ಕಡಬ: ಕಾಡಿನ ರಾಜ TARZAN ಮೇಲೆ ಕೇಸು ದಾಖಲು

Pattler News

Bureau Report

 ಕಾಡಿನಲ್ಲಿ ಇವನೊಬ್ಬ ಪರಿಸರ ಪ್ರೇಮಿಯ ವೇಷ ಹಾಕಿದವನು ಮತ್ತು ನಾಡಿನಲ್ಲಿ ಸಾಮಾಜಿಕ ಕಾರ್ಯಕರ್ತನ ವೇಷ, ಭೂಷಣ. ಒಳ್ಳೇ ವೇಷ, ಒಳ್ಳೇ ನಾಟಕ. ತುಂಬಾ ದಿನ ಬಂತು. ಮೊನ್ನೆ ಸಿಕ್ಕಿ ಬಿದ್ದ. ಇನ್ನು ಬೇರೆ ವೇಷ.

 ಇವರು ಸನ್ಮಾನ್ಯ ಸಿಬಿ ಯಾನೆ ವರ್ಗಿಸ್ ತೋಮಸ್ ಯಾನೆ ಟಾರ್ಜನ್. ಇವರ ಮೂಲಸ್ಥಾನ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಳಜಾಲು ಪರಕ್ಕಳ ಒಟ್ಟ ತೆಂಗಿಲ್.  ಕಾಡಿನಲ್ಲಿಯೇ ಇರುವುದು ಇವರು. ಪರಿಸರದ ಪರಮ ಪ್ರೇಮಿ. ಪ್ರಾಣಿಗಳನ್ನು ಕಂಡರೆ ಇವರಿಗೆ ಜೀವ ಮತ್ತು ಅಚ್ಚುಮೆಚ್ಚು.ಕಾಡು ಪ್ರಾಣಿಗಳಿಗಾಗಿ ಇವರ ಹೃದಯ ಡುಂಯಿ ಡುಂಯಿ ಎಂದು ಮಿಡಿಯುತ್ತಾ ಇರುತ್ತದೆ. ಕಾಡುಕೋಣಗಳ ಬಗ್ಗೆ, ಕಾಡು ಹಂದಿಗಳ ಬಗ್ಗೆ, ಕಡವೆಗಳ ಬಗ್ಗೆ, ಮೊಲ,  ವಿವಿಧ ಪಕ್ಕಿಗಳ ಬಗ್ಗೆ ಭಾರೀ ಸ್ಟಡಿ ಮಾಡಿದವರು. ಕಾಡು ಕೋಣಗಳ ಚಲನವಲನ, ಹಂದಿಗಳ ಹೆಜ್ಜೆ ಗುರುತಿನ  ಮೇಲೆ ಭಾರೀ ನಿಗಾ, ನಿರೀಕ್ಷೆ ಇಟ್ಟವರು.  