ಇಲ್ಲಿ ಎರಡು ಕಂಬಗಳ ನಡುವೆ ಕಾಣುತ್ತಿರುವ ಈ ಪೆಟ್ಟಿಗೆ ಬೇರೇನು ಅಲ್ಲಾ ಸ್ವಾಮಿ, ಮೆಸ್ಕಾಂನ ವಿದ್ಯುತ್ ಪರಿವರ್ತಕ. ಇದು ಸ್ಥಾಪನೆಯಾಗಿದ್ದು 2025 ಮಾರ್ಚ್ ಎಪ್ರಿಲ್ ತಿಂಗಳಲ್ಲಿ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಕೃಷಿಕರಿಗೆ ತೊಂದರೆಯಾಗಬಾರದು, ಮೆಸ್ಕಾಂ ಗೆ ಕಷ್ಟವಾಗಬಾರದೆಂದು ವರುಣ ಬೇಗ ಬೇಗನೆ ಆಗಮಿಸಿದ. ಮೆಸ್ಕಾಂ ವ್ಯಾಪ್ತಿಯ ಬೆಳ್ತಂಗಡಿ ಉಪ ವಿಭಾಗದ ಕಲ್ಲೇರಿ ಕಾರ್ಯ ಪಾಲನಾ ಶಾಖೆಯ ಕಣಿಯೂರು ಗ್ರಾಮದ ಕಾಪಿಗುಡ್ಡೆ ಎಂಬಲ್ಲಿ ಹಲವಾರು ವರ್ಷ ಕೃಷಿಕರು ಬೊಬ್ಬೆ ಹೊಡೆದು ಹೊಡೆದು ಕೊನೆಗೂ ಈ ವಿದ್ಯುತ್ ಪರಿವರ್ತಕ ಸ್ಥಾಪನೆಯಾಯಿತು. ಆದರೆ ಇದರಲ್ಲೊಂದು ಸಮಸ್ಯೆ ಏನೆಂದರೆ ಜೇನು ಸಾಕಲು ಪೆಟ್ಟಿಗೆ ಇಟ್ಟಂತೆ ಸ್ಥಾಪಿಸಿದ ಈ ಪರಿವರ್ತಕಕ್ಕೆ ಇನ್ನೂ ವಿದ್ಯುತ್ ಸರಬರಾಜು ಮಾಡಿಲ್ಲ. ಈ ಬಗ್ಗೆ ಸಂಬಂಧಿಸಿದ ಪವರ್ ಮ್ಯಾನ್ ಬಳಿ ವಿಚಾರಿಸಿದಾಗ ಇದರ ಪೇಪರ್ ವರ್ಕ್ ಮುಗಿದಿಲ್ಲ ಎನ್ನುತ್ತಾರೆ. ಪವರ್ ಮ್ಯಾನ್ ಏನು ತಾನೇ ಮಾಡುವುದು, ಹೊಟ್ಟೆ ತುಂಬಾ ಜನರ ಬೈಗುಳ ತಿನ್ನುವುದು, ರಾತ್ರಿ ಹಗಲೆನ್ನದೆ ವಿದ್ಯುತ್ ಸರಬರಾಜು ಸರಿಯಾಗಿರುವಂತೆ ನೋಡಿಕೊಳ್ಳುವುದು ಮಾತ್ರ ಇವರ ಕೆಲಸವಲ್ಲವೇ,ಮೇಲಿರುವ ತಿಮಿಂಗಿಲಗಳು ಈ ಮೀನಿನ ಮಾತನ್ನು ಕೇಳುತ್ತಾರೆಯೇ? ಇದು ಇಲ್ಲಿನ ಪೇರ್ದಡ್ಕ ಎಂಬಲ್ಲಿನ ಪರಿವರ್ತಕ ಲೋಡು ತಡೆಯಲಾರದೆ ತನ್ನ ಆರೋಗ್ಯಕ್ಕಾಗಿ ತನ್ನ ನರ (ಫ್ಯೂಸ್) ನಿಲ್ಲದೆ ಕರೆಂಚಿ ಕರೆಂಚಿ ಅಲ್ಲಿನ ಗುಡ್ಡೆ ಹೊತ್ತಿದ ನಂತರ,ಹಲವಾರು ವರ್ಷದಿಂದ ಒತ್ತಾಯ ಮಾಡಿ ಮಾಡಿ ಸ್ಥಾಪಿಸಿದ ಪರಿವರ್ತಕ. ಆದರೆ ಇದನ್ನು ಸ್ಥಾಪಿಸಿ 4-5 ತಿಂಗಳು ಕಳೆದರೂ ಇನ್ನೂ ಸೇವೆಗೆ ಒದಗಿಸದೆ ತುಂಬಾ ಬೇಜಾರಲ್ಲಿದೆ ಕಣ್ರಿ. ಓ ಮೆಸ್ಕಾಂನ ಹಿರಿಯ ಅಧಿಕಾರಿಗಳೇ ಇದರ ಪೇಪರ್ ವರ್ಕ್ ಹೇಗೆ ಕರೆಂಟಲ್ಲಿ ವೆಲ್ಡ್ ಮಾಡುತ್ತಿದ್ದೀರಾ?ಈ ಸರಕಾರದ ಸಮಯದಲ್ಲಿ ಮುಗಿಯ ಬಹುದೇ? ಹೇಗೂ ಗೃಹ ಜ್ಯೋತಿಯಕ್ಕ ಚಾಲೂ ಇದ್ದಾಳೆ, ಬಿಲ್ ಹೆಚ್ಚೇನು ಬರುತ್ತಿಲ್ಲ, ಉಚಿತದ ಮುಂಚೆ ಬರುವುದಕ್ಕಿಂತ ಕೊಂಚ ಹೆಚ್ಚೇ ಬರುತ್ತಿದೆ. ಅದು ಸಾಯಲಿ ಬಿಡಿ ನಮ್ಮ ಪೂರ್ವಜನ್ಮದ ಕರ್ಮ. ಈಗ ಸಿಬ್ಬಂದಿ ಗ್ರಾಚುವಿಟಿ ಎಂಬ ಹೊಸ ಸೇರ್ಪಡೆ ಬಿಲ್ಲಿನಲ್ಲಾಗಿದೆ . ಇನ್ನು ಪರಿವರ್ತಕ ಹಾಕಿದ ಬಗ್ಗೆ ಗ್ರಾಹಕರಿಗೆ ಬರೆ ಎಳೆಯಲು ಮಾತ್ರ ಬಾಕಿ. ಲಜ್ಜೆಗೆಟ್ಟ ಅಧಿಕಾರಿಗಳೇ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಪರಿವರ್ತಕ ತುಕ್ಕು ಹಿಡಿಯುವ ಮುನ್ನ ಇದರಲ್ಲಿ ವಿದ್ಯುತ್ ಪ್ರವಹಿಸಿ ಈ ಭಾಗದ ನೆಲ್ಲಿ ಬಾಕಿಮಾರು ಕೊಂಡೆ ಜಾಲು, ಕಾಪಿ ಗುಡ್ಡೆ ಪ್ರದೇಶಕ್ಕೆ ವಿದ್ಯುತ್ ಸರಬರಾಜಾಗುವಂತೆ ಕ್ರಮ ಕೈಗೊಳ್ಳಿ. ನಿಮ್ಮ ಪೇಪರ್ ವರ್ಕ್ ಏನಿದ್ದರೂ ನಿಮ್ಮ ಕಛೇರಿಯಲ್ಲಿ ಮುಗಿಸಿಕೊಳ್ಳಿ ಆಗಬಹುದೇ?






