ಬೆಳ್ತಂಗಡಿ ತಾಲೂಕಿನಲ್ಲಿ ಉಂಟಾಗಿರುವ 9/11 ಸಮಸ್ಯೆಗಳು ಮಾನವ ನಿರ್ಮಿತ ಸಮಸ್ಯೆಗಳಾಗಿದ್ದು, ಅದನ್ನು ತಾಂತ್ರಿಕ ಸಮಸ್ಯೆಗಳ ಅಡಿಯಲ್ಲಿ ತರುತ್ತಿರುವುದು ತಲೆ ನೋವಿಗೆ ಕಾಲಿಗೆ ವಿಕ್ಸ್ ಹಚ್ಚಿದಂತೆ ಎಂಬ ಕೂಗು ಎದ್ದಿದೆ. ಈ ಲಟಾರಿ ಸಮಸ್ಯೆಗಳನ್ನೆಲ್ಲ ಅಧಿಕಾರಿ ವರ್ಗದವರು ಕುಂತು ಮುಗಿಸ ಬೇಕೇ ಹೊರತು ಸಮಸ್ಯೆ ಹೊತ್ಕೊಂಡು ಗುಂಡೂರಾಯರ ತನಕ, ಜಿಲ್ಲಾ ಕಲೆಕ್ಟರನ ತನಕ ಹೋಗುವ ಜರೂರತ್ತು ಏನಿತ್ತು ಎಂಬ ಪ್ರಶ್ನೆ ಎದ್ದಿದೆ. 9/11 ಕಾನೂನು ಸರಿ ಇದೆ. ಟೆಕ್ನಿಕಲೀ ಕೂಡ ನೋ ಪ್ರಾಬ್ಲಂ. ಕೆಲವು ಸೋಮಾರಿ, ಮೈಗಳ್ಳ, ಆಲಸೀ ನೌಕರರ ಕೃಪೆಯಿಂದಾಗಿ ಬೆಳ್ತಂಗಡಿ ಜನ ಹೈರಾಣಾಗಿದ್ದಾರೆ ಅಷ್ಟೇ.

ಹಾಗೆಂದು ಓ ಮೊನ್ನೆಯಿಂದ ಬೆಳ್ತಂಗಡಿ ತುಂಬಾ ಮನೆಮಾತಾಗಿರುವ 9/11 ಸಮಸ್ಯೆ ಒಂದು ಸಮಸ್ಯೆಯೇ ಅಲ್ಲ. ಸರ್ಕಾರ ಮಾಡಿರುವ ಕಾನೂನು ಸರಿಯಾಗಿಯೇ ಇದೆ. ಈ ಕಾನೂನಿನಲ್ಲಿ ತಾಂತ್ರಿಕ ದೋಷಗಳೂ ಇಲ್ಲ. ಅಲ್ಲದೆ ಬೆಳ್ತಂಗಡಿಯಂತಹ ದೊಡ್ಡ ತಾಲೂಕಿಗೆ ಬೂಡಾ ಇಲ್ಲದೆ ಉಂಟಾಗಿರುವ ಸಮಸ್ಯೆಯೂ ಇದಲ್ಲ. ಆದರೂ ಈ ಒಂದು ಸಮಸ್ಯೆ ಇಷ್ಟು ದೊಡ್ಡದಾಗಿ ಬೆಳೆದು ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಅದೇ ಸೋಮಾರಿ, ಮೈಗಳ್ಳ ಅಧಿಕಾರಿಗಳು. ಸಮಸ್ಯೆಗಳನ್ನು ಜನರ ಮೇಲೆ ಹಾಕಿ, ಅವರನ್ನು ಸಮಸ್ಯೆಗಳಲ್ಲಿ ಸುತ್ತಿ ಅಲೆದಾಡಿಸುವುದು ಇಂಥ ಮೈಗಳ್ಳ ಅಧಿಕಾರಿಗಳ ಹುಟ್ಟು ಗುಣ. ಬೆಳ್ತಂಗಡಿ ತಾಲೂಕಿನ ಒಬ್ಬ ಪ್ರಜೆ ತನ್ನ 9/11 ಕೆಲಸಗಳಿಗೆ ಎಲ್ಲಾ ದಾಖಲೆಗಳನ್ನು ಇಟ್ಟು ಸ್ಥಳೀಯ ಪಂಚಾಯಿತಿಗೆ ಒಮ್ಮೆ ಅರ್ಜಿ ಕೊಟ್ಟ ಮೇಲೆ ಅವನ ಕೆಲಸ ಮುಗಿಯಿತು. ಅವನಿಗೆ ಹಿಂಬರಹ ಕೊಟ್ಟು ಅವನನ್ನು ಮನೆಗೆ ಕಳಿಸಲೇ ಬೇಕು. ಪಂಚಾಯ್ತಿ ಪಿಡಿಒ ಅರ್ಜಿ ಸ್ವೀಕರಿಸುವಾಗಲೇ ಒಂದು 9/11 ಗೆ ಏನೆಲ್ಲಾ ಬೇಕು ಎಂಬುದನ್ನು ಹೇಳಿ, ಅದನ್ನು ತರಿಸಿಕೊಂಡೇ ಫೈಲು ತಗೊಂಡು ಹಿಂಬರಹ ಕೊಡಬೇಕು. 9/11ಗೆ ಪಂಚಾಯ್ತಿಯಲ್ಲಿ ಒಮ್ಮೆ ಅರ್ಜಿ ಸ್ವೀಕರಿಸಿದ ಮೇಲೆ ಅದು ಕರೆಕ್ಟಾಗಿಯೇ ಇರಬೇಕು. ಅರ್ಜಿ ಸ್ವೀಕರಿಸುವ ಪಿಡಿಒ ಹೆಬ್ಬೆಟ್ಟು ಮಂಜ ಆಗಿರದೆ ಕಣ್ಣು ಬಿಟ್ಟು, ಭೂತ ಕನ್ನಡಿ ಇಟ್ಟು ದಾಖಲೆ ಪರಿಶೀಲಿಸಿಯೇ ಫೈಲ್ ಸ್ವೀಕರಿಸಿ ಹಿಂಬರಹ ಕೊಡಬೇಕು. ಒಮ್ಮೆ ಒಂದು ಅರ್ಜಿ ಫೈಲ್ ಪಂಚಾಯ್ತಿ ಸ್ವೀಕರಿಸಿದ ಮೇಲೆ ಅರ್ಜಿದಾರರ ಕೆಲಸ ಮುಗಿಯಿತು. ನಂತರ ಏನಿದ್ದರೂ ಪಂಚಾಯ್ತಿ ಕೆಲಸ. ಆದರೆ ಬೆಳ್ತಂಗಡಿ ಕತೆ ಏನಾಗಿದೆ ಅಂದರೆ ಅಲ್ಲಿ ಒಮ್ಮೆ ಅರ್ಜಿ ಪಂಚಾಯ್ತಿಗೆ ಕೊಟ್ಟರೆ ಆ ಸೋಮಾರಿಗಳು ಸರಿಕಟ್ಟ್ ಫೈಲ್ ನೋಡದೆ ಅಪೂರ್ಣ ಫೈಲನ್ನು ಅರ್ಜಿದಾರರ ಕೈಯಲ್ಲಿ ವಾಪಾಸ್ ಕೊಟ್ಟು ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಟೋಕನ್ ತಗೊಂಡು ಮೂಡಾ ಅಧಿಕಾರಿಯ ದರ್ಶನಕ್ಕೆ ನಿಲ್ಲಿಸಿ ಬಿಡುತ್ತಾರೆ.
