ಕಳಸ ಚಿಕ್ಕಮಗಳೂರು ಜಿಲ್ಲಾ ಮೂಡಿಗೆರೆ ತಾಲೂಕಿನ ಹೊಸ ತಾಲೂಕು. ಇದೊಂದು ಶಾಂತಿ ಪ್ರಿಯ ಜನರ ಊರು. ರಗಳೆ ಇಲ್ಲ. ತಾವೂ ಆಯ್ತು ತಮ್ಮ ಕೆಲಸವೂ ಆಯ್ತು ಎಂಬ ಮನಸ್ಥಿತಿ ಜನರೇ ನೈಂಟಿ ಪರ್ಸೆಂಟ್. ರಾಜಕೀಯವಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್ ನಯನಾ ಮೋಟಮ್ಮ ಎಂಎಲ್ಎ. ಆದರೆ ಕಳಸದ ಊರಿನಲ್ಲಿ ರಾಜಕೀಯ ಎಂಬುದು ಸ್ವಾರ್ಥಕ್ಕಾಗಿ ಮಾತ್ರ ಬಳಕೆಯಾಗುತ್ತಿದೆ. ಕಳಸ ರಾಜಕೀಯದ ಪಂಚಭೂತಗಳು ದೊಡ್ಡ ದೊಣ್ಣೆ ನಾಯಕರಂತೆ ಇಡೀ ಊರಿಗೇ ಬಾಧೆಯಾಗಿ ಹೋಗಿದ್ದಾರೆ. ಶಾಂತಿ ಸ್ಥಾಪನೆಯ ಹೆಸರಿನಲ್ಲಿ ಈ ಪಂಚ ಭೂತಗಳು ಅಶಾಂತಿ ಸೃಷ್ಟಿಸುತ್ತಿವೆ. ಇಲ್ಲ ದ ವಿವಾದಗಳನ್ನು ಎಬ್ಬಿಸುವುದು, ಬೇರೆ ವಿವಾದಗಳಲ್ಲಿ ಮೂಗು ತೂರಿಸೋದು, ಕಾರ್ಯಾಂಗದ ಮೇಲೆ ಸವಾರಿ ಮಾಡೋದು, ಅಧಿಕಾರಿಗಳನ್ನು ತಮ್ಮ ಮ್ಯೂಸಿಕ್ ಮೂಲಕ ಕುಣಿಸೋದು, ಮೇಲಾಧಿಕಾರಿಗಳಿಗೆ ಚಾಡಿ ಹೇಳಿ ಟ್ರಾನ್ಸ್ಫರ್ ಮಾಡಿಸೋದು, ತಮಗೆ ಬೇಕಾದವರನ್ನು ಹಾಕೋದು, ತೆಗೆಯೋದು, ಕಳಿಸೋದು ಇತ್ಯಾದಿ ಕಾರ್ಯಗಳನ್ನು ಈ ದೊಣ್ಣೆ ನಾಯಕರು ಮಾಡುತ್ತಿದ್ದು ಈ ಪಂಚ ಭೂತಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹಾಗೆ ಸುಮ್ಮನೆ ರಾಜಕೀಯ.
ಹಾಗೆಂದು ಕಳಸದ ಮಟ್ಟಿಗೆ ಈ ದೊಣ್ಣೆ ನಾಯಕರು ಬೇರೆ ಬೇರೆ ಪಕ್ಷಗಳಿಗೆ ಸೇರಿದ್ದರೂ ಎಲ್ಲರಿಗೂ ಬಾವುಟ ಒಂದೇ ಮತ್ತು ಎಲ್ಲರ ಅಜೆಂಡಾ ಒಂದೇ. ಈ ನಿರುದ್ಯೋಗಿ ರಾಜಕಾರಣಿಗಳು ತಾವೂ ಕೆಡುವುದಲ್ಲದೆ ಕಳಸವನ್ನೆಲ್ಲಾ ಕೆಡಿಸುತ್ತಿದ್ದಾರೆ. ಕಾಂಗ್ರೆಸ್ ಸೈಣಿಕ, ದಳದಿಂದ ಮೆಂಟಲ್ ಮಂಜ, ದೇಶಭಕ್ತ ಗಿರ್ಗಿರಿ, ಕಮ್ಯುನಿಸ್ಟ್ ಗೋಸೆಟ್ಟಿ ಮತ್ತು ಹಿಮ್ಮೇಳದಲ್ಲಿ ರುದ್ರ ತಾಂಡವ. ಈ ಐವರ ಸರ್ವಪಕ್ಷ ರಂಪಾಟದಿಂದ ಇಡೀ ಕಳಸ ಹೈರಾಣಾಗಿ ಹೋಗಿದೆ. ಅಧಿಕಾರಿಗಳಂತೂ ಆರು ತಿಂಗಳು ಇಲ್ಲಿ ನಿಂತರೆ ಅದೇ ದೊಡ್ಡ ವಿಷಯ. ಇನ್ನು ಪೋಲಿಸ್ ಠಾಣೆ ಅಂದರೆ ಇವರಿಗೆ ಅತ್ತೆ ಮನೆ ಇದ್ದ ಹಾಗೆ, ತಾಲೂಕು ಆಫೀಸು ಅಜ್ಜಿ ಮನೆ. ಕಳಸ ಠಾಣೆಯ ಹಿಂದಿನ ಎಸ್ಸೈ ನಿತ್ಯಾನಂದ ಕೇಸಲ್ಲಿ ಈ ಪಂಚಭೂತಗಳು ಪರದೆ ಹಿಂದೆ ನಿಂತು ಕೇಸ್ ಟೈಟ್ ಆಗುವ ತನಕ ಪ್ಯಾಂಟ್ ಶರ್ಟ್ ತೆಗೆದಿರಲಿಲ್ಲ ಎಂದು ಸುದ್ದಿ ಇದೆ. ಆಯ್ತು ನಿತ್ಯಾನಂದರು ಗಂಟು ಮೂಟೆ ಕಟ್ಟಿಕೊಂಡು ಹೋದ ಮೇಲೆ ಬಂದ ಎಸ್ಸೈ ಚಂದ್ರಶೇಖರ್ ಜೊತೆ ಶುರು ಶುರುವಿಗೆ ಅದೇನೋ ದೋಸ್ತಿ ಇತ್ತು. ಆದರೆ ಡೀಸೆಂಟ್ ಪೋಲಿಸ್ ಚಂದ್ರಶೇಖರ್ ಅದ್ಯಾವುದೋ ಎಸ್ಟೇಟ್ ಕೇಸಲ್ಲಿ ಇವರ ಮ್ಯೂಸಿಕ್ ಗೆ ಕುಣಿಯಲಿಲ್ಲ ಎಂದು ಇದೀಗ ಅವರ ವಿರುದ್ಧ ಎಸ್ಪಿಗೆ, ಐಜಿಗೆ ಚಾಡಿಗಳ ಸುರಿಮಳೆ ಸುರಿದಿದ್ದಾರೆ. ಹೇಳಿಕೇಳಿ ಆ ಎಸ್ಟೇಟ್ ಮ್ಯಾಟರು ಸಿವಿಲ್ ಕೇಸಿಗೆ ಸಂಬಂಧ ಪಟ್ಟಿದ್ದು, ಫ್ಯಾಮಿಲಿ ಮ್ಯಾಟರು.ಎಲ್ಲಿಯಾದರೂ ಸಿವಿಲ್ ಕೇಸುಗಳಲ್ಲಿ ಪೋಲಿಸ್ ಎಂಟ್ರಿ ಆದರೆ ಕೋರ್ಟ್ ಗಳು, ಹೈಕೋರ್ಟ್ ಇಡೀ ಪೋಲಿಸ್ ಇಲಾಖೆಗೆ ಕುಂಕುಮಾರ್ಚನೆ ಜೊತೆಗೆ ಮಂಗಳಾರತಿ ಮಾಡಿ ಬಿಡುತ್ತದೆ. ಹಾಗಾಗಿ ಕಳಸ ಎಸ್ಸೈ ಇವರು ಹೇಳಿದ ಎಸ್ಟೇಟ್ ಕೇಸಲ್ಲಿ ಎಂಟ್ರಿ ಆಗಲಿಲ್ಲ ಎಂಬ ಕಾರಣಕ್ಕೆ ಕಳಸದಲ್ಲಿ ಗಾಂಜಾ ಮಾರಾಟ ಇದೆ, ಅಫೀಮು ಇದೆ, ಹೋಂಸ್ಟೇಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ, ಎಸ್ಸೈ ಕಳಸದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಫೈಲ್ಯೂರ್, ಸಮಾಜ ಘಾತುಕ ಶಕ್ತಿಗಳು ಕಳಸದಲ್ಲಿ ವಿಜೃಂಭಿಸುತ್ತಿದೆ ಎಂದು ದೊಡ್ಡ ಟೊಪ್ಪಿಯ ಪೋಲಿಸರಿಗೆ ನಿರಂತರ ದೂರು ಕೊಡುವ ಮೂಲಕ ಈ ದೊಣ್ಣೆ ನಾಯಕರು ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಗೆ ಕಳಸದಿಂದ ಗೇಟ್ ಪಾಸ್ ಕೊಡಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ಕಳಸದಲ್ಲಿ ಈ ಸ್ವಯಂ ಘೋಷಿತ ದೊಣ್ಣೆ ನಾಯಕರ ಮಾತೇ ಅಂತಿಮವಾಗ ಬೇಕು. ಅವರ ಮಾತಿಗೆ ಯಾರಾದರೂ ಆಗಲ್ಲ ಅಂದ್ರೆ ಅಂಥವರ ಕತೆ ಕೈಲಾಸ ಮಾಡಿ ಬಿಡುತ್ತಾರೆ ಈ ದೊಣ್ಣೆ ನಾಯಕರು. ಕೆಲವೊಂದು ತಮಗೆ ವಿರುದ್ಧವಾದ ವಿಷಯಗಳಲ್ಲಿ ತಮಗೆ ಬೇಕಾದ ಪತ್ರಕರ್ತರನ್ನು ಮಾತ್ರ ಕರೆಸಿ ನ್ಯೂಸ್ ಉಲ್ಟಾ ಮಾಡಿ ಪತ್ರಿಕಾ ಗೋಷ್ಠಿ ನಡೆಸಿ ಊರಿಡೀ ಡಂಗುರ ಸಾರಿ ತಮ್ಮನ್ನು ತಾವೇ ಶಹಬ್ಬಾಸ್ ಮಾಡಿ ಕೊಳ್ಳುವುದು ಇವರ ಕೆಟ್ಟ ಚಾಳಿ. ಈ ಹಿಂದೆ ಕಳಸದ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಯನ್ನು ಇವರು ಪೀಡಿಸಿದ ಕತೆ ಕಳಸದಲ್ಲಿ ದಂತಕತೆಯಾಗಿ ಉಳಿದಿದೆ. ತಮ್ಮ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ, ತಮ್ಮವರ ಅಕ್ರಮಗಳನ್ನು ಬಯಲಿಗೆಳೆದ, ತಮ್ಮ ಆಟಕ್ಕೆ ರಗಳೆಯಾಗಿದ್ದ ರಾಮಮೂರ್ತಿಯವರನ್ನು ಈ ಪಂಚಭೂತಗಳು ಹೇಗೆ ಬೆಂಡ್ ತೆಗೆದವು ಅಂದರೆ ಬಾಕಿ ಯಾರಾಗುತ್ತಿದ್ಜರೂ ಕಳಸದ ಕಾಡುಗಳಲ್ಲಿ ಅಪರಿಚಿತ ಬಾಡಿಯಾಗುತ್ತಿದ್ದರು. ಗಂಗನಕುಡಿಗೆಯ ಆಂಟಿಯೊಬ್ಬಳನ್ನು ರಾಮಮೂರ್ತಿ, ಹರಿನಾರಾಯಣ ಮತ್ತು ಸುಭಾಷ್ ಎಂಬವರ ವಿರುದ್ಧ ಎತ್ತಿ ಕಟ್ಟಿ, ಸುಳ್ಳು ಕೇಸ್ ಜಡಿಸಿ ಫಿಕ್ಸಿಂಗ್ ಮಾಡಿ ಅವರನ್ನು ತುಳಿಯಲಾಗಿತ್ತು. ಹಾಗೆಂದು ಈ ದುಷ್ಟಕೂಟ ಕೇಸ್ ಫಿಕ್ಸಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಒಂದು ಉದಾಹರಣೆಯನ್ನು ತೋರಿಸಿ ಹಲವು ಜನರನ್ನು ಹೆದರಿಸುವುದು ಇವರ ಹಳೇಯ ಚಾಳಿ.
ಕಳಸ ಒಂದು ಶಾಂತಿಪ್ರಿಯ ಊರು. ಇಲ್ಲಿ ಶಾಂತಿ ಸ್ಥಾಪನೆ ಹೆಸರಲ್ಲಿ ಅಶಾಂತಿ ಸೃಷ್ಟಿ ಸಲ್ಲ. ಸ್ವಯಂ ಘೋಷಿತ ದೊಣ್ಣೆ ನಾಯಕರ ಜರೂರತ್ತು ಕಳಸಕ್ಕಿಲ್ಲ. ಜನರನ್ನು ಜನಸೇವೆಯ ಹೆಸರಿನಲ್ಲಿ ನಟ್ಟ ತಿರುಗಿಸಿ ತಿರುಗಿಸಿ ಚೆಂದ ನೋಡುವ ಈ ಪಂಚಭೂತಗಳ ಉಚ್ಚಾಟನೆ ಕಳಸದಿಂದ ಆಗಲೇ ಬೇಕಾಗಿದೆ.






