ನವರಾತ್ರಿಯಲ್ಲಿ ಜಲದುರ್ಗೆ!

Pattler News

Bureau Report

ಪೆರುವಾಜೆಯ ಮಾಗಣೆ ದೇವಸ್ಥಾನ ಜಲದುರ್ಗಾ ದೇವಿ ಕ್ಷೇತ್ರದಲ್ಲಿ ಈ ಸಲದ ನವರಾತ್ರಿ ಉತ್ಸವಗಳು ವಿಶೇಷ ಕಳೆ ಕಟ್ಟಿದ್ದು ಭಕ್ತ ಸಾಗರ ದೇವಿ ಸನ್ನಿಧಿಗೆ ಹರಿದು ಬರುತ್ತಿದೆ. ಭಕ್ತಿಯ ಸುಧೆಯಲ್ಲಿ ಮಿಂದೇಳಲು ಇದಕ್ಕಿಂತ ಒಳ್ಳೆಯ ದಿನಗಳಿಲ್ಲ. ದೇವಿ ಸನ್ನಿಧಿಗೆ ನಾವು ಇಳಿದು ಇಳಿದು ಹೋಗಬೇಕು.

ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ಇಪ್ಪತ್ತೊಂದು ಗ್ರಾಮಗಳ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾ ದೇವಿಗೆ ಈಗ ನವರಾತ್ರಿ ಸಂಭ್ರಮ, ಸಡಗರ. ತನ್ನ ಸನ್ನಿಧಿಗೆ ಹರಿದು ಬರುತ್ತಿರುವ ಭಕ್ತ ಸಾಗರ ಕಂಡು ಶೈಲಪುತ್ರಿ ಪ್ರಸನ್ನಳಾಗಿದ್ದಾಳೆ, ಪುಳಕಿತಗೊಂಡಿದ್ದಾಳೆ. ದಿನಕ್ಕೊಂದು ವಿಶೇಷ ಅಲಂಕಾರದಿಂದ ಶೃಂಗಾರಗೊಂಡಿರುವ ಸಿದ್ಧಿಧಾತ್ರಿಯನ್ನು ನೋಡಲು ಎರಡು ಕಣ್ಣು ಸಾಲದು, ದೃಷ್ಟಿ ಕೀಳಲು ಮನಸ್ಸು ಬಾರದು. ಈ ಬಾರಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶ್ರೀದೇವಿಗೆ ಅಕ್ಕಿ ಸಮರ್ಪಿಸುವ ಹರಿವಾಣ ಸೇವೆ ಮತ್ತು ದೊಡ್ಡ ಲಡ್ಡು ಸೇವೆ ವಿಶೇಷ ಸೇವೆಗಳಾಗಿವೆ. ಅಲ್ಲಿ ದೇವಸ್ಥಾನದ ಕೌಂಟರ್ ನಲ್ಲಿ ನೂರು ರೂಪಾಯಿ ಪಾವತಿಸಿ ರಶೀದಿ ಪಡೆದು ಅಕ್ಕಿ ತುಂಬಿದ ಹರಿವಾಣ ಪಡೆದು ಅದನ್ನು ಹಿಡಿದು ದೇವಸ್ಥಾನದ ಅಂಗಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವಿ ಸನ್ನಿಧಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸ ಬೇಕು. ಬಳಿಕ ಹರಿವಾಣದಲ್ಲಿರುವ ಅಕ್ಕಿಯನ್ನು ಹುಂಡಿಗೆ ಸಮರ್ಪಿಸುವುದು ಈ ಸೇವೆಯ ವಿಧಾನವಾಗಿದೆ. ನಾವು ಸಲ್ಲಿಸಿದ ಹರಿವಾಣ ಸೇವೆಯ ಅಕ್ಕಿಯನ್ನು ದೇವಿಯ ನೈವೇದ್ಯಕ್ಕೆ ಬಳಸಲಾಗುತ್ತದೆ.