ಹಾಗೆಂದು ಈ 9/11 ಅರ್ಜಿಗೂ ಒಂದು ಫಾರಂ ಇದೆ. ಫಾರಂ ಭರ್ತಿ ಮಾಡಿಕೊಂಡೇ ಪಂಚಾಯ್ತಿ ಅರ್ಜಿ ತಗೊಳೋದು. ಒಮ್ಮೆ ಭರ್ತಿ ಆದ ಫಾರಂ ವಿದ್ 9/11 ಡಾಕ್ಯುಮೆಂಟ್ಸ್ ಪಂಚಾಯ್ತಿ ತಗೊಂಡ ಮೇಲೆ ಅದು ಪಂಚಾಯ್ತಿ ದಾಖಲೆ ಆಗಿ ಹೋಯ್ತು. ಈ ಪಂಚಾಯ್ತಿ ದಾಖಲೆಗಳನ್ನು ವಾಪಾಸ್ ಅರ್ಜಿದಾರರ ಕೈಯಲ್ಲಿ ಕೊಡೋದು ಕಾನೂನು ಪ್ರಕಾರ ತಪ್ಪು. ಈ ತಪ್ಪಿಗೆ ಪಿಡಿಒ ಹೊಣೆಗಾರನಾಗುತ್ತಾನೆ. ಇಷ್ಟಕ್ಕೂ ಅಪೂರ್ಣ ಫೈಲುಗಳನ್ನು ಜನರ ಕೈಯಲ್ಲಿ ಯಾಕೆ ಕೊಟ್ಟು ಕಳಿಸುತ್ತಾರೆಂದರೆ, ಹಿಂಬರಹ ಯಾಕೆ ಕೊಡಲ್ಲ ಅಂದರೆ ಅದೇ ಅಧಿಕಾರಿಗಳ ಸೋಮಾರಿತನ, ಮೈಗಳ್ಳತನ, ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆ ಮತ್ತು ಜನಸಾಮಾನ್ಯರನ್ನು ಅಲೆದಾಡಿಸಿ ವಿಕೃತ ಖುಷಿ ಪಡುವ ವಿಕೃತ ಅಹಂಕಾರವೇ ಕಾರಣ. ಒಂದು ಸರಿ ಇಲ್ಲದ ಡಾಕ್ಯುಮೆಂಟನ್ನು ಪಿಡಿಒ ಯಾಕೆ ಬ್ಯಾಂಕ್ ವಾಲಗದಲ್ಲಿ ಬೆಳ್ತಂಗಡಿಗೆ ಕಳಿಸಬೇಕು? ಆಯ್ತು ಬಂದ ಡಾಕ್ಯುಮೆಂಟಿಗೆ ಅದು ಇದು, ಸಾವು ಸುಡ್ಗಡ್ ಬೇಕಿದ್ರೆ ಇಲ್ಲಿ ಮೂಡಿ ಅಧಿಕಾರಿ ದರ್ಶನದಲ್ಲಿ ಜನರಿಗೆ ಹೇಳೋದಲ್ಲ, ಅದನ್ನು ಪಿಡಿಒಗೆ ಹೇಳಬೇಕು. ಯಾಕೆಂದರೆ ಅದು ಪಂಚಾಯ್ತಿ ಫೈಲ್. ಒಂದು ಸರ್ಕಾರಿ ಫೈಲಿಗೆ ಜನ ಯಾಕೆ ರಜನಿಕಾಂತನ ಮ್ಯಾಟಿನಿಗೆ ನಿಂತಂತೆ ಕ್ಯೂ ನಿಲ್ಲಬೇಕು?

ಆಯ್ತು ಸಾಮಿ, ದರ್ಶನ, ಅಲೆದಾಟ, ಅಗೆಲು ಸೇವೆ ಎಲ್ಲಾ ಮುಗಿದು ಕೇವಲ ಸೈಟ್ ಪರಿಶೀಲನೆಯ ಡೇಟ್ ಗೆ ಅರ್ಜಿದಾರ ವಾಪಾಸ್ ಟೋಕನ್ ಗೆ ಕ್ಯೂ ನಿಲ್ಲಬೇಕು. ಮ್ಯಾಮ್ ಏಪ ಸ್ಪಾಟಿಗೆ ಬರ್ಪೆರ್ ಅಂತ ಪಿಡಿಒಗೆ ಒಂದು ಕಾಲ್ ಮಾಡಿದ್ರೆ ಸಾಕಲ್ವಾ? ಇನ್ನು ಅನುಮೋದನೆ ಆದ ಫೈಲ್ ಸಿಗಲು ