ಕನ್ನಡ ರಾಜ್ಯದ ನಂಬರ್ ವನ್ ದೇವರು ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಕುಮಾರಧಾರ ನದಿ ಸ್ನಾನ ಬಂದ್ ಮಾಡಿ ಕೆಲವು ತಿಂಗಳುಗಳೇ ಕಳೆದು ಹೋಗಿದೆ. ಇದೀಗ ಬೊಳ್ಳ ಕಡಿಮೆ ಕಡಿಮೆ ಆಗುತ್ತಿದ್ದು ಇನ್ನಾದರೂ ಭಕ್ತಾದಿಗಳನ್ನು ನದಿಗೆ ಇಳಿಸಿ ಸ್ನಾನ ಮಾಡಿಸುವ ಬಗ್ಗೆ ಚಿಂತಿಸ ಬೇಕಾಗಿದೆ. ತೀರ್ಥಸ್ನಾನ ಇಲ್ಲದೆ ತೀರ್ಥಯಾತ್ರೆ ಫಲಪ್ರದ ಆಗದು.
ಹಾಗೆಂದು ಈ ಸಲದ ಮಳೆಗಾಲದಲ್ಲಿ ಕುಮಾರಧಾರನ ಅವತಾರ ನೋಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ರಾಜ್ಯದ ನಂಬರ್ ವನ್ ದೇವಸ್ಥಾನ ಸುಬ್ರಹ್ಮಣ್ಯದಲ್ಲಿ ಭಕ್ತರು ಕುಮಾರಧಾರ ನದಿಗೆ ಇಳಿದು ಸ್ನಾನ ಮಾಡುವುದನ್ನು ನಿಷೇಧಿಸಿತ್ತು. ನದಿ ತಟದಲ್ಲಿ ಶವರ್ ಸ್ನಾನ, ಡ್ರಮ್ ಸ್ನಾನ, ಬಾತ್ ರೂಮ್ ಸ್ನಾನ, ಓಪನ್ ಏರ್ ಸ್ನಾನ, ನಲ್ಲಿ ಸ್ನಾನ ಮುಂತಾದ ಸವಲತ್ತುಗಳನ್ನು ಕಲ್ಪಿಸಿತ್ತು. ಈ ಬಗ್ಗೆ ತಿಳಿದಿದ್ದ ಭಕ್ತರು ಈ ವ್ಯವಸ್ಥೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ ತಾವು ತಂಗುತ್ತಿದ್ದ ಲಾಡ್ಜ್ ಗಳಲ್ಲೆ ಜಳಕ ಮಾಡಿ ಸುಬ್ರಹ್ಮಣ್ಯನ ದರ್ಶನ ಮಾಡಿ ವಾಪಾಸಾಗುತ್ತಿದ್ಜರು. ಇನ್ನು ರೂಂ ಮಾಡಲು ಪೈಸೆ ಇಲ್ಲದವರು ಟಾಯ್ಲೆಟ್ ಗೆ ನಲವತ್ತು ಕೊಟ್ಟು ಅಲ್ಲಿ ಚಂಡಿ ಆಗಿ ಕೂಡ ದೇವರ ದರ್ಶನ ಮಾಡಿದ್ದುಂಟು. ಸದ್ಯಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದ್ದು ಭಕ್ತರನ್ನು ನದಿಗೆ ಇಳಿಸುವ ಕೆಲಸ ನೆನೆಗುದಿಗೆ ಬಿದ್ದಿದ್ದೆ.
ಇನ್ನು ಸುಬ್ರಹ್ಮಣ್ಯ ಈ ರಾಜ್ಯದ ನಂಬರ್ ವನ್ ದೇವಸ್ಥಾನ ಆದರೂ ಸ್ನಾನ ಘಟ್ಟದಲ್ಲಿ ಮಾತ್ರ ನದಿಗೆ ಇನ್ನೂ ಯಾವುದೇ ತಡೆಗೋಡೆ, ತಡೆಬೇಲಿಗಳ ವ್ಯವಸ್ಥೆ ಮಾಡಿಲ್ಲ. ಎರಡು ಮಳೆ ಬಂದು ನದಿ ನೀರು ನೀರಿನ ಕಲರಿನಿಂದ ಕೆ.ಟಿ ಕಲರಿಗೆ ತಿರುಗಿದ ಕೂಡಲೇ “ಜಪ್ಪೊರ್ಚಿ, ಜಪ್ಪೊರ್ಚಿ”ಎಂದು ನದಿಗೆ ಇಳಿಯುವುದನ್ನು ಬ್ಯಾನ್ ಮಾಡುವುದು ಬಿಟ್ಟರೆ ದೇವಸ್ಥಾನದ ಅಷ್ಟೂ ಆಡಳಿತ ಮಂಡಳಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ತನಕ ಕೈಗೊಂಡಿಲ್ಲ. ಸೆಪ್ಟೆಂಬರ್ ಬಂದರೂ, ಸೋಣ ಮುಗಿಯುವ ಹಂತಕ್ಕೆ ಬಂದರೂ, ಮಳೆ ಘಟ್ಟ ಹತ್ತಿದರೂ ಇನ್ನೂ ಯಾಕೆ ಸ್ವಾಮಿ ನದಿಗೆ ಇಳಿಯಲು ಬಿಡುತ್ತಿಲ್ಲ ಎಂದು ಕೇಳಿದರೆ “ರಾಮನಲ್ಲಿ ಕೇಳಿ” ಎಂಬ ಉತ್ತರ. ರಾಮನಲ್ಲಿ ಕೇಳಿದರೆ “ದೂಮನಲ್ಲಿ ಕೇಳಿ” ಎಂಬ ಪ್ರತ್ಯುತ್ತರ. ಯಾರಲ್ಲಿ ಕೇಳೋದು, ಯಾರಲ್ಲಿ ಮಾತಾಡೋದು.