ಹಾಗೆಂದು ಹರಿವಾಣ ಸೇವೆಯ ಫಲಾಫಲ ದೊಡ್ಡದು. ತಮ್ಮ ಮನದ ಅಭೀಷ್ಟಗಳನ್ನು ದೇವಿಯ ಮುಂದಿಟ್ಟು, ಭಕ್ತಿಯಿಂದ ಹರಿವಾಣ ತುಂಬಾ ಅಕ್ಕಿ ಹಿಡಿದು ದೇವಿ ಸುತ್ತಾ ಪ್ರದಕ್ಷಿಣೆ ಬಂದು, ಹರಿವಾಣ ದೇವಿ ಮುಂದಿಟ್ಟು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತದೆ, ಅದರ ಫಲಾಫಲ ತಲೆಮಾರುಗಳ ತನಕ ಮುಂದುವರಿಯುತ್ತದೆ ಎಂಬ ನಂಬಿಕೆ ಇದೆ. ಈ ವಿಶೇಷ ಸೇವೆ ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ಜಲದುರ್ಗೆಯ ದರ್ಶನದೊಂದಿಗೆ ಲಭಿಸುತ್ತಿರುವುದು ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರಿಗೆ ದೊರೆತ ಜೀವನದ ಒಂದು ಅಮೂಲ್ಯ ಕ್ಷಣ ಮತ್ತು ಅಪೂರ್ವ ಅವಕಾಶವಾಗಿದೆ. ಇನ್ನು ದೇವಸ್ಥಾನದಲ್ಲಿ ದೊಡ್ಡ ಲಡ್ಡು ಸೇವೆ ಕೂಡ ಲಭ್ಯವಿದ್ದು ಕೌಂಟರ್ ನಲ್ಲಿ ನೂರು ರೂಪಾಯಿ ಪಾವತಿಸಿದರೆ ತಿರುಪತಿ ಮಾದರಿಯ ದೊಡ್ಡ ಲಡ್ಡು ಪ್ರಸಾದ ಲಭಿಸಲಿದೆ. ಈ ಲಡ್ಡನ್ನು ತುಪ್ಪ, ಗೇರುಬೀಜ, ಒಣ ದ್ರಾಕ್ಷಿ ಮುಂತಾದ ಐಟಂಗಳಿಂ ತಯಾರಿಸಲಾಗಿದ್ದು ರುಚಿಕರವಾಗಿದೆ ಮತ್ತು ಒಂದು ಲಡ್ಡು ಭರಾಬರಿ ಇದೆ.

ಪೆರುವಾಜೆ ದೇವಸ್ಥಾನ ಮಾಗಣೆ ದೇವಸ್ಥಾನ. ಜಲದುರ್ಗಾ ದೇವಿ ಸನ್ನಿಧಿ ಇದೆ. ಉದ್ಭವ ಮೂರ್ತಿ ಇದಾಗಿದೆ. ಕೃಷಿ ಭೂಮಿಗಳಲ್ಲಿ, ವಸತಿ ವ್ಯವಸ್ಥೆಗಳಿಗೆ ಜಲಸಮಸ್ಯೆ ಬಗ್ಗೆ ಜಲದುರ್ಗೆಗೆ ಹರಿಕೆ ಹೊತ್ತರೆ ಸಮಸ್ಯೆ ಪರಿಹಾರ ಕಾಣುವುದು ಎಂಬ ನಂಬಿಕೆ ಇದೆ. ಪೆರುವಾಜೆ ದೇವಸ್ಥಾನ ಇಳಿಜಾರು ದಾಟಿ ಒಂದು ತಗ್ಗು ಪ್ರದೇಶದಲ್ಲಿ ಇದ್ದು ವಿಶೇಷವಾದ ಒಂದು ಅಲಿಖಿತ ನಿಯಮಕ್ಕೆ ಬದ್ಧವಾದಂತಿದೆ. ದೇವಿ ಸನ್ನಿಧಿಗೆ ಬರುವ ಪ್ರತೀ ಭಕ್ತನೂ ಕಾಮ, ಕ್ರೋಧ, ಮದ, ಮತ್ಸರಗಳನ್ನು ತೊರೆದು, ದುರ್ಗುಣಗಳು,ದುಶ್ಚಟಗಳನ್ನು ಬಿಟ್ಟು, ಅಹಂಕಾರದಿಂದ ಇಳಿದು ಇಳಿದು ಮಡಿವಂತನಾಗಿ, ಶುಚಿರ್ಭೂತರಾಗಿ, ನಿಷ್ಕಲ್ಮಶ ಮನಸ್ಸಿನಿಂದ ಸನ್ನಿಧಿಗೆ ಬಂದರೆ ಮಾತ್ರ ಮಹಾಗೌರಿ ಭಕ್ತನ ಇಷ್ಟಾರ್ಥ ಸಿದ್ಧಿ ನೆರವೇರಿಸುತ್ತಾಳೆ ಎಂಬ ನಂಬಿಕೆ ಇದೆ. ಅದಕ್ಕೆ ಪೆರುವಾಜೆ ದೇವಸ್ಥಾನಕ್ಕೆ ಇಳಿಯುತ್ತಾ ಇಳಿಯುತ್ತಾ ಹೋಗ ಬೇಕು. ಜಲದುರ್ಗಾ ದೇವಿ ಸಕಲರಿಗೂ ಒಳಿತನ್ನು ಹರಸಲಿ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top