ಪುತ್ತೂರು: ವಾಸ್ತು ದೋಸದ ಭೂತ ಬಂಗಲೆಗಳು

Pattler News

Bureau Report

ಪುತ್ತೂರಿನ ಅತಿರಥ ಮಹಾರಥ ಮಂಡೆಗಳು ಕಟ್ಟಿದ ಒಂದು ನಾಲ್ಕು ಬಿಲ್ಡಿಂಗ್ ಗಳು ಭೂತ ಕಾಲದಿಂದಲೂ ಭೂತ ಬಂಗಲೆಗಳಾಗಿಯೇ ಉಳಿದಿದೆ. ಕೋಟಿ ಲೆಕ್ಕದಲ್ಲಿ ಖರ್ಚು, ಕಿಸೆ ತುಂಬಾ ಕಮಿಷನ್ ಇಷ್ಟೇ ಈ ಬಿಲ್ಡಿಂಗ್ ಗಳ ಕತೆ. ಇವೆಲ್ಲವನ್ನೂ ಕಟ್ಟಿ ಹತ್ತು ಹಲವು ದಶಕಗಳೇ ಕಳೆದರೂ ಇನ್ನೂ ಕಟ್ಟಿದ ಪೊಯ್ಯೆ ದುಡ್ಡೇ ಬಂದಿರಲಿಕ್ಕಿಲ್ಲ.
ಓ ಮೊನ್ನೆ ತಾನೇ ಮಹಾತೋಭಾರನ ಜಾತ್ರೆ ಗದ್ದೆಯಲ್ಲಿ ಕಟ್ಟಿದ್ದ ಮಹಾಲಿಂಗೇಶ್ವರ ಸಭಾಂಗಣದ ಬಗ್ಗೆ ಬರೆದಿದ್ದೆವು. ಉತ್ತರ ದಿನ್ನ ಆಗಿದೆ ಅಂತ ಅದನ್ನು ಈಗ ತೆಗೆಯಲಾಗುತ್ತದೆ ಎಂಬ ಮಾಹಿತಿ ಇದೆ. ಸುಮ್ಮನೆ ಕಟ್ಟಿ ಸುಮ್ಮನೆ ತೆಗೆಯೋದು. ಆ ಹಾಲ್ ಇದ್ದಷ್ಟೂ ದಿನ ಭೂತ ಬಂಗಲೆಯಾಗಿಯೇ ಉಳಿದಿದ್ದು ವಿಪರ್ಯಾಸವೇ ಸರಿ. ಇನ್ನು ಆ ಹಾಲ್ ದಾಟಿ ರಥ ಬೀದಿಯಲ್ಲಿಯಲ್ಲಿಯೇ ಸರ್ತ ಬಂದರೆ ಲೆಫ್ಟಿಗೆ ಕಾಣೋದು ಮಸಣ ಮತ್ತು ರೈಟಿಗೆ ಕಾಣೋದು ಪುತ್ತೂರಿನ ಇನ್ನೊಂದು ಭೂತ ಬಂಗಲೆ, ಪ್ರೈವೇಟ್ ಬಸ್ ನಿಲ್ದಾಣ. ಇದನ್ನು ಯಾಕೆ ಕಟ್ಟಿದ್ದಾರೆ, ಇಲ್ಲಿಗೆ ಯಾರು ಬರುತ್ತಾರೆ ಎಂದು ಕಟ್ಟಿದವರಿಗೂ ಗೊತ್ತಿಲ್ಲ,ಕಟ್ಟಿಸಿದವರಿಗೂ ಗೊತ್ತಿರಲಿಕ್ಕಿಲ್ಲ. ಪುರಸಭೆಗೆ ಅನುದಾನ ಬಂತು ತಂದು ಮಸಣದ ಬದಿಯಲ್ಲಿ ಹಾಕಿ ಕಿಸೆ ತುಂಬಿಸಿಕೊಂಡು ಹೋದರು ಅಷ್ಟೇ. ನೈಟ್ ಇಲ್ಲಿ ಅಜನೆ ಗ್ಯಾರಂಟಿ. ಹಾಗೆಂದು ಪುತ್ತೂರಿಗೆ ಪ್ರೈವೇಟ್ ಬಸ್ ನಿಲ್ದಾಣದ ಅಗತ್ಯ ಇಲ್ಲ. ಪ್ರೈವೇಟ್ ಬಸ್ ಗಳು ಈ ಸ್ಟ್ಯಾಂಡ್ ಗೆ ಕೇವಲ ರೆಸ್ಟ್ ಗಷ್ಟೇ ಬರೋದು. ಜನ ಬರಲ್ಲ ಇಲ್ಲಿಗೆ. ಅದೂ ಮಸಣದ ಹತ್ತಿರ ಕಟ್ಟಿದ್ದಾರೆ ಮಾರಾಯ್ರೆ. ಇಲ್ಲಿ ಕುಲೆಗಳು ಬಸ್ಸಿನಲ್ಲಿ ನೇತಾಡಿಕೊಂಡು ಹೋಗುವಷ್ಟು ಇದೆ. ಟೋಟಲಿಯಾಗಿ ಹೇಳುವುದಾದರೆ ಈ ಭೂತ್ ಬಂಗಲೆ ಬಸ್ ನಿಲ್ದಾಣಕ್ಕೆ ಒಂದು ಗುಡ್ ಪ್ಲಾನ್ ಕೂಡ ಇಲ್ಲ, ವಾಸ್ತು ಕೂಡ ಡೌಟು. ಮಳೆಗಾಲದಲ್ಲಿ ಕೊಡೆ ಬಿಡಿಸಿಯೇ ನಿಲ್ಲುವಂತ ಪ್ಲ್ಯಾನಲ್ಲಿ ಕಟ್ಟಲಾಗಿದೆ.
ಇನ್ನು ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಪುರಸಭಾ ವಾಣಿಜ್ಯ ಕಟ್ಟಡ ಎಂಬ ಇನ್ನೊಂದು ಭೂತ ಬಂಗಲೆಯ ಕತೆ. ಇದನ್ನು ಕಟ್ಟಿ ಹಲವು ದಶಕಗಳೇ ಸಂದರೂ ಇನ್ನೂ ಇದು ಒಕ್ಕೆಲೇ ಆಗಿಲ್ಲ. ಯಾರೋ ಪಾಪ ನಾಲಕ್ಕು ಜನ ಇಲ್ಲಿ ಬಂದು ಅಂಗಡಿ ತೆರೆದು ಮುರ್ಕಿದ್ದು ಬಿಟ್ಟರೆ ಸರ್ತ ವಹಿವಾಟು ಮಾಡಿದವರು ಯಾರೂ ಇಲ್ಲ. ಪುತ್ತೂರು ಸಿಟಿಯ ಹಾರ್ಟಿನಲ್ಲಿ ಇರುವ ಈ ಬಿಲ್ಡಿಂಗ್ ಭೂತ ಬಂಗಲೆ ಯಾಕಾಯಿತು ಎಂದು ಪರಂಕಿ ನೋಡಿದರೆ ಸಿಗೋದು ಅದೇ ಅಂಡಿಗುಂಡಿ ಪ್ಲಾನ್ ಮತ್ತು ಬರೆಗೆಟ್ಟ ವಾಸ್ತು. ರೋಡ್ ಸೈಡಿನ ಅದರ ಮಹಡಿ ಭಾಗವನ್ನು ಓಪನ್ ಮಾಡಿ ಕೊಟ್ಟರೆ ಸ್ವಲ್ಪ ಗಾಳಿಯಾದರೂ ಒಳಗೆ ಹೋಗಬಹುದು ಎಂದು ಮುನ್ಸಿಪಾಲಿಟಿ ಗಮನ ಸೆಳೆಯಲಾಗಿತ್ತು. ಆದರೆ ಕೋಣನ ಮುಂದೆ ಕೊಳಲು ನುಡಿಸಿದಂತೆ ಆದದ್ದು ಬಿಟ್ಟರೆ ಬೇರೇನೂ ಪ್ರಯೋಜನ ಆಗಿಲ್ಲ. ಈ ಬಿಲ್ಡಿಂಗ್ ನಲ್ಲಿ ಇದ್ದವರೂ ಈಗ ಚಿಲ್ಲರೆ ಬಾಡಿಗೆ ಕೊಡುವುದು ಬಿಟ್ಟರೆ ಆ ಚಿಲ್ಲರೆ ಕರೆಂಟ್ ಬಿಲ್ ಕಟ್ಟಲೂ ಯಾವುಜಿ. ಹಾಗೆಂದು ಬಹಳ ಹಿಂದೆ ಕಾಂಗ್ರೆಸ್ ನಾಯಕ ಸೂತ್ರೊಟ್ಟು ಜಗ್ಗಣ್ಣನ ಕಾಲದಲ್ಲಿ ಈ ಸೈಟಿನಲ್ಲಿ ಕಾಣಿರೋ…ಕಾಣಿರೋ…ಕಾರ್ ಸ್ಟ್ಯಾಂಡ್ ಇತ್ತು. ಅದ್ಯಾವುದೋ ಕೆಡಿಬಿಐ ಅನುದಾನ ಮುನ್ಸಿಪಾಲಿಟಿಗೆ ಬಂದ ಕಾರಣ ಜಗ್ಗಣ್ಣ ಈ ಹಾರ್ಟ್ ಆಫ್ ದಿ ಸಿಟಿಯ ಸೈಟಿನಲ್ಲಿ ಒಂದು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಆ ಅನುದಾನ ಉಪಯೋಗಿಸಲು ಮುಂದಾದರು. ಓ….. ಎಂದು ಕಾಣಿರೋ…. ಕಾಣಿರೋ…ಕಾರ್ ಸ್ಟ್ಯಾಂಡ್ ಚಾಲಕ-ಮಾಲೀಕರು ಬೊಬ್ಬೆ ಹೊಡೆದು ಬಿಟ್ಟರು. “ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ನಾವೇಲ್ಲಿ ಪಾರ್ಕ್ ಮಾಡೋದು, ಕಾಣಿಯೂರು ಲೈನಿನ ಪ್ರಯಾಣಿಕರಿಗೆ ಇದರಿಂದ ಭಾರೀ ತೊಂದರೆ ಆಗುತ್ತದೆ”ಎಂದು ಉಪವಾಸ ಸತ್ಯಾಗ್ರಹ, ದಂಡಿ ಯಾತ್ರೆ, ಖಿಲಾಫತ್ ಚಳವಳಿ ಎಲ್ಲಾ ನಡೆಸಿ ಬಿಟ್ಟರು. ಪಾಪ ಸೂತ್ರೊಟ್ಟು ಜಗ್ಗಣ್ಣ ಒಳ್ಳೆಯವರು. ಅವರು ಅಷ್ಟೂ ಕಾಣಿರೋ… ಕಾಣಿರೋ…ಚಾಲಕ, ಮಾಲೀಕರ ಸಮೇತ ಈಸರ ಮಂಗಿಲ ಲೈನ್ ಕಾರು ಚಾಲಕರು ಮತ್ತು ನರಿಮೊಗರು ರಿಕ್ಷಾ ಡ್ರೈವರ್ ಗಳನ್ನು ದುಂಡು ಮೇಜಿನಲ್ಲಿ ಕೂರಿಸಿ ಪಂಚಾತಿಕೆ ಮಾಡಿ ಬಿಟ್ಟರು. “ಪುರಸಭಾ ಸೈಟಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ, ನಿಮಗೆ ಅದರ ಅಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು”ಎಂದು ಜಗ್ಗಣ್ಣ ಆವತ್ತು ಪಂಚಾತಿಕೆ ಮುಗಿಸಿದ್ದರು. ನಂತರ ಬಿಲ್ಡಿಂಗ್ ಆಯಿತು, ಕಾಣಿರೋ.. ಕಾಣಿರೋ.. ಕಾರುಗಳಿಗೆ ಬಿಲ್ಡಿಂಗ್ ಅಡಿಯಲ್ಲಿ ಪಾರ್ಕಿಂಗ್ ಕೊಡಲಾಯಿತು. ಈಗ ನೋಡಿದರೆ ಈ ವಾಣಿಜ್ಯ ಸಂಕೀರ್ಣದಿಂದ ನೆರಳಿನ ಉಪಯೋಗ ಆದದ್ದು ಕಾಣಿಯೂರು ಚಾಲಕರಿಗೆ ಬಿಟ್ಟರೆ ಟೋಟಲ್ ಈ ಪ್ಲಾನ್ ಫೈಲ್.
ಇದೀಗ ಈ ಬಿಲ್ಡಿಂಗ್ ಕಟ್ಟಿ ಹಲವು ದಶಕಗಳೇ ಕಳೆದಿವೆ. ಮುನ್ಸಿಪಾಲಿಟಿಗೆ ಇದೊಂದು ಟೋಟಲ್ ಲಾಸ್, ಟೋಟಲ್ ಫ್ಲಾಪ್ ಪ್ಲಾನ್. ಮುಚ್ಚಿದ ಬಾಗಿಲುಗಳು, ಘಮ್ಮೆಂದು ಮೂಂಕಿನ ರೋಮ ಉದುರಿಸುವ ಸೂಸು ಸುವಾಸನೆ, ಮಾರುತಿ,ಪಾನ್ ಪರಾಗ್ ಗಳ ಕಾ…ತೂ… ಬಿಟ್ಟರೆ ಇಲ್ಲಿ ಬೇರೆನೂ ಇಲ್ಲ. ಎಂಥಾ ಬಿಸಿನೆಸ್ ಜಾಗ. ಧರ್ಮಕ್ಕೆ ಹಾಳಾಗಿ ಹೋಗುತ್ತಿದೆ. ನಗರ ಸಭೆ ಇನ್ನೊಮ್ಮೆ ಚಾಲಕ ಮಾಲೀಕರನ್ನು ದುಂಡು ಮೇಜಿನಲ್ಲಿ ಕೂರಿಸಿ ಇಡೀ ಬಿಲ್ಡಿಂಗ್ ತೆಗೆದು ಯಾರಿಗಾದರೂ ಬಿಲ್ಡಿಂಗ್ ಕಟ್ಟಿ ಪೋಪಿಕಾಲದ ತನಕ ಮೈನ್ಟೈನ್ ಮಾಡಲು ಲೀಸಿಗೆ ಕೊಡೋದು ಒಳ್ಳೆದು.