ಹಾಗೆಂದು ಈ ಕುಮಾರಧಾರನ ತಟದಲ್ಲಿ ಸ್ನಾನ ಘಟ್ಟದ ವ್ಯಾಪಾರ ವಹಿವಾಟು ನಂಬಿಕ್ಕೊಂಡು ಅನೇಕ ಪುಟ್ಪುಟ್ಟ ವ್ಯಾಪಾರಿಗಳಿದ್ದಾರೆ. ಜಿಲ್ಲಾಡಳಿತ ಇಂಥ ಅಂಡಿಗುಂಡಿ ನಿಷೇಧಗಳನ್ನು ಹೇರಿದರೆ ಇವರೆಲ್ಲ ಮಳೆಗಾಲದಲ್ಲೇ ಕರೆಂಚಿ ಹೋಗುತ್ತಾರೆ. ಇನ್ನು ಆಟೋರಾಜರೂ ಕುಮಾರಧಾರ ಟೂ ದೇವಸ್ಥಾನ ಅಂತ ಏನಾದರೂ ಚಿಲ್ಲರೆ ಮಾಡಿಕೊಂಡು ಇರುತ್ತಾರೆ. ಅವರೂ ಈ ನಿಷೇಧದಿಂದ ಬಂಜಿಗೆ ಚಂಡಿ ಕುಂಟು ಕಟ್ಟಿ ಚಾಚಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಮಾರಧಾರನಲ್ಲಿ ಮುಳುಗಿ ಏಳದೇ ಸುಬ್ರಹ್ಮಣ್ಯನ ದರ್ಶನ, ಸುಬ್ರಹ್ಮಣ್ಯನ ಊಟವೂ ಪರಿಪೂರ್ಣ ಆಗದು. ಆದ್ದರಿಂದ ಇನ್ನಾದರೂ ಜಿಲ್ಲಾಡಳಿತವಾಗಲಿ, ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯೇ ಆಗಲಿ ಈ ಬಗ್ಗೆ ಆದಷ್ಟು ಬೇಗ ಈ ಒಂದು ನಿಷೇಧವನ್ನು ಹಿಂಪಡೆದು ಕಡೇ ಪಕ್ಷ ಭಕ್ತಾದಿಗಳ ತೀರ್ಥಯಾತ್ರೆಯನ್ನಾದರೂ ಪರಿಪೂರ್ಣಗೊಳಿಸುವತ್ತ ಗಮನಹರಿಸ ಬೇಕಾಗಿದೆ. ಕುರ್ತೆಲರ ಹಾಗೆ ಎಷ್ಟು ದಿನ ಡ್ರಮ್ ಸ್ನಾನ ಮಾರಾಯ್ರೆ?

ಇನ್ನು ಸುಬ್ರಹ್ಮಣ್ಯದಲ್ಲಿ ಈ ಒಂದು ಕುದುರೆ ಹಾವಳಿ ಕೂಡ ಜೋರಾಗಿದ್ದು ಯಾರೋ ಅಧಿಕ ಪ್ರಸಂಗಿಗಳು ಅಶ್ವಮೇಧ ಯಾಗ ಮಾಡಿ ಬಿಟ್ಟಿರುವ ಬಗ್ಗೆ ಗುಮಾನಿಗಳಿವೆ. ಇದೀಗ ಈ ಕುದುರೆ ಸುಬ್ರಹ್ಮಣ್ಯದಲ್ಲಿ ಆಲ್ ಇಂಡಿಯಾ ಪರ್ಮಿಟ್ ಹೊಂದಿದ್ದು ಎಲ್ಲಾ ಕಡೆ ಓಡಾಟ ನಡೆಸುತ್ತಿದೆ. ಭಕ್ತಾದಿಗಳಿಗೆ, ವಾಹನ ಸವಾರರಿಗೆ, ದ್ವಿಚಕ್ರ ವಾಹನ ಸವಾರರಿಗೆ ಈ ಕುದುರೆಯ ಭಂಡಾರ ರಗಳೆ ಕೊಡುತ್ತಿದ್ದು ಮತ್ತೇ ರಾಮನಲ್ಲಿ ಹೇಳಿದರೆ ದೂಮನಲ್ಲಿ ಹೇಳಿ ಎಂಬ ಉತ್ತರ ಬರುತ್ತಿದೆ. ಈ ಕುದುರೆಗೆ ಯಾರಾದರೂ ಕಡಿವಾಣ ಹಾಕಿ ಮಾರಾಯ್ರೆ. ಸುಬ್ರಹ್ಮಣ್ಯದಲ್ಲಿ ಲವಕುಶ ಯಾರೂ ಇಲ್ವಾ?






