ಸುಳ್ಯ ಸಿಟಿಯ ಆಲೆಟ್ಟಿ ಕ್ರಾಸ್ ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಜಾಗವನ್ನು ವ್ಯವಸ್ಥಿತವಾಗಿ ನುಂಗಿ ನೀರು ಕುಡಿಯುವ ಹುನ್ನಾರವೊಂದು ಪತ್ತೆಯಾಗಿದ್ದು ಶ್ರೀಕ್ಷೇತ್ರದ ಕಷ್ಟದ ಸಮಯದಲ್ಲೂ ಈ ನುಂಗಣ್ಣಗಳು ಈ ರೀತಿ ಮಾಡುತ್ತಾರೆಂದಾದರೆ ಅಧರ್ಮದ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದರಲ್ಲೇ ಸಂಶಯವಿದೆ. ನಾವೆಲ್ಲ ವೇದ ಪುರಾಣಗಳ ಬಗ್ಗೆ ಮಾತನಾಡುತ್ತೇವೆ ಆದರೆ ಮಾಡೋದು ಮಾತ್ರ ಹಲ್ಕಾ ಕೆಲಸ. ಧರ್ಮಸ್ಥಳದವರು ಭೂಮಿ ನುಂಗಿದರು ಎಂದು ಅಬ್ಬರಿಸಿ ಬೊಬ್ಬಿರಿಯುತ್ತೇವೆ, ಆದರೆ ಅವರ ಜಾಗಕ್ಕೆ ಸದ್ದಿಲ್ಲದೆ ಬೇಲಿ ಹಾಕುತ್ತೇವೆ. ನಾವು ಮಾಡುವ ಧರ್ಮದ ಕೆಲಸಗಳನ್ನು ಬಣ್ಣಿಸಲು ಪದಪುಂಜ ಸಾಲದು.
ಇದು ಸುಳ್ಯ. ದಕ್ಷಿಣ ಕನ್ನಡದ ಗೌಡ್ರುಗಳ ರಾಜಧಾನಿ. ಇಲ್ಲಿಯೂ ಧರ್ಮಸ್ಥಳದವರ ಭೂಮಿ ಇದೆ. ಚೆನ್ನಕೇಶವನ ದೇಗುಲಕ್ಕೆ ಧರ್ಮಸ್ಥಳದವರು ಕೋಟಿ ಲೆಕ್ಕದ ಭೂಮಿ ಬಿಟ್ಟ ಬಗ್ಗೆ ದಾಖಲೆಗಳಿವೆ. ಸುಳ್ಯ ಸಿಟಿ ಒಳಗೆ ಅವರದ್ದು ಇನ್ನೂ ಅನೇಕ ಜಾಗಗಳಿದ್ದು ಫಾರಂ ನಂಬರ್ ಟೆನ್ ಆಗದ ಜಾಯಿಂಟ್ ಓನರ್ ಶಿಪ್ ನ ಜಾಗಗಳೂ ಇದೆ. ಇನ್ನು ಸತ್ಯವಂತರೂ,ಧರ್ಮ ಬೀರುಗಳೂ, ನೀತಿವಂತರೂ ನುಂಗಿ ನೀರು ಕುಡಿದ ಜಾಗಗಳು ಹತ್ತು ಹಲವಿದೆ. ಇದೀಗ ಅಲ್ಲಿ ಆಲೆಟ್ಟಿ ಕ್ರಾಸಿನಿಂದ ಹತ್ತು ಬಕ್ಕರ್ ದೂರದಲ್ಲಿ ಇರುವ ಧರ್ಮಸ್ಥಳದವರ ಫ್ಲಾಟ್ ಸರ್ವೇ ನಂಬ್ರ 263/6 ನಲ್ಲಿ 27 ಸೆಂಟ್ಸು ನುಂಗಲು ರೆಡಿಯಾಗಿದ್ದು ಸೈಟಿನಲ್ಲಿ ಒಂದು ಅಂಡಿಗುಂಡಿ ಬಿಲ್ಡಿಂಗ್ ಎಬ್ಬಿಸುವ ಹುನ್ನಾರ ನಡೆದಿದೆ. ಅಲ್ಲಿ ಇಡೀ ಧರ್ಮಸ್ಥಳದ ಆಡಳಿತ ಮಂಡೆಬೆಚ್ಚದಲ್ಲಿ ಇರುವ ಸಮಯ ಸಂದರ್ಭ ನೋಡಿ ಇಲ್ಲಿ ಸುಳ್ಯದಲ್ಲಿ ಅವರ ಜಾಗದಲ್ಲಿ ಒಂದು ಬಿಲ್ಡಿಂಗ್ ಎಬ್ಬಿಸಿ ಒಕ್ಕಲಾಗಿ ಬಿಟ್ಟರೆ ಮತ್ತೆ ಸಟ್ಟುಗ ಹಾಕಿಯೂ ಎಬ್ಬಿಸಲಾಗಲ್ಲ ಎಂಬ ಹುಂಬ ಧೈರ್ಯದಿಂದ ಕೆಲಸ ಮಾಡಲಾಗಿದೆ. ಸರ್ವೇ ನಂಬ್ರ 263/6 ನಲ್ಲಿ 27 ಸೆಂಟ್ಸ್ ಜಾಗ ಇದ್ದು ಆ ಜಾಗಕ್ಕೆ ದಾರಿ ಇದ್ದ ಸ್ಥಳದಲ್ಲೇ ಒಂದು ಅಕ್ರಮ ಕಟ್ಟಡ ಎಬ್ಬಿಸಿದ್ದು, ಹೋಗುವ ದಾರಿಯನ್ನೇ ಬಂದ್ ಮಾಡಿದರೆ 27 ಸೆಂಟ್ಸನ್ನೂ ಒಳಗೆ ಹಾಕಿ ಹೊಟ್ಟೆ ತುಂಬಿಸಿಕೊಳ್ಳ ಬಹುದು ಎಂಬ ಹುನ್ನಾರ. ಅದಕ್ಕೆಂದೇ ಬಸಳೆಗೆ ದೊಂಪ ಹಾಕಿದ ಹಾಗೆ ಕಾಂಪೌಂಡ್ ಗೋಡೆ ಕಟ್ಟಲು ಉಪಯೋಗಿಸುವ ಪರಿಕರಗಳನ್ನು ಉಪಯೋಗಿಸಿ ನೈಟ್ ಭೂತ ಏಳುವ ಟೈಮಿಗೆ ಕೆಲಸ ಶುರು ಮಾಡಿ ನಸುಕಿನ ಜಾವ ಕೋಳಿ ಕೂಗುವ ಮೊದಲು ಆದಷ್ಟು ಕೆಲಸ ಮುಗಿಸಲಾಗಿದೆ. ಒಮ್ಮೆ 27 ಸೆಂಟ್ಸ್ ಜಾಗಕ್ಕೆ ಬರುವ ಎಂಟ್ರೆನ್ಸ್ ನಲ್ಲಿ ಬಿಲ್ಡಿಂಗ್ ಎದ್ದರೆ ಇಡೀ 27ನ್ನೂ ನುಂಗ ಬಹುದು ಎಂಬ ಕನಸು. ಯಾಕೆಂದರೆ ಆಲೆಟ್ಟಿ ಕ್ರಾಸಿನಲ್ಲಿ ಒಂದು ಸೆಂಟ್ಸಿಗೆ ಹಂಪನ ಕಟ್ಟೆಯ ರೇಟಿದೆ. ಅದಕ್ಕೆ ಶ್ಯಾಟ ಕಟ್ಟಿ 27 ಸೆಂಟ್ಸನ್ನು ಎಳೆಯೋದು. ಹೋದರೆ ಶ್ಯಾಟ, ಬಂದರೆ 27 ಸೆಂಟ್ಸು
ಹಾಗೆಂದು ಸುಳ್ಯದಲ್ಲಿ ಈ ಹಿಂದೆ ನಗರ ಪಂಚಾಯತ್ ಅಂತ ಒಂದಿತ್ತು. ಈಗ ಇದೆಯಾ ಇಲ್ಲವಾ ಅಂತ ನೆನಪಿಲ್ಲ. ಇದ್ದಿದ್ದರೆ ಸಿಟಿ ಒಳಗೆ ರಾತ್ರಿ ಬೆಳಗಾಗುವುದರೊಳಗೆ ಅಕ್ರಮ ಬಿಲ್ಡಿಂಗ್ ಗಳು ಎದ್ದು ನಿಂತರೂ ಸುಮ್ಮನೆ ಕೂರುವ ಜಾಯಮಾನ ಇರಲ್ಲ. ವಿದೌಟ್ ಪರ್ಮಿಷನ್ ಸಿಟಿ ಒಳಗೆ, ಅದರಲ್ಲೂ ಯಾರದೋ ಜಾಗದಲ್ಲಿ ಅಕ್ರಮ ಕಟ್ಟಡ ಎಬ್ಬಿಸುತ್ತಾರೆಂದರೆ ಇಂಥಹ ಜನಗಳಿಗೆ ಕಾನೂನಿನ ಪೊಡಿಗೆಯೇ ಇಲ್ಲ ಎಂದಾಯ್ತು. ಇನ್ನು ಛಾವಣಿ ಕೆಲಸ ಮುಗಿಸಿ, ಸಾರಣೆ ಆಗಿ, ಕರೆಂಟ್ ಎಳೆದರೆ ಮುಗಿಯಿತು ಎಲ್ಲವೂ ಅಕ್ರಮ ಸಕ್ರಮ. ಧರ್ಮಸ್ಥಳದವರು ಅಕ್ರಮ ಮಾಡುತ್ತಾರೆ ಎಂದು ನಾತ ಬಾಯಲ್ಲಿ ನಾವು ಹೇಳುತ್ತೇವೆ. ಮತ್ತೆ ನಾವು ಮಾಡೋದು ಏನು?






