ಈ ಸುಬ್ರಹ್ಮಣ್ಯ ದೇವರ ಆಡಳಿತ ಮಂಡಳಿಗೆ ಎಷ್ಟು ದುಡ್ಡು ಇದ್ರೂ ಸಾಲದು ಮಾರ್ರೆ. ಮತ್ತೆ ಆಸೆ ಬೇರೆ ಯಾವ ಮೂಲದಿಂದ ದುಡ್ಡು ಮಾಡಬಹುದು ಅಂತ. ಸಿರಿವಂತಿಕೆಯಲ್ಲಿ ರಾಜ್ಯದಲ್ಲೆ ನಂ1 ಸ್ಥಾನದಲ್ಲಿ ಭದ್ರವಾಗಿ ನೆಲೆ ನಿಂತಾಗಿದೆ. ಇದನ್ನು ಚೇಸ್ ಮಾಡಲು ಸದ್ಯಕ್ಕೆ ರಾಜ್ಯದ ಯಾವ ದೇವಸ್ಥಾನದಿಂದಲೂ ಸಾಧ್ಯವಿಲ್ಲ. ಆದರೂ ತನ್ನ ವೀಟೋ ಬಳಸಿ ತನ್ನ ಆರ್ಥಿಕ ಸ್ಥಿತಿ ಉತ್ತಮ ಮಟ್ಟದಲ್ಲೇ ಇರುವಂತೆ ನೋಡಿಕೊಳ್ಳಲು ಏನಾರೂ ಹೊಸ ಹೊಸ ಐಡಿಯಾಗಳು. ಅದಕ್ಕೆ ಈಗ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತಾದಿಗಳಿಗೆ ಮತ್ತೊಂದು ಬರೆ ಹಾಕುತ್ತಿದ್ದಾರೆ ಅದುವೇ…, ಫೇ ಪಾರ್ಕಿಂಗ್.
ಒಂದು ವೇಳೆ ದುಡ್ಡು ಕೊಟ್ಟು ಗಾಡಿ ನಿಲ್ಲಿಸುವುದಾದರೇ.., ಆ ಸ್ಥಳ ಹೇಗಿರಬೇಕು..!? ಇಂಟರ್ ಲಾಕ್ ಅಥವಾ ಕಾಂಕ್ರೀಟ್ ಹಾಕಿ ಸ್ವಚ್ಚವಾಗಿರಬೇಕು. ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು. ಭದ್ರತೆಗೆ ಸಿ.ಸಿ. ಕಣ್ಗಾವಲು ಆಗಮನ ಹಾಗು ನಿರ್ಗಮನಕ್ಕೆ ಪ್ರತ್ಯೇಕ ದಾರಿ.. ಮುಂತಾದ ಸವಲತ್ತು ಇರಬೇಕು. ಆದರೆ ಇಲ್ಲಿಯ ಪಾರ್ಕಿಂಗ್ ನೋಡಿದರೆ…., ನಾಲ್ಕು ದಿನ ಜೋರು ಮಳೆ ಬಂದರೆ ಪಾರ್ಕಿಂಗ್ ಜಾಗದಲ್ಲಿ ಭತ್ತ ನಾಟಿ ಮಾಡಬಹುದು. ಯಾವುದೇ ರೀತಿಯ ಸವಲತ್ತು ನೀಡದೆ ಭಕ್ತಾದಿಗಳಿಂದ ಫೇ ಪಾರ್ಕಿಂಗ್ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುವುದು ಸರಿಯೇ..!*
ಈಗಾಗಲೇ ಟೆಂಡರ್ ನವರ ಹಗಲು ದರೋಡೆ ಶುರುವಾಗಿದೆ.
