ಸುಳ್ಯದಲ್ಲಿ ಕರೆಂಟ್ ಇಲ್ಲ ಗಡ!

Pattler News

Bureau Report

ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಆರರಿಂದ ನೈಟ್ ಒಂಬತ್ತರ ತನಕ ಕರೆಂಟ್ ಸಪ್ಲೈ ಇಲ್ಲದ ಬಗ್ಗೆ ಮಾಹಿತಿ ಬಂದಿದೆ. ಪೋನ್ ಮಾಡಿದ್ರೆ ಕರೆಂಟ್ ಆಫೀಸಿನವರು ಪೋನ್ ಎತ್ತದಿರುವ ಬಗ್ಗೆಯೂ ದೂರುಗಳಿದ್ದು ಈ ಎಕ್ಸಾಂ ಟೈಮುಗಳಲ್ಲಿ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸಾರ್ವಜನಿಕರ ತಗಡ್ ಬೆಚ್ಚಕ್ಕೆ ಕಾರಣವಾಗಿದೆ. ನೈಟ್ ಪೀಕ್ ಅವರ್ ಗಳಲ್ಲಿ ಓದಲು, ಬರೆಯಲು, ಅಡುಗೆ ಮಾಡಲು, ಊಟ ಮಾಡಲು ಇಲ್ಲದ ಕರೆಂಟ್ ರಾತ್ರಿ ಬರೋದು ಯಾಕೆ ಜಂಬರ ಮಾಡ್ಲಿಕ್ಕಾ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

ಹಾಗೆಂದು ಸುಳ್ಯ ತಾಲೂಕು ಓಬಿರಾಯನ ಕಾಲದಿಂದಲೂ ಸಮಸ್ಯೆಗಳ ಗಣಿ. ಒಂದಲ್ಲ ಒಂದು ಸಮಸ್ಯೆಯಿಂದ ಸುಳ್ಯ ಯಾವಾಗಲೂ ಐಸಿಯೂನಲ್ಲೇ ಕಳೆದದ್ದೇ ಹೆಚ್ಚು. ಇದೀಗ ಕರೆಂಟ್ ಸಮಸ್ಯೆ ಧುತ್ತೆಂದು ಬಂದು ನಿಂತಿದೆ. ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಆರರಿಂದ ನೈಟ್ ಒಂಬತ್ತರ ತನಕ ಕರೆಂಟಿಲ್ಲ. ಯಾಕೆ ಅಂತ ಕೇಳಿದ್ರೆ ಅವರು ಪೋನ್ ಎತ್ತಿದರೆ ತರಾವಳಿ ಉತ್ತರ. ಗ್ರಾಮೀಣ ಭಾಗಕ್ಕೆ ಲೋಡ್ ಶೆಡ್ಡಿಂಗ್ ಅಂತೆ, ಮೇಲಿಂದ ಸಪ್ಲೈ ಇಲ್ಲಂತೆ, ಮಳೆ ಇಲ್ಲದೆ ಕರೆಂಟ್ ಉತ್ಪತ್ತಿ ಇಲ್ಲಂತೆ, ನೋಡುವ, ನಾಳೆ ಬೆಳಿಗ್ಗೆ ಬರುತ್ತೇವೆ, ಎಂ.ಡಿ ಗೆ ಹೇಳಿ ಇತ್ಯಾದಿ ಇತ್ಯಾದಿ. ಹಾಗೆಂದು ಕರೆಂಟ್ ಸುಳ್ಯದ ನಗರ ಪ್ರದೇಶಗಳಲ್ಲಿ ಇದೆ. ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ಜನ ಜೀವನದ ಅರ್ಜೆಂಟ್ ಪೀಕ್ ಅವರ್ ಗಳಲ್ಲಿಯೇ ಕರೆಂಟ್ ಕಜೆಂಟಾಗಿ ಚುಂಯ್ಕ ಆದರೆ ಜನ ಜೀವನ ಅಸ್ತವ್ಯಸ್ತ ಆಗಿ ಬಿಡುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಪಡುವ ಪಾಡಂತೂ ಹೇಳ ತೀರದು. ಮೇಲಾಗಿ ಮಧ್ಯಾವಧಿ ಪರೀಕ್ಷೆಗಳ ಟೈಮು, ವಿದ್ಯಾರ್ಥಿಗಳು ಓದುವುದು, ಬರೆಯುವುದು ಹೇಗೆ? ಇನ್ನು ಮನೆ ಕಡೆ ಅಡುಗೆ ಆಗಬೇಕು, ಊಟ ಮಾಡಬೇಕು, ನಾಳೆಯ ಬದುಕಿಗೆ ರೆಡಿ ಆಗಬೇಕು, ಖಾಸಗೀ ಫಂಕ್ಸನ್ಸ್ ಇದೆ, ಕುಲೆಗಳಿಗೆ ಬಡಿಸ್ಲಿಕ್ಕೆ ಇದೆ, ತಂಬಿಲ ಇದೆ, ಕಲ್ಲುರ್ಟಿ ಅಗೆಲಿದೆ ಹೀಗೆ ಎಲ್ಲವೂ ಇದೆ. ಆದರೆ ಕರೆಂಟಿಲ್ಲ.ಅದರಲ್ಲೂ ನಾಳೆಯಿಂದ ನವರಾತ್ರಿ ಬೇರೆ ಇದೆ, ದೀಪಾವಳಿ ದಾರಿಯಲ್ಲಿದೆ. ಇಂಥಾ ಟೈಮಲ್ಲಿ ಕರೆಂಟಿಲ್ಲ‌ ಅಂದ್ರೆ?ಎಲ್ಲಾ ಬಿಟ್ಟು ಒಂದು ಪಡಿಕ್ಕೆ ಬಿಡ್ಲಿಕ್ಕೆ ಹೋರಗೆ ಹೋಗುವ ಹಾಗಿಲ್ಲ ಮಾರಾಯ್ರೆ.ಗರ್ಗುಂಡಿ ಕತ್ತಲೆ.

