ಹಾಗೆಂದು ಈಗೀಗ ಸುಬ್ರಹ್ಮಣ್ಯದಲ್ಲಿ ಭ್ರಷ್ಟಾಚಾರಿಗಳು, ವಂಚಕರು, ಸುಲಿಗೆಕೋರರು ಹೌಸ್ ಫುಲ್ ಆಗುತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ದೇವರ ಹೆಸರು ಮತ್ತು ಅವನ ಆಲಯ. ದೇವಸ್ಥಾನವನ್ನು ಸರ್ಕಾರಿ ಕಚೇರಿ ಮಾಡಿಕೊಂಡಿದ್ದಾರೆ. ಸುಬ್ರಹ್ಮಣ್ಯದಲ್ಲಿ ಏನು ಮಾಡಿದರೂ ನಡೆಯುತ್ತೆ ಎಂಬ ಕ್ರಿಮಿನಲ್ ಮೆಂಟಾಲಿಟಿ ಕೆಲವು ಜನರದ್ದು. ಅದಕ್ಕಾಗಿ ದೇವಸ್ಥಾನದಿಂದ ಹಿಡಿದು ಇಡೀ ಸುಬ್ರಹ್ಮಣ್ಯ ಗ್ರಾಮದ ತುಂಬಾ ಬೊಂಬಾಯಿ ತೆರೆದು ಕೊಂಡೇ ಇರುತ್ತಾರೆ ಮತ್ತು ಸಿಕ್ಕಿದ್ದನ್ನು ನುಂಗಿ ಬಿಡುತ್ತಾರೆ. ಇದೀಗ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೀಸಲು ಜಾಗವನ್ನು ರಾಮಕೃಷ್ಣ ಹೆಗಡೆ ಚಕ್ಕುಲಿ ತಿಂದ ಹಾಗೆ ಎಳೆ ಎಳೆಯಾಗಿ ಮುಗಿಸುತ್ತಿದ್ದು ಎಲ್ಲವೂ ಸರಿ ಹೋದರೆ ಶೀಘ್ರದಲ್ಲೇ ಆರೋಗ್ಯ ಕೇಂದ್ರಕ್ಕೆ ಕೋಮಣ ಇಲ್ಲದಾಗುವುದು ಗ್ಯಾರೆಂಟಿ.
ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಿನಿಂದಲೂ ಎಂಟು ತಿಂಗಳಲ್ಲಿ ಹುಟ್ಟಿದ ಮಗುವಿನ ಹಾಗೆ.ಆರೋಗ್ಯ ಕೇಂದ್ರಕ್ಕೆ ರೋಗ ರುಜಿನಗಳು ಮಾಮೂಲು. ಈ ಆರೋಗ್ಯ ಕೇಂದ್ರಕ್ಕೆ ಮುಂದೆ ಭವಿಷ್ಯದಲ್ಲಿ ಮಾಳಿಗೆ ಏರಿಸಲು 4.2 ಎಕರೆ ಭೂಮಿಯೂ ಇತ್ತು. ಆದರೆ ಈಗ ನೋಡಿದರೆ 3.2 ಎಕರೆ ಮಾತ್ರ ಇದೆ. ಉಳಿದ ಭೂಮಿ ಎಲ್ಲಿ ಹೋಯ್ತು ಕುಮಾರಧಾರದಲ್ಲಿ ಬೊಳ್ಳಕ್ಕೆ ಹೋಯ್ತಾ ಅಥವಾ ಯಾರಾದರೂ ಭೂಗಳ್ಳರು ಕೈ ಕೊಟ್ಟರಾ ಎಂದು ವಿಚಾರಿಸಲಾಗಿ ಆರೋಗ್ಯ ಕೇಂದ್ರದ ನೆರೆಹೊರೆಯಲ್ಲಿ ಹೋಗಿ ನಾಯಿ ನಿಂತಿದೆ. ಆರೋಗ್ಯ ಕೇಂದ್ರದ ಜಾಗವನ್ನು ಲೋಕಲ್ಸ್ ಯಾರೋ ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ಆರೋಗ್ಯ ಕೇಂದ್ರದ ಆಸುಪಾಸಿನಲ್ಲಿ ಬಂದು ಲ್ಯಾಂಡ್ ಆದ ಜನ ಆ ಲ್ಯಾಂಡನ್ನು ನೈಂಟಿ ಫೋರ್ ಸಿ ಅಡಿಯಲ್ಲಿ ಗುಳುಂ ಮಾಡಿದ್ದಾರೆ. ನಂತರ ಆರೋಗ್ಯ ಕೇಂದ್ರದ ಗಡಿಯಲ್ಲಿ ಗಡಿಗಡಿ ಒಕ್ಕುತ್ತಾ ಒಕ್ಕುತ್ತಾ ಮುಂದೆ ಮುಂದೆ ಬಂದು ಇದೀಗ ಒಂದು ಎಕರೆಯಷ್ಟು ಜಾಗವನ್ನೇ ಮಾಯಕ ಮಾಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮುಜರಾಯಿ ಇಲಾಖೆ ಗುರ್ರ್ ಅಂದರೆ ಮೇಲಿಂದ ಫೋನ್ ಬರುತ್ತದೆ ಮತ್ತು ಯಥಾಸ್ಥಿತಿ ಕಾಪಾಡುವಂತೆ, ಶಾಂತಿಗೆ ಭಂಗ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಮೌಖಿಕ ಆದೇಶ ಬರುತ್ತದೆ. ಇಲಾಖೆಗಳು ಹಾಗೆ ಶಾಂತಿಯನ್ನು ಕಾಪಾಡಿ, ಕಾಪಾಡಿ ಈಗಾಗಲೇ ಒಂದು ಎಕರೆ ಪರಮಾತ್ಮನ ಪಾದ ಸೇರಿಕೊಂಡಿದೆ. ಇನ್ನು ಉಳಿದಿದ್ದು ಗಾಳದ ಹತ್ತಿರ ಇದೆ.
ಇದೀಗ ಆರೋಗ್ಯ ಕೇಂದ್ರದ ಜಾಗದ ಬರೆಯಿಂದ ಮಣ್ಣು ತೆಗೆಯುತ್ತಿದ್ದು ಯಾವುದೋ ರಸ್ತೆಗೆ ಇದನ್ನು ಕೊಂಡೋಗಿ ಹಾಕಲಾಗುತ್ತಿದೆ. ಇದರ ಪ್ರಯೋಜನ ಏನಪ್ಪಾ ಅಂದರೆ ಈ ಬರೆ ಹೋದರೆ ಒಬ್ಬ ಮಹಾನುಭಾವರ, ಯುಗಪುರುಷರ, ಸುಬ್ರಹ್ಮಣ್ಯದ ಮಹಾನ್ ನಾಯಕರ ಅಂಗಳ ದೊಡ್ಡದಾಗುತ್ತಾ ಹೋಗುತ್ತದೆ ಅಂತೆ. ಅಂಗಳ ದೊಡ್ಡದಾದರೆ ಅದಕ್ಕೆ ಕಾಂಪೌಂಡ್ ಗೋಡೆ ಕಟ್ಟುವ ಅನಿವಾರ್ಯತೆ ಬಂದೇ ಬರುತ್ತದೆ. ಯಾಕೆಂದರೆ ಕಲ್ಲರು,ದಣಗಳು, ಣಾಯಿಗಳು ಎಲ್ಲಾ ಬಂದು ಅಂಗಳದಲ್ಲಿ ಸಭೆ ನಡೆಸಿದರೆ ರಗಳೆ ಆಗುತ್ತದೆ. ಕಾಂಪೌಂಡ್ ಕಟ್ಟೋದು ಮಾತ್ರ ಆರೋಗ್ಯ ಕೇಂದ್ರದ ಜಾಗಕ್ಕೆ. ಅಂಥಹ ಒಂದು ಹುನ್ನಾರ ಈಗ ನಡೆಯುತ್ತಿದ್ದು ಕೆಲಸ ಪ್ರಗತಿಯಲ್ಲಿದೆ. ಈ ಬಗ್ಗೆ ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯುಕ್ತರು ಗಮನ ಹರಿಸಿ ಆರೋಗ್ಯ ಕೇಂದ್ರದ ಜಾಗದಲ್ಲಿ ನಡೆಯುತ್ತಿರುವ “ಆಪರೇಷನ್ ಅಂಗಳ” ಕಾರ್ಯಾಚರಣೆ ನಿಲ್ಲಿಸಬೇಕು ಮತ್ತು ನುಂಗಿದ ಜಾಗವನ್ನು ಕಕ್ಕಿಸುವ ಕೆಲಸ ಮಾಡ ಬೇಕು ಎಂಬುದು ಸಾರ್ವಜನಿಕರ ಆಶಯ.






