ಹಾಗೆಂದು ಮೊನ್ನೆ ಜೂನ್ 25 ರಂದು ನಡೆದ ಕೊಲ್ಲಮೊಗ್ರ ಪಂಚಾಯ್ತಿ ಗ್ರಾಮ ಸಭೆಯಲ್ಲಿ ಪಂಚಾಯ್ತಿಯಿಂದ ಅಮಾನತುಗೊಂಡು ಇನ್ನೂ ಪಂಚಾಯ್ತಿ ಯಲ್ಲೇ ಟೆಂಟ್ ಹಾಕಿರುವ ಸಂತು ಬಗ್ಗೆ ಗ್ರಾಮಸ್ಥರು ಕಿರಿಕ್ ಮಾಡಿದ್ದಾರೆ. ಸಂತು ಬಾಡಿಯನ್ನು ಇನ್ನೂ ಯಾಕೆ ಪಂಚಾಯ್ತಿಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಪಂಚಾಯ್ತಿ ಆಡಳಿತಕ್ಕೆ ಮಂಗಳಾರತಿ ಮಾಡಿದ್ದಾರೆ. ಪುಣ್ಯಕ್ಕೆ ಪ್ರಸಾದ ಕೊಟ್ಟಿಲ್ಲ.
ಹಾಗೆಂದು ಮೊನ್ನೆಯ ಗ್ರಾಮ ಸಭೆಯಲ್ಲಿ ಆ ಗ್ರಾಮಸ್ಥರು ಅಷ್ಟೆಲ್ಲ ಬೊಬ್ಬೆ ಹೊಡೆಯಲು ಈ ಸಂತು ಏನೆಲ್ಲ ಮಾಡಿದ್ದಾನೆ ಎಂದು ಅಷ್ಟಮಂಗಲ ಇಟ್ಟರೆ ಸಂತುನ ಕಾರಣಿಕದ ಕತೆಗಳ ಕಂತೆ ಕಂತೆಯೇ ಇದೆ. ಈ ಸಂತು ಕೊಲ್ಲಮೊಗ್ರ ಪಂಚಾಯ್ತಿಯನ್ನು ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ನೋಡಿಕೊಂಡಿದ್ದಾನೆ ಮತ್ತು ಉಪಯೋಗಿಸಿಕೊಂಡಿದ್ದಾನೆ. ಪಂಚಾಯ್ತಿಯಲ್ಲಿ ಸಂಟು ಮಾತು ಅಂದರೆ ರಾಜವಾಣಿ ಇದ್ದ ಹಾಗೆ. ಕೇಳುವವರೇ ಇಲ್ಲ. ಸಂತು ಮುಂದೆ ಪಂಚಾಯ್ತಿ ಆಡಳಿತ ಮಂಡಳಿಗೆ ಕೂಡ ಲೈಟ್ ನರ್ವಸ್ ನೆಸ್ ಇದೆ. ಓ ಆವತ್ತು ಪಂಚಾಯ್ತಿಯ ಹೊಸ ಕೊಠಡಿಗೆ ಜಿಲ್ಲಾ ಪಂಚಾಯ್ತಿಂದ ಬಂದಿದ್ದ ನಾಲ್ಕು ಚಯರು, ಎರಡು ಟೇಬುಲು, ಎರಡು ಟೇಬಲು ಗೋದ್ರೇಜ್ ಗಳು ಪಂಚಾಯ್ತಿಯಲ್ಲಿ ತುಕ್ಕು ಹಿಡಿಯುತ್ತದೆ ಎಂದು ತನ್ನ ಮನೆಗೆ ಹೊತ್ತುಕೊಂಡು ಹೋಗಿ ಅಟ್ಟದಲ್ಲಿ ಕೂ..ಕೂ ಮಾಡಿದ್ದ. ಇನ್ನು ಈ ಸಂತು ಸೈನ್ ಎಕ್ಸ್ ಪರ್ಟ್ ಕೂಡ ಆಗಿದ್ದು ಅಧ್ಯಕ್ಷರ ಕಾಗೆ ಕಾಲಿನ ಸೈನು, ಪಿಡಿಒನ ಓರೆಕೋರೆ ಸೈನು, ಸದಸ್ಯರ ಅಂಡಿಗುಂಡಿ ಸೈನುಗಳನ್ನು ತಾನೇ ಎಳೆದು ಹತ್ತು ಹಲವು ದುಡ್ಡು ಕಿಸೆಗೆ ಇಳಿಸಿ ಆರೋಗ್ಯವಂತನಾಗಿದ್ದ ಎಂಬ ಮಾಹಿತಿ ಇದೆ. ಇನ್ನು “ಕುಡಿಯೋದೆ ನನ್ನ ಹ್ಯಾಬಿಟ್ಟು” ಎಂದು ಪಂಚಾಯ್ತಿ ಮುಗಿಸಿ ಪಿಡ್ಕ್ ಇಳಿಸಿ ಇಳಿಸಿ ಪಂಚಾಯ್ತಿಯ ಕಸ ವಿಲೇವಾರಿ ವಾಹನದಲ್ಲಿ ಮ್ಯೂಸಿಕ್ ಸಹಿತ ಸವಾರಿ ಹೊರಟನೆಂದರೆ ಈ ಸಂತು ಕೊಲ್ಲಮೊಗ್ರದ ರಾಜಮಗ. ಆರು ಗಂಟೆ ನಂತರ ಕಸ ವಿಲೇವಾರಿ ವಾಹನದಲ್ಲಿ ಏನು ವಿಲೇವಾರಿ ಮಾಡುತ್ತಾನೆ, ಏನು ಮಾಡಬಹುದು ಎಂಬುದು ಅವನ ಸ್ವ ಇಚ್ಛೆಗೆ ಬಿಟ್ಟಿದ್ದು. ಒಮ್ಮೆ ಊರಿನವರೇ ಇವನ ವಳಸ್ಸಾರಿ ನೋಡಲಾಗದೆ ಕಸದ ವಾಹನವನ್ನು ಎಳೆದಿಟ್ಟು ಮರುದಿನ ಪಂಚಾಯ್ತಿಯ ಸುಪರ್ದಿಗೆ ಕೊಟ್ಟಿದ್ದರು.
