇದೆ.
ಅಲ್ಲಿ ಬುಳೇರಿಕಟ್ಟೆಯಲ್ಲಿ ಮೊನ್ನೆ ಚೌತಿಗೆ ಗಣೇಶ ಇಟ್ಟಿದ್ದರು. ದೊಡ್ಡ ಗಣಪತಿ. ಈ ಸಲ ಭವಿಷತ್ ಪೂಜಾರಿ ಎಂಬ ವೈಭವ್ ಸೂರ್ಯವಂಶಿಗಿಂತ ಸ್ವಲ್ಪ ದೊಡ್ಡ, ಅಭಿಷೇಕ್ ಶರ್ಮನಿಗಿಂತ ಸ್ವಲ್ಪ ಚಿಕ್ಕ ಯುವಕನನ್ನು ಗಣೇಶ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಹಾಗಾಗಿ ಝೆನ್ ಜಿ ಮಾದರಿಯಲ್ಲಿ ಯುವಕರ ದಂಡು ನೆರೆದಿತ್ತು. ಭಾರೀ ಗೌಜಿಯೋ ಗೌಜಿಯಲ್ಲಿ ಮೊನ್ನೆ ಹದಿನಾಲ್ಕನೇ ತಾರೀಖು ನೈಟ್ ಗಣೇಶ ಮೆರವಣಿಗೆ ನಡೆದು ವಿಸರ್ಜನೆ ಕೂಡ ಮಾಡಲಾಗಿತ್ತು. ಮರುದಿನ ಹತ್ತಿರದ ಊರು ಕುಂಜೂರು ಪಂಜದಲ್ಲಿ ಚೌತಿ ಸಭಾ ಕಾರ್ಯಕ್ರಮ. ಸಂಘಟಕರು ಎರಡು ಮಾತಾನಾಡಲು ಮೈಕ್ ಕೊಟ್ಟಿದ್ದು ವೆಂಕಟ್ರಮಣ ಭಟ್ರಿಗೆ. ಭಟ್ರು ಹಿಂದಿನ ದಿನ ಬುಳೇರಿಕಟ್ಟೆ ಗಣೇಶ ಮೆರವಣಿಗೆಯಲ್ಲಿ ಟ್ರಕ್ ಅರ್ಚಕರಾಗಿ ಕಾರ್ಯವಹಿಸಿದ್ದವರು. ಭಟ್ರು ಎದ್ದು ನಿಂತು ಶುರು ಮಾಡಿದರು.
“ನಿನ್ನೆ ಬುಳೇರಿಕಟ್ಟೆಯಲ್ಲಿ ವಿಸರ್ಜನೆ ಭಾರೀ ಲೇಟಾಗಿತ್ತು. ಅಲ್ಲಿ ದೇವರನ್ನೇ ಕಾಯಿಸಿದರು. ಪರಿಮಿತಿ ಇಲ್ಲದವರು ಹೀಗೆಲ್ಲ ಮಾಡುತ್ತಾರೆ. ಹಿರಿಯರ ಮಾರ್ಗದರ್ಶನ ತೆಗೆದು ಕೊಳ್ಳಲ್ಲ. ಕುಡಿದು ಕುಡಿದು ಕುಣಿದರು, ತಂದಿದ್ದು ಮುಗಿದಾಗ ಪುನಃ ತರಿಸಿ ಭಜನಾ ಮಂದಿರದ ಬಳಿ ಕುಡಿದು ಕುಣಿದರು. ಅಮೃತ ಕುಡಿದಾಗೇ ಕುಡುದರು. ಇಡೀ ಮೆರವಣಿಗೆಯಲ್ಲಿ ಊದುಬತ್ತಿ ಹಚ್ಚಿದ್ದರೂ ಅಮೃತದ ಪರಿಮಳಾ ಘಂ ಘಮ್ಮೆಂದು ಮೂಗಿಗೆ ರಾಚುತ್ತಿತ್ತು” ಎಂದೆಲ್ಲಾ ಭಟ್ರು