
ಸುಬ್ರಹ್ಮಣ್ಯದಲ್ಲಿ ಮೊನ್ನೆ ಸರ್ಪ ಸಂಸ್ಕಾರ ಟಿಕೆಟ್ ವಿಷಯದಲ್ಲಿ ಶಿಷ್ಟಾಚಾರ ಕಚೇರಿ ಮುಂದೆ ಗಲಾಟೆ ನಡೆದ ಬಗ್ಗೆ ಮಾಹಿತಿ ಬಂದಿದೆ. ಗಲಾಟೆ ಕೇಳಿ ಸುಬ್ರಹ್ಮಣ್ಯ ಪೋಲಿಸರೂ ಸ್ಪಾಟಿಗೆ ಬಂದಿದ್ದು ಪರಿಸ್ಥಿತಿ ತಿಳಿಗೊಳಿಸಿದ್ದರು. ಸರ್ಪ ಸಂಸ್ಕಾರದ ನಾಲ್ಕೂ ಇನ್ನೂರು ಬೆಲೆಯ ಟಿಕೆಟ್ ಹನ್ನೆರಡು ಸಾವಿರಕ್ಕೆ ಬ್ಲ್ಯಾಕಲ್ಲಿ ಸೇಲಾದ ಬಾಬ್ತು ಗಲಾಟೆ. ಟಿಕೆಟ್ ಕೊಟ್ಟು ಸಿನಿಮಾ ತೋರಿಸದಿದ್ದರೆ ಹೇಗೆ ಮಾರಾಯ್ರೆ?
ಹಾಗೆಂದು ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರಕ್ಕೆ ಆನ್ ಲೈನ್, ಆಫ್ ಲೈನ್ ಬುಕ್ಕಿಂಗ್ ಇದೆ. ಆನ್ ಲೈನ್ ಅಂದರೆ ಮೊದಲೇ ಬುಕ್ಕಿಂಗ್ ಮಾಡಿ,ಸರ್ಪ ಸಂಸ್ಕಾರಕ್ಕೆ ದಿನ ಫಿಕ್ಸ್ ಮಾಡೋದು. ಆಫ್ ಲೈನ್ ಅಂದರೆ ಉದಾಹರಣೆಗೆ ಕೆಲವರು ಆನ್ ಲೈನ್ ಬುಕ್ಕಿಂಗ್ ನವರು ಫಿಕ್ಸ್ ಆದ ದಿನ ಬರಕ್ಕೆ ಆಗಲ್ಲ. ಸೂತಕ, ಬಸ್ ಸಿಕ್ಲಿಲ್ಲ, ಜ್ವರ, ಶುಭ ಸಮಾರಂಭ ಹೀಗೆ ಬರೋದಿಲ್ಲ. ಟೋಟಲ್ ನೂರ ಮೂವತ್ತೈದು ಡೈಲಿ ಆನ್ ಲೈನ್ ಬುಕ್ಕಿಂಗ್ ಇದ್ದು ಅದರಲ್ಲಿ ಅಂದಾಜು ಇಪ್ಪತ್ತು ಜನ ವಿವಿಧ ಕಾರಣಗಳಿಗಾಗಿ ಬರೋದಿಲ್ಲ. ಆಗ ಆ ಇಪ್ಪತ್ತು ಸೀಟ್ ಭರ್ತಿ ಮಾಡಲು ಆಫ್ ಲೈನ್ ಬುಕ್ಕಿಂಗ್ ಮಾಡಲಾಗುತ್ತದೆ. ಈ ಆಫ್ ಲೈನ್ ಬುಕ್ಕಿಂಗ್ ನಲ್ಲಿ ಇಲ್ಲಿನ ಅಧಿಕಾರಿ ವರ್ಗ ಸಾಕಷ್ಟು ಕಿಸೆ ಭರ್ತಿ ಮಾಡುತ್ತಿದ್ದು ನಾಲ್ಕು ಸಾವಿರದ ಇನ್ನೂರು ಬೆಲೆಯ ಒಂದು ಸರ್ಪ ಸಂಸ್ಕಾರದ ಟಿಕೆಟನ್ನು ” ಇವತ್ತಿಗೆ ಟಿಕೆಟ್ ಇಲ್ಲ, ಭರ್ತಿ ಆಗಿದೆ,ಹನ್ನೆರಡು ಸಾವಿರ ಕೊಟ್ಟರೆ ಇವತ್ತಿಗೆ ವ್ಯವಸ್ಥೆ ಮಾಡುತ್ತೇವೆ” ಎಂದು ಅಮಾಯಕ ಭಕ್ತರನ್ನು ಮಂಗ ಮಾಡಿ ರಜನೀಕಾಂತನ ಮ್ಯಾಟಿನಿ ಶೋ ಟಿಕೆಟ್ ಬ್ಲ್ಯಾಕಲ್ಲಿ ಮಾರಿದ ಹಾಗೆ ಮಾರಲಾಗುತ್ತದೆ. ಇಂಥಾ ತುಂಬಾ ಟಿಕೆಟ್ ಗಳು ದಿನಾ ಸೇಲ್ ಆಗುತ್ತಲೇ ಇರುತ್ತದೆ.