ಹಾಗೆಂದು ಕೊಲ್ಲಮೊಗ್ರ ಪಂಚಾಯ್ತಿಯಲ್ಲಿ ಈ ಸೆಂಟು ಒಬ್ಬ ಉತ್ತಮ ವರ್ಕರು. ಒಮ್ಮೊಮ್ಮೆ ನೈಟ್ ಎಂಟು ಗಂಟೆ ತನಕವೂ ಪಂಚಾಯ್ತಿ ಲೈಟ್ಸ್ ಆನ್ ನಲ್ಲಿ ಇರುತ್ತದೆ. ನೈಟ್ ಟೈಟ್ ಸಂತು ಪಂಚಾಯ್ತಿಯಲ್ಲಿ ಅದೇನು ಕೆಲಸ ಮಾಡುತ್ತಾನೋ ಆ ಭೂತಗಳಿಗೇ ಗೊತ್ತು. ಇಲಿಗಳ ಗೂಡಿಗೆ ಹುರಿದ ತೆಂಗಿನ ಕಾಯಿ ತುಂಡು ಕಟ್ಟುವುದು, ಪೆರ್ಗುಡೆಗಳಿಗೆ ಉರ್ಲು ಇಡೋದು, ಕಾಡು ಪಂಜಿಗಳು ಪಂಚಾಯ್ತಿ ಆಸುಪಾಸಿನಲ್ಲಿ ಬರದಂತೆ ಸೀರೆ ಕಟ್ಟೋದು ಮುಂತಾದ ಕೆಲಸಗಳನ್ನು ನೈಟ್ ಪಂಚಾಯ್ತಿಯಲ್ಲಿ ಮಾಡುತ್ತಾನೆ ಎಂದು ಯಾರೋ ದಾರಿಹೋಕರು ಹೇಳಿದ್ದಾರೆ. ಇನ್ನು ಅವನ ಮನೆಗೆ ಕಣಕ್ಕ್ ಸಾಗಿಸಲು, ತೋಟಕ್ಕೆ ರಸಗೊಬ್ಬರ ಸಾಗಿಸಲು, ಕೋರಿದ ಪಿ, ಕುರಿ ಬಿಟ್ಟೆ ಸಾಗಿಸಲು ಮತ್ತು ಮನೆಗೆ ಏನು ಬೇಕಾದರೂ ಸಾಗಿಸಲು ಅವನು ಪಿಕಪ್ ಹೇಳಲ್ಲ. ಪಂಚಾಯ್ತಿಯ ಕಸದ ಗಾಡಿಯನ್ನೇ ಯೂಸ್ ಮಾಡುತ್ತಾನೆ. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಇವನು ಮಾಡಿದ ದುಡ್ಡು ಲೆಕ್ಕ ಮಾಡಲು ಈಸರಪ್ಪನ ಕೌಂಟಿಂಗ್ ಮಿಷನ್ ತರಬೇಕಷ್ಟೆ. ಅಷ್ಟಿದೆ.
