ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಾನ್ಯ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂಧರ್ಭ ಪಶ್ಚಿಮ ವಾಹಿನಿ ಎಂಬ ಹೊಚ್ಚ ಹೊಸ ಯೋಜನೆ ಆರಂಭವಾಯಿತು. ಸರಿ ಯೋಜನೆ ಏನೋ ಒಳ್ಳೆಯದೇ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಿಗೆ ಅಲ್ಲಲ್ಲಿ ಚೆಕ್ ಡ್ಯಾಂ ಕಟ್ಟಿ ನೀರು ನಿಲ್ಲಿಸಿ ಅಂತರ್ಜಲ ಮಟ್ಟ ಸಂರಕ್ಷಣೆಯ ಯೋಚನೆ. ಹಲವಾರು ಕಡೆ ಡ್ಯಾಂ ನಿರ್ಮಾಣವಾಗಿದೆ. ಆದರೆ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜಾರು ನಾಲ್ಕು ಹೆಜ್ಜೆ ಮುಂದೆ ಹೋಗಿ ಪಕ್ಕದ ಪುತ್ತೂರು – ಬೆಳ್ತಂಗಡಿ ತಾಲೂಕಿನ ಗಡಿ ಮುಗೇರಡ್ಕ ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ಕಂ ಸೇತುವೆ ಯೋಜನೆ ಯೋಜಿಸಿದರು. ಇದೂ ಉತ್ತಮ ಕಾರ್ಯವೇ ಆದರೆ ಇವರು ಇಲ್ಲಿ ಸಂಗ್ರಹಿಸಿದ ನೀರನ್ನು ಗುರುವಾಯನಕೆರೆ ಕೆರೆಗೆ ಹರಿಸಿ ಬೆಳ್ತಂಗಡಿಯನ್ನು ಮುಳುಗಿಸುವ ಆಲೋಚನೆ ಮಾಡಿದ್ದು ಮಾತ್ರ ತಪ್ಪು. ತೊಂದರೆ ಇಲ್ಲ ಬಿಡಿ ಗುರುವಾಯನಕೆರೆ ಯ ಕೆರೆಯಲ್ಲಿ ವರ್ಷದ 365 ದಿನವೂ ನೀರಿರುತ್ತದೆ ಬಹುಷ: ರಸ್ತೆ ಮಟ್ಟದವರೆಗೆ ನೀರು ಸಂಗ್ರಹಣೆ ಗುರಿ ಇತ್ತೇನೋ ಗೊತ್ತಿಲ್ಲ . ಆದರೆ ಈಗ ಈ ಕೆಲಸಗಳು ಒಟ್ರಾಸಿ ನಡೆಯುತ್ತಿದೆ. ಹಾಗೆಂದು ಪೂಂಜರು ತಮ್ಮ 5 ವರ್ಷದ ಅವಧಿಯಲ್ಲಿ ತಾಲೂಕಿನ ಅನೇಕ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಿ ಜನ ಮನ್ನಣೆ ಪಡೆದಿದ್ದಾರೆ. ಆದರೆ ಇವರ ಈ ಯೋಜನೆ ಮಾತ್ರ ಸಾರ್ವಜನಿಕರಿಗೆ ಸ್ವಲ್ಪ ಕಿರಿಕಿರಿಕಿರಿ ಆಗಿದೆ. ಅದು ಹೇಗೋ ಗುರುವಾಯನಕೆರೆಗೆ ನೀರು ಪೂರೈಸ ಬೇಕು, ನೀರನ್ನು ಕೊಡಪಾನದಲ್ಲಿ, ಬಾಲ್ದಿಯಲ್ಲಿ, ವೈಯರಲ್ಲಿ ಸಾಗಿಸಲು ಸಾಧ್ಯವಿಲ್ಲ. ಆಗ ಶುರುವಾಯಿತು ನೋಡಿ ಪೈಪಿನ ಕಾಮಗಾರಿ. ದೊಡ್ಡ ದೊಡ್ಡ ಆನೆ ಪೈಪುಗಳು ಬಂದವು. ಮುಗೇರಡ್ಕ ದಿಂದ ಕೆಲಸ ಆರಂಭ, ಅಲ್ಲಿಂದ ಕುಪ್ಪೆಟ್ಟಿವರೆಗೆ ಹಾಗೂ ಹೀಗೂ ದೊಡ್ಡ ದೊಡ್ಡ ಪೈಪು ಹಾಕಿದರು. ಕುಪ್ಪೆಟ್ಟಿಯಿಂದ ರಾಜ್ಯ ಹೆದ್ದಾರಿ ಬದಿ ದೊಡ್ಡ ಹೊಂಡ ತೋಡಿ ಪೈಪ್ಗಳ ಜೋಡಣೆಯಾಗುತ್ತಿತ್ತು . ಅನೇಕರಿಗೆ ಕುತೂಹಲ ಇಷ್ಟು ದೊಡ್ಡ ಪೈಪಿನಲ್ಲಿ ಪೆಟ್ರೋಲ್ ಡೀಸೆಲ್ ಸಾಗಿಸುತ್ತಾರ ಅಥವಾ ನೀರಾ, ಗ್ಯಾಸಾ ಎಂದು. ಮತ್ತೆ ಗೊತ್ತಾಯಿತು ನೀರು ಎಂದು. ಎತ್ತಿನ ಹೊಳೆ ಯೋಜನೆಯಂತೆ ಇದೂ ಕುಂಟುತ್ತಾ ಕುಂಟುತ್ತಾ ಸಾಗುತ್ತಿತ್ತು. ಒಂದು ಒಳ್ಳೆ ದಿನ ಮಾಜಿ ಶಾಸಕ ದಿ. ವಸಂತ ಬಂಗೇರರು ಓ.. ಎಂದು ಎದ್ದು ಕುಂತರು. ಜಿಲ್ಲಾ ಕಲೆಕ್ಟರನಿಗೆ ದೂರು ಹೋಯಿತು. ರಸ್ತೆ ಬದಿ ಅಗಳು ನಿರ್ಮಿಸಿ ಪೈಪು ಹಾಕುತ್ತಿದ್ದಾರೆ, ರಸ್ತೆ ವಿಸ್ತರಣೆಗೆ ಸಮಸ್ಯೆಯಾಗುತ್ತದೆ ಎಂದು. ಅದೂ ಆಯಿತು, ಸ್ವಲ್ಪ ಸಮಯ ಗುಂಡಿ ಬದಿಯಲ್ಲಿ, ರಸ್ತೆ ಬದಿಯಲ್ಲಿ ಪೈಪು ಪುರೆಲ್ಲುತ್ತ ಬಾಕಿಯಾಯಿತು.

ಮತ್ತೊಮ್ಮೆ ಕಾರ್ಯ ಆರಂಭವಾಯಿತು.ಈ ಪೈಪಿಂದ ಇದರ ಆಸುಪಾಸಿನ ಗ್ರಾಮಗಳನ್ನು ಮುಳುಗಿಸಲು ವ್ಯವಸ್ಥೆ ಉಂಟಂತೆ ಎಂಬ ಸುದ್ದಿ ಕೇಳಿ ಜನರಿಗೂ ಖುಷಿಯೋ ಖುಷಿ.ನಮ್ಮ ತೋಟದ ಮುದೆಲಿಗೂ ನೇತ್ರಾವತಿ ಬರುತ್ತಾಳೆ ಎಂದು ಜನರಾಡಿಕೊಂಡರು.ಇನ್ನು ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾಗಿ ಎಲ್ಲಾ ನೀರು ಗುರುವಾಯನಕೆರೆಗೆ ಬರುತ್ತೆ ಎಂದು ಜನ ಮನಸ್ಸಿನಲ್ಲೇ ಮಂಡಿಗೆ ತಿಂದರು.ಆದ್ರೆ ಒರಿಜಿನಲ್ ಕಥೆ ಬೇರೆನೇ ಇದೆ. ಇದನ್ನು ರಾಜ್ಯ ಹೆದ್ದಾರಿ ಬಿಟ್ಟು ಇಲ್ಲಿನ ನ್ಯಾಯತರ್ಪು ಗ್ರಾಮದ ನಾಳದ ಮಲೆಯ ಕೊಡೀಗೆ ಕೊಂಡು ಹೋಗಿ ಗುರುವಾಯನಕೆರೆಗೆ ಹಾರಿಸುವುದು ಎಂಬ ಸ್ಕೆಚ್ ಇದೆಯಂತೆ. ಇದು ಶಾಸಕರ ಯೋಚನೆ ಯೋ ಅಲ್ಲ ಗುತ್ತಿಗೆದಾರರ ಯೋಚನೆ ಯೋ ಗೊತ್ತಿಲ್ಲ. ನೇರವಾಗಿ ರಾಜ್ಯಹೆದ್ದಾರಿಯಲ್ಲಿ ಹೋಗುತ್ತಿದ್ದ ಬೃಹತ್ ಪೈಪುಗಳು ಈಗ ಗೋವಿಂದೂರು ಎಂಬಲ್ಲಿ ಗುಡ್ಡ ಹತ್ತುವುದು ಎಂದಾಯಿತು. ಇಲ್ಲಿಂದ ಅಸಲೀ ಕಥೆ ಶುರು. ಇದೀಗ ದೊಡ್ಡ ದೊಡ್ಡ ಲಾರಿಗಳು ಪರಪ್ಪುವರೆಗೆ ಹೋಗಿ, ಜಾರಿಗೆ ಬೈಲು ಎಂಬಲ್ಲಿ ಮೂಡಾಯಿ ಹತ್ತಲು ಶುರು. ವಿಷಯ ಯಾರಿಗೂ ಗೊತ್ತಿಲ್ಲ. ದೊಡ್ಡ ದೊಡ್ಡ ಪೈಪುಗಳನ್ನು ಹೊತ್ತ ಲಾರಿಗಳು ಇಲ್ಲಿನ ಜಾರಿಗೆ ಬೈಲು ಕರತ್ತೂರು ರಸ್ತೆಯನ್ನು ಏರಲು ಪ್ರಾರಂಭ. ರಸ್ತೆಯ ಕಣಿಗಳನ್ನು ಮುಚ್ಚಿ ಒಂದೆರಡು ಕಿಮೀ ರಸ್ತೆ ಬದಿ ಪೈಪುಗಳನ್ನು ರಾಶಿ ಹಾಕಲು ಶುರುವಾಗಿದೆ. ಹಾಗೋ ಹೀಗೋ ಮೂಡಾಯಿಯಿಂದ ಪಡ್ಡಾಯಿಗೆ ಕೆಲಸ ಶುರುವಾಯಿತು. ಮಾರ್ಗದಲ್ಲೆ ಆನೆ ಪೈಪುಗಳನ್ನು ಹಾಕಿದರು.ಇನ್ನು ರಸ್ತೆಯ ಕಣಿ ರಿಪೇರಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಕಣಿಯಲ್ಲಿ ಪೈಪುಗಳ ಬಾಡಿ ಇದೆ.ಇದನ್ನು ತೆಗೆಯಬೇಕಾದರೆ ಕ್ರೇನೇ ಬೇಕು. ಹಾಗೆ ಕಳೆದೆರಡು ವರ್ಷಗಳಿಂದ 10 ಪೈಪು ಹಾಕಿ ಮಾರ್ಗದಲ್ಲೆ ಗುಂಡಿ ಬಿಟ್ಟು ಹೋದ ಪೈಪಿನ ಕೆಲಸಗಾರರು, ಜೆಸಿಬಿಗಳು ನಾಪತ್ತೆ. ಶಾಸಕರು ತಮ್ಮ ಹಿಂದಿನ ಅವಧಿಯಲ್ಲಿ ಈ ರಸ್ತೆ ಅಭಿವೃದ್ದಿಗೆ ತೆಂಗಿನಕಾಯಿ ಒಡೆದು ಹೋದವರೂ ನಾಪತ್ತೆ, ರಸ್ತೆಯೂ ಅಭಿವೃದ್ಧಿ ಇಲ್ಲ ಎಂಬುದು ಜನರ ಪಿರಿಪಿರಿ. ಜೊತೆಗೆ ಪೈಪು ಕೆಲಸ ಕೂಡ ಇಲ್ಲ.ಈಗ ಈ ಪೈಪುಗಳ ಬದಿಯಲ್ಲಿ ಹೋಗುವಾಗ ನಮಗೆ ಕೇಳಿಸುವ ಸದ್ದು ಒಂದೇ “ಪೂಂಜೆರೇ ಓಲರ್ ” ಎಂದು. ಇತ್ತೀಚೆಗೆ ಅರಣ್ಯ ಇಲಾಖೆಯವರು ಬಂದು ಪೈಪಿಗಾಗಿ ತೆಗೆದ ಗುಂಡಿಯನ್ನು ಮುಚ್ಚಿ, ಪೈಪಿನ ಮೂತಿಗೆ ಮಣ್ಣು ತುಂಬಿಸಿ ಪದ್ರಾಡ್ ಆಗಿದ್ದಾರೆ. ವಿಷಯ ಏನೆಂದರೆ ಈ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡಿಲ್ಲವಂತೆ.” ಓ ಪೂಂಜರೇ ನೀವೆಲ್ಲಿದ್ದೀರಿ, ರಸ್ತೆ ಅಭಿವೃದ್ಧಿ ಹೇಗೂ ಇಲ್ಲ, ಸಾಯಲಿ ನಮ್ಮ ಕರ್ಮ.ಇಲ್ಲಿ ರಸ್ತೆ ಯುದ್ಧಕ್ಕೂ ರಾಶಿ ಹಾಕಿರುವ ಪೈಪನ್ನಾದರೂ ಗುರುವಾಯನಕೆರೆಗೆ ಹಾಕಿ. ಈ ಉಚಿತ ಖಚಿತದ ಸರಕಾರ ಅಭಿವೃದ್ಧಿಯಂತೂ ಮಾಡಲ್ಲ, ನಿಮಗೂ ಅನುದಾನ ಕೊಡಲ್ಲ. ಈ ಪೈಪುಗಳು ತುಕ್ಕುಹಿಡಿಯುತ್ತಿವೆ, ರಸ್ತೆಗೆ ಅಡಚಣೆಯಾಗುತ್ತಿದೆ. ಇದಕೊಂದು ಮುಕ್ತಿ ಕರುಣಿಸಿ.







