ಬಹಳ ಮೊದಲಿನಿಂದಲೂ ಪುತ್ತೂರು ಎಪಿಎಂಸಿಗೆ ಹಿಡಿದ ಏಳರಾಷ್ಟ್ರ ಶನಿ ಇನ್ನೂ ಬಿಟ್ಟಿಲ್ಲ ಮತ್ತು ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಪುತ್ತೂರು ಪೇಟೆಯೊಳಗೆ ಕಾರ್ಯಚರಿಸುತ್ತಿದ್ದ ಆ ಸಿರಿವಂತ ಬಜ್ಜೆಯಿ ವರ್ತಕರನ್ನು ಭಗೀರಥ ಪ್ರಯತ್ನ ಪಟ್ಟು ಎಪಿಎಂಸಿಗೆ ಕರೆ ತಂದರೂ ಅವರು ಮಾನಸಿಕವಾಗಿ ಇನ್ನೂ ಎಪಿಎಂಸಿಗೆ ಒಗ್ಗಿಕೊಂಡಿಲ್ಲ. ಅದಕ್ಕೆ ಸರಿಯಾಗಿ ಎಪಿಎಂಸಿಗೆ ವಕ್ಕರಿಸುತ್ತಿರುವ ಸೆಕ್ರೆಟರಿಗಳು, ಆಡಳಿತ ಮಂಡಳಿಗಳು ಮತ್ತು ಅದರ ಸ್ಟಾಫ್ ಗಳು ಎಪಿಎಂಸಿಯನ್ನು ಲಗಾಡಿ ತೆಗೆಯುವಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಲೆಕ್ಕದಲ್ಲಿ ಸಿಗದಷ್ಟು ಭ್ರಷ್ಟಾಚಾರ, ಸಮಾಜ ಬಾಹಿರ ಚಟುವಟಿಕೆಗಳು, ದೌರ್ಜನ್ಯ ಪ್ರಕರಣಗಳು,ಸೈಕಲ್ ಕೇಸ್ ಗಳು ಹೀಗೆ ಎಪಿಎಂಸಿ ಕೈಯಾಡಿಸದ ವಿಭಾಗಗಳೇ ಇಲ್ಲ. ಇದೀಗ ಎಪಿಎಂಸಿ ಮತ್ತೊಮ್ಮೆ ಸುದ್ದಿ ಮಾಡಿದ್ದು ಕೋಣನ ಮುಂದೆ ಕಿನ್ನರಿ ಕತೆಯಾಗಿದೆ. ಕೇಳುವವರೇ ಇಲ್ಲ.
ಹಾಗೆಂದು ಈ ಹಿಂದೆ ತ್ರೇತಾಯುಗದಲ್ಲಿ ಎಪಿಎಂಸಿ ಕಾರ್ಯದರ್ಶಿಯಾಗಿದ್ದ ಶ್ರೀರಾಮ ಚಂದ್ರರ ಕಾಲದಲ್ಲೇ ಎಪಿಎಂಸಿ ನಾತ ಬರಲು ಶುರುವಾಗಿತ್ತು. ಎಪಿಎಂಸಿಯ ಕೆಲವು ಬರಿಬರಿಯ ಗೋದಾಮುಗಳಲ್ಲಿ ನಂಬರ್ ಪ್ಲೇಟ್ ಇಲ್ಲದವರು, ನೇಮ್ ಬೋರ್ಡ್ ಇಲ್ಲದವರು ಕಾಣಿಸಿಕೊಂಡಿದ್ದರು. ಈ ಬಗ್ಗೆ ಆಡಳಿತ ಮಂಡಳಿಗೆ ಗೊತ್ತಿತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಏನೋ ಒಂದು ಕತೆ ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತಿತ್ತು. ಇತ್ತೀಚೆಗೆ ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಅದ್ರಾಮ ಎಂಬವರು ಎಪಿಎಂಸಿಯ ಜಾತಕ ಬಯಲು ಮಾಡಿದ್ದು ಅನಾಮತ್ತು ಐದು ಗೋದಾಮುಗಳ ತಿಂಗಳ ಬಾಡಿಗೆ ಯಾರೋ ಪುಣ್ಯಾತ್ಮನ ಅಕೌಂಟಿಗೆ ಬೀಳುವ ಕತೆ ರಿಲೀಸ್ ಮಾಡಿದ್ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಅದ್ರಾಮರು ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದರು. ಅದರಂತೆ ಮೊನ್ನೆ ಜೂನ್ ಹದಿಮೂರನೇ ತಾರೀಕು ಎಪಿಎಂಸಿ ಮೇಲಾಧಿಕಾರಿಗಳು ಪುತ್ತೂರು ಎಪಿಎಂಸಿಗೆ ಧಾಳಿ ನಡೆಸಿ ಠಕ್ಕ್ ಠಕ್ಕ್ ಕಡತಗಳನ್ನು ಪರಿಶೀಲಿಸುವಾಗ ಐದು ಗೋದಾಮುಗಳ ಕತೆ ಔಟ್ ಆಗಿದೆ.