ಹಾಗೆ ಸಂತು ಕೊಲ್ಲಮೊಗ್ರ ಪಂಚಾಯ್ತಿಯಲ್ಲಿ ಮಾಡಿದ ಘನ ಕಾರ್ಯಗಳನ್ನು, ಸತ್ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂತುಗೆ ನೋಟಿಸ್ ಜಾರಿ ಮಾಡಿತ್ತು ಗಡ. ಆದರೆ ಗಡ ಗಡ ಆಗದ ಸಂತ್ರೂ ಆ ನೋಟಿಸನ್ನು ಬಿಸಿ ಮಾಡಿ ಓದುವ ಎಂದು ಕುಂಡೆ ಅಡಿಗೆ ಹಾಕಿ ಕುಂತಿದ್ದ. ಇನ್ನು ತನ್ನ ವಿರುದ್ಧ ಯಾರೇ ಮಾತಾಡಿದರೂ, ದೂರು ಕೊಟ್ಟರೂ, ಮೇಲೆ ಹೋದರೂ ಅಂಥವರನ್ನು ಇವನು ಪಂಚಾಯ್ತಿಯಲ್ಲಿ “ನೋಡಿಕೊಳ್ಳುತ್ತಿದ್ದ” ಎಂದು ತಿಳಿದುಬಂದಿದೆ. ಆದ್ದರಿಂದ ಕೊಲ್ಲಮೊಗ್ರದ ಡೀಸೆಂಟ್ ಗ್ರಾಮಸ್ಥರು ಇವನ ಬಗ್ಗೆ ಸಂಧಿ ಹಾಡಲು ಹೆದರುತ್ತಿದ್ದರು ಎಂದು ತಿಳಿದುಬಂದಿದೆ. ಇದೀಗ ಮೊನ್ನೆ ನಡೆದ ಗ್ರಾಮ ಸಭೆಯಲ್ಲಿ ಯಾರೋ ಪುಣ್ಯಾತ್ಮರು ಇವನ ಬಗ್ಗೆ ಕೇಳಿದ್ದಾರೆ. ಇವನನ್ನು ಮನೆಗೆ, ಜೈಲಿಗೆ ಯಾಕೆ ಕಳಿಸಿಲ್ಲ ಎಂದು ಕ್ವಶ್ಚನ್ ಹಾಕಿದ್ದಾರೆ. ಇನ್ನೂ ಪಂಚಾಯ್ತಿಯಲ್ಲಿಯೇ ಯಾವ ಪುರುಷಾರ್ಥಕ್ಕೆ ಇಟ್ಟುಕ್ಕೊಂಡು ಚರ್ಬಿ ಏರಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಆಡಳಿತ ಮಂಡಳಿ ಮಾತ್ರ ಎಲ್ಲಾ ವಿರೋಧಗಳನ್ನು, ಅಸಮಾಧಾನಗಳನ್ನು ಅಂಚಿದ ಕೆಬಿಯಲ್ಲಿ ಕೇಳಿ ಇಂಚಿದ ಕೆಬಿಯಲ್ಲಿ ಟುಸ್ಸೆಂದು ಬಿಟ್ಟಿದ್ದು ಬಿಟ್ಟರೆ ಸಂತು ಇನ್ನೂ ಪಂಚಾಯ್ತಿಯಲ್ಲೇ ಬೆಚ್ಚ ಮಾಡುತ್ತಿದ್ದಾನೆ. ಸಂತು ರಿಲೀಸ್ ಯಾವಾಗ? ಹೀಗೆ ಬೆಳೆದು,ಬೆಳೆದು, ಬೆಳೆದು ನಾಳೆ ಇಡೀ ಪಂಚಾಯ್ತಿಯನ್ನೇ ಕದ್ದು ಬಿಟ್ಟರೆ? ಕೊಲ್ಲಮೊಗ್ರಕ್ಕೆ ಪಂಚಾಯ್ತಿ ಇಲ್ಲ.
ಪಂಜದಲ್ಲಿ ಕಾಚುಕುಜುಂಬ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ರಚನೆ

ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ ಶ್ರೀ ಕಾಚು ಕುಜುoಬ ದೈವದ ಮೂಲ ಸ್ಥಾನ ಗರಡಿ ಬೈಲ್ ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಕಾಚು ಕುಜುoಬ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ಗೌಡ ಬಿಳಿಮಲೆ, ಉಪಾಧ್ಯಕ್ಷರಾಗಿ ಶ್ರೀ ಉಮೇಶ್ ಬುಡೆಂಗಿ ಬಲ್ಪ ಹಾಗೂ ಕಾರ್ಯದರ್ಶಿ ಗಳಾಗಿ ಶ್ರೀ ಅನಂದ ಗೌಡ ಜಳಕದ ಹೊಳೆ ಆಯ್ಕೆಯಾದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ kanathur ಸಭಾಧ್ಯಕ್ಷತೆ ವಹಿಸಿದ್ಧರು. ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಗೌರವ ಸಲಹೆ ಗಾರರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ,ಶ್ರೀ ಆನಂದ ಗೌಡ ಕಂಬಳ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀ ರಾಮಚಂದ್ರ ಭಟ್, ಶ್ರೀ ಮಾಲಪ್ಪ ಗೌಡ yenmuru, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಸಂತೋಷ್ ಕುಮಾರ್ ರೈ ಫಲತಡ್ಕ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಲಿನಿ ಕುದ್ವ ಹಾಗೂ ಪವಿತ್ರ ಮಲ್ಲೆಟ್ಟಿ ಉಪಸ್ಥಿತರಿದ್ದರು. ನೂತನ ದೈವಸ್ಥಾನದ ನಿರ್ಮಾಣ ಕೆಲಸ ಈಗಾಗಲೇ ಪ್ರಾರಂಭ ಗೊಂಡಿದ್ದು ಪ್ರತಿಷ್ಟಾ ಕಾರ್ಯಕ್ರಮವು ದಿನಾಂಕ 3-12-25 ರಿಂದ ಆರಂಭ ವಾಗಿ 5-12-25 ರಂದು ನಡೆಯಲಿದೆ ಎಂದು ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿರುತ್ತಾರೆ.