ಹಾಗೆ ಓ ಮೊನ್ನೆ ಆಫ್ ಲೈನಲ್ಲಿ ಬುಕ್ಕಿಂಗ್ ಮಾಡಿದ್ದ ಎರಡು ಭಕ್ತರು ಬ್ಲ್ಯಾಕಲ್ಲಿ ತಲಾ ಹನ್ನೆರಡು ಹನ್ನೆರಡು ಸಾವಿರ ಕೊಟ್ಟು ಸರ್ಪ ಸಂಸ್ಕಾರಕ್ಕೆ ಬಂದಿದ್ದರು.ಆದರೆ ಅದೇನು ಎಡವಟ್ಟಾಯಿತೋ ಗೊತ್ತಿಲ್ಲ ಒಬ್ಬ ಭಕ್ತನನ್ನು ನಿಗದಿತ ದಿನದಂದು ಸರ್ಪ ಸಂಸ್ಕಾರದ ಮಂಡಲದಲ್ಲಿ ಕೂರಿಸಲು ಆಗಲೇ ಇಲ್ಲ. “ನಾಳೆ” ಅಂತ ಭಕ್ತನಿಗೆ ಹೇಳಲಾಯಿತು. ಇದರಿಂದಾಗಿ ದುಡ್ಡು ಕೊಟ್ಟು ಸುಧೆ ಈಜಿದ ಭಕ್ತನ ಪಿತ್ತ ನೆತ್ತಿಗೇರಿತ್ತು. ಅವನು ಬಂದು ಪ್ರೋಟೋಕಾಲ್ ಆಫೀಸ್ ಮುಂದೆ ಗಲಾಟೆ ಮಾಡಿದ್ದಾನೆ. ಗಲಾಟೆ ಜೋರಾಗಿದೆ. ಗಲಾಟೆಯ ಡೆಸಿಬೆಲ್ ಮೀಟರ್ ಜೋರಾಗುತ್ತಿದ್ದಂತೆ ಸುಬ್ರಹ್ಮಣ್ಯ ಪೋಲಿಸರೂ ಸ್ಥಳಕ್ಕೆ ಬಂದು ಕಂಟ್ರೋಲ್ ಮಾಡಿದ್ದಾರೆ. ನಂತರ ಭಕ್ತನ ದುಡ್ಡು ವಾಪಾಸ್ ಮಾಡಲಾಯಿತಾ ಅಥವಾ ಇನ್ನೊಂದು ದಿನ ಮಂಡಲದಲ್ಲಿ ಕೂರಿಸುವುದಾ ಎಂಬ ನಿರ್ಧಾರದ ಬಗ್ಗೆ ತಿಳಿದು ಬಂದಿಲ್ಲ.

