ಸುಬ್ರಹ್ಮಣ್ಯದಲ್ಲಿ ಶ್ರೀನಿಕೇತನ ತೆರವಿಗೆ ದಿನ ಸಿಕ್ಕಿಲ್ವಾ?

Pattler News

Bureau Report

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸುಬ್ರಹ್ಮಣ್ಯದಲ್ಲಿ ತೆರವು ಕಾರ್ಯಾಚರಣೆ ಓ ಮೊನ್ನೆಯಿಂದ ನಡೆಯುತ್ತಿದ್ದು ಬಡಬಗ್ಗರ, ಕಂಡಾಪಟ್ಟೆ ನಿತ್ರಾಣದವರ, ಧಮ್ಮು ತೆಗೆಯಲು ಕಷ್ಟ ಆಗುತ್ತಿದ್ದವರ ಬಿಲ್ಡಿಂಗ್ ಗಳೆಲ್ಲವೂ ಜೆಸಿಬಿಗೆ ಆಹಾರವಾಗಿದೆ. ಆದರೆ ಶ್ರೀನಿಕೇತನ ಅನ್ನುವ ಬಿಲ್ಡಿಂಗ್ ಒಂದನ್ನು ಬಿಟ್ಟು. ದಿನ ಸಿಕ್ಕಿಲ್ಲ ಅಂತೆ ತೆಗಿಲಿಕ್ಕೆ. ಉತ್ತರಾಯಣ ಬರಬೇಕಷ್ಟೆ.

ಹಾಗೆಂದು ಕರ್ನಾಟಕದ ನಂಬರ್ ವನ್ ದೇವರು ಸುಬ್ರಹ್ಮಣ್ಯನ ಊರು ಓಬಿರಾಯನ ಕಾಲದಿಂದಲೂ ಅಭಿವೃದ್ಧಿ ಪಥದತ್ತ ಸಾಗುತ್ತಲೇ ಇದೆ. ಕಳ್ಳಕಾಕರು ಸುಬ್ರಹ್ಮಣ್ಯದ ತುಂಬಾ ತುಂಬಿಕೊಂಡರೂ ಸುಬ್ರಹ್ಮಣ್ಯನ ಖಜಾನೆ ಮಾತ್ರ ಬರಿದಾಗದೆ ಅದು ಕುಬೇರನ ಖಜಾನೆ ಲೆವೆಲ್ ಗೆ ಬಂದು ನಿಂತದ್ದು ಮಾತ್ರ ಇತಿ‌ಹಾಸ. ಇದೀಗ ಅಭಿವೃದ್ಧಿಗೆ ಪೂರಕವಾಗಿ ಸುಪ್ರೀಂ ಕೋರ್ಟ್ ಸುಬ್ರಹ್ಮಣ್ಯದ ತುಂಬಾ ಇದ್ದ ಓಬಿರಾಯನ ಕಾಲದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿತ್ತು. ಅಲ್ಲಿ ಡೆಲ್ಲಿಯಲ್ಲಿ ಆದೇಶ ಟೈಪಿಗೆ ಹೋದ ಕೂಡಲೇ ಇಲ್ಲಿ ಸುಬ್ರಹ್ಮಣ್ಯದಲ್ಲಿ ಜೆಸಿಬಿ ಅರೆದ್ದಲು ಶುರು ಮಾಡಿದೆ. ಹಾಗೆ ಸ್ಟಾರ್ಟ್ ಆದ ಜೆಸಿಬಿ ಬಕೆಟ್ ಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎತ್ತಿ ಲಗಾಡಿ ಮಾಡಿ ಗ್ರೌಂಡ್ ಕ್ಲೀಯರೆನ್ಸ್ ಮಾಡಿದೆ. ಅಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ಪಾಪ ಬಡವರ ಅಂಗಡಿ ಮುಗ್ಗಟ್ಟುಗಳ ಐಟಂ ಖಾಲಿ ಮಾಡಲು ಬಿಡದೆ ಕೂಡ ಕಟ್ಟಡಗಳನ್ನು ಮಗುಚಿ ಹಾಕಲಾಗಿದೆ. ಈ ಬಗ್ಗೆ ಸ್ಟೆಲ್ಲಾ ಮ್ಯಾಡಿ ಐದು ದಿನಗಳ ಪುರುಸೊತ್ತು ಕೊಟ್ಟಿದ್ದರೂ ಅಂಗಡಿ ಮಾಲೀಕರನ್ನು ಒಂದ್ನಿಮಿಷವೂ ಅಯ್ಯಪ್ಪ ಎಂದು ಕೂರಲೂ ಬಿಡದೆ ಸುತಗುಂಡಿ ಭಾರೀ ಅರ್ಜೆಂಟ್ ಅರ್ಜೆಂಟ್ ಆಗಿ ಜೆಸಿಬಿ ಇಳಿಸಿದ್ದು ಪಾಪದವರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಅಲ್ಲಿ ಆದಿಯಲ್ಲಿ ಜೆಸಿಬಿ ಆರ್ಭಟ ಕುಮಾರ್ ಪರ್ವತದ ಕೊಡಿ ತನಕ ಕೇಳಿಸುತ್ತಿದ್ದರೂ ಇತ್ತ ದೇವಸ್ಥಾನದ ಕೈತಲ್ ಇರುವ ಶ್ರೀನಿಕೇತನ ಎಂಬ ಬಿಲ್ಡಿಂಗ್ ತೆಗೆಯಲು ಕಾಲ ಕೂಡಿ ಬಂದಿಲ್ಲವಂತೆ. ಹೇಗೇಗೆ ಪಂಚಾಂಗ ಮಗುಚಿ ಮಗುಚಿ ನೋಡಿದರೂ ನಿಕೇತನ ತೆಗೆಯಲು ದಿನ ಸಿಗುತ್ತಿಲ್ಲ. ಅಲ್ಲಿ ಆದಿ ಸುಬ್ರಹ್ಮಣ್ಯದ ಪಾಪದವರ ಅಂಗಡಿಗಳಿಗೆ ಹೇಗೆ ಸುಪ್ರೀಂ ಆದೇಶ ಆಗಿದೆಯೋ ಅದೇ ಲಿಸ್ಟ್ ನಲ್ಲಿ ಇದೇ ಶ್ರೀ ನಿಕೇತನ ಕೂಡ ಇದೆ. ಆದರೆ ಜೆಸಿಬಿ ನಿಕೇತನದ ಬದಿಯಲ್ಲಿ, ಎದುರಲ್ಲಿ, ಪಿರಾವು ಎಲ್ಲಾ ಹೋಗುತ್ತದೆ. ಆದರೆ ಶ್ರೀನಿಕೇತನದ ಮುಂದೆ ಬಂದಾಗ ಮಾತ್ರ ಜೆಸಿಬಿಗೆ ಯಾಕೋ ಬಿಲ್ಡಿಂಗ್ ತೆಗೆಯಲು ಬಕೆಟೇ ಬರಲ್ಲ. ಹಾಗೆಂದು ಶ್ರೀನಿಕೇತನದ ಅಡಿ ಸ್ಥಳಕ್ಕೂ, ಇಡೀ ಬಿಲ್ಡಿಂಗಿಗೂ ಹೊಟ್ಟೆ ತುಂಬಾ ಪರಿಹಾರ ಸಿಕ್ಕಿದೆ. ಸುಪ್ರೀಂ ಆದೇಶ ಬಂದ ಕೂಡಲೇ ಬಿಲ್ಡಿಂಗ್ ನಲ್ಲಿ ಬಾಡಿಗೆಗಿದ್ದ ಬಾಡಿಗೆದಾರರೆಲ್ಲ ಅಂಗಡಿ ಖಾಲಿ ಮಾಡಿಕೊಂಡು ಹೋಗಿದ್ದರೂ ಇನ್ನೂ ಜೆಸಿಬಿ ಶ್ರೀನಿಕೇತನದ ಕಡೆ ಯಾಕೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಂದು ಮಾಹಿತಿ ಪ್ರಕಾರ ಶ್ರೀನಿಕೇತನವನ್ನು ಉಳಿಸಿ ಕೊಳ್ಳಲು ಪರದೆ ಹಿಂದೆ ಭಾರೀ ಕಸರತ್ತು ನಡೆದಿದ್ದು ದೊಡ್ಡ ದೊಡ್ಡ ಮಂಡೆಗಳು ದೊಡ್ಡ ಮಟ್ಟದಲ್ಲಿ ಕುಂತು ಮಾತಾಡುತ್ತಿವೆ ಎಂದು ತಿಳಿದುಬಂದಿದೆ. ಎಲ್ಲಿಯಾದರೂ ಈ ಬಿಲ್ಡಿಂಗ್ ತೆಗೆಯದೆ ಇದ್ದರೆ ಮುಂದೆ ಈ ಬಿಲ್ಡಿಂಗ್ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಲಿದೆ. ಅದಕ್ಕಾಗಿ ಆದಷ್ಟು ಜೆಸಿಬಿ ಶ್ರೀನಿಕೇತನ ಕಡೆ ಬರದಂತೆ ತಡೆಯಲಾಗುತ್ತಿದೆ. ಹಾಗೇನಾದರೂ ಈ ಬಿಲ್ಡಿಂಗ್ ತೆಗೆಯದೆ ಇದ್ದರೆ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಪಾಪದವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಾಯಣಕ್ಕೆ ಯಾರಾದರೂ ಕಾಯುತ್ತಿದ್ದಾರಾ?