ದೇವಸ್ಥಾನದವರು ಟೆಂಡರ್ ನವರಿಗೆ 88 ಲಕ್ಷ ರೂಪಾಯಿಗೆ ಪಾರ್ಕಿಂಗ್ ಜಾಗ ಬಿಟ್ಟು ಕೊಟ್ಟು ಇಂತಹ ವಾಹನಗಳಿಗೆ ಇಂತಿಷ್ಟು ಅಂದರೆ ಕಾರಿಗೆ 25/- ಟಿ.ಟಿ ಗೆ 30/- ಬಸ್ ಗೆ 50/- ಹಾಗು ದ್ವಿಚಕ್ರಕ್ಕೆ ಪಾರ್ಕಿಂಗ್ ಶುಲ್ಕ ಇಲ್ಲ ಅಂತ ತಿಳಿಸಿದ್ದಾರೆ. ಆದರೆ ಅವರು ಅಷ್ಟೇ ವಸೂಲಿ ಮಾಡುತ್ತಾರಾ ಇಲ್ಲ ಜಾಸ್ತಿ ವಸೂಲಿ ಮಾಡುತ್ತಿದ್ದಾರ ಅಂತ ಅವರನ್ನು ನೋಡಿಕೊಳ್ಳುವವರು ಯಾರು…!? ನಮಗೆ ಬಂದ ಮಾಹಿತಿ ಪ್ರಕಾರ ಈಗಾಗಲೇ ಕಾರಿಗೆ 50/- ಟಿ.ಟಿ ಗೆ 70/- ಹಾಗು ಬಸ್ಸಿಗೆ 100 ರಿಂದ 150/- ಸಂಗ್ರಹ ಮಾಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವವರು ಯಾರು…!? ಇನ್ನು ಊರಿನವರು ಅಂಗಡಿಯಿಂದ ಏನಾದ್ರು ಕೊಂಡುಕೊಳ್ಳಲು ಕಾರನ್ನು ಸೈಡಿನಲ್ಲಿ ನಿಲ್ಲಿಸಿದರೆ ಸಾಕು ಅಲ್ಲಿಗೆ ಬಂದು ಟಿಕೆಟ್ ಹರಿದು ಆಗಿರುತ್ತದೆ. ನಾನು ಪಾರ್ಕ್ ಮಾಡುವುದಿಲ್ಲ ಒಂದು ಬೀಡ ತಗೊಂಡು ಬರ್ತೆನೆ ಮಾರಯ ಅಂದ್ರೆ.., ನೀವು ಇಲ್ಲಿ ಎಲ್ಲ ನಿಲ್ಲಿಸುವಂತಿಲ್ಲ.. ಇದು ನಮ್ಮ ಜಾಗ ಇಲ್ಲಿ ನಿಲ್ಲಿಸಿದರೆ ದುಡ್ಡು ಕೊಡಲೇಬೇಕು ಅಂತ ದರ್ಪದ ಮಾತು. ಅಲ್ಲ ಮಾರ್ರೆ ದೇವಸ್ಥಾನದವರು ಖಾಲಿ ಇದ್ದ ಜಾಗ ಎಲ್ಲಾ ಇವರಿಗೆ ಮಾರಿದ್ದಾರ ಹೇಗೆ..!? ಅವರು ನಡೆದುಕೊಳ್ಳುವ ರೀತಿ ನೋಡಿದರೆ ಹಾಗೆ ಅನ್ಸುತ್ತೆ.
ಹಾಗೆಂದು ದೇವಸ್ಥಾನದವರು ಪಾರ್ಕಿಂಗ್ ಗೆ ಎಷ್ಟು ನಿಗದಿ ಮಾಡಿದ್ದಾರೆ ಎಂಬ ಮಾಹಿತಿ ಭಕ್ತಾದಿಗಳಿಗೆ ಇಲ್ಲ. ಅವರು ಕೇಳಿದಷ್ಟು ಇವರು ಕೊಟ್ಟು ಹೋಗುತ್ತಿದ್ದಾರೆ. ಆದ್ದರಿಂದ ಯಾವ ವಾಹನಕ್ಕೆ ಎಷ್ಟು ಪಾರ್ಕಿಂಗ್ ಶುಲ್ಕ ಎಂದು ಭಕ್ತಾದಿಗಳಿಗೆ ಕಾಣುವಂತೆ ಅಲ್ಲಲ್ಲಿ ದೇವಳದ ವತಿಯಿಂದ ಬೋರ್ಡ್ ಹಾಕಿ ಜೊತೆಗೆ ಹೆಚ್ಚಿನ ದುಡ್ಡಿಗೆ ಬೇಡಿಕೆ ಇಟ್ಟರೆ ಯಾರಿಗೆ ದೂರು ನೀಡಬೇಕು ಅಂತ ಅವರ ದೂರವಾಣಿ ಸಂಖ್ಯೆ ಯನ್ನೂ ಹಾಕಿ. ಫೇ ಪಾರ್ಕಿಂಗ್ ನಲ್ಲಿ ಇರಬೇಕಾದ ಎಲ್ಲಾ ಸವಲತ್ತುಗಳನ್ನು ವ್ಯವಸ್ಥೆ ಮಾಡಲುಸಾಧ್ಯವಾಗದಿದ್ದರೂ ಇದನ್ನಾದರು ಮಾಡಿ ಭಕ್ತಾದಿಗಳಿಗೆ ಚಿಲ್ಲರೆ ಆದ್ರೂ ಉಳಿಸಲು ಸಹಾಯ ಮಾಡಿ. ಜೊತೆಗೆ ಆ ಅಧಿಕಪ್ರಸಂಗಿ ಬಿಲ್ ಕಲೆಕ್ಟರ್ ಗಳು ಊರವರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಹಾಗು ಅವರಿಂದ ಪಾರ್ಕಿಂಗ್ ಚಾರ್ಜ್ ವಸೂಲಿ ಮಾಡದಂತೆ ಸೂಚಿಸಿ.*