ಹಾಗೆ ನೋಡಿದರೆ ಇಲ್ಲಿ ಸರ್ಪ ಸಂಸ್ಕಾರದ ಎಲ್ಲಾ ಎಡವಟ್ಟುಗಳನ್ನು ಕ್ರಿಯಾಕರ್ತೃಗಳ ಮೇಲೆ ಹಾಕೋದು ರೂಢಿ. ಸುಮಾರು ಇನ್ನೂರಷ್ಟಿರುವ ಕ್ರಿಯಾ ಕರ್ತೃಗಳು ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಅವರನ್ನು ಹೊಟ್ಟೆಗೆ ಚಂಡಿ ಕುಂಟು ಕಟ್ಟಿಸಿ ಮಲಗಿಸುವುದು ಬಿಟ್ಟರೆ ಇಲ್ಲಿನ ಅಧಿಕಾರಿ ವರ್ಗ ಅಮಾಯಕ ಭಕ್ತರನ್ನು ಟಾರ್ಗೆಟ್ ಮಾಡಿ ನಡೆಸುವ ಹಗಲು ದರೋಡೆ, ಸುಲಿಗೆ ನೋಡಿದರೆ ಖುದ್ದು ಚಂಬಲ್ ರಾಣಿ ಪೂಲನ್ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಾಳು. ಕ್ರಿಯಾ ಕರ್ತೃಗಳಿಗೆ ಇಲ್ಲಿ ಎರಡು ದಿನಕ್ಕೆ ಎಂಟು ನೂರು ಸಂಬಳ ಇದ್ದು ಅದೂ ಡ್ಯೂಟಿ ಸಿಕ್ಕಿದರೆ ಮಾತ್ರ ಚಾನ್ಸು, ಇಲ್ಲದಿದ್ದರೆ ಹೊಟ್ಟೆಗೆ ಚಂಡಿ ಕುಂಟು ಗ್ಯಾರೆಂಟಿ. ಆದರೆ ಅಧಿಕಾರಿ ವರ್ಗಕ್ಕೆ ಇಲ್ಲಿ ನಿತ್ಯ ಒಸರು, ನಾಲ್ಕಿಂಚು ನೀರು.
ಮೊನ್ನೆ ಗುತ್ತಿಗಾರ್ಲಿ BMS ಸಾರಥಿಗಳ ನಿಲ್ದಾಣಲಿ ಭಾರಿ ಗಮ್ಮತ್ ನ ಆಯುಧ ಪೂಜೆ ಅವುಟು. ಸಮಾರಂಭಲಿ ಊರಿನ ಗಣ್ಯರು, ಆಪ್ತರು, ಪ್ರೀತಿಪಾತ್ರರು, ಹಿತೈಷಿಗ ಭಾಗವಹಿಸಿದ್ದ. ವಲಳಂಬೆ ಭಟ್ರು ಧಾರ್ಮಿಕ ವಿಧಿ ವಿಧಾನ ಗಳನ್ನು ನಡೆಸಿದ್ದು ಪೂಜೆ ಅದ ಮೇಲೆ ಪ್ರಸಾದ ವಿತರಣೆ ಮಾಡಲಾಯಿತು. ಅಧ್ಯಕ್ಷರು ಮೋನಣ್ಣ ಮತ್ತೆ ಸಂಘ ದ ಪದಾಧಿಕಾರಿಗಳು ಭಾರಿ ಸಂತೋಷ ಲಿ ಅತಿಥಿಗಳ ಸ್ವಾಗತ ಮಾಡಿದ. ಪೂಜೆ ಅದ ಮೇಲೆ ಅತಿಥಿ ಗಳಿಗೆ ಪಂಚಕಜ್ಜಾಯ ವಿತರಣೆ ಮಾಡಲಾಯಿತು. ಮಂಜಲ್ ಲಾಡು, ಮಂಜಲ್ ಶೀರಾ, ಬೆಚ್ಚ ಬೆಚ್ಚ ಮಂಜಲ್ ಮಾಲ್ಟ್ ಮೆನು ಇತ್ತು. ಕೊರಂಬಡ್ಕ ಕೇಶವಣ್ಣ ಮನೆಂದ ಮಾಡಿ ತಂದ ಕ್ಷೀರಾ ಭಾರಿ ಲಾಯ್ಕ್ ಆಗಿತ್ತುಗಡ.
