ಪುತ್ತೂರಿನಲ್ಲಿ ಪೋಲಿಸರು ಅಷ್ಟು ಕೆಲಸ ಮಾಡಿದ್ದಾರೆ. ಎಲ್ಲೆಲ್ಲೋ ಗುಡ್ಡೆಯಲ್ಲಿ, ಕಾಡಿನಲ್ಲಿ, ನದಿ ಪರಬೋಂಕುಗಳಲ್ಲಿ, ಭೂತ ಬಂಗಲೆಗಳಲ್ಲಿ, ಠಾಣಾ ಸರಹದ್ದಿನ ಗಡಿಗಳಲ್ಲಿ ಮತ್ತು ನರಮಾನಿ ಹೋಗದ ಸ್ಥಳಗಳಲ್ಲಿ ನಡೆಯುತ್ತಿದ್ದ ತಾಲ್ಲೋಕು ಮಟ್ಟದ, ಜಿಲ್ಲಾ ಮಟ್ಟದ, ಗ್ರಾಮೀಣ ಪ್ರತಿಭೆಗಳ ಜುಗಾರಿ ಅಡ್ಡೆಗಳನ್ನು ಪುತ್ತೂರು ಪೋಲಿಸರು ಯಾವುದೇ ಮುಲಾಜಿಲ್ಲದೆ ಬಂದ್ ಮಾಡಿ ಜುಗಾರಿ ಪ್ರತಿಭೆಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅದರಲ್ಲೂ ಮತ್ತೊಂದು ಸಂತಸದ ವಿಷಯ ಏನೆಂದರೆ ಪುತ್ತೂರಿನ ಹೈಟೆಕ್ ಕ್ಲಬ್ ಗಳಲ್ಲಿ ನಡೆಯುತ್ತಿದ್ದ ಜುಗಾರಿಯ ಇನ್ನೊಂದು ರೂಪವಾಗಿರುವ ಪಾಯಿಂಟ್ ರಮ್ಮಿಗೂ ಪೋಲಿಸರು ನೋ ಅಂದಿದ್ದಾರೆ ಮತ್ತು ಮಿನಿಮಮ್ ಮೇಸೆಗೆ ಆದೇಶಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜುಗಾರಿ ಇದೀಗ ಮನೆ ಮನೆಗೆ ಮುಟ್ಟಿದೆ. ಯಾಕೆಂದರೆ ಮನೆಗೆ ಪೋಲಿಸರು ಬರುವ ಹಾಗಿಲ್ಲ. ಮನೆಯ ಒಳಗೆ ಡೈನಿಂಗ್ ಟೇಬಲ್ ಮೇಲೆ ಜುಗಾರಿ ನಡೆದರೆ ಪಾಪ ಪೋಲಿಸರು ಏನು ತಾನೇ ಮಾಡಬಹುದು?
ಹಾಗೆ ಗುಡ್ಡೆ ಜುಗಾರಿ ನಿಂತ ಕೂಡಲೇ ಜುಗಾರಿಕೋರರು ಈಗ ಮನೆ ಜುಗಾರಿಗೆ ಶುರು ಮಾಡಿದ್ದಾರೆ. ಪುತ್ತೂರಿನ ಪಡೀಲ್, ತಾರಿಗುಡ್ಡೆ, ಸಾಮೆತ್ತಡ್ಕ, ಕೇಪುಳು, ಮುರ, ಬಪ್ಪಳಿಗೆ ಮುಂತಾದ ಕಡೆಗಳಲ್ಲಿ ಈಗ ಮನೆ ಜುಗಾರಿ ರಾಜಾರೋಷವಾಗಿ ನಡೆಯುತ್ತಿದೆ. “ಬಿನ್ನೆರ್ ಉಲ್ಲೆರ್” ಎಂದು ನೆರೆಹೊರೆಯವರನ್ನು ನಂಬಿಸಿ, ಕೆಲಸಕ್ಕೆ ಹೋಗಿರುವ ಬುಡೆದಿ ಮತ್ತು ಸ್ಕೂಲಿಗೆ ಹೋಗಿರುವ ಮಕ್ಕಳು ಬರುವ ಮುನ್ನ ಹಲವು ಮೇಸೆ ವಸೂಲು ಮಾಡಲಾಗಿರುತ್ತದೆ ಎಂದು ತಿಳಿದುಬಂದಿದೆ. ಇನ್ನು ಕೆಲವು ಸೇಲ್ ಆಗದಿರುವ ಬಾಡಿಗೆ ಮನೆಗಳಲ್ಲಿ, ಮನೆ ಬಾಡಿಗೆಗೆ ಪಡೆದು, ರೂಂ ಬಾಡಿಗೆಗೆ ಮಾಡಿ ಜುಗಾರಿ ಎಲೆ ಹರಡಲಾಗುತ್ತಿದೆ. ಈ ಬಗ್ಗೆ ಪುತ್ತೂರು ಟೌನಿನ ಬೀಟ್ ಪೋಲಿಸರು ಸ್ವಲ್ಪ ಸ್ಟಡಿ ಮಾಡಿದರೆ ಜುಗಾರಿ ವೀರರನ್ನು ಇಸ್ಪೀಟ್ ಎಲೆಗಳ ಸಮೇತ ಚಡ್ಡಿಯಲ್ಲಿ ನಿಲ್ಲಿಸಿ ಸ್ಲೇಟ್ ಕೊಡಬಹುದು
ಹಾಗೆಂದು ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಜುಗಾರಿ ಜಾತ್ರೆ ಕಂಡಾಪಟ್ಟೆ ಜಾಸ್ತಿಯಾಗಿತ್ತು. ದೊಡ್ಡ ದೊಡ್ಡ ಕ್ಲಬ್ಬುಗಳೂ ಹೈಟೆಕ್ ಲೆವೆಲ್ ನಲ್ಲಿ ಜುಗಾರಿ ನಡೆಸಿದವು. ಪಾಯಿಂಟ್ ರಮ್ಮಿ ಹೆಸರಿನಲ್ಲಿ ನಡೆಯುತ್ತಿದ್ದ ಈ ಹೈಟೆಕ್ ಜುಗಾರಿಯನ್ನೂ ಪೋಲಿಸರು ಕಂಡೀಷನ್ಸ್ ಅಪ್ಲೈ ಎಂದು ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹತ್ತು ರೂಪಾಯಿ ಪಾಯಿಂಟ್, ಇಪ್ಪತ್ತು ರೂಪಾಯಿ ಪಾಯಿಂಟ್, ಐವತ್ತು, ನೂರು ರೂಪಾಯಿ ಪಾಯಿಂಟ್ ಎಂದು ಕ್ಲಬ್ ಗಳಲ್ಲಿ ಕಡಿಯಲಾಗುತ್ತಿತ್ತು. ಉದಾಹರಣೆಗೆ ನೂರು ರೂಪಾಯಿ ಪಾಯಿಂಟ್ ಗೆ ಕಸ್ಟಮರ್ ಸಾವ್ರ ರೂಪಾಯಿ ಮೇಸೆ ಕಟ್ಟಬೇಕು. ಒಂದೊಂದು ಕ್ಲಬ್ಬುಗಳಲ್ಲಿ ಹದಿನಾಲ್ಕು ಗಂಟೆ ತನಕ ಪಾಯಿಂಟ್ ರಮ್ಮಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಇದೆ. ಹದಿನಾಲ್ಕು ಗಂಟೆಗಳಲ್ಲಿ ಹತ್ತು ಮ್ಯಾಚ್ ನಡೆದರೂ ನೂರು ರೂಪಾಯಿ ಪಾಯಿಂಟ್ ಗೆ ಒಬ್ಬ ಸಾವ್ರ ರೂಪಾಯಿ ಮೇಸೆ ಕಟ್ಟಿದ್ರೂ ಹತ್ತು ಮ್ಯಾಚ್ ಗೆ ಅವನು