ಹಾಗೆಂದು ಕಳೆದ ಎರಡು ವರ್ಷಗಳಿಂದ ಪುತ್ತೂರು ಎಪಿಎಂಸಿಯ ಕನಿಷ್ಠ ಐದು ಗೋದಾಮುಗಳ ಬಾಡಿಗೆಯಲ್ಲಿ ಒಂದು ಪೈಸೆ ಕೂಡ ಖಜಾನೆ ತಲುಪಿಲ್ಲ. ಆ ಐದು ಗೋದಾಮುಗಳ ಎಂಟ್ರಿ ಕೂಡ ಎಪಿಎಂಸಿ ಠಕ್ಕ್ ಕಡತಗಳಲ್ಲಿ ಇಲ್ಲ. ಆದರೆ ಆ ಐದು ಗೋದಾಮುಗಳಲ್ಲೂ ನಂಬರ್ ಪ್ಲೇಟ್ ಇಲ್ಲದವರು, ನೇಮ್ ಬೋರ್ಡ್ ಇಲ್ಲದವರು ಒಕ್ಕಲಿದ್ದಾರೆ ಮತ್ತು ಅದೇ ಗೋದಾಮುಗಳಲ್ಲಿ ಬಿಸಿನೆಸ್ ನಡೆಸ್ತಾ ಇದ್ದಾರೆ.ಹಾಗಾದರೆ ಅವರು ಹಾಗೆ ಬಂದು ಅನಧಿಕೃತವಾಗಿ ಮತ್ತು ರಾಜಾರೋಷವಾಗಿ ವಹಿವಾಟು ನಡೇಸೋದು ಶ್ರೀರಾಮ ಚಂದ್ರರ ನಂತರ ಆ ಕುರ್ಚಿ ಬಿಸಿ ಮಾಡಲು ಬಂದ ಪಡೆಗೂರಣ್ಣನ ಗಮನಕ್ಕೆ ಬಂದಿಲ್ವಾ? ಈ ಬಗ್ಗೆ ಪಡೆಗೂರಣ್ಣನಲ್ಲಿ ಕೇಳಿದರೆ ಅದು ತ್ರೇತಾಯುಗದ ಶ್ರೀರಾಮ ಚಂದ್ರರ ಕಾಲದ ಕತೆ ಅಂತ ಹೇಳುತ್ತಾರೆ. ಹಾಗಾದರೆ ಈ ಐದು ಗೋದಾಮುಗಳ ಎರಡು ವರ್ಷಗಳ ಬಾಡಿಗೆ ಶ್ರೀ ರಾಮ ಚಂದ್ರರ ಕಿಸೆಗೆ ಹೋಗಿ ಬೀಳುತ್ತಿತ್ತಾ? ಎಪಿಎಂಸಿ ಅವರ ಪಿತ್ರಾರ್ಜಿತ ಆಸ್ತಿಯಾ? ಈ ಬಗ್ಗೆ ಪಡೆಗೂರಣ್ಣ ಒಬ್ಬ ಜವಾಬ್ದಾರಿಯುತ ಆಫೀಸೆರ್ ಆಗಿ ಯಾಕೆ ಕ್ರಮ ಕೈಗೊಳ್ಳದೆ ಸುಮ್ಮನೆ ಕುಂತರು? ತನ್ನ ಕಚೇರಿಯ ಆಸುಪಾಸಿನಲ್ಲಿಯೇ ಅನಧಿಕೃತ ಅಂಗಡಿಗಳು ವಹಿವಾಟು ಮಾಡುತ್ತಿದ್ದ ವಿಷಯ ಪಡೆಗೂರಣ್ಣನಿಗೆ ಗೊತ್ತೇ ಇಲ್ಲವಂತೆ. ಪಾಪ ಮಾರಾಯ್ರೆ ಒಳ್ಳೇ ಜನ. ಮುಗ್ಧ.
ಇದೀಗ ಮೊನ್ನೆ ಸಾಮಾಜಿಕ ಕಾರ್ಯಕರ್ತ ಅದ್ರಾಮರ ದೂರು ಅರ್ಜಿ ಮೇಲೆ ಏಪಿಎಂಸಿಗೆ ಧಾಳಿ ನಡೆಸಿದ ಅಧಿಕಾರಿಗಳು ಐದು ಅನಧಿಕೃತ ಗೋದಾಮುಗಳಿಗೆ ಬೀಗ ಹಾಕಿ ತನಿಖೆ ನಡೆಸಿದ್ದಾರೆ. ಸಂತೆ ಕಟ್ಟೆ ಪೊಸ ಗೋದಾಮು, ಸಂತೆಕಟ್ಟೆ ಅಂಗಡಿ ನಂಬ್ರ 13, ಸಂಡ್ರಿ ಶಾಪ್ ಕೊಠಡಿ ಸಂಖ್ಯೆ 1,30 Mt ಸೆಲ್ಲರ್ ಗೋದಾಮು ಸಂಖ್ಯೆ 5 ಮತ್ತು 1000mt ಗೋದಾಮುಗಳಿಗೆ ಬೀಗ ಜಡಿದು ಹೆಚ್ಚಿನ ತನಿಖೆಗಾಗಿ ಫೈಲು ಮೇಲೆ ಕಳಿಸಲಾಗಿದೆ. ಈ ಗೋದಾಮುಗಳಲ್ಲಿ ಆಮೀರಿಚ್ಚ, ಹಮೀದಾಕ,ರಜಾಕಿಚ್ಚ, ನಝೀರ್ ಬಾಯಿ ಮುಂತಾದವರು ವಹಿವಾಟು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಈ ಐದು ಗೋದಾಮುಗಳ ಎರಡು ವರ್ಷಗಳ ಬಾಡಿಗೆ ಅಂದರೆ ಪೋಲಿಸ್ರಾಮನ ನಂತರದ ದುಡ್ಡು ಪಡೆಗೂರಣ್ಣನ ಕಿಸೆಗೆ ಹೋಗಿರಲೇ ಬೇಕು. ಎರಡು ವರ್ಷಗಳ ಮೊದಲಿನ ಬಾಡಿಗೆ ಅಂದರೆ ಪೋಲಿಸ್ರಾಮನ ಅವಧಿ ಮತ್ತು ಯಾವಾಗ ಈ ವಹಿವಾಟು ಶುರುವಾಯ್ತೋ ಆವತ್ತಿನ ಬಾಡಿಗೆ ಎಲ್ಲಾ ಸೇರಿದರೆ ಸರ್ಕಾರದ ಖಜಾನೆಗೆ ಬೇರೆ ಎಲಿ ಪೆರ್ಗುಡೆ ಬೇಕಾಗಿಲ್ಲ. ಇವರಿಬ್ಬರೇ ಸಾಕು. ಐದು ಗೋದಾಮುಗಳಿಗೆ ಮಿನಿಮಮ್ ಅಂದರೂ ತಿಂಗಳಿಗೆ ಹದಿನೈದು ಸಾವ್ರ ಅಂತ ಹಿಡ್ಕೊಳ್ಳಿ. ಈಗ ಎರಡು ವರ್ಷಕ್ಕೆ ಲೆಕ್ಕ ಹಾಕಿ. ಎರಡು ವರ್ಷದ ಮೊದಲಿನ ಎರಡು ವರ್ಷದ ಲೆಕ್ಕ ಹಾಕಿ. ಸಂಬಳ ಕೊಡಲೇ ಬೇಕೆಂದಿಲ್ಲ ಇವರಿಗೆ. ಇನ್ನು ಇವರ ಬೇರೆ ಕತೆ ಎಲ್ಲಾ ಬರೆಯಲು ಹೋದರೆ ಎಲ್ಲರೂ ಸೇರಿ ನನಗೆ ಜೈಲು ಮಾಡಿಸ ಬಹುದು. ಸದ್ಯಕ್ಕೆ ನನಗೆ ಜೈಲಿನ ಆಸೆ ಇಲ್ಲ.






