ಸುಬ್ರಹ್ಮಣ್ಯ; ಗಣಪತಿಯಿಂದಲೇ ಗಣೇಶೋತ್ಸವ ಅಧ್ಯಕ್ಷರ ಆಯ್ಕೆ?

Pattler News

Bureau Report

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ. ಇದರ 55ನೇ ವರ್ಷದ ಅಧ್ಯಕ್ಷರಾಗಿ ಗೌರವಾನ್ವಿತ ಶ್ರೀ ಯಜ್ನೇಶ್ ಆಚಾರ್ಯ ಅವರನ್ನು ಶ್ರೀ ಮಹಾಗಣಪತಿ ದೇವರೇ ಆಯ್ಕೆ ಮಾಡಿದಂತಿದೆ. ಸತತ 54 ವರ್ಷಗಳಿಂದ ಸಮಿತಿಯ ಬೆನ್ನೆಲುಬಾಗಿ ನಿಂತು, ಸಮಿತಿಯನ್ನು ಇಲ್ಲಿ ತನಕ ಮುನ್ನಡೆಸಿಕೊಂಡು ಬಂದ ಶ್ರೀಯುತರಿಗೆ 54 ವರ್ಷದಲ್ಲಿ ಅನೇಕ ಬಾರಿ ಅಧ್ಯಕ್ಷರಾಗಲು ಒತ್ತಡವಿದ್ದರೂ, ಅವಕಾಶ ಇದ್ದರೂ ಒಪ್ಪಿಕೊಳ್ಳದೆ ಈ ವರ್ಷ ಒಪ್ಪಿಕೊಂಡರಲ್ಲ ಯಾಕೆ…!? ಅದಕ್ಕೆ ಹೇಳೋದು ಇದು ಜನರ ಆಯ್ಕೆ ಅಲ್ಲ. ಸಾಕ್ಷಾತ್ ಶ್ರೀ ಮಹಾಗಣಪತಿಯ ಆಯ್ಕೆ ಎಂದು.ಆತನೇ ಅವರನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು ಮತ್ತು ಆತನಿಗೆ ಇವರಿಂದ ಯಾವುದೋ ಒಂದು ಮಹತ್ಕಾರ್ಯ ನಡೆಸುವ ಜರೂರತ್ತು ಇದೆ. ಅದಕ್ಕಾಗಿಯೇ ಈ ಆಯ್ಕೆ.
ಏನಾಗಿರಬಹುದು ಆ ಮಹತ್ಕಾರ್ಯ? ಗಣಪನಿಗೆ ಬೊಳ್ಳಿದ ಪದ್ದೊಯಿ, ಕಿರೀಟ ಕಳೆದ ವರ್ಷವೇ ಆಗಿದೆ. ಇನ್ನೇನಿರಬಹುದು ಎಂದು ಆಲೋಚಿಸುತ್ತಾ ಕಣ್ಣುಮುಚ್ಚಿ ಮಲಗಿದಾಗ ಸುಬ್ರಹ್ಮಣ್ಯದ ಅಷ್ಟೂ ಗಣಪತಿ ಭಕ್ತರಿಗೆ ಸುಂದರ ಸ್ವಪ್ನ. ಬಿಳಿ ಮೋಡಗಳು ಹಾಗೇಯೇ ತೇಲಾಡುತ್ತಿವೆ. ಮೋಡಗಳ ನಡುವಿನಿಂದ ಇಲಿಯ ಬೆನ್ನೇರಿ ಗಣಪತಿ ದೇವರು ಪ್ರತ್ಯಕ್ಷ. ಗಣಪತಿ ದೇವರನ್ನು ಕಂಡೊಡನೆ ಸಾಷ್ಟಾಂಗ ಬೀಳುವಂತೆ ಕನಸು. ಇಷ್ಟು ವರ್ಷ ಅಧ್ಯಕ್ಷ ಆಗಲು ಒಪ್ಪಿಕೊಳ್ಳದವರು ಈ ವರ್ಷ ಯಾಕೆ ಒಪ್ಪಿಕೊಂಡರು ಎಂಬ ಯೋಚನೆ ನಿಮ್ಮದಲ್ಲವೇ‌..!? ಅವರನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು ನಾನೇ ಎಂದು ದೇವರು ಹೇಳುತ್ತಾನೆ. ಯಾಕಾಗಿ ಎಂಬ ಭಕ್ತರ ಪ್ರಶ್ನಾರ್ಥಕ ಮುಖ ಭಾವ ಗಮನಿಸಿ ದೇವ ಮುಂದುವರೆಸುತ್ತಾನೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಈ ಸಮಿತಿ ಅಸ್ತಿತ್ವಕ್ಕೆ ಬಂದು ಅರ್ಧ ಶತಮಾನವೇ ಕಳೆದು ಹೋಗಿದೆ. ನನ್ನನ್ನು ಪ್ರತಿಷ್ಠಾಪಿಸಿ ಬಹಳ ವಿಜೃಂಭಣೆಯಿಂದ ನನ್ನ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ ನನ್ನ ಭಕ್ತ ವೃಂದ. ಆ ಭಕ್ತ ವೃಂದದಲ್ಲಿ ಕೆಲವರು ಚೌತಿಯಿಂದ ಒಂದು ವರ್ಷಕ್ಕೆ ಬೇಕಾಗುವಷ್ಟು ದುಡ್ಡು ಮಾಡಿಕೊಳ್ಳುತ್ತಾರೆ ಎಂಬ ಅಪವಾದ ಊರಲ್ಲಿ ಇದೆ. ಊರವರು ಹಾಗೆ ಹೇಳಲೂ ಕಾರಣವಿದೆ. ಸಮಿತಿ ಆಗಿ ಐವತ್ತು ವರ್ಷ ಕಳೆದರೂ ಇನ್ನೂ ಸಮಿತಿಯನ್ನು ನೋಂದಾವಣೆ ಮಾಡಿಕೊಳ್ಳದೆ, ಆಯವ್ಯಯವನ್ನು ಸಮಿತಿಯ ಸದಸ್ಯರೇ ಸೇರಿಕೊಂಡು ನೋಡಿಕೊಳ್ಳುವುದು, ವಾರ್ಷಿಕ ಲೆಕ್ಕಪತ್ರ ಖರ್ಚು-ವೆಚ್ಚಗಳ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗೊಳಿಸದೆ ಬೆರಳೆಣಿಕೆಯ ಜನರಿಗೆ ಮಾತ್ರ ತಿಳಿಸುವುದು, ವಿಜೃಂಭಣೆಯಿಂದ ಹಬ್ಬ ನಡೆಯಲು ಬೇಕಾದ ಮೂಲ ಸೌಕರ್ಯಗಳನ್ನು ಯಾವುದೇ ಟೆಂಡರ್ ಕರೆಯದೆ ಆಪ್ತರಿಗೆ ನೀಡುವುದು ಮುಂತಾದ ಗಣಪತಿಗೆ ಇಷ್ಟವಾಗದ ಕೆಲಸಗಳು ನಡೆಯುವ ಕಾರಣ ಅನೇಕ ಅನುಮಾನಗಳು ಜನರಲ್ಲಿ ಸಹಜವಾಗಿಯೇ ಮೂಡಿತ್ತು. ಇವರು ಕೂಡ ನನ್ನ ಭಕ್ತರೇ. ಅಂಗಡಿಯಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ ನಂತರ ಯಾವುದಕ್ಕೆ ಎಷ್ಟು ಆಯಿತು ಎಂದು ನೋಡಲು ಅಂಗಡಿಯವರಲ್ಲಿ ಬಿಲ್ ಕೇಳುವುದಿಲ್ಲವೇ..!? ಹಾಗೆಯೇ ಇದು. ಇವರು 500,1000,5000 ಹೀಗೆ ನನ್ನ ಹಬ್ಬವನ್ನು ವಿಜೃಂಭಣೆಯಿಂದ ಮಾಡಲು ಧನ ಸಹಾಯ ಮಾಡಿರುತ್ತಾರೆ. ತಾನು ಕಷ್ಟಪಟ್ಟು ದುಡಿದ ಹಣ ದೇವರ ಕಾರ್ಯಕ್ಕೆ ಅಂತ ನೀಡಿರುತ್ತಾರೆ. ಅದು ನನಗೆ ಖರ್ಚಾಗಬೇಕಲ್ವ? ನನ್ನ ಹೆಸರಲ್ಲಿ ಬೇರೆಯವರು ತಿನ್ನುವರೇ ಎಂಬ ಅಪಧೈರ್ಯ ಅವರದ್ದು ಹಾಗಾಗಿ ಅವರು ಆ ರೀತಿ ಮಾತಾಡುತ್ತಾರೆ. ವಾರ್ಷಿಕ ನಾಲ್ಕೈದು ಲಕ್ಷ ವಹಿವಾಟು ನಡೆಸುವ ಸಮಿತಿಗಳೇ ತನ್ನ ಹೆಸರಿನಲ್ಲಿ ® ರಿಜಿಸ್ಟ್ರಡ್ ಚಿಹ್ನೆ ಬಳಸುವಾಗ ಕೇವಲ ತಿಂಗಳಲ್ಲಿ ಇಪ್ಪತ್ತರಿಂದ ಮೂವತ್ತು ಲಕ್ಷ ವಹಿವಾಟು ನಡೆಸುವ ನನ್ನ ಸಮಿತಿಗೆ ® ಚಿಹ್ನೆ ಬೇಡವೇ..!? ಈ ವಿಚಾರವನ್ನು ಅನೇಕ ಬಾರಿ ಯಜ್ನೇಶ್ ಅವರಿಗೆ ಕನಸಿನಲ್ಲಿ ತಿಳಿಸಿದ್ದೆ. ಅವರು ಕೂಡ ಪ್ರತಿ ವರ್ಷ ಉತ್ಸವ ಸಮಿತಿ ಅಧ್ಯಕ್ಷರಲ್ಲಿ ಹೇಳಿಕೊಂಡೇ ಬಂದ್ರು‌. ಈ ವರ್ಷ ಆದ್ರೂ ಸಮಿತಿ ರಿಜಿಸ್ಟರ್ ಮಾಡುವ ಮಾರ್ರೆ ಎಂದು. ಆದರೆ ಅವರ ಬೇಡಿಕೆಯನ್ನು ಯಾವ ಅಧ್ಯಕ್ಷನೂ ಈಡೇರಿಸಲಿಲ್ಲ. ಅವರು ನನ್ನನ್ನು ಕುಮಾರಧಾರ ನದಿಯಲ್ಲಿ ಬಿಟ್ಟು ಹೋದ ನಂತರ ಬರುವುದು ಮುಂದಿನ ವರ್ಷದ ಚೌತಿಯ ಪಂಚಕಜ್ಜಾಯಕ್ಕೆ. ಇನ್ನು ಕಾದರೆ ಇನ್ನು ಮುಂದೆ ನನ್ನ ವಿಜೃಂಭಣೆಯ ಹಬ್ಬ ನಡೆಯಲು ಆರ್ಥಿಕ ಕ್ರೋಡೀಕರಣಕ್ಕೆ ತೊಡಕಾಗುತ್ತದೆ ಎಂದು ಈ ವರ್ಷ ಅವರನ್ನೇ ಅಧ್ಯಕ್ಷ ಮಾಡಿದ್ದೇನೆ. ಬರುವ ವರ್ಷದಿಂದ ನನ್ನ ಹೆಸರಿನ ಸಮಿತಿಗೆ ® ಸೇರಿಕೊಳ್ಳುತ್ತದೆ. ರಿಜಿಸ್ಟರ್ ಆಗುವುದು ಸ್ವಲ್ಪ ತಡವಾದರೂ, ಈ ವರ್ಷದ ಖರ್ಚು-ವೆಚ್ಚಗಳ ಮಾಹಿತಿ ಮಾತ್ರ ಖಂಡಿತವಾಗಿಯೂ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತದೆ. ದೇಣಿಗೆ ನೀಡಿದ ಎಲ್ಲರಿಗೂ ಪ್ರತಿ ಒಂದು ರೂಪಾಯಿಯ ಲೆಕ್ಕವನ್ನೂ ನೀಡುತ್ತಾರೆ ಎಂದು ಹೇಳಿ ಜನರ ಕನಸಿನಿಂದ ದೇವರು ಅದೃಶ್ಯನಾದ.