ಅವುಗಳ ಬಗ್ಗೆ ಕಾಳಜಿ ವಹಿಸಿದವರು. ಪ್ರಾಣಿಗಳ ಮೇಲಿನ ವಿಶೇಷ ಪ್ರೀತಿಗಾಗಿಯೇ ಸನ್ಮಾನ್ಯರು ಕಾಡು ಕೋಣಗಳು ಕಾಡಿನಲ್ಲಿದ್ದರೆ ಅವಕ್ಕೆ ಶೀತ, ಉರಿಕೆನ್ನಿ, ಜಾಂಡೀಸ್ ಮತ್ತು ಕರುಳು ಸಂಬಂಧಿ ಕಾಯಿಲೆ ಬರಬಹುದು ಎಂದು ಅವನ್ನು ತಂದು ತಂದು ತನ್ನ ಮನೆಯ ಫ್ರಿಡ್ಜ್ ನಲ್ಲಿ ಇಟ್ಟು ರಕ್ಷಿಸುತ್ತಿದ್ದರು. ಇನ್ನು ಕಾಡು ಹಂದಿಗಳ ಬಗ್ಗೆ ವಿಶೇಷ ಮಮಕಾರ ಹೊಂದಿದ್ದ ಈ ಪರಿಸರ ಪ್ರೇಮಿ ಇಡೀ ನೂಜಿಬಾಳ್ತಿಲ ರಕ್ಷಿತಾರಣ್ಯದ ಅಷ್ಟೂ ಕಾಡು ಹಂದಿಗಳನ್ನು ಹುಡುಕಿ ಹುಡುಕಿ ತಂದು ಫ್ರಿಡ್ಜ್ ನಲ್ಲಿ ಇಟ್ಟು ಅವನ್ನು ಗಾಳಿ ಮಳೆ ಬಿಸಿಲಿನಿಂದ ರಕ್ಷಿಸಿ ಮಾನವತೆ ಮೆರೆದಿದ್ದರು. ಇನ್ನು ಇಡೀ ರಿಸರ್ವ್ ಫಾರೆಸ್ಟ್ ನಲ್ಲಿ ಒಂದು ತುಂಡು ಹಂದಿ ಕೂಡ ಇಲ್ಲ. ಎಲ್ಲಾ ಪರಿಸರ ಪ್ರೇಮಿಯ ಫ್ರಿಡ್ಜ್ ನಲ್ಲಿದೆ. ಇನ್ನು ಜಿಂಕೆ, ಕಡವೆ, ಮೊಲ, ಮುಳ್ಳು ಹಂದಿ ಮುಂತಾದ ವಿವಿಧ ಜಾತಿಯ, ವಿವಿಧ ತಳಿಗಳ ಕಾಡುಪ್ರಾಣಿಗಳಿಗೆ ಇವರು ತಮ್ಮ ಫ್ರಿಡ್ಜ್ ನಲ್ಲಿ ರಕ್ಷಣೆ ನೀಡಿದ್ದಾರೆ. ಸನ್ಮಾನ್ಯರ ಈ ಒಂದು ಪರಿಸರ ಪ್ರೇಮದ, ಪ್ರಾಣಿ ಪ್ರೇಮದ ಬಗ್ಗೆ ಕತೆಗಳು, ಉಪಕಥೆಗಳು, ದಂತಕತೆಗಳು ಪಂಜ ಸೀಮೆಯ ವಲಯ ಅರಣ್ಯಾಧಿಕಾರಿ ಸಂಧ್ಯಾ ಮ್ಯಾಮ್ ಕಿವಿಗೆ ಬಿದ್ದಿದೆ. ಸಂಧ್ಯಾ ಮ್ಯಾಡಂ ಮೊದಲೇ ವೈಡ್ ಬಾಲಿಗೂ ಸಿಕ್ಸ್ ಎತ್ತುವವರು ಪರಿಸರ ಪ್ರೇಮಿಯನ್ನೇ ಫ್ರಿಡ್ಜ್ ನಲ್ಲಿ ಇಡಲು ಸ್ಕೆಚ್ ಹಾಕಿ ಬಿಟ್ಟರು. ಅಷ್ಟೇ!

