ಎಂಟೆಕ್ ಬಾಬಾ ಮತ್ತು ಮೂರುವರೆ ಲಕ್ಷ ಸಂಬಳ !

Pattler News

Bureau Report

“ಹಲೋ.. ನಾನು ನಾಗ ಸಾಧು ಕೃಷ್ಣಗಿರಿ ಮಹಾರಾಜ್ ಮಾತಾಡೋದು ಯಮುನೋತ್ರಿಯಿಂದ” ಎಂದು ಓ ಮೊನ್ನೆ ಕಾಣಿಯೂರಿನ ಅಟೋ ಡೀಲರ್ ಒಬ್ಬರಿಗೆ ಒಂದು ಕಾಲ್ ಬಂದಿತ್ತು. “ಯಾರು ಬೇಕಿತ್ತು ನಿಮಗೆ ಸ್ವಾಮಿಗಳೇ, ನೀವು ರಾಂಗ್ ನಂಬರಿಗೆ ಕಾಲ್ ಮಾಡಿದ್ದೀರಿ”ಎಂದು ಇತ್ಲ ಕಡೆಯಿಂದ ಹೇಳಿದರೆ “ನೀವು ರಾಜ್ ಶೇಖರ್ ಅಲ್ವಾ, ನಾನು ಕಲ್ಯಾಣ್ ಕೃಷ್ಣ, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನೀಯರಿಂಗ್ ಮಾಡುವಾಗ ನಿನ್ನ ರೂಂಮೆಟ್ ಆಗಿದ್ದೆ” ಎಂದು ಅತ್ತಲಿಂದ ಸ್ವಾಮಿ ಹೇಳಿದ್ದಾರೆ. ಕಲ್ಯಾಣ್ ಕೃಷ್ಣ, ಮಲ್ನಾಡ್ ಕಾಲೇಜ್, ಹಾಸನ ಎಂದೆಲ್ಲಾ ಹೇಳುವಾಗ ಕಾಣಿಯೂರಿನ ರೂಂಮೆಟ್ ನ ಟ್ಯೂಬ್ ಲೈಟ್ ಹೊತ್ತಿಕೊಂಡಿದೆ. ಯೆಸ್, ಕಾಣಿಯೂರಿನ ಅಟೋ ಡೀಲರ್ ಗೆ ಕಾಲ್ ಮಾಡಿದ್ದು ಕಲ್ಯಾಣ್ ಕೃಷ್ಣ ಅಲಿಯಾಸ್ ಕೃಷ್ಣಗಿರಿ ಮಹಾರಾಜ್ ಎಂಬ ನಾಗ ಸಾಧು.
ಈ ಕೃಷ್ಣಗಿರಿ ಮಹಾರಾಜ ಯಾನೆ ಕಲ್ಯಾಣ್ ಕೃಷ್ಣ ಊರು ಕರ್ನಾಟಕ. ಬೆಂಗಳೂರಿನ ಮತ್ತಿಕೆರೆ ನಿವಾಸಿ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನೀಯರಿಂಗ್ ಮಾಡಿದ್ದು ಮತ್ತು ಎಂಟೆಕ್ ಪದವೀಧರ. ಪದವಿ ಮುಗಿಸಿ ದೊಡ್ಡ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಕಲ್ಯಾಣ್ ಕೃಷ್ಣ ನಂತರ ಮದುವೆ ಮಾಡಿಕೊಂಡಿದ್ದಾರೆ. ಅದ್ಯಾಕೋ ಹೆಂಡ್ತಿಗೆ ಇವರ ಸಂಗಡ ಸರಿ ಬರಲಿಲ್ಲವೋ ಅಥವಾ ಇವರಿಗೆ ಹೆಂಡ್ತಿ ಸರಿ ಕಾಣಲಿಲ್ಲವೋ ಗೊತ್ತಿಲ್ಲ. ಮ್ಯಾರೀಡ್ ಲೈಫ್ ದೊಪ್ಪನೆ ಮುರಿದು ಬಿತ್ತು, ಡೈವೋರ್ಸ್ ಆಯ್ತು. ನಂತರ ಕಲ್ಯಾಣ್ ಕೃಷ್ಣ ಒಬ್ಬಂಟಿ. ಆದರೆ ದೊಡ್ಡ ಕೆಲಸ ಇತ್ತು ಬ್ಯುಸಿ ಶೆಡ್ಯೂಲ್ ಇತ್ತು. ತಿಂಗಳಿಗೆ ಮೂರೂವರೆ ಲಕ್ಷ ಸಂಬಳ ಆ ಕಾಲದಲ್ಲಿ. ಒಬ್ಬ ಮನುಷ್ಯ ಬದುಕಲು ಇಷ್ಟು ದುಡ್ಡು ಬೇಕಾ ಎಂಬ ಪ್ರಶ್ನೆ ಅದಾಗಲೇ ಕಲ್ಯಾಣ್ ಕೃಷ್ಣರಲ್ಲಿ ಬೆಳೆದು ಬಿಟ್ಟಿತ್ತು. ಆಗ ಅವರಿಗೆ ಮೀರತ್ ನಲ್ಲಿ ಕೆಲಸ ಇತ್ತು, ದೊಡ್ಡ ಕನ್ಸ್ಟ್ರಕ್ಷನ್ ಕಂಪೆನಿ. ಮೀರತ್ ನಲ್ಲಿ ಅವರು ಮಾಡಿದ್ದು ಕೊನೆಯ ಕೆಲಸ. ಮೀರತ್ ನಲ್ಲಿ ಕೆಲಸ ಮುಗೀಸ್ಕೊಂಡು ಅವರು ಡೆಹ್ರಾಡೂನ್ ಗೆ ಬಂದಿದ್ದರು. ಅಲ್ಲಿಂದ ವಾಪಾಸು ಹೊರಟಾಗ ಅವರಿಗೆ ಒಂದು ನಾಗ ಸಾಧುಗಳ ಮೆರವಣಿಗೆ ಎದುರಾಗಿದೆ. ಎಂಟೆಕ್ ಪದವೀಧರ, ದೊಡ್ಡ ಇಂಜಿನಿಯರ್, ತಿಂಗಳಿಗೆ ಮೂರುವರೆ ಲಕ್ಷ ಸಂಬಳ ಪಡೆಯುತ್ತಿದ್ದ ಕಲ್ಯಾಣ್ ಕೃಷ್ಣ ಬದಿಯಲ್ಲಿ ನಿಂತು ನಾಗ ಸಾಧುಗಳ ಮೆರವಣಿಗೆಯನ್ನು ತದೇಕಚಿತ್ತದಿಂದ ನೋಡುತ್ತಾ ನಿಂತಿದ್ದಾನೆ. ನೋಡುತ್ತಾ, ನೋಡುತ್ತಾ ಅದೇನನ್ನಿಸಿತೋ ಕಲ್ಯಾಣ್ ಕೃಷ್ಣ ಒಮ್ಮೆಲೇ ಮೆರವಣಿಗೆಯಲ್ಲಿ ಜಾಯಿನ್ ಆಗಿದ್ದಾನೆ. ಅಷ್ಟೇ ! ಹಾಗೆ ಅವತ್ತು ಹೋದದ್ದು ಹೋದದ್ದೇ. ಅದೇ ಕಲ್ಯಾಣ್ ಕೃಷ್ಣ ಇವತ್ತು ಕೃಷ್ಣ ಗಿರಿ ಮಹಾರಾಜ್. ದೇವಗಾಮಿ ಅಖಾಡದ ನಾಗ ಸಾಧು.
ಹಾಗೆ ನಾಗ ಸಾಧುಗಳ ಸಂಗಡ ಮೆರವಣಿಗೆಯಲ್ಲಿ ಜಾಯಿನ್ ಆದ ಕಲ್ಯಾಣ್ ಕೃಷ್ಣ ನಂತರ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹರಿದ್ವಾರಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ಹತ್ತು