ಸ್ಟ್ರೇಜಲ್ಲಿ ಓಪನಾಗಿ ವಂದೇ ಭಾರತ್ ಬಿಟ್ಟು ಬಿಟ್ಟರು. ಬೆಂಕಿ ಹತ್ತಿಕೊಂಡಿತು. ಬುಳೇರಿಕಟ್ಟೆ ಹುಡುಗರು ಝೆನ್ ಜಿ ಮಾದರಿಯಲ್ಲಿ ಎದ್ದು ಬಿಟ್ಟರು. ಭವಿಷತ್ ಪೂಜಾರಿ ಹುಡುಗರ ದಂಡನ್ನೇ ಕಟ್ಟಿ ಭಟ್ರು ಕ್ಷಮೆ ಕೇಳ ಬೇಕೆಂದು ಪಟ್ಟು ಹಿಡಿದು ಬಿಟ್ಟ. ಅದೂ ಎಲ್ಲಿ ಕ್ಷಮೆ ಕೇಳ ಬೇಕು ಅಂದರೆ ಎಲ್ಲಿ ಭಟ್ರು ಕುಂಜೂರು ಪಂಜದಲ್ಲಿ ಭಾಷಣ ಬಿಗಿದ ಸ್ಟೇಜಲ್ಲೇ ಹೋಗಿ ಕ್ಷಮೆ ಕೇಳಬೇಕೆಂದು ಹಠ ಮಾಡಲಾಯಿತು. ಕಡೆಗೆ ಭಟ್ರು ಹೆದರಿ, ಬೆದರಿ ಲೋಕಲ್ ಭಜನಾ ಮಂದಿರವೊಂದರಲ್ಲಿ ಹುಡುಗರ ಮುಂದೆ ಕ್ಷಮೆ ಕೇಳಿ ಬಿಟ್ಟರು ಮತ್ತು ಜಾಲತಾಣಗಳಲ್ಲಿ ಕೂಡ ಭಟ್ರು “ತಪ್ಪಾಗಿದೆ ” ಅಂದು ಬಿಟ್ಟಿದ್ದರು. ಪಂಚಾಯ್ತಿ ನಡೆಸಲು ಹಸಂತಡ್ಕದಿಂದ ಮುರಳಿಯಣ್ಣ ಕೂಡಬಂದಿದ್ದರಂತೆ.
ಹಾಗೆಂದು ಈ ಗಲಾಟೆ ಭಾರೀ ಜೋರಾಗಿತ್ತು. ಬುಳೇರಿಕಟ್ಟೆಯ ಟೀಂ ಅಗ್ನಿ ಭಾಷಣ ಬಿಗಿದ ಭಟ್ರನ್ನು ಮೇಲೆ ಕೆಳಗೆ ಮಾಡಿ ಬೆವರಿಳಿಸಿತ್ತು. ಈ ವಿಷಯದಲ್ಲಿ ಸಮಿತಿಯ ಪದಾಧಿಕಾರಿಗಳ ನಡುವೆಯೂ ಭಿನ್ನಮತ ಸ್ಫೋಟಗೊಂಡು ಡಿಶುಂ ಡಿಶುಂ ಮಾಡಿಕೊಂಡಿದ್ದಾರೆ ಎಂದು ಗುಸುಗುಸು ಇದೆ. ಗಣೇಶ ಸಮಿತಿಯ ಗೌರವಾಧ್ಯಕ್ಷರ ಮರದ ಮಿಲ್ಲಿಗೆ ಪಂಚಾಯ್ತಿ ನಡೆಸಲು ಬಂದ ಭವಿಷತ್ ಮತ್ತು ಗೌರವಾಧ್ಯಕ್ಷ ಗಣೇಶ್ ಭಟ್, ದಯಾನಂದ ಪೂಜಾರಿ,ಟೈಲರ್ ಕುಂಞಣ್ಣ ನಡುವೆ ಡಿಶುಂ ಡಿಶುಂ ನಡೆದಿದೆ ಎಂದು ಗುಸು ಗುಸು ಇದೆ. ಟೈಲರಣ್ಣ ಕತ್ತರಿ ಹಿಡಿದು ಪೆಟ್ಟಿಗೆ ಬಂದಿದ್ದರು ಎಂಬ ಆಡೀಯೋ ವೈರಲ್ ಆಗಿದೆ.