ಹಾಗೇ ಮೊನ್ನೆ ಎಪ್ರಿಲ್ 20 ಭಾನುವಾರ ಒಂದು ಕರೆಕ್ಟ್ ಇನ್ಫಾರ್ಮೇಷನ್ ಸಂಧ್ಯಾ ಮ್ಯಾಮ್ ಗೆ ಬಂದಿದೆ. ಪರಿಸರ ಪ್ರೇಮಿಯ ಫ್ರಿಡ್ಜ್ ನಲ್ಲಿ ಒಂದು ಕಾಡು ಕೋಣ ತಂದು ರಕ್ಷಿಸಲಾಗಿದೆ ಎಂದು. ಕೂಡಲೇ ಜಾಗೃತರಾದ ಸಂಧ್ಯಾ ಮ್ಯಾಮ್ ಫಾರೆಸ್ಟರ್ ಅಜಿತ್ ರನ್ನು ಕರೆದು ಟೈಟ್ ಆಪರೇಶನ್ ಮಾಡಲು ನಿರ್ದೇಶಿಸಿದ್ದಾರೆ. ಅದರಂತೆ ಅಜಿತ್ ಗ್ಯಾಂಗ್ ಪರಿಸರ ಪ್ರೇಮಿಯ ಫ್ರಿಡ್ಜ್ ಮೇಲೆ ಧಾಳಿ ಮಾಡಿದ್ದಾರೆ. ಕಾಡುಕೋಣದ ಹತ್ತು ಕೆ.ಜಿ ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ ಮಾಂಸ ಸಿಕ್ಕಿದೆ. ಅರಣ್ಯ ಇಲಾಖೆಯ ಬಿನ್ನೆರ್ ಮನೆಗೆ ಬರುವುದನ್ನು ಕಂಡಿಯಲ್ಲಿ ನೋಡಿದ ಪರಿಸರ ಪ್ರೇಮಿ ಹಿಂಬಾಗಿಲಿನ ಮೂಲಕ ಓಡಿ ಕಾಡಿನಲ್ಲಿ ಮಾಯವಾಗಿದ್ದಾನೆ ಎಂದು ತಿಳಿದುಬಂದಿದೆ.  ಅರಣ್ಯಾಧಿಕಾರಿಗಳು ಪರಿಸರ ಪ್ರೇಮಿಯ ಮನೆಯಿಂದ ಒಂದು ಫ್ರಿಡ್ಜ್, ಗೋಣದ ಮಾಸ, ಒಂದು ಗನ್ನು, ಮತ್ತು ಒಂದು ಫೋರ್ಡ್ ಇಕೋ ಸ್ಪೋರ್ಟ್ ಕಾರನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಂದು ಈ ಪರಿಸರ ಪ್ರೇಮಿಗೆ ಕಾಡು ಪ್ರಾಣಿಗಳ ಮೇಲೆ ಮಾತ್ರ ಪ್ರೀತಿ ಅಲ್ಲ. ಇಡೀ ಅರಣ್ಯ ಸಂಪತ್ತಿನ ಮೇಲೆಯೇ ವಿಶೇಷ ಒಲವು. ಅವುಗಳ ರಕ್ಷಣೆಗೆ ಬದ್ಧರಾಗಿದ್ದರು. ಇವರ ಗ್ರಾಮದಲ್ಲಿರುವ ರಿಸರ್ವ್ ಫಾರೆಸ್ಟ್ ಮರಗಳ ಮೇಲೆ ಇವರಿಗೆ ವಿಶೇಷ ಕಾಳಜಿ. ಬೆಲೆ ಬಾಳುವ ಮರಗಳನ್ನು ಕಂಡರೆ ಇವರಿಗೆ ಬಾಯ್ತುಂಬಾ ಜೊಲ್ಲು ಸುರಿದು ಹರಿದು ತೊರೆಯಾಗಿ, ನದಿಯಾಗಿ ಹರಿದು ಸಮುದ್ರ ಸೇರುತ್ತಿತ್ತು. ರಕ್ಷಿತಾರಣ್ಯದ ಬೆಲೆ ಬಾಳುವ ಮರಗಳು ಹಾಳಾಗ ಬಾರದು, ಕಳ್ಳ ಕಾಕರ ಪಾಲಾಗಬಾರದು, ಹುಳ ಬಿದ್ದು ಸತ್ತು ಹೋಗಬಾರದು ಎಂದು ಇವರೇ ಅವನ್ನು ಕಡಿದು ಕಡಿದು ಮಿಲ್ಲುಗಳಲ್ಲಿ ಸಂಗ್ರಹಿಸಿಡುತ್ತಿದ್ದರು ಎಂದು ತಿಳಿದುಬಂದಿದೆ. ಇಂಥ ವಿವಿಧ ಕಾಡುತ್ಪತ್ತಿಗಳಿಂದ, ಕಾಡಿನ ವಿವಿಧ ಆದಾಯಗಳಿಂದ ಲಕ್ಸುರಿ ಜೀವನ ನಡೆಸುತ್ತಿದ್ದ ಇವರ ಬಗ್ಗೆ ಕರ್ನಾಟಕ ಅರಣ್ಯ ಮಂತ್ರಿಗಳ ಟೇಬಲ್ ಗೆ, ಅರಣ್ಯ ಮಹಾ ಸಂರಕ್ಷಣಾಧಿಕಾರಿ ಕಚೇರಿಗೆ ಕರೆದು, ಹಿಡಿದು ಸನ್ಮಾನ ಮಾಡುವಂತೆ ಮನವಿ ಪತ್ರ ಹೋಗಿತ್ತು. ಸಂಧ್ಯಾ ಮ್ಯಾಮ್ ಗೆ ಮೇಲಿಂದ ಮೇಲೆ ಮೇಲಿಂದ ಪ್ರೆಷರ್ ಬಂದಿತ್ತು. ಹಾಗಾಗಿ ಅವರು ಪರಿಸರ ಪ್ರೇಮಿಯ ಚಲನವಲನದ ಮೇಲೆ ಒಂದು ಕಣ್ಣಿಟ್ಟಿದ್ದರು. ಮೊನ್ನೆ ಸಿಕ್ಕಿ ಬಿದ್ದ. ಸನ್ಮಾನ ಸಮಾರಂಭ ಮಾಡಲು ಆಗಲಿಲ್ಲ ಅಷ್ಟೇ.

………………………………………

ನೀವೂ ಮಾಹಿತಿ ಕಳಿಸಿ :

  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top