ಪುತ್ತೂರು: ಪಾರ್ಕಿಂಗ್ ಗೂಂಡಾನಿಂದ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ

Pattler News

Bureau Report

ಪುತ್ತೂರಿನ ಪೇ ಪಾರ್ಕಿಂಗ್ ಗೂಂಡಾ ಒಬ್ಬ ಡಾಕ್ಟರ್ ಒಬ್ಬರ ಕ್ಲಿನಿಕ್ ಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರು ಸಿಟಿ ಒಳಗೆ ನಡೆದಿದೆ. ಇನ್ನು ಜಾಸ್ತಿ ದಿನ ಇಲ್ಲ, ಡಾಕ್ಟರ್ ಗೆ, ನರ್ಸ್ ಗಳಿಗೂ ಬೀಳುವ ಸಾಧ್ಯತೆ ಹೆಚ್ಚುತ್ತಿದೆ. ಅಂದರೆ ಜಡ ಹಿಡಿದಿರುವ, ಗಾಢ ನಿದ್ದೆಯಲ್ಲಿರುವ ಒಂದು ಸಮಾಜ ಕ್ಲೈಮ್ಯಾಕ್ಸ್ ಕಡೆ ವೇಗವಾಗಿ ಹೋಗುತ್ತಿದೆ ಎಂದೇ ಅರ್ಥ. ಇವತ್ತು ಕ್ಲಿನಿಕ್ ಗೆ ನುಗ್ಗಿ ಹೊಡೆದಿದ್ದಾರೆ, ನಾಳೆ ಮನೆಗೆ ನುಗ್ಗಿ ಹೊಡೆಯುತ್ತಾರೆ. ಇದು ಗ್ಯಾರಂಟಿ.
ಅಲ್ಲಿ ಪುತ್ತೂರು ಕಲ್ಲಾರೆಯ ಡಾಕ್ಟರ್ ರಾಮ್ ಮೋಹನ್ ಅವರ ENT clinic ಯಾವಾಗಲೂ ಪೇಶೆಂಟ್ ಗಳಿಂದ ಜಾಮ್ ಟೈಟ್. ನರಮಾನಿಗೆ ತರೆಬೇನೆ, ಕೆಕ್ಕಿಲ್ ಬೇನೆ, ಕಣ್ಣು ಬೇನೆ,ಕೂಲಿ ಬೇನೆ, ಬಂಜಿ ಬೇನೆ, ಕೆಬಿ ಬೇನೆ, ಸೊಂಟ ಸೋಬಾನೆ, ಪೀಂಕಾನ್ ಬೇನೆ, ಸಾಮಾನ್ ಬೇನೆ ಇದ್ದದ್ದೇ. ನರಮಾನಿಗೆ ಮಂಡೆ ಮಾರಿ ಒಮ್ಮೆಲೇ ನಿಲ್ಲೋದು. ಹಾಗೆ ಪುತ್ತೂರಿನ ರಾಮ್ ಮೋಹನ್ ಡಾಕ್ಟರರು ಹತ್ತೂರಿಗೆ ಫೇಮಸ್ ಡಾಕ್ಟರ್. ಹಾಗಾಗಿ ಡಾಕ್ಟರ್ ಕ್ಲಿನಿಕ್ ನಲ್ಲಿ ಬೆಳಿಗ್ಗೆ ಆರು ಗಂಟೆಗೇ ಜಾತ್ರೆ. ಎಲ್ಲಾ ಕ್ಲಿನಿಕ್ ಗಳಲ್ಲಿ ಇರುವಂತೆ ಇಲ್ಲೂ ಡಾಕ್ಟರರನ್ನು ಮೀಟ್ ಮಾಡಲು ಟೋಕನ್ ವ್ಯವಸ್ಥೆ ಇದೆ. ಹಕ್ಕಿ ಏಳುವ ಮೊದಲೇ ಹೋಗಿ ಟೋಕನ್ ತಗೊಂಡ್ರೆ ರಾಮ್ ಮೋಹನ್ ಸಿಗುತ್ತಾರೆ. ಇಲ್ಲದಿದ್ದರೆ ಇಲ್ಲ ಅಥವಾ ನಾಳೆಗೆ. ಈ ಸಿಸ್ಟಂ ಅಬ್ದುಲ್ ನಾರಾಯಣ ಡಿಸೋಜಾರಿಗೆ ಅನ್ವಯ. ಈ ವಿಷಯದಲ್ಲಿ ರಾಜೀ ಇಲ್ಲ. ಯಾಕೆಂದರೆ ಕೆಬಿ ಬೇನೆ ಎಲ್ಲರಿಗೂ ಒಂದೇ.


ಇದೀಗ ಓ ಮೊನ್ನೆ ನವೆಂಬ್ರ 29 ನೇ ತಾರೀಖು ಬೆಳಿಗ್ಗೆ ಕ್ಲಿನಿಕಿಗೆ ಆಗಮಿಸಿದ ಲೋಕಲ್ ಪೇ ಪಾರ್ಕಿಂಗ್ ರೌಡಿಯೊಬ್ಬ ತನ್ನ ಅಪ್ಪನನ್ನು ಟೋಕನ್ ಸಿಸ್ಟಂ ಇಲ್ಲದೆ ಡಾಕ್ಟರ್ ಬಳಿ ಕಳಿಸಬೇಕೆಂದು ಕ್ಲಿನಿಕ್ ಸಿಬ್ಬಂದಿಗೆ ಒತ್ತಾಯಿಸಿದ್ದಾನೆ ಮತ್ತು ಅನಾಗರಿಕ ರೀತಿಯಲ್ಲಿ ವರ್ತಿಸಿದ್ದಾನೆ. ಇದಕ್ಕೆ ಸೊಪ್ಪು ಹಾಕದ ಕ್ಲಿನಿಕ್ ಸಿಬ್ಬಂದಿಗೆ ತಾರಮಾರ ಹೊಡೆದು ಮಾರಾಮಾರಿ ನಡೆಸಿದ್ದಾನೆ. ಕ್ಲಿನಿಕ್ ಪೀಠೋಪಕರಣಗಳನ್ನು ಮುರಿದು ಗೂಳಿಯಂತೆ, ಹುಚ್ಚು ನಾಯಿಯಂತೆ ವರ್ತಿಸಿದ್ದಾನೆ.. ಮಹಿಷಾಸುರನಂತೆ ಆರ್ಭಟಿಸಿ, ಭಸ್ಮಾಸುರ ಸ್ಟೈಲಲ್ಲಿ ಅಬ್ಬರಿಸಿ ಬೊಬ್ಬೆ ಹೊಡೆದಿದ್ದಾನೆ.ಟೋಕನ್ ಪಡೆದು ಕುಂತಿದ್ದ ಇತರೇ ರೋಗಿಗಳೂ ಚಳಿ ಹಿಡಿಸಿದ್ದಾನೆ. ಬೊಬ್ಬೆ ಕೇಳಿ ಹೊರ ಬಂದ ಡಾಕ್ಟರ್ ರೌಡಿಯನ್ನು ಕ್ಲಿನಿಕಿನಿಂದ ಹೊರ ಹಾಕಿದ್ದಾರೆ.


ಹಾಗೆಂದು ಈ ದಷ್ಟ ಪುಷ್ಟ ದುಷ್ಟ ರೌಡಿಯ ಸಿಂಗಲ್ ಸಿಂಗಲ್ ರೌಡಿಸಂ ಬಗ್ಗೆ ಅನೇಕ ದೂರುಗಳಿದ್ದರೂ ನರ ಸತ್ತ ನಗರ ಸಭೆ ಅವನ ಕೈಯಿಂದ ಪಾರ್ಕಿಂಗ್ ಬಿಲ್ ಪುಸ್ತಕ ಎಳೆದುಕೊಂಡು ಅವನನ್ನು ಇನ್ನೂ ಮನೆಗೆ ಕಳುಹಿಸದೆ ನಾಗರೀಕ ಜನಗಳ ಮೇಲೆ ಅವನು ನಡೆಸುತ್ತಿರುವ ರೌಡಿಸಂ ನೋಡುತ್ತಾ ಬಾಯಿ ಆಕಳಿಸುತ್ತಾ ಕುಂತಿದೆ. ಅಲ್ಲಿ ರೌಡಿಸಂ ನಡೆಯುತ್ತಿದ್ದರೂ, ವಾಹನ ಪಾರ್ಕಿಂಗ್ ಮಾಡುವ ಅಮಾಯಕರ ಮೇಲೆ ದಬ್ಬಾಳಿಕೆ ನಡೆದರೂ ಈ ಬಗ್ಗೆ ಪುತ್ತೂರು ಪೋಲಿಸರು ಏನಾದರೂ ಗುರ್ರ್ ಅಂದರೂ ಕೂಡಲೇ ಇವನ ಅಪ್ಪಂದಿರು ಠಾಣೆಗೆ ಹಾಜರಾಗಿ ಇವನ ಪರ ವಕಾಲತ್ತು ವಹಿಸಿ ಬಿಡುತ್ತಾರೆ. ವ್ಯವಸ್ಥೆ ಇವನನ್ನು ಇಷ್ಟು ದಿನ ಹಾಗೆ ಗಾಳಿಗೆ ಬದುಕಿಕೊಳ್ಳಲು ಬಿಟ್ಟಿದ್ದಕ್ಕೆ ಇದೀಗ ಅವನು ಉಗ್ರರೂಪ ತೋರಿಸಿದ್ದಾನೆ. ಇದು ಹೀಗೆ ಮುಂದುವರೆದರೆ ಮುಂದೆ ಡಾಕ್ಟರ್ ಗಳನ್ನೇ ಅಡ್ಮಿಟ್ ಮಾಡುವ ದಿನವೂ ಬಂದು ಬಿಡುತ್ತದೆ ಮತ್ತು ಬರಲಿದೆ. ಗಾಂಧಿ ಕಟ್ಟೆಯ ಎದುರು ಇಪ್ಪತ್ತೈದು ಬಸ್ಕಿ ಮತ್ತು ಚಡ್ಡಿಯಲ್ಲಿ ದರ್ಬೆ ತನಕ ಒಂದು ಮೆರವಣಿಗೆ ಮಾಡಿದರೆ ಎಲ್ಲರದ್ದೂ, ಎಲ್ಲಾ ಸರಿ ಹೋಗುತ್ತದೆ. ಪುತ್ತೂರು ಟೌನ್ ಪೋಲಿಸರು ಅಷ್ಟು ಮಾಡಬೇಕು.
ಇದೀಗ ಈ ಪಾರ್ಕಿಂಗ್ ಗೂಂಡಾ ಮೇಲೆ ಡಾಕ್ಟರ್ ರಾಮ್ ಮೋಹನ್ ಕಂಪ್ಲೈಂಟ್ ಕೊಟ್ಟಿದ್ದು ಪುತ್ತೂರು ಟೌನ್ ಪೋಲಿಸರು ರೌಡಿ ಮೇಲೆ ಕಲಂ 329(3), 324(4), 115(2), 352,351(2) ಮತ್ತು ಕಲಂ 3(a) ಮತ್ತು ಅ.ಕ್ರ116/2025 ರಂತೆ ಕೇಸು ದಾಖಲಿಸಿ ರೌಡಿಯ ಬಾಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಯುವರ್ ಆನರ್,
ಅನಾಗರೀಕರ ಮೆರವಣಿಗೆ ಹೊರಟಿದೆ. ನಾಗರೀಕರು ಬದುಕಿದರೆ ಸಾಕೆಂದು ತಲೆ ಮರೆಸಿಕೊಳ್ಳುತ್ತಿದ್ದಾರೆ. ಅವ್ಯವಸ್ಥೆಯ ವ್ಯವಸ್ಥೆಯ ಪ್ರತಿ ವಿಭಾಗದಲ್ಲೂ ಅನಾಗರೀಕರ ರುದ್ರ ತಾಂಡವ ಶುರುವಾಗಿದ್ದು ನಾಗರೀಕರ ಭರತನಾಟ್ಯ, ಕೂಚುಪುಡಿ ಅರಣ್ಯ ರೋದನವಾಗುತ್ತಿದೆ. ಅಬ್ಬರದ ಆರ್ಭಟ ದ ಮುಂದೆ ನೈಸ್ ವಾಯ್ಸ್ ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅನಾಗರೀಕರ ಆರ್ಭಟಗಳಿಂದ ಶಬ್ದ ಮಾಲಿನ್ಯ ಆಗುತ್ತಿದ್ದರೂ ಪ್ರತಿರೋಧಿಸದೆ ನಾಗರೀಕ ಕಿವಿಗೆ ಪರ್ತಿ ಇಟ್ಟು ಕುಂತಿದ್ದಾನೆ. ಸುಳ್ಳನ್ನು ಸುಳ್ಳು ಎಂದು ಸತ್ಯ ಹೇಳಿದರೂ ಸುಳ್ಳಿನ BPಯಲ್ಲಿ ವೇರಿಯೇಷನ್ ಆಗುತ್ತದೆ. ರಕ್ಕಸರು ಜಾಸ್ತಿ ಆಗುತ್ತಿದ್ದಾರೆ, ಮನುಷ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಸಮಾಜ ಮಂಥನದಲ್ಲಿ ಇದೇ ರಕ್ಕಸರ ಕೈಗೆ ಅಮೃತ ಸಿಕ್ಕಿದರೆ ಕತೆ ಮುಗಿಯಿತು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top