ಹಾಗೆಂದು ಬುಳೇರಿಕಟ್ಟೆ ಜಟಾಪಟಿಯಲ್ಲಿ ಗಮನಿಸಬೇಕಾದ ತುಂಬಾ ವಿಷಯಗಳಿವೆ. ಈ ಸಲ ತುಂಬಾ ಅಪಶಕುನಗಳು ಘಟಿಸಿದ್ದು ಮೆರವಣಿಗೆಯಲ್ಲಿ ಅಪಗಪಗ ವಾಹನಗಳು ಕಂಜಿ ಹಾಕಿದ ಬಗ್ಗೆ ತಿಳಿದು ಬಂದಿದೆ. ಡೀಸೆಲ್ ಮುಗಿದದ್ದು, ಪಿಕಪ್ ಗೆ ಹುಷಾರಿಲ್ಲದಾಗಿದ್ದು, ಟ್ರಕ್ ಗೆ ದಮ್ಮು ಕಟ್ಟಿದ್ದು, ಜೀಪಿಗೆ ತಲೆ ತಿರುಗಿದ್ದು ಹೀಗೆ ಅನೇಕ ಅಡೆತಡೆಗಳಾಗಿದೆ. ಅದರಲ್ಲೂ ಗಣಪತಿ ವಿಸರ್ಜನೆ ನೈಟ್ ಹನ್ನೆರಡು ಮುಕ್ಕಾಲಿನ ತನಕ ಲಾಂಗ್ ಟೈಮ್ ಎಳೆದದ್ದೂ ವಿಪರ್ಯಾಸ. ಎಲ್ಲಾ ಮುಗಿದ ಮೇಲೆ ಭಟ್ರು ಮಾಡಿದ ಕಿತಾಪತಿಯಿಂದಾಗಿ ಇಡೀ ಊರಿಗೆ ಊರೇ ಎರಡು ಬಣಗಳಾಗಿ ಭಾಗವಾಗಿ ಹೋಗಿದೆ. ಇದಕ್ಕೆಲ್ಲ ಮೂಲ ಕಾರಣ ಗಣಪತಿ ಪಂಚಕಜ್ಜಾಯ ಸೂತಕದ ಭಟ್ರು ಮಾಡಿದ್ದು ಎಂಬ ಗುಮಾನಿ ಊರಲ್ಲಿದೆ. ಇದರಿಂದಾಗಿ ಇಷ್ಟೆಲ್ಲಾ ಅಪಶಕುನಗಳು ನಡೆದಿರ ಬಹುದು ಎಂಬ ಸಂಶಯ ಊರಲ್ಲಿದೆ. ವೆಂಕಟರಮಣ ಭಟ್ಟರು ಕುಂಜೂರು ಪಂಜದ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತಾಡುತ್ತಾ ಬುಳೇರಿಕಟ್ಟೆ ಹುಡುಗರು ಕುಡುದು ಕುಣಿದರು, ತಂದಿದ್ದು ಮುಗಿದಾಗ ಮತ್ತೇ ತರಿಸಿ ಕುಡಿದು ಕುಣಿದರು, ವಿಸರ್ಜನೆ ಲೇಟ್ ಆಯ್ತು, ದೇವರನ್ನೇ ಕಾಯಿಸಿದರು, ಊದುಬತ್ತಿ ಪರಿಮಳಕ್ಕಿಂತ ಜಾಸ್ತಿ ಅಮೃತದ ಪರಿಮಳಾ ಜಾಸ್ತಿ ಇತ್ತು ಎಂದೆಲ್ಲಾ ಭಾಷಣ ಬಿಗಿದದವರು ಸೂತಕದ ಭಟ್ರು ಪಂಚಕಜ್ಜಾಯ ಮಾಡಿದ ಬಗ್ಗೆ ಮಾತಾಡಲೇ ಇಲ್ಲ. ಹುಡುಗ್ರು ಕುಡಿದ ಬಗ್ಗೆ ಅಷ್ಟೆಲ್ಲ ಬಿಟ್ಟ ಭಟ್ರು ಪಂಚಕಜ್ಜಾಯದ ಬಗ್ಗೆ ಕೂಡ ಎರಡು ಮಾತು ಆಡಬೇಕಿತ್ತು ಎಂಬುದು ಊರವರ ಅಭಿಪ್ರಾಯ. ಊದುಬತ್ತಿ ಪರಿಮಳಾಕ್ಕಿಂತ ಅಮೃತದ ಪರಿಮಳವೇ ಜಾಸ್ತಿ ಇತ್ತು ಅನ್ನುವ ಭಟ್ರು ಅಮೃತದ ಪರಿಮಳಾ ಜಾಸ್ತಿ ಬರುತ್ತಿದ್ದರೆ ಮೂಗಿಗೆ ಹತ್ತಿ ಇಟ್ಟುಕೊಳ್ಳಬೇಕಿತ್ತು ಎಂಬ ಜೋಕ್ಸ್ ಬುಳೇರಿಕಟ್ಟೆಯಲ್ಲಿ ವೈರಲ್ ಆಗಿದೆ.