ಪುತ್ತೂರು: ಲ್ಯಾಪ್ ಟಾಪ್ ಮತ್ತು ಇತರೇ ಎಲೆಕ್ಟ್ರಾನಿಕ್ ವಸ್ತುಗಳ ಎಲೆಕ್ಟ್ರಾನಿಕ್ ಕಳ್ಳನೊಬ್ಬನನ್ನು ಪುತ್ತೂರು ಪೋಲಿಸ್ ಉಪ ವರಿಷ್ಠನ ಸ್ಪೆಷಲ್ ವಾರೆಂಟ್ ಟೀಮ್ ಕೊಡಿಯಾಲ್ ಬೈಲ್ ಜೈಲು ಗಲ್ಲಿಯಿಂದ ಹೋಗಿ ಎತ್ತಾಕಿಕೊಂಡು ಬಂದಿದೆ. ಕಳ್ಳ ಜೈಲಿನಲ್ಲಿ ಸೇಫ್.
ಹಾಗೆಂದು ಅವರಿಬ್ಬರು ಎಲೆಕ್ಟ್ರಾನಿಕ್ ಕಳ್ಳರು. ಲ್ಯಾಪ್ ಟಾಪ್ ಹಾಗೂ ಇತರೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇವರಿಬ್ಬರು ಜಂಟಿ ಕಾರ್ಯಾಚರಣೆ ನಡೆಸಿ ಕದಿಯುತ್ತಿದ್ದರು. ಒಬ್ಬನು ಅಬ್ದುಲ್ ಫಯಾಜ್ ಇನ್ನೊಬ್ಬ ಅಕ್ಬರ್ ಸುಹೈಬ್. ಹಾಗೆ ಪುತ್ತೂರು ನಗರ ಠಾಣಾ ಸರಹದ್ದಿನಲ್ಲಿ 2020ರಲ್ಲಿ ಇವರ ಮೇಲೆ ಇಂತದ್ದೇ ಒಂದು ಕೇಸ್ ದಾಖಲಾಗಿತ್ತು. ಇಬ್ಬರೂ ಸಿಗಲೇ ಇಲ್ಲ. ಪುತ್ತೂರು ಪೋಲಿಸರು ಕಣ್ಣಿಗೆ ಎಣ್ಣೆ ಹಾಕಿ ಹುಡುಕಿದರು, ಕಾಲಿಗೆ ಚಕ್ರ ಕಟ್ಟಿ ತಿರುಗಿದರೂ ಇವರಿಬ್ಬರನ್ನು ತಂದು ಫಲ ಪುಷ್ಪ ಕೊಡಲು ಆಗಲೇ ಇರಲಿಲ್ಲ. ಹಾಗೆಂದು ಇವರ ಜಾತಕ ತೆಗೆದು ನೋಡಿದರೆ ಈ ಜಂಟಿ ಕಳ್ಳರ ಮೇಲೆ ಎಂಟು ಕೇಸುಗಳು ವಿವಿಧ ಠಾಣೆಗಳಲ್ಲಿ ಇತ್ತು. ಪುತ್ತೂರು ಪೋಲಿಸರು ಬಲಿಮ್ಮೆ ಇಟ್ಟು ಬಿಟ್ಟರು.
ಹಾಗೆ 2020 ರಿಂದ ತಮ್ಮ ಕೈಗೆ ಸಿಗದ ಡಬಲ್ ಕಳ್ಳರ ವಿವಿಧ ಕೇಸುಗಳ ಬಗ್ಗೆ ಸ್ಟಡಿ ಮಾಡಿದಾಗ ಪುತ್ತೂರು ಪೋಲಿಸರಿಗೆ ಒಂದು ಮಾಹಿತಿ ಸಿಕ್ಕಿದೆ. ಕೂಡಲೇ ಮಂಗಳೂರಿಗೆ ಓಡಿದ ಸ್ಪೆಷಲ್ ಟೀಂನ CHC 413 ನಂಬ್ರದ ಸಂತೋಷ್ ಕುಮಾರ್, CPC 2278 ಶಿವಕುಮಾರ್ ನಾಯ್ಕ್, CPC 2283 ಶ್ರೀಶೈಲ ಎಂ.ಕೆ ಇವರುಗಳು ಕೊಡಿಯಾಲ್ ಬೈಲ್ ಡಿಸ್ಟ್ರಿಕ್ಟ್ ಜೈಲಿನ ಗಲ್ಲಿಗಳಲ್ಲಿ ಹೋಗಿ ಕಣ್ಣಾ ಮುಚ್ಚೆ ಕಾಡೆ ಗೂಡೆಗೆ ರೆಡಿಯಾಗಿ ನಿಂತಿದ್ದಾರೆ. ಯಾಕೆಂದರೆ ಆವತ್ತು ಡಬಲ್ ಕಳ್ಳರಲ್ಲಿ ಒಬ್ಬ ಅಸಾಮಿಯಾದ ಅಕ್ಬರ್ ಸುಹೈಬ್ ಯಾವುದೋ ಉಪ್ಪಿನಂಗಡಿ ಕೇಸಲ್ಲಿ ಒಳಗೆ ಹೋದವನು ಹೊರಗೆ ಬರುವ ದಿನ. ಹಾಗೆ ಕೋರ್ಟಿನಿಂದ ರಿಲೀಸ್ ಆರ್ಡರ್ ಜೈಲಿಗೆ ಬಂದು ಜೈಲರ್ ಗಳು ಅಕ್ಬರ್ ನನ್ನು ಜೈಲಿಂದ ರಿಲೀಸ್ ಮಾಡಿದ್ದಾರೆ. “ಅಬ್ಬಾ ಇನ್ನು ಸ್ವಲ್ಪ ಕೇರ್ ಫುಲ್ ಆಗಿರ ಬೇಕು, ಯಾರ ವಹಿವಾಟು ಆದರೂ ಆಗ ಬಹುದು ಈ ಕೋರ್ಟ್ ಕಚೇರಿ ವೈವಾಟಲ್ಲ” ಎಂದು ಅಕ್ಬರ್ ಕೊಡಿಯಾಲ್ ಬೈಲ್ ಜೈಲ್ ನಿಂದ ಇಳಿದು ಗಲ್ಲಿಗೆ ಎಂಟ್ರಿ ಆಗಿದ್ದಾನೆ ಅಷ್ಟೇ. ಪುತ್ತೂರು ಪೋಲಿಸರು ಕೂ… ಎಂದು ಕೂಕುಲು ಹಾಕಿದ್ದಾರೆ. ಯಾರು ಎಂದು ಅಕ್ಬರ್ ತಿರುಗಿ ನೋಡುವಷ್ಟರಲ್ಲಿ ಗಬಕ್ಕನೆ ಅಕ್ಬರ್ ನನ್ನು ಲಾಕ್ ಮಾಡಲಾಗಿದೆ. ನೀವು ಯಾರು ಎಂದು ಅಕ್ಬರ್ ಕೇಳಿದರೆ ಪುತ್ತೂರಿಗೆ ಹೋಗುವ ಅಲ್ಲಿ ಕತೆ, ಕವನ ವಾಚನ ಮಾಡುತ್ತೇವೆ ಎಂದು ಪೋಲಿಸರು ಹೇಳಿದ್ದಾರೆ. ಪಾಪ ಅಕ್ಬರ್ ಜೈಲಿನಿಂದ ಬಂದು ಒಂದು ಗಂಟೆಯ ಪುರುಸೊತ್ತು ಕೂಡ ಸಿಗಲಿಲ್ಲ. ಜೈಲಿನಿಂದ ಜೈಲಿಗೆ. ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀ ಅರುಣ್ ನಾಗೇಗೌಡ ಹಾಗೂ ಪುತ್ತೂರು ಟೌನ್ ಇನ್ಸ್ ಪೆಕ್ಟರ್ ಕಿರಣ್ ಜಾನ್ಸನ್ ಡಿ ಸೋಜಾ ಇವರ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಠಾಣಾ ಎಸ್ಸೈ ಶ್ರೀ ಆಂಜನೇಯ ರೆಡ್ಡಿಗಾರು ಹಾಗೂ ಕ್ರೈಂ ಎಸ್ಸೈ ಶೇಷಮ್ಮ ಕೆ.ಎಸ್ ಇವರ ನೇತೃತ್ವದಲ್ಲಿ ಹಾಗೂ ನ್ಯಾಯಾಲಯ ಸಿಬ್ಬಂದಿ CPC 2329 ಪ್ರಭಾಕರ್ ಮೋರೆ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.