ಇನ್ನು ಅಲ್ಲಿ ಸುಬ್ರಹ್ಮಣ್ಯದಲ್ಲಿ ಪುಟ್ ಪಾತ್ ಗೆ ತಡೆಗೋಡೆ ಟೈಪ್ ಹಾಕಿದ್ದ ಸ್ಟೀಲ್ ಕಂಬಿಗಳು ಕಾಣಿಸುತ್ತಿಲ್ಲ ಮಾರಾಯ್ರೆ. ಎಲ್ಲಿ ಹೋಗಿದೆ ಎಂದೇ ಗೊತ್ತಿಲ್ಲ. ಕಂಡ ಹಾಗೆ ಆಗಿದೆ ಕೆಲವು ಕಡೆ. ಈಗ ಇಲ್ಲ. ಪೆತ್ತ ತಿಂದಿತು, ನಾಯಿ ತಿಂದಿತು,ಯಶಸ್ವಿನಿ ತಿಂದಳು ಎಂದು ಹೇಳುವಂತಿಲ್ಲ ಯಾಕೆಂದರೆ ಅದು ಸ್ಟೀಲು. ಹಾಕಿದ್ದಾರೆ, ಆದರೆ ಈಗ ಕೆಲವು ಕಡೆ ಕಾಣಿಸುತ್ತಿಲ್ಲ. ಯಾರೇ ಆಗಲಿ ಇಂಥ ಸ್ಟೀಲ್ ಕಂಬಿಗಳು ಕಿತ್ತು ಹಾಕಿದವರ, ತೆಗೆದು ಅಡಗಿಸಿ ಇಟ್ಟವರ ಕೈಗಳನ್ನು ಆದಷ್ಟು ಬೇಗ ಲಟಕ್ಕ್ ಮಾಡಿ ಎಲುಬು ತಜ್ಞನ ಬಳಿ ಕಳಿಸಲೇ ಬೇಕಾಗಿದೆ. ಇಲ್ಲದಿದ್ದರೆ ಇಡೀ ಸುಬ್ರಹ್ಮಣ್ಯ ತುಂಬಾ ಹಾಕಿರುವ ಅಷ್ಟೂ ಸ್ಟೀಲ್ ಕಂಬಿಗಳು ಗುಜಿರಿ ಪಾಲಾಗುವ ಅಪಾಯಗಳಿವೆ. ಪುಟ್ ಪಾತ್ ಗೆ ಹಾಕಿರುವ ಸ್ಟೀಲ್ ಕಂಬಿಗಳನ್ನು ಅವರೆಲ್ಲ ಸೇರಿಕ್ಕೊಂಡು ಗುಜಿರಿಗೆ ಹಾಕಿಯಾರು ಯಾಕೆಂದರೆ ಅದು ಅವರ ಅಪ್ಪನ ಗಂಟಲ್ಲ ಅಲ್ವಾ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top