ಇನ್ನು ಪುತ್ತೂರಿನಲ್ಲಿರುವ ಇನ್ನೊಂದು ವಾಸ್ತು ದೋಸದ ಬಿಲ್ಡಿಂಗ್ ಸ್ವತಃ ನಗರ ಸಭೆಯ ಬಿಲ್ಡಿಂಗ್. ಅದು ಕೂಡ ಯಾವುದೋ ಅನುದಾನದಲ್ಲಿ ಅರ್ಜೆಂಟ್ ಅರ್ಜೆಂಟ್ ಕಟ್ಟಿದ್ದು. ಕಟ್ಟಿದ ಮೇಲೆ ಗೊತ್ತಾಗಿದ್ದು ಉತ್ತರ ದಿನ್ನ, ವಾಯು ಮೂಲೆಯಲ್ಲಿ ಆಂಧ್ರ ವಾಯು,ಅಗ್ನಿ ಮೂಲೆಯಲ್ಲಿ ಮಂಡೆ ಬೆಚ್ಚ, ತೆನ್ಕಯಿ ಬಾಗಿಲು ಇತ್ಯಾದಿ. ಆಮೇಲೆ ಪುನಃ ದುಡ್ಡು ಖರ್ಚು ಮಾಡಿ ಮೂಡಯಿ ಬಾಗಿಲು ಮಾಡಲಾಯಿತಾದರೂ ಮನೆಯೊಂದು ಮೂರು ಬಾಗಿಲು ಆದ ಕಾರಣ ಮತ್ತೆ ಮುಚ್ಚಲಾಯಿತು. ಈಗ ಅದೇ ನತದೃಷ್ಟ, ವಾಸ್ತು ದೋಸದ ಬಿಲ್ಡಿಂಗ್ ನಲ್ಲಿಯೇ ನಗರ ಸಭೆ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಗೆ, ನೌಕರರಿಗೆ ಚಿಲ್ಲರೆ ಆಗುತ್ತಿದೆ, ಆದರೆ ಅಭಿವೃದ್ಧಿ ಶೂನ್ಯ.
ಇನ್ನು ಆ ಮಹಾತೋಭಾರನ ರಥ ಬೀದಿಯಲ್ಲಿ ಬೈಕ್ ಸವಾರರು, ಕಾರು ಚಾಲಕರು ರೊಯ್ಯನೆ ಹೋಗುತ್ತಿದ್ದು ವಾಕಿಂಗ್ ಗಳಿಗೆ ನಿತ್ಯ ಅರ್ಧ ಸ್ನಾನ ಮಾಡಿಸಲಾಗುತ್ತಿದೆ. ನಮ್ಮ ಈ ಸ್ಪೀಡನ್ನು ಮಹಾತೋಭಾರ ಗಮನಿಸುತ್ತಿದ್ದಾನೆ ಎಂದು ಮಂಡೆಯಲ್ಲಿ ಇರಲಿ. ಅಲ್ಲಿ ರೊಯ್ಯನೆ ಹೋಗಲು ನಮ್ಮ ಪೊಟ್ಟು ಬೈಕುಗಳಿಗೆ, ಲಟಾರಿ ಕಾರುಗಳಿಗೆ ಆ ಕಾಂಕ್ರೀಟ್ ರೋಡ್ ಮಾಡಿದ್ದಲ್ಲ. ಮಹಾತೋಭಾರನ ಕೋಟಿ ಬೆಲೆಯ ರಥ ಸಂಚಾರಕ್ಕೆ ನಿರ್ಮಿಸಿದ ಬೀದಿ ಅದು. ಅವನ ರಥವವೇ ಇಪ್ಪತ್ತರಲ್ಲಿ ಹೋಗುವಾಗ ನಮ್ಮದೇನು ನೂರು? ಒಂತೆ ಮೆಲ್ಲ ಪೋಲೆ ಮರ್ಲೆರೆ.


ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top