ಪುತ್ತೂರಿಗೆ ಬೇಕಾಗಿದ್ದಾರೆ!

Pattler News

Bureau Report

ಟಿಕೆಟ್ ತೆಗೆಯಲು ರೆಡಿ ಆದವರೂ ಆಗಬಹುದು, ಸೇನೆರ್ ಮಟ್ಟದಿಂದ ದುಡ್ಡು ಮಾಡಿ ಮಾಡಿ ಡಿಟಿ ಆಗಿ ಪ್ರಮೋಷನ್ ಆದವರೂ ಆಗಬಹುದು, ಕೆಎಎಸ್ ಆದವರೂ ಆಗಬಹುದು, ಸರಿಯಾಗಿ ನಡೆದಾಡುವಂತಹ, ಡೊಳ್ಳು ಬಂಜಿಯ, ಗೋಧಿ ಮೈ ಬಣ್ಣದ, ಪೊಟ್ಟನಲ್ಲದ, ಕಿವುಡನಲ್ಲದ, ಕುಡುಕನಲ್ಲದ, ಸೋಮಾರಿಯಲ್ಲದ, ಓದು ಬರಹ ಸರಿ ಗೊತ್ತಿರುವ, ಕನ್ನಡ ಸರಿಯಾಗಿ ಮಾತಾಡುವ, ಮೂಕನಲ್ಲದ ಒಬ್ಬ ತಹಶೀಲ್ದಾರ ಬೇಕಾಗಿದ್ದಾರೆ ಮಾರಾಯ್ರೆ ಪುತ್ತೂರಿಗೆ. ಪುತ್ತೂರು ತಹಶೀಲ್ದಾರನ ಸೀಟು ಖಾಲಿ ಇದೆ. ಪುತ್ತೂರಿಗೆ ಆಡಳಿತ ಪಕ್ಷದ ಎಮ್ಮೆಲ್ಲೆ ಇದ್ದಾರೆ, ಆದರೆ ತಹಶೀಲ್ದಾರ್ ಇಲ್ಲ. ಪುರಂದರ ಹೆಗ್ಡೆರ್ ಮನೆಗೆ ಹೋದ ಮೇಲೆ ಪುತ್ತೂರಿನ ತಹಶೀಲ್ದಾರ್ ಚೇಂಬರ್ ನಲ್ಲಿ ಜೇಡರ ಬಲೆ, ಮುಚ್ಚಿದ ಬಾಗಿಲು ಜೊತೆಗೆ “ತಹಶೀಲ್ದಾರ್ ಇಜ್ಜೆರ್” ಸಮೂಹ ಗಾನ.
ಹಾಗೆಂದು ಮಾಜೀ ತಹಶೀಲ್ದಾರ್ ಪುರಂದರ ಹೆಗ್ಡೆರ್ ಮನೆಗೆ ಹೋದ ಮೇಲೆ ಸರ್ಕಾರ ಅದ್ಯಾರೋ ಕೂಡಲಗಿ ಎಂಬವರನ್ನು ಪುತ್ತೂರು ತಹಶೀಲ್ದಾರನ ಕುರ್ಚಿಗೆ ಕಳಿಸಿತ್ತು. ಆದರೆ ಪುತ್ತೂರಿನ ವಾಸ್ತುವಿಗೂ ಕೂಡಲಗಿ ಜಾತಕಕ್ಕೂ ಯಾಕೋ ಕೂಡಿ ಬರಲೇ ಇಲ್ಲ. ಕೂಡಲಗಿ ಪುತ್ತೂರಿಗೆ ಬರದೆಯೇ ಬೇರೆ ಕಡೆ ಟ್ರಾನ್ಸ್ಫರ್ ಮಾಡಿಸಿ ಕೊಳ್ಳಲು ಕಾಲಿಗೆ MRF ಟೈರ್ ಕಟ್ಟಿಕ್ಕೊಂಡು ಓಡಾಡುತ್ತಿದ್ದರು. ಈ ಸಮಯದಲ್ಲಿ ಪುತ್ತೂರು ತಹಶೀಲ್ದಾರ್ ಕಾಣೆ ಅಂತ ಪತ್ರಿಕೆಗಳು ಸಾಲಾಗಿ ಕುಂತು ಬರೆದು ಬಿಟ್ಟವು. ಕೂಡಲಗಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮೇಲಿಂದ ಪ್ರೆಷರ್ ಮೇಲೆ ಪ್ರೆಷರ್ ಬಂತು. ಉಪಾಯ ಇಲ್ಲದೆ ಸಾಹೇಬ್ರು ಬಂದು ಚೇಂಬರ್ ಬಾಗಿಲು ತೆಗೆಸಿ ಬಿಟ್ಟರು.
ಹಾಗೆ ಕಳೆದ ಆಟಿ ಶುರುವಿಗೆ ಡ್ಯೂಟಿ ಜಾಯಿನ್ ಆದ ಕೂಡಲಗಿ ಸಾಹೇಬ್ರು ಆಗಸ್ಟ್ ಹದಿನೈದನ್ನು ಪುತ್ತೂರಲ್ಲೇ ಆಚರಿಸಿದ್ದರು. ಹಾಗೆ ಆಗಸ್ಟ್ ಹದಿನೈದಕ್ಕೆ ಆಟಿ ಮುಗಿದು ಸೋಣ ಶುರುವಾಯ್ತು ನೋಡಿ, ಕೂಡಲಗಿ ಜಾತಕದಲ್ಲಿ ಒಮ್ಮೆಗೇ ರಾಹು, ಕೇತು,ರಣ, ಬ್ರಹ್ಮ ರಕ್ಕಸ,ಕುಲೆ, ಪೀಡೆ ,ಪಿಚಾಚಿ ಎಲ್ಲಾ ಎಂಟ್ರಿ ಆಗಿ ಬಿಟ್ಟಿತು. ಮಿನಿ ವಿಧಾನಸೌಧದಲ್ಲಿ ನಡೆಯುತ್ತಿದ್ದ ಲಂಚದ ಜಾತ್ರೆಗೆ ಲೋಕಾಯುಕ್ತರು ಜಾತ್ರೆ ನೋಡಲು ಬಂದು ಬಿಟ್ಟರು. ಅಷ್ಟೇ! ಕೂಡಲಗಿ ಸಾಹೇಬ್ರು ಆವತ್ತು ಪುತ್ತೂರು ತಹಶೀಲ್ದಾರನ ಛೇಂಬರ್ ಬಿಟ್ಟು ಓಡಿದವರು ಊರು ಬಿಟ್ಟು, ಜಿಲ್ಲೆ ಬಿಟ್ಟು, ರಾಜ್ಯವನ್ನೇ ಬಿಟ್ಟು ಓಡಿದ್ದಾರೆ. ಅವರು ಓಡಿದ ಲೆಕ್ಕದಲ್ಲಿ ಆಂಧ್ರ ಗಡಿ ದಾಟಿ ಓಡಿದ್ದಾರೆ ಎಂದು ಸುದ್ದಿ. ಪೂರ್ವದಲ್ಲಿ ಬಂಗಾಲ ಕೊಲ್ಲಿ ತನಕ ಓಡ ಬಹುದು ಎಂಬ ಅಂದಾಜಿದೆ.
ಒಬ್ಬ ತಹಶೀಲ್ದಾರನ ಹೆಸರು ಲಂಚದ ಕೇಸಲ್ಲಿ ಇದ್ದರೂ, ಕೇಸಿಗೆ ಸಂಬಂಧ ಪಟ್ಟಂತೆ ಅವನು ಲೋಕಾಯುಕ್ತರ ಕೈಗೆ, ಪೋಲಿಸರ ಕೈಗೂ ಸಿಗದೆ ಜೀವ ಜೀವ ಪರಾರಿಯಾಗಿದ್ದರೂ, ಇತ್ತ ಡ್ಯೂಟಿಗೂ ಹಾಜರಾಗದೆ, ಅತ್ತ ಕಾನೂನಿಗೂ ಸರೆಂಡರ್ ಆಗದೆ ತಲೆಮರೆಸಿಕೊಂಡಿದ್ದು ಇವನ ಬಗ್ಗೆ ಅಸಿಸ್ಟೆಂಟ್ ಕಮಿಷನರ್, ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟ ಮೇಲಿನವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಕೇಳಿದರೆ ನೋಡುತ್ತೇವೆ, ಮಾಡುತ್ತೇವೆ, ಪರಿಶೀಲಿಸುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ರೈಲು ಬಿಡುವುದು ಬಿಟ್ಟರೆ ಬೇರೇನೂ ಬೆಳವಣಿಗೆಗಳು ಆಗಿಲ್ಲ. ಪುತ್ತೂರಿನಂತಹ ತಾಲೂಕು ಹೆಡ್ ಕ್ವಾರ್ಟರ್ಸ್ ನಲ್ಲಿ ಒಬ್ಬ ತಹಶೀಲ್ದಾರನ ಛೇಂಬರ್ ಖಾಲಿ ಇದೆ ಅಂದರೆ ಅದು ನಾಚಿಕೆಗೇಡಿನ ವಿಷಯ. ಶೇಮ್ ಶೇಮ್. ಪುತ್ತೂರಿನಲ್ಲಿ ಆಡಳಿತ ಪಕ್ಷದ ಶಾಸಕರಿದ್ದೂ ಈ ತಹಶೀಲ್ದಾರ್ ಸಮಸ್ಯೆಯನ್ನು ಯಾಕೆ ಪರಿಹರಿಸುತ್ತಿಲ್ಲ ಎಂಬುದು ತಾಲೂಕು ಆಫೀಸ್ ಸಂತ್ರಸ್ತರ ಅಳಲು. ತಹಶೀಲ್ದಾರನ ಓಟದಲ್ಲಿ ಜನರಿಗೆ ಸಮಸ್ಯೆ ಆಗುತ್ತಿದೆ, ಮಿನಿ ವಿಧಾನಸೌಧದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಯಾವುದೇ ಕೆಲಸಕ್ಕೂ ತಹಶೀಲ್ದಾರ್ ಇಲ್ಲ ಎಂಬ ಕುಂಟು ನೆಪವೊಡ್ಡಿ ಇತರೇ ಸೋಮಾರಿ ಅಧಿಕಾರಿಗಳು, ನೌಕರರು ಕಾಲಹರಣ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಸಂಪೂರ್ಣ ಕುಸಿದು ಪಾತಾಳ ಮುಟ್ಟಿದರೂ ಯಾರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top