ಪುತ್ತೂರು ಪೋಲಿಸ್ ಉಪ ವಿಭಾಗದ ಉಪ ಪೋಲಿಸ್ ವರಿಷ್ಠಾಧಿಕಾರಿಯ ಪೋಲಿಸ್ ಸರಹದ್ದಿನಲ್ಲಿ ನಡೆದ ರಬ್ಬರ್ ಶೀಟ್ ಕಳ್ಳತನದ ಕೇಸೋಂದರಲ್ಲಿ ಕೋರ್ಟಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ರಕ್ಕಸ ರೌಡಿಯೊಬ್ಬನನ್ನು ಪೋಲಿಸ್ ಉಪ ವರಿಷ್ಠ ರಚಿಸಿದ್ದ ವಿಶೇಷ ವಾರೆಂಟ್ ಟೀಮ್ ಕೇರಳದಿಂದ ಹೊತ್ತುಕೊಂಡು ಬಂದಿದೆ. ಪುತ್ತೂರು ಉಪ ವಿಭಾಗದಲ್ಲಿ ರಕ್ಕಸನ ಮೇಲೆ ರಬ್ಬರ್ ಶೀಟ್ ಕಳ್ಳತನ ಮತ್ತು ಆಡು ಕಳ್ಳತನದ ಕೇಸ್ ಮಾತ್ರ ಇದ್ದದ್ದು. ಆದರೆ ವಿಶೇಷ ತಂಡದ ಪೋಲಿಸರು ರಕ್ಕಸನನ್ನು ಎತ್ತಿ ಜಾತಕ ಬಿಡಿಸಿ ನೋಡಿದರೆ ಒಂದು 302, ಮತ್ತೊಂದು 307 ಸೆಕ್ಷನ್ ಗಳು ಹಾಗೂ ಹನ್ನೆರಡು ಇತರೇ ಚಿಲ್ಲರೆ ಸೆಕ್ಷನ್ ಗಳ ಕೇಸುಗಳನ್ನು ಹೊತ್ತು ಕೊಂಡು ತಲೆಮರೆಸಿಕೊಂಡಿದ್ದ. ಇದೀಗ ಪೋಲಿಸರು ಸನ್ಮಾನ ಮಾಡಿ ಫಲಪುಷ್ಪ ಕೊಟ್ಟು ಜೈಲಿಗೆ ಕಳಿಸಿದ್ದಾರೆ.
ಹಾಗೆಂದು ಪುತ್ತೂರು ಉಪ ವಿಭಾಗದ ಪೊಲೀಸ್ ಸರಹದ್ದಿನಲ್ಲಿ ಕೋರ್ಟಿಗೆ ಹಾಜರಾಗದೆ ಮಂಡೆ ಮರೆಸಿ ಕೊಂಡಿರುವ ಆರೋಪಿಗಳ ಪತ್ತೆಗಾಗಿ ಉಪ ವರಿಷ್ಠ ಇತ್ತೀಚಿನ ದಿನಗಳಲ್ಲಿ ಒಂದು ಸ್ಪೆಷಲ್ ಟೀಂ ರಚಿಸಿದ್ದು ಉಪ ವಿಭಾಗದಲ್ಲಿ ಹೆಕ್ಕಿ ಹೆಕ್ಕಿ ಖಡಕ್ ಪೋಲಿಸರನ್ನು ಈ ಟೀಂನಲ್ಲಿ ಹಾಕಿಕೊಳ್ಳಲಾಗಿತ್ತು. ಕೆಲವು LPC ಗಳನ್ನು ಎಲ್ಲೆಲ್ಲಿಂದಲೋ ಎತ್ತಿಕೊಂಡು ಬರುವುದು ಈ ಟೀಂನ ಕೆಲಸ. ಹಾಗೆ ಕೆಲವು ದಿನಗಳ ಹಿಂದೆ ಈ ಟೀಂ ಮಂಡೆ ತಪ್ಪಿಸಿಕೊಂಡಿದ್ದವರ ಲಿಸ್ಟ್ ನೋಡುತ್ತಾ ಇರಲಾಗಿ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಕ್ರಮ 56/2020 ರ ಬಗ್ಗೆ ಸ್ಟಡಿ ಮಾಡಿದಾಗ ಪೋಲಿಸರ ಅಷ್ಟಮಂಗಲದಲ್ಲಿ ರಕ್ಕಸನೊಬ್ಬನ ಮಸ್ಕ್ ಮಸ್ಕ್ ಚಿತ್ರಣ ಗೋಚರಿಸಿದೆ. ಬೆಳ್ಳಾರೆಯ ಲಾಯರ್ ಒಬ್ಬರ ಮನೆಯಿಂದ ರಬ್ಬರ್ ಶೀಟ್ ಮತ್ತು ಒಂದು ಆಡು