ದಿನಗಳ ಕಾಲ ಭಿಕ್ಷೆ ಬೇಡಿ ಸನ್ಯಾಸತ್ವದ ಟ್ರಯಲ್ ಮಾಡುತ್ತಾರೆ ಮತ್ತು 2010ರಲ್ಲಿ ನಿರಂಜನ ಅಖಾಡಕ್ಕೆ ಬಂದು ಅಲ್ಲಿ ರಾಮರಥನ್ ಗಿರಿ ಮಹಾರಾಜ್ ರಿಂದ ಸನ್ಯಾಸಿ ದೀಕ್ಷೆ ಪಡೆಯುತ್ತಾರೆ. ಅಲ್ಲಿಂದ ಒಂದು ವರ್ಷ ಕಾಲ ಅವರು ಹಿಮಾಲಯಕ್ಕೆ ಹೊರಟು ಹೋಗುತ್ತಾರೆ. ” ಸುಖ ಅಂದರೆ ಕೇವಲ ದುಡ್ಡಲ್ಲ, ದುಡ್ಡು ಜಾಸ್ತಿ ಆದ ಹಾಗೆ ಮನುಷ್ಯನಲ್ಲಿ ಕೆಟ್ಟ ಆಲೋಚನೆಗಳು ಬರುತ್ತದೆ ಮತ್ತು ಆ ಆಲೋಚನೆಗಳು ಕೆಟ್ಟವರ ಸಹವಾಸ ಮಾಡಿಸುತ್ತದೆ” ಎಂದು ಮಹಾರಾಜ್ ಹೇಳುತ್ತಾರೆ. “ಕೆಲಸದಲ್ಲಿ ಇರುವಾಗ ದಿನಕ್ಕೆ ನಾಲ್ಕು ಫುಲ್ ಬಾಟಲ್ ಖಾಲಿ ಮಾಡುತ್ತಿದ್ದೆ, ನಾಲ್ಕುನೂರು ಜನರಿಗೆ ಸಂಬಳ ಕೊಡುತ್ತಿದ್ದೆ, ಇವೆಲ್ಲ ನಶ್ವರ ಅನ್ನಿಸಿತು, ಹೊರಟು ಹೋದೆ “ಎಂದು ಮಹಾರಾಜ್ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಬೆಂಗಳೂರಿನ ಮತ್ತಿಕೆರೆಯ ದೇವಸ್ಥಾನ ಒಂದರ ಅರ್ಚಕರ ಮಗನಾಗಿರುವ ಕಲ್ಯಾಣ್ ಗೆ ಮೂರು ಜನ ಅಣ್ಣಂದಿರು.‌ಪ್ರತೀ ಯುಗಾದಿಗೆ ಇವತ್ತಿಗೂ ಅಮ್ಮಳ ಜೊತೆ ಫೋನ್ ಮಾಡಿ ಮಾತಾಡುವ ಕಲ್ಯಾಣ್ ಸದ್ಯಕ್ಕೆ ಉತ್ತರಾಖಂಡ ಸ್ಟೇಟ್ ನ ಪುರೇಲ್ ತಾಲೂಕಿನ ಖಂಡಿಯಾ ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಎ‌ಷ್ಟೋ ಅಡಿ ಎತ್ತರದ ಆಶ್ರಮದಲ್ಲಿ ಸನ್ಯಾಸ ಜೀವನ ನಡೆಸುತ್ತಿದ್ದಾರೆ. ಸನ್ಯಾಸಿ ಆಗೋದು ಸುಲಭ, ಆದರೆ ಸನ್ಯಾಸತ್ವ ನಿಭಾಯಿಸೋದು ಕಷ್ಟ ಎಂಬುದು ಮಹಾರಾಜರ ಅಭಿಪ್ರಾಯ.

Video ಕೃಪೆ : R ಕನ್ನಡ

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top