ಹಾಗೆಂದು ಬೇರೆ ಯಾರಿಗಾದ್ರೂ ಚೌತಿಯಿಂದು ಲಾಭ ಉಂಟ ಇಲ್ವ ಗೊತ್ತಿಲ್ಲ. ಆದರೆ ಯಜ್ನೇಶ್ ಆಚಾರ್ಯ ಅವರಿಗೆ ಮಾತ್ರ ಪ್ರತಿ ವರ್ಷ ನಷ್ಟವೇ…, ಯಾಕೆಂದ್ರೆ ಚೌತಿಯ ಮೀಟಿಂಗ್ ಆರಂಭವಾಗುವುದೇ ಇವರ ಹೋಟೆಲ್ ರಾಘವೇಂದ್ರ ಪ್ರಸಾದ್ ನಲ್ಲಿ. ಅವತ್ತಿನಿಂದ ಚೌತಿ ಮುಗಿಯುವವರೆಗೆ ಎಷ್ಟು ಪ್ಲೇಟ್ ರೋಸ್ಟ್ ಖಾಲಿ., ಎಷ್ಟು ಪ್ಲೇಟ್ ಗೋಳಿಬಜೆ ಚಾ.., ಕಾಫಿ ಕಷಾಯ ಅಂತ ಗುರ್ತ ಇದ್ದವರು, ಗುರ್ತ ಇಲ್ಲದವರು ತಿಂದು ಹೋಗುತ್ತಾರೋ ಆ ಗಣಪತಿಯೇ ಬಲ್ಲ. ಸುಬ್ರಹ್ಮಣ್ಯದ ಎಲ್ಲಾ ಜಾತಿಯವರು,ಎಲ್ಲಾ ಧರ್ಮದವರು ಹಾಗು ಎಲ್ಲಾ ಪಕ್ಷದವರು ಪ್ರೀತಿಸುವ ಏಕೈಕ ವ್ಯಕ್ತಿ ಎಂದರೆ ಅದು ಈ ನಮ್ಮ ಆಚಾರ್ಯರು. ಕಷ್ಟ ಎಂದು ಬಂದವರಿಗೆ ಬರಿಗೈಲಿ ವಾಪಸ್ ಕಳುಹಿಸಿದ ಉದಾಹರಣೆಯೇ ಇಲ್ಲ. ಬಂದಿದ್ರಲ್ಲಿ ಒಂದು ಪಾಲು ಸಮಾಜಕ್ಕೆ ಕೊಡುವ ಆಧುನಿಕ ಕರ್ಣ,ಒಂದು ಪಾಲು ತಾನು ಇಟ್ಟುಕೊಂಡು ಬದುಕುವ ಸಜ್ಜನ ಜನ ಇವರು. ತಮ್ಮನ ಊರಿನಲ್ಲಿ ಅಣ್ಣನ ಚೌತಿಯನ್ನು ಈ ಸಲ ಭಾರೀ ವಿಜೃಂಭಣೆಯಿಂದ ನಡೆಸಲು ಆಚಾರ್ಯರು ನಿರ್ಧರಿಸಿದಂತಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top