ಸುಳ್ಯದ ಬಸ್ ನಿಲ್ದಾಣದ ಆಟೋ ಕ್ಯೂ ಫುಲ್?

Pattler News

Bureau Report

ಸುಳ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಆಟೋ ಕ್ಯೂ ಹಿಂದಿದ್ದ ಮೆಂಬರ್ ಗಳಿಗೆ ಮಾತ್ರ ಸೀಮಿತವಾಗಿದ್ದು ಹೊಸಬರಿಗೆ ಇಲ್ಲಿ ಬಾಡಿಗೆ ಮಾಡಲು ಬಿಡಲ್ಲ ಎಂಬ ದೂರಿದೆ. ಆಟೋ ಕ್ಯೂ ಫುಲ್ ಆಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಅಲ್ಲಿ ಸುಳ್ಯ ಕೆಎಸ್ಸಾರ್ಟಿಸಿ ಬಳಿಯ ರಿಕ್ಷಾ ಕ್ಯೂ ಇಡೀ ಸುಳ್ಯದಲ್ಲಿಯೇ ಜಾಸ್ತಿ ಬಾಡಿಗೆ ತರುವ ಕ್ಯೂ ಆಗಿದ್ದು ಇಲ್ಲಿ ರಜನೀಕಾಂತನ ಮೇಟನಿ ಕ್ಯೂ ರೀತಿಯಲ್ಲಿ ಆಟೋಗಳಿವೆ. ಆ ಸ್ಟ್ಯಾಂಡಲ್ಲಿ ಎಷ್ಟು ಆಟೋಗಳಿವೆ ಎಂಬ ಬಗ್ಗೆ ನಿಖರ ಮಾಹಿತಿಗಳಿಲ್ಲ. ಆದರೆ ಹೊಸದಾಗಿ ಮಾತ್ರ ಯಾರನ್ನೂ ಆ ಕ್ಯೂ ಒಳಗೆ ಸೇರಿಸಿ ಕೊಳ್ಳಲ್ಲ ಎಂಬ ದೂರಿದೆ. ಈ ಆಟೋ ಕ್ಯೂ ಕೂಡ ಸಂಘವೊಂದರ ಅಡಿಯಲ್ಲಿ ಇದ್ದು ಬಾಡಿಗೆ ಮಾಡುತ್ತಿದೆ. ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಕ್ಯೂ ಕೇಳಿದರೂ “ಫುಲ್ ಉಟ್ಟು ಗಡ” ಎಂಬ ಅಡ್ಡ ಗೋಡೆಯ ದೀಪದ ಉತ್ತರ ಬರುತ್ತದೆ.

ಹಾಗೆಂದು ಕ್ಯೂ ಫುಲ್ ಆಗಿದ್ದರೆ ಇರ್ಲಿ ಬಿಡಿ. ಒಳ್ಳೇ ಬಾಡಿಗೆ ನಡೆಯಲಿ. ಆದರೆ ಈ ನಿಲ್ದಾಣದ ಇನ್ನೊಂದು ಸಮಸ್ಯೆ ಏನೆಂದರೆ ಈ ಆಟೋ ನಿಲ್ದಾಣದ ಆಸುಪಾಸಿನಲ್ಲಿ ಬೇರೆ ಯಾವುದೇ ಆಟೋ ಬಾಡಿಗೆ ಹಿಡಿಯುವಂತಿಲ್ಲ ಎಂಬ ಅಂಡಿಗುಂಡಿ ನಿಯಮ ಜಾರಿಯಲ್ಲಿದೆ. ಎಲ್ಲಿಯಾದರೂ ಅಪ್ಪಿ ತಪ್ಪಿ ಬೇರೆ ಆಟೋದವರಿಗೆ ಗೊತ್ತಿಲ್ಲದೆ ಅಥವಾ ಪ್ರಯಾಣಿಕರಿಗೆ ಅರಿವಿಲ್ಲದೆ ಖಾಲಿ ರಿಕ್ಷಾ ಅಂತ ಕೈ ಹಿಡಿದು ನಿಲ್ಲಿಸಿ ಬಾಡಿಗೆ ಹಿಡಿದರೂ ಸಾಕು ಕ್ಯೂ ಮೆಂಬರ್ ಗಳಿಂದ ಮಂಗಳಾರತಿ ಗ್ಯಾರಂಟಿ. ಅದರಲ್ಲೂ ಪರ ಊರಿನ ಆಟೋಗಳಿಗೆ ಇಲ್ಲಿನ ರೂಲ್ಸ್ ಗೊತ್ತಿಲ್ಲದೆ ಅವರು ಜನ ಹತ್ತಿಸಿ, ಗಲಾಟೆ ಆಗಿ, ಪೆಟ್ಟುಗುಟ್ಟು ತನಕ ಮುಟ್ಟಿದ ಉದಾಹರಣೆಗಳೂ ಇದೆ. ಒಂದು ರೀತಿಯಲ್ಲಿ ನೋಡಿದರೆ ಕ್ಯೂನಲ್ಲಿ ಆಟೋ ಇರುವಾಗ ಕ್ಯೂ ಹತ್ತಿರದಲ್ಲೇ ಬೇರೆ ಆಟೋಗಳು ಬಂದು ಬಾಡಿಗೆ ಮಾಡೋದು ತಪ್ಪು. ಆದರೆ ಈ ಬಗ್ಗೆ ಕ್ಯೂ ಮೆಂಬರ್ ಗಳು ದೇವಕ್ರೀಯೆಯಲ್ಲಿ ಇತರೇ ಆಟೋದವರಿಗೆ ಮನವರಿಕೆ ಮಾಡ ಬೇಕೇ ಹೊರತು ರಾಕ್ಷಸ ಕ್ರೀಯೆಯಲ್ಲಿ ಅಲ್ಲ ಎಂಬುದು ಇತರೇ ಆಟೋದವರ ವಾದ. ಅದರಲ್ಲೂ ಕ್ಯೂ ಮೆಂಬರ್ ಶಿಪ್ ತಮಗೆ ಬೇಕಾದವರಿಗೆ ಮಾತ್ರ ಕೊಡುತ್ತಾರೆ ಎಂಬ ಅಪವಾದಗಳೂ ಇದೆ.

ಹಾಗೆಂದು ಆಟೋದಲ್ಲಿ ದುಡಿಯೋದು ಎಂದರೆ ಅದೊಂದು ಕಷ್ಟದ ಕಾಯಕ. ಬಿಸಿಲಲ್ಲಿ ಒಣಗಿ, ಸೆಕೆಯಲ್ಲಿ ಬೆವರಿ, ಚಳಿಯಲ್ಲಿ ನಡುಗಿ, ಮಳೆಯಲ್ಲಿ ಒದ್ದೆಯಾಗಿ ಕೆಲಸ ಮಾಡಿದರೆ ಸಂಜೆ ಸಮಯದಲ್ಲಿ ಅಕ್ಕಿ ಪರ್ಚೇಸ್ ಮಾಡ ಬಹುದು. ಇಲ್ಲದಿದ್ದರೆ ಗೋವಿಂದ. ಹೆಚ್ಚಿನ ಎಲ್ಲಾ ಆಟೋ ಡ್ರೈವರ್ ಗಳ ಕತೆಯೂ ಹೀಗೆಯೇ ಇರುತ್ತದೆ. ಕೆಲವು ಆಟೋ ಡ್ರೈವರ್ ಗಳು ಎಷ್ಟು ಬಡತನದಲ್ಲಿ ಇರುತ್ತಾರೆಂದರೆ ಅವರಿಗೆ ಆಟೋ ಸಂಘಗಳಿಗೆ ಮೆಂಬರ್ ಆಗಲೂ ದುಡ್ಡಿರುವುದಿಲ್ಲ. ಅಂಥವರು ಪಾಪ ಬಂದು ಸುಳ್ಯ ಬಸ್ ನಿಲ್ದಾಣದ ಬಳಿಯ ಆಟೋ ಕ್ಯೂ ಆಸುಪಾಸಿನಲ್ಲಿ ಬಾಡಿಗೆ ಹಿಡಿದರೆ ಅದಕ್ಕೆ ಹೋಗಿ ಗಲಾಟೆ ಮಾಡೋದು, ದೆಪ್ಪೆದೀಪೆ ಹೇಳೋದು, ಕೀಗೆ ಕೈ ಹಾಕೋದು ಮುಂತಾದ ರಾಕ್ಷಸ ಕ್ರೀಯೆಯ ವಿರೋಧಗಳು ಆಕ್ಷೇಪಾರ್ಹ. ಕೇವಲ ಐವತ್ರೂಪಾಯಿ, ನೂರ್ರೂಪಾಯಿ ವಿಷಯಕ್ಕೆಲ್ಲ ಸಹೋದ್ಯೋಗಿಗಳ ನಡುವೆ ಕುರುಕ್ಷೇತ್ರ ಯಾಕೆ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top