ಹತ್ತು ಸಾವಿರ ಕಟ್ಟಿದ ಹಾಗೆ ಆಗುತ್ತದೆ. ಹತ್ತು ಜನ ಆಡಿದರೆ, ಇಪ್ಪತ್ತು ಜನ ಆಡಿದರೆ ಲೆಕ್ಕ ಹಾಕಿ. ಇದು ಕೇವಲ ಒಂದು ಟೇಬಲ್ ಕತೆ. ಕ್ಲಬ್ಬುಗಳಲ್ಲಿ ತುಂಬಾ ಟೇಬಲ್ ಗಳಲ್ಲಿ ಆಟ ನಡೆಯುತ್ತಲೇ ಇರುತ್ತವೆ. ಇನ್ನು ಆಟಗಾರ ಸೋತರೆ ಎಂಟು ಸಾವಿರ ಕಟ್ಟಬೇಕು. ನನ್ನಿಂದ ಆಡಲು ಸಾಧ್ಯವೇ ಇಲ್ಲ ಎಂದು ಸರೆಂಡರ್ ಆದರೂ ಎರಡು ಸಾವಿರ ಕಕ್ಕಬೇಕು. ಇನ್ನು ಇಂಟರ್ ವೆಲ್ ಗೆ ಕೂಡ ನಾಲ್ಕು ಸಾವಿರ ಕೊಡಬೇಕು. ಇದು ಕ್ಲಬ್ಬುಗಳಲ್ಲಿ ಇರುವ ರೂಲ್ಸ್. ಎಲ್ಲಿಯಾದರೂ ಪಾಪದವ ಹೋಗಿ ಪಾಯಿಂಟ್ ರಮ್ಮಿಗೆ ಕೂತರೆ ಅಲ್ಲಿಗೆ ಅವನ ಮನೆಮಠ ಕೂಡ ಮಾಡಬೇಕಷ್ಟೆ. ಇದೀಗ ಪೋಲಿಸರು ಈ ಪಾಯಿಂಟ್ ರಮ್ಮಿಗೆ ಕೂಡ ಆಗಲ್ಲ ಅಂದಿದ್ದು ಸಿಸಿ ಕ್ಯಾಮೆರಾ ಕರೆಕ್ಟ್ ಫೋಕಸ್ ಮಾಡಿ ಇಟ್ಟು ಆಡಲು ತಿಳಿಸಿರುವ ಬಗ್ಗೆ ಗುಸುಗುಸು ಇದೆ. ಸಿಸಿ ಸರಿ ಇಟ್ಟರೆ ಮೇಲೆ ಎಸ್ಪಿ ಕುಂತುಕೊಂಡು ತನ್ನ ಚೇಂಬರ್ ನಲ್ಲಿಯೇ ಪಾಯಿಂಟ್ ರಮ್ಮಿ ನೋಡುವ ವ್ಯವಸ್ಥೆ ಇದೆ.
ಹಾಗೆಂದು ಪುತ್ತೂರು ಪೋಲಿಸರು ಇನ್ನು ಮುಂದೆ ಈ ಜುಗಾರಿ ಮನೆಗಳಿಗೆ ಬಿನ್ನೆರ್ ಕಟ್ಟಿಕ್ಕೊಂಡು ಹೋಗಲೇ ಬೇಕಾಗಿದೆ. ಇಲ್ಲದಿದ್ದರೆ ಇದೊಂದು ಸಾಂಕ್ರಾಮಿಕ ಆಗುವುದರಲ್ಲಿ ಸಂಶಯವೇ ಇಲ್ಲ. ಜುಗಾರಿ ನಡೆಯುವ ಮನೆಯ ನೆರೆಹೊರೆಯವರಿಗೆ ಒಂದು ಚಿಕ್ಕ ಡೌಟ್ ಬಂದು ಫೋನ್ ಎತ್ತಿಕೊಂಡು ಮೇಡೆ ಮೇಡೆ ಎಂದು ಕೂಗಿದರೂ ಸಾಕು ಪೋಲಿಸರು ತಕ್ಷಣ ಸ್ಪಾಟಿಗೆ ಬರುವಂತಹ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ದಿನಗಳೆದಂತೆ “ಬಿನ್ನೆರ್” ಜಾಸ್ತಿ ಆಗುವ ಅಪಾಯಗಳಿವೆ.






