ಪುತ್ತೂರು: ಮರಗಳ್ಳರು ಬೆಂಗಳೂರಿನಲ್ಲಿ!

Pattler News

Bureau Report

ಅರಣ್ಯ ಇಲಾಖೆಯ ಪುತ್ತೂರು ಸಬ್ ಡಿವಿಷನ್ ಗೆ ಸರಕಾರ ಐಎಫ್ಎಸ್ ರೇಂಜಿನ ಸ್ಟ್ರಾಂಗ್ ಅಧಿಕಾರಿಯನ್ನು ನೇಮಿಸಿದ್ದು ಮರಗಳ್ಳರು ಗರ್ಗಸ್ ಸಮೇತ ಕಾಡು ಕಾಡುಗಳಲ್ಲಿ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಐಎಫ್ಎಸ್ ಅಧಿಕಾರಿಯನ್ನು ಕೂಡಲೇ ಪುತ್ತೂರಿನಿಂದ ವಾಪಾಸ್ ಟ್ರಾನ್ಸ್ಫರ್ ಮಾಡಬೇಕೆಂದು ಮರಗಳ್ಳರ ಗುರುಗಳು ಬೆಂಗಳೂರು ಬಸ್ ಹತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಂದು ದಕ್ಷಿಣ ಕನ್ನಡದಲ್ಲಿ ಮರಗಳ್ಳತನ ಅಧಿಕೃತ ಉದ್ಯಮ, ಸತ್ಯವಂತರ, ಬುದ್ಧಿವಂತರ ವಹಿವಾಟು. ಅದರಲ್ಲೂ ಪುತ್ತೂರು ಮರಗಳ್ಳರ ರಾಜಧಾನಿ. ಎಂಥೆಂಥ ಸೈಜಿನ ಮರಗಳ್ಳರೂ ಪುತ್ತೂರಿನಲ್ಲಿ ಲಭ್ಯ. ಕಡೆ ಪೀಸ್, ನಡು ಪೀಸ್,ಕೊಡಿ ಪೀಸ್, ಸೆಂಟರ್ ಪಟ್ಟಿ, ಪೊರೊಟು, ಬೆರೋವು,ದಡೆ ಇತ್ಯಾದಿ ವಿವಿಧ ತಳಿಯ ಮರಗಳ್ಳರ ದೊಡ್ಡ ಹಿಂಡೇ ಪುತ್ತೂರಿನಲ್ಲಿ ಇದೆ.ಹಾಗೆಂದು ಪುತ್ತೂರಿನಲ್ಲಿ ಮರಗಳ್ಳರ ಪರಂಪರೆ ದೊಡ್ಡದಿದೆ. ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿ ಕೊಳ್ಳೋದು, ತಮ್ಮ ಮ್ಯೂಸಿಕ್ ಗೆ ಕುಣಿಯದ ಅಧಿಕಾರಿಗಳನ್ನು ಗಂಟು ಮೂಟೆ ಕಟ್ಟಿಸುವುದು, ಅವರನ್ನು ಸಿಕ್ಕಿಸಿ ಹಾಕೋದು, ಅವರ ಬಗ್ಗೆ ಮೇಲಾಧಿಕಾರಿಗಳಿಗೆ ಚಾಡಿ ಹೇಳೋದು ಇತ್ಯಾದಿ ಘನಂದಾರಿ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ. ಒಂದು ಮರಕ್ಕೆ ಪರ್ಮಿಟ್ ಹತ್ತು ಮರ ಮಾಯ. ಇನ್ನು ಅರಣ್ಯ ಇಲಾಖೆ ಕಚೇರಿ ಕಡೆ ತಲೆ ಹಾಕಿ ಮಲಗದ ಪರಮ ಸೋಮಾರಿ ಮರಗಳ್ಳರೂ ಪುತ್ತೂರಿನಲ್ಲಿ ಲಭ್ಯ. ಇಂಥವರಿಗೆ ಮರ ಕದಿಯಲು ಮಾತ್ರ ಗೊತ್ತು, ಪರ್ಮಿಟ್ ವಿಷಯವೇ ಇಲ್ಲ.
ಇದೀಗ ಪುತ್ತೂರಿನ ಮರಗಳ್ಳರ ರಾಜಧಾನಿಗೆ ಸರ್ಕಾರ ಒಬ್ಬ ಖಡಕ್ ಐಎಫ್ಎಸ್ ಅಧಿಕಾರಿಯನ್ನು ಎಸಿಎಫ್ ಕುರ್ಚಿಗೆ ನೇಮಿಸಿದೆ. ಅಲ್ಲಿ ಐಎಫ್ಎಸ್ ಬಂತು ಅಂದ ಕ್ಷಣ ಇಲ್ಲಿ ಕಾಡುಗಳಲ್ಲಿ ಗರ್ಗಸ್ ಶಬ್ದ ನಿಂತೇ ಹೋಗಿದೆ. ಗರ್ಗಸ್ ಆಫ್ ಮಾಡುವಂತೆ ಮರಗಳ್ಳರಿಗೆ ಖುದ್ದು ಗಾರ್ಡ್ ಗಳು, ಫಾರೆಸ್ಟರ್ ಗಳೇ ಸೂಚಿಸಿದ್ದು ಬಂದ ಅಧಿಕಾರಿಯನ್ನು ಸ್ಟಡಿ ಮಾಡಿದ ಮೇಲೆ ಗರ್ಗಸ್ ಸ್ಟಾರ್ಟ್ ಮಾಡಿದರಾಯಿತು ಎಂದು ಹೇಳಿದ್ದಾರಂತೆ. ಹಾಗಾಗಿ ಪುತ್ತೂರಿನ ಮರಗಳ್ಳರಿಗೆ ಒಂದು ಸೈಕಲ್ ಗ್ಯಾಪ್ ವಿರಾಮ ಸಿಕ್ಕಿದ್ದು, ಗರ್ಗಸಕ್ಕೆ ಅರ ಹಾಕುವ ಕೆಲಸ ಮಾಡಿಸಲಾಗುತ್ತಿದೆ. ಈ ನಡುವೆ ಕೆಲವು ಕಡೆ ಪೀಸ್ ತಳಿಯ ಮರಗಳ್ಳರು ಈ ಐಎಫ್ಎಸ್ ಅಧಿಕಾರಿಯನ್ನು ಇಲ್ಲಿಂದ ಹೇಗಾದರೂ ಮಾಡಿ ಗಂಟು ಮೂಟೆ ಕಟ್ಟಿಸಲು ಬೆಂಗಳೂರು ಬಸ್ ಹತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಂದು ಪುತ್ತೂರು ಉಪ ವಿಭಾಗದಲ್ಲಿ ಈ ಹಿಂದೆ ಎಸಿಎಫ್ ಆಗಿದ್ದವರು ಸುಬ್ಬಯ್ಯರು. ಹಿಂದೆ ಬಂದರೆ ಒದೆಯ ಬೇಡ, ಮುಂದೆ ಹೋದರೆ ಹಾಯ ಬೇಡ ಕೆಟಗರಿಯ ಪುಣ್ಯಕೋಟಿ ಜನ. ಲೋಕಲ್ ಕುಂದಾಪ್ರ ಆದ್ಮಿ. ಹಾಗೆಂದು ಎಸಿಎಫ್ ಸುಬ್ಬಯ್ಯರು ಪುತ್ತೂರು ಉಪ ವಿಭಾಗದಲ್ಲೇ ಒಂದು ನೂರೈವತ್ತು ವರ್ಷಗಳಿಂದ😂 ಪ್ರಮೋಷನ್ ಆಗಿ ಆಗಿ ಈಗ ಅರಣ್ಯ ಇಲಾಖೆಯ ಕೊಡಿ ಪೀಸ್ ಗೆ ಬಂದಿದ್ದಾರೆ. ಹಾಗಾಗಿ ಪುತ್ತೂರಿನ ಪ್ರತೀ ಮರಗಳ್ಳರ ನಾಡಿಮಿಡಿತ ತಿಳಿದವರಾಗಿದ್ದರು ಮತ್ತು ಮರಗಳ್ಳರು ಕೂಡ ಸುಬ್ಬಯ್ಯರನ್ನು ತುಂಬಾ ಸ್ಟಡಿ ಮಾಡಿ, ರಿವಿಜನ್ ಮಾಡಿ ಸೆಟ್ ಆಗಿದ್ದರು. ಆದರೆ ಇಲಾಖೆ ಈ ಒಂದು ವಿಷಯದ ಬಗ್ಗೆ ಹದ್ದಿನ ಕಣ್ಣಿಟ್ಟು ಭೂತ ಮಲಗಿ ಕೋಳಿ ಕೂಗುವ ಮೊದಲೇ ಸುಬ್ಬಯ್ಯರಿಗೆ ಮತ್ತು ಮರಗಳ್ಳರಿಗೆ ಗೊತ್ತೇ ಆಗದಂತೆ ಮೇಜರ್ ಸರ್ಜರಿ ಮಾಡಿ ಐಎಫ್ಎಸ್ ಅಧಿಕಾರಿಗೆ ಚಾರ್ಜ್ ಕೊಡುವಂತೆ ಆದೇಶಿಸಿತ್ತು. ಎಲ್ಲಿಯಾದರೂ ಎಸಿಎಫ್ ಸುಬ್ಬಯ್ಯರಿಗೆ ಟ್ರಾನ್ಸ್ಫರ್ ಅಂತ ಮೊದಲೇ ಗೊತ್ತಿದ್ದರೆ ಮರಗಳ್ಳರು ದಂಡಿ ಯಾತ್ರೆ, ಉಪ್ಪಿನ ಸತ್ಯಾಗ್ರಹ, ಅಪ್ಪಿಕೋ ಚಳುವಳಿ ಮಾಡುತ್ತಿದ್ದರು. ಈ ವಿಷಯ ಗೊತ್ತಿದ್ದೇ ರಫಕ್ಕನೆ ಮರ ಬಿದ್ದ ಹಾಗೆ ಚೇಂಜ್ ಮಾಡಲಾಗಿದೆ.
ಹಾಗೆ ಪುತ್ತೂರು ಎಸಿಎಫ್ ಚೇಂಜ್ ವಿಷಯದಲ್ಲಿ ಮರಗಳ್ಳರಿಗೆ ಮರ್ಲ್ ಹಿಡಿದಿದೆ. ಆವತ್ತು 2018ರಲ್ಲಿ ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರತ ಅರಣ್ಯ ಇಲಾಖೆಯ ಸಿಬ್ಬಂದಿ ರಾಜೇಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆಲಂಕಾರಿನ ಕಡೆ ಪೀಸ್ ಮರಗಳ್ಳ ಮತ್ತು ಕೆಲವು ನಡುಪೀಸ್, ಕೊಡಿಪೀಸ್ ಮರಗಳ್ಳರು ಜೊತೆ ಸೇರಿಕ್ಕೊಂಡು ಶತಾಯಗತಾಯ ಸುಬ್ಬಯ್ಯರಿಗೆ ವಾಪಾಸ್ ಎಸಿಎಫ್ ಕುರ್ಚಿ ಕೊಡಿಸಲು ಬೆಂಗಳೂರಲ್ಲಿ ಹೋಗಿ ಲ್ಯಾಂಡ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರ ಭವನ, ಅರಣ್ಯ ಮಂತ್ರಿ, ವಿಧಾನ ಸೌಧದ ಮೆಟ್ಟಿಲುಗಳ ಬಳಿ ಈ ಕಡೆ ಪೀಸ್, ಕೊಡಿಪೀಸ್ ಗಳ ಚಲನವಲನ ಕಂಡು ಬಂದಿದ್ದು ಉಳಿದ ಪೊರೊಟುಗಳಿಗೆ ಏನಾದರೊಂದು ಶುಭಸುದ್ದಿ ತರುವ ಪ್ರಯತ್ನದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top