ಕದ್ದ ಕಳ್ಳನ ಕೇಸ್ ಅದು. ಬೆಳ್ಳಾರೆ ಪೋಲಿಸರು ಆವತ್ತು ಅವನನ್ನು ಹಿಡಿದು ಬೆಂಡ್ ತೆಗೆದು ಜೈಲಿಗೆ ಹಾಕಿದ್ದರು. ಆದರೆ ಜಾಮೀನಾಗಿ ಹೊರಗೆ ಬಂದವನು ಆಮೇಲೆ ಕೋರ್ಟ್ ಕಡೆಗೆ ತಲೆ ಹಾಕಿ ಕೂಡ ಮಲಗಿರಲಿಲ್ಲ. ಉಪ ವರಿಷ್ಠನ ಸ್ಪೆಷಲ್ ಟೀಂ ಬಳಿ ರಕ್ಕಸ ಕಳ್ಳನ ಬಗ್ಗೆ ಸುಳ್ಯ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್ ಸಿಸಿ ನಂಬರ್ 524/2021ಕೂಡ ಕೈಯಲ್ಲಿತ್ತು. ವಾರೆಂಟ್ ಹಿಡ್ಕೊಂಡು ಪೋಲಿಸರು ಎದ್ದು ನಿಂತರು.
ಅವನು KL ಸ್ಟೇಟಿನ ಕಣ್ಣೂರು ಜಿಲ್ಲೆಯ ತಲಿಪರಂಬ ತಾಲೂಕಿನ ಉನ್ಮೇಶ. ಈ ಉನ್ಮೇಶ 2020ರಲ್ಲಿ ಬೆಳ್ಳಾರೆಗೆ ಬಂದು ಲಾಯರೊಬ್ಬರ ಮನೆಯಿಂದ ರಬ್ಬರ್ ಶೀಟ್ ಮತ್ತು ಮೇ….ಕದ್ದು ಖುದ್ದು ಸಿಕ್ಕಿ ಬಿದ್ದಿದ್ದ. ಬೆಳ್ಳಾರೆ ಪೋಲಿಸರು ಉನ್ಮೇಶನ ಸಂದು ಸಂದು ಬೆಂಡ್ ತೆಗೆದು ಜೈಲಿಗೆ ಹಾಕಿದ್ದರು. ನಂತರ ಉನ್ಮೇಶನಿಗೆ ಜಾಮೀನಾಗಿ ಕೇರಳ ಬಸ್ ಹತ್ತಿದವನಿಗೆ ನಂತರ ಕರ್ನಾಟಕ ಬಸ್ ಸಿಗಲೇ ಇಲ್ಲ. ಪೋಲಿಸರು ಶಬರಿಯಂತೆ ಕಾದರು. ಇವತ್ತು ಬರ್ತಾನೆ, ನಾಳೆ ಬರ್ತಾನೆ, ನೆಕ್ಸ್ಟ್ ವಾಯಿದೆಗೆ ಬರ್ತಾನೆ ಎಂದು ಈಗ ಐದು ವರ್ಷ ಆಯಿತಲ್ಲ, ಪುತ್ತೂರು ಉಪ ವರಿಷ್ಠನ ಸ್ಪೆಷಲ್ ಟೀಂ ವಾರೆಂಟ್ ಹಿಡ್ಕೊಂಡು ಮೆರವಣಿಗೆ ಹೊರಟಿತು. ಹೊರಟವರು ಸ್ಪೆಷಲ್ ಟೀಂನ CHC 685 ಪ್ರಶಾಂತ್ ರೈ,CHC 1028 ಗಣೇಶ್, CPC 2283 ಶ್ರೀಶೈಲ ಮತ್ತು CPC 1926 ರಮೇಶ್. ಪುತ್ತೂರು ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ಶ್ರೀ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಬೆಳ್ಳಾರೆ ಠಾಣಾ ಪೋಲಿಸ್ ಉಪ ನಿರೀಕ್ಷಕರಾದ ಈರಯ್ಯರವರ ನಿರ್ದೇಶನದಲ್ಲಿ, ಉಪ್ಪಿನಂಗಡಿ ಠಾಣಾ ಪೋಲಿಸ್ ಉಪ ನಿರೀಕ್ಷಕರಾದ ಕೌಶಿಕ್ ರವರ ನೇತೃತ್ವದಲ್ಲಿ ಇತ್ಯಾದಿ ಇತ್ಯಾದಿ.
ಹಾಗೆ ಆಡು ಕಳ್ಳನ ಬೇಟೆಗೆ ಕೇರಳಕ್ಕೆ ಹೊರಟ ಪೋಲಿಸರಿಗೆ ಕಳ್ಳ ಮನೆಯಲ್ಲೇ ಆರಾಮವಾಗಿ ಓಣಂ ಆಚರಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೆ ಹೋಗಿ ಕಣ್ಣೂರು ಜಿಲ್ಲೆಯ ಅಲಕ್ಕೋಡ್ ಎಂಬಲ್ಲಿ ಲ್ಯಾಂಡ್ ಆದ ಪೋಲಿಸರಿಗೆ ಅಲ್ಲಿನ ಮಾಹಿತಿದಾರ ಕಳ್ಳ ಅಲಕ್ಕೋಡಿನ ಒಂದು ಮೊಸರು ಕುಡಿಕೆ ಮೆರವಣಿಗೆಯಲ್ಲಿ ಸಾಗಿ ಹೋಗುತ್ತಿದ್ದಾನೆ ಎಂದು ಮೆಸೇಜ್ ಕೊಟ್ಟಿದ್ದಾನೆ. ಹಾಗೆ ಕಾರಿಳಿದ ಪೋಲಿಸರೂ ಜೈ ಜೈ ಕೃಷ್ಣ ಎಂದು ಮೆರವಣಿಗೆಯಲ್ಲಿ ಜಾಯಿನ್ ಆಗಿದ್ದಾರೆ. ಸ್ವಲ್ಪ ದೂರ ಅಷ್ಟೇ, ಬೇಟೆ ಕಣ್ಣಿಗೆ ಬಿದ್ದಿದೆ. “ನಮಸ್ಕಾರಂ, ನಾವು ಬೆಳ್ಳಾರೆಯಿಂದ ಬಂದ್ದದ್ದು”ಎಂದು ಕಳ್ಳನಲ್ಲಿ ಪೋಲಿಸರು ಪರಿಚಯ ಹೇಳುತ್ತಿದ್ದಂತೆ ಒಂದು ಪೋಲಿಸ್ ಕೈ ಕಳ್ಳನ ಹಿಂದಿನಿಂದ ಬಂದು ಕಾಲರ್ ಪಟ್ಟಿಗೆ ಕೈ ಹಾಕಿ ಆಗಿದೆ. ಅಷ್ಟೇ. ಕಳ್ಳನಿಗೆ ಮಿಸುಕಾಡಲು ಬಿಡದೆ ತಂದು ಕಾರಲ್ಲಿ ಹಾಕೊಂಡಿದ್ದಾರೆ. ನಂತರ ಕಣ್ಣೂರು ಟೂ ಬೆಳ್ಳಾರೆ ಒಂದು ಲಾಂಗ್ ಜರ್ನಿ. ಬೆಳ್ಳಾರೆಯಿಂದ ಸುಳ್ಯ ಕೋರ್ಟ್, ನಂತರ ಸೀದಾ ಕೊಡಿಯಾಲ್ ಬೈಲ್ ಜಿಲ್ಲಾ ಜೈಲಿಗೆ ರವಾನೆ. ಹಾಗೆಂದು ಬೆಳ್ಳಾರೆ ಪೋಲಿಸರ ಪ್ರಕಾರ ಈ ಕಳ್ಳನ ಮೇಲೆ ಕೇವಲ ಆಡು ಮತ್ತು ರಬ್ಬರ್ ಶೀಟ್ ಕಳ್ಳತನದ ಆರೋಪಗಳಿತ್ತು. ಆದರೆ ಕಣ್ಣೂರಿಂದ ತಂದು ಇನ್ನೊಮ್ಮೆ ಬೆಂಡ್ ತೆಗೆದ ಪೋಲಿಸರಿಗೆ ಸಿಕ್ಕಿದ್ದು ಅನಾಮತ್ತು 12 ಕೇಸುಗಳು. ಅದರಲ್ಲಿ ಒಂದು ಸೆಕ್ಷನ್ 302 ಟಿಕೆಟ್ ಕೊಟ್ಟ ಕೇಸ್, ಇನ್ನೊಂದು 307 ಸೆಕ್ಷನಿನ ಟಿಕೆಟ್ ಕೊಡಲು ಪ್ರಯತ್ನಿಸಿದ ಕೇಸುಗಳೂ ಸೇರಿದೆ. ಎಲ್ಲಾ ಸರಿಯಾಗಿ ನಡೆದರೆ ಬರುವ ಮೊಸರು ಕುಡಿಕೆಗೂ ಉನ್ಮೇಶ ಲಭ್ಯ ಡೌಟು.