ಹಾಗೆಂದು ಅತ್ತ ಘಟ್ಟದ ತಪ್ಪಲಿನಿಂದ ಒಂದು ಗುಡುಂ ಅಂತ ಕೇಳಿದರೆ ಸಾಕು ಇಲ್ಲಿ ಮೈನ್ ಸ್ವಿಚ್ ಹತ್ರ ಓಡಿ ಆಯಿತು. ಸುಳ್ಯದಲ್ಲಿ ಒಂದು ಸಣ್ಣ ಮುಗಲ್ ಬಂದರೆ ಸಾಕು ಸುಳ್ಯದ ಮುಗಲ್ ಇಂಜಿನಿಯರ್ ಇಡೀ ತಾಲೂಕಿನ ಕರೆಂಟ್ ಕಟ್ ಮಾಡಿ ಬಿಡುತ್ತಾನೆ. ಹೇಳುವವರು ಕೇಳುವವರು ಯಾರೂ ಇಲ್ಲ. ಲೈನ್ ಮ್ಯಾನ್ಸ್ ಪೋನ್ ತೆಗೆಯಲ್ಲ, ಮುಗಲ್ ಇಂಜಿನಿಯರ್ ಮುಗಲಲ್ಲಿ ಮಾತಾಡುವುದು ಯಾವ ಭಾಷೆಯಲ್ಲಿ ಎಂದೇ ಅರ್ಥ ಅಗಲ್ಲ, ಮೇಲೆ ಪೋನ್ ಮಾಡಿದ್ರೆ ಕೆಳಗೆ ಮಾತಾಡಿ ಎಂಬ ಉತ್ತರದಿಂದ ಜನ ತತ್ತರ. ಹೇಗೆ ಸ್ವಾಮಿ ಬದುಕೋದು. ಸಮಸ್ಯೆಯನ್ನು ಯಾರಿಗೆ ಹೇಳೋಣ? ಇನ್ನು ಒಂದು ಸಣ್ಣ ಗಾಳಿ ಬಂದರೂ ಸಾಕು ಇಡಿಕ್ಕಿಡೀ ಲೈನೇ ಫಾಲ್ಟ್ ಆಗಿ ಬಿಡುತ್ತದೆ. ಯಾಕೆಂದರೆ ಅರಣ್ಯ ಇಲಾಖೆಯವರು ಸಸಿ ತಂದು ನೆಡೋದೇ ಕರೆಂಟ್ ಲೈನಿನ ಅಡಿಯಲ್ಲಿ ಮತ್ತು ಮೆಸ್ಕಾಂ ನವರು ಲೈನ್ ಎಳೆಯೋದೇ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ. ಹಾಗೆ ಅವರಿಗೆ ಒಂದಕ್ಕೊಂದು ಲಿಂಕ್ ಇದೆ. ಸುಳ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್ ಕೈ ಕೊಟ್ಟರೆ ದೇವರೇ ಗತಿ.ಒಂದು ದಿನ ಲೈನ್ ಮ್ಯಾನ್ ಗೆ ಫೋನ್ ಮಾಡಲು, ಒಂದು ದಿನ ಅವನು ಫೋನ್ ಎತ್ತಲು, ಒಂದು ದಿನ ಫಾಲ್ಟ್ ಹುಡುಕಲು, ಇನ್ನೊಂದು ದಿನ ಏಣಿ ತರಲು ಹಾಗೂ ಮತ್ತೊಂದು ದಿನ ಸರಿ ಮಾಡಲು. ಹೀಗಿದೆ ಸುಳ್ಯದ ಪರಿಸ್ಥಿತಿ.

ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಯ್ತಾಪ್ಪಾ? ಶತಮಾನದ ಆಸುಪಾಸಿನಲ್ಲಿ ಇದ್ದೇವೆ. ಗಾಂಧಿಜೀ ಸ್ವಾತಂತ್ರ್ಯ ತಂದು ಕೊಟ್ಟು ಇಲ್ಲಿ ಸತ್ತು, ಪುನರ್ಜನ್ಮ ಪಡೆದು ಅಲ್ಲಿ ಪುನರ್ಜನ್ಮದಲ್ಲೂ ಸಾಯುವ ಕಾಲವಾದರೂ ನಮಗಿನ್ನೂ ಒಂದು ಕರೆಂಟ್ ವ್ಯವಸ್ಥೆ ಮಾಡಿಕೊಳ್ಳಲಾಗಿಲ್ಲ. ಮಳೆ ಇಲ್ಲದ ಕಾರಣ ಕರೆಂಟ್ ಇಲ್ಲ ಎಂದು ಸುಳ್ಳು ಸುಳ್ಳೇ ಹೇಳುತ್ತೇವೆ. ದುಬೈ ದೇಶದಲ್ಲಿ ಮಳೆ ಇದೆಯಾ, ಅಲ್ಲಿ ಸೌದಿ ಅರೇಬಿಯಾದ ಮರಳುಗಾಡಿನಲ್ಲಿ? ಅಲ್ಲಿ ಅವರೆಲ್ಲ ಮಳೆ ಇಲ್ಲದೆ ಕರೆಂಟ್ ವ್ಯವಸ್ಥೆ ಮಾಡಿಕೊಂಡಿದ್ದಾರೆಂದರೆ ಇಲ್ಲಿ ನಮ್ಮ ಪ್ರಜಾಪ್ರಭುಗಳಿಗೆ ಹಾಗೆ ಮಾಡಿಕೊಳ್ಳಲು ಶನಿ ಸಂಕಟ ಏನಾಗಿದೆ? ವಿದ್ಯುತ್ ನಮ್ಮ ಮೂಲಭೂತ ಅವಶ್ಯಕತೆ. ಕರೆಂಟ್ ಇಲ್ಲದ ಜೀವನ ಬೆಟ್ರಿ ಇಲ್ಲದ ಮೊಬೈಲ್ ನಂತೆ. ಇವರು ನಮ್ಮ ಬೆಟ್ರಿಯೇ ತೆಗೆದು ಬಿಡುವುದು ಮಾರಾಯ್ರೆ. ಎಷ್ಟು ದಿನ ಹೀಗೆ ಕರೆಂಟ್ ಇಲ್ಲ, ಕರೆಂಟ್ ಇಲ್ಲ ಎಂದು ಕಿರುಚಾಟ, ಅರಚಾಟ ನಡೆಸಲಿ? ನಾಚಿಕೆ ಆಗಲ್ವಾ ನಿಮ್ಗೆ ಹಾಗೆ ಸುಳ್ಳು ಹೇಳಿಕ್ಕೆ? ಮಾನ ಮರ್ಯಾದೆ ಇಲ್ವೇನ್ರಿ ನಿಮ್ಗೆ? ಯಾವ ಕರ್ಮಕ್ಕೆ ಆ ಇಲಾಖೆಯಲ್ಲಿ ಕೆಲಸ ಮಾಡುತ್ತೀರಾ? ಹೆಂಡ್ತಿ ಮಕ್ಕಳನ್ನ ಸಾಕ್ಲಿಕ್ಕಾ? ಸಂಬಳ, ಗಿಂಬಳ ತಿಂದು ತೇಗ್ಲಿಕ್ಕಾ?ಶೇಮ್ ಶೇಮ್. ಗಾಂಧಿಯ ಮಣ್ಣಿನಲ್ಲಿ, ಜವಾಹರನ ದೇಶದಲ್ಲಿ, ಸುಭಾಸ್ ಬೋಸ್, ವಲ್ಲಭ್ ಪಟೇಲನ ಯುಗದಲ್ಲಿ ಇವರೆಲ್ಲ ಹುಟ್ಟಿಕೊಂಡಿದ್ದು ವಿಪರ್ಯಾಸವೇ ಸರಿ. ಕರೆಂಟ್ ಕೊಡದ ಸುಳ್ಯದ ಮುಗಲ್ ಇಂಜಿನಿಯರನನ್ನು ಹಾಗೆ ನಿಲ್ಲಿಸಿ ಸ್ಪೆಷಲ್ ಕ್ಲಾಸ್ ತಗೊಳ್ಳುವ ಒಬ್ಬೇ ಒಬ್ಬ ಲೀಡರ್ ಸುಳ್ಯದಲ್ಲಿ ಜನ್ಮವೆತ್ತದ್ದು ನಮ್ಮ ಹಣೆಬರಹ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top