ಪುತ್ತೂರು ನಗರದ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಿರಿಕ್ ಮಾಡುವ ಬಿಲ್ ಕಲೆಕ್ಟರ್ ಗಳು ಇದ್ದು ಅವರ ಅನಾಗರೀಕ ವರ್ತನೆಗಳಿಂದ ಜನ ರೋಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಪಾರ್ಕಿಂಗ್ ವಿಷಯದಲ್ಲಿ ದಿನಾ ಜಗಳಗಳಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ನಂತಹ ಅನಿವಾರ್ಯಗಳಿಗೂ ಸುಲಿಗೆ ಮಾಡುವುದು ವಿಪರ್ಯಾಸವೇ ಸರಿ. ಒಂದು ಚೂರು ಜಾಗದಲ್ಲಿ ಇಂಟರ್ ಲಾಕ್ ಅಳವಡಿಸಿದ ಕಾರಣಕ್ಕೆ ವಾಹನ ಮಾಲೀಕರ ಸುಲಿಗೆಗೆ ಇಳಿಯೋದು ತಪ್ಪು
ಹಾಗೆಂದು ಪುತ್ತೂರಿನ ಕಲ್ಲಾರೆಯಲ್ಲಿರುವ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ಸವಾರರಿಗೆ ಕಿರುಕುಳ ಕೊಡಲಾಗುತ್ತಿದೆ. ಪಾರ್ಕಿಂಗ್ ಮಾಡುವವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇರೋದು ಮೂರು ಕುಕ್ಕಿನಷ್ಟು ಉದ್ದ ಇದ್ದರೂ, ದಿನವಿಡೀ ಬಿಸಿಲಿನಲ್ಲಿ ಹೆಣ ಕಾಯುವ ಕೆಲಸ ಮಾಡಿದರೂ ಬಿಲ್ ಕಲೆಕ್ಟರರ ಅಹಂಕಾರಕ್ಕೆ ಪೆಟ್ಟೇ ಮದ್ದು ಎಂಬಲ್ಲಿ ತನಕ ಪರಿಸ್ಥಿತಿ ಇದೆ. ಗಾಡಿ ಮಾಲೀಕರೊಂದಿಗೆ ಸುಮ್ಮನೆ ಕಿರಿಕ್, ಚಿಲ್ಲರೆ ರೌಡಿಸಂ, ನಾಲಿಗೆಯನ್ನು ರೋಡ್ ತನಕ ಹರಿಬಿಡುವುದು ಮುಂತಾದ ವಿಕೃತ ಮನಸ್ಥಿತಿಯ ಜನರ ಜೊತೆಗೆ ಲಡಾಯಿ ಮಾಡಿ ಮಾಡಿ ಜನ ಹೈರಾಣ ಆಗಿದ್ದಾರೆ.
ಹಾಗೆಂದು ಈ ಒಂದು ಪೇ ಪಾರ್ಕಿಂಗ್ ಗುತ್ತಿಗೆ ಯಾರದ್ದು ಎಂದು ಗೊತ್ತಿಲ್ಲ. ಆದರೆ ಅವನು ಸುಲಿಗೆ ಮಾಡಲಿಕ್ಕೆ ಒಬ್ಬ ಬಾಲೆ ಕಾರ್ಮಿಕನನ್ನು ನೇಮಿಸಿದ್ದಾನೆ. ಕ್ಲಿನಿಕ್ ಗಳು, ಮೆಡಿಕಲ್, ಹೋಟೆಲ್, ಬ್ಯಾಂಕ್, ಫೈನಾನ್ಸ್, ಲ್ಯಾಬ್, ಹಾರ್ಡ್ ವೇರ್ ಶಾಪ್ ಗಳು, ರೆಡಿಮೇಡ್ ಗಾರ್ಮೆಂಟ್ಸ್ ಹೀಗೆ ಇಲ್ಲಿ ಎಲ್ಲಿಗೆ ಬಂದರೂ ಪಾರ್ಕಿಂಗ್ ಇಲ್ಲೇ ಮಾಡಬೇಕು. ಮೈನ್ ರೋಡಿನಿಂದ ಈ ಪಾರ್ಕಿಂಗ್ ಗೆ ಕಾರು ತಿರುಗಿಸಿದರೂ ಸಾಕು ಕಾರಿನ ಬಾಗಿಲು ಸಹ ತೆಗೆಯಲು ಬಿಡದೆ, ಪಾರ್ಕಿಂಗ್ ಮಾಡುವ ಮೊದಲೇ ಪೇ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಇನ್ನು ಆ ಡಾಕ್ಟರ್ ಒಬ್ಬರ ಬಳಿ ಪೇಶೆಂಟ್ ಗಳಿಗೆ ಬೆಳಿಗ್ಗೆ ಆರು ಗಂಟೆಗೇ ಪಾರ್ಕಿಂಗ್ ಕಿರಿ ಕಿರಿ. ಕೆಲವು ದಿನಗಳ ಹಿಂದೆ ಅಲ್ಲಿನ ಒಂದು ಗಂಜಿ ಹೋಟೆಲಿಗೆ ಕೆತ್ತಿ ಹಾಕಲು ಬಂದ ಬಡಪಾಯಿ ಒಬ್ಬನ ಮೇಲೆ ಇದೇ ಬಿಲ್ ಕಲೆಕ್ಟರ್ ಹಲ್ಲೆ ಮಾಡಿದ್ದು “ನನ್ನ ಜಾಗ, ವಸೂಲಿ ಮಾಡದೆ ಬಿಡಲ್ಲ” ಎಂದು ಅವಾಜ್ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈತ ಎಲ್ಲಾ ಗಾಡಿಗಳ ಫೋಟೋ ಕೂಡ ತೆಗೆಯುತ್ತಿದ್ದು ಎಲ್ಲಿಯಾದರೂ ಅಪ್ಪಿತಪ್ಪಿ ಪೇ ಮಾಡಲು ಮರೆತು ಹೋಗಿದ್ದರೆ ಗಾಡಿಗೆ ಅಡ್ಡ ನಿಂತು ಪೋಲಿಸ್ ಸ್ಟೈಲಲ್ಲಿ ಗದರುತ್ತಾನೆ. ಇನ್ನು ಯಾರಾದರೂ ನಟ್ಟ ಅಮಾವಾಸ್ಯೆಯಲ್ಲಿ ಹುಟ್ಟಿದವರು ಇವನ ಮೇಲೆ ಕಾರು ಹತ್ತಿಸದಿದ್ದರೆ ಸಾಕು ಮಾರಾಯ್ರೆ. ಅಷ್ಟೂ ಪೋಕ್ರಿ ಇವನು.
ಹಾಗೆಂದು ಈ ಅಂಡೆ ದುರ್ಸು ಎಷ್ಟು ಅನಾಗರಿಕ ಅಂದರೆ ಓ ಮೊನ್ನೆ ನಗರ ಸಭೆ ಗಾಡಿಗೂ ವಸೂಲಿ ಮಾಡಲು ಹೋಗಿ ಮಂಗಳಾರತಿ ಮಾಡಿಸಿಕೊಂಡಿದ್ದಾನೆ. ಇನ್ನು ಅವನು ಹೇಳಿದ ಕಡೆ ಗಾಡಿ ನಿಲ್ಲಿಸದಿದ್ದರೆ ಗಾಡಿಗೆ ಡ್ಯಾಮೇಜ್ ಮಾಡೋದು, ಗ್ಲಾಸಿನಲ್ಲಿ ಅದೇನೋ ಅವನ ಭಾಷೆಯಲ್ಲಿ ಬರೆಯೋದು, ಗಾಡಿಗೆ ಗೀರುವುದು, ಟೈರ್ ಗಾಳಿ ಕಡಿಮೆ ಮಾಡೋದು ಮುಂತಾದ ಉಪದ್ರ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇನ್ನು ಚೂಡಿ ಕಂಡರೆ ಸಾಕು ಮುದುಡಿ ಹೋಗುವ ಈತ “ಏನು ಮ್ಯಾಡಂ ಇವತ್ತು ಭಾರೀ ಚೆಂದ ಕಾಣುತ್ತೀರಿ”ಎಂದು ಕಾಳು ಕೂಡ ಹಾಕುತ್ತಾನೆ ಎಂದು ತಿಳಿದುಬಂದಿದೆ. ವಿನಮ್ರತೆಯಿಂದ ಹಣ ಕೇಳುವ ಬದಲು ಈತ ಗಾಡಿಗೆ ಬಡಿದು ದರ್ಪದಿಂದ ಪಾರ್ಕ್ ಪೇ ಕೇಳುತ್ತಿರುವ ಬಗ್ಗೆಯೂ ದೂರುಗಳಿವೆ. ಫೈನಾನ್ಸ್ ವಸೂಲಿಗಾರರಂತೆ, ನಕ್ಷತ್ರಿಕನಂತೆ, ಶನಿಯಂತೆ ವಾಹನ ಸವಾರರಿಗೆ ರಗಳೆ ಮಾಡುವ ಈತ ನೂರು ಗಾಡಿ ಪಾರ್ಕಿಂಗ್ ಆದರೆ ಅದರಲ್ಲಿ ಎಂಬತ್ತು ಗಾಡಿ ಮಾಲೀಕರೊಂದಿಗೆ ಜಗಳ ಮಾಡಿಯೇ ಸಿದ್ಧ. ಪ್ರತೀ ವಾಹನ ಮಾಲೀಕರೂ ಇವನ ಅನಾಗರೀಕತೆಗೆ ನೆರಡೆಯ ಬರ್ಸ ಸುರಿಸಿದರೂ ಇವನ ಮುಖದಲ್ಲಿ ಚೋಲಿಯೇ ಇಲ್ಲದ್ದು ವಿಪರ್ಯಾಸವೇ ಸರಿ. ಆದ್ದರಿಂದ ಪುತ್ತೂರು ಟೌನ್ ಪೋಲಿಸರು ಒಮ್ಮೆಯಾದರೂ ಇತ್ಲಗೆ ದರ್ಬೆ ಕಡೆ ರೌಂಡ್ಸ್ ಬಂದಾಗ “ಏನಪ್ಪಾ ನಿನ್ ಪ್ರಾಬ್ಲಂ” ಎಂದು ಈ ಮಹಾಶಯನನ್ನು ಕೇಳಿದರೆ ಇಡೀ ಕಲ್ಲಾರೆಯೇ ಧನ್ಯವಾಗಿ ಬಿಡುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವನು ವಾಹನ ಸವಾರರಿಗೆ ಹೊಡೆದು ಬಡಿದು ಪೇ ವಸೂಲಿ ಮಾಡುವ ಅಪಾಯಗಳಿವೆ ಅಥವಾ ಅಮಾವಾಸ್ಯೆಯಲ್ಲಿ ಹುಟ್ಟಿದವರು ಅವನ ಕಾಲನ್ನೋ, ಕೈಯನ್ನೋ ಚಟ್ನಿ ಮಾಡುವ ಅಪಾಯಗಳನ್ನೂ ಅಲ್ಲಗಳೆಯುವಂತಿಲ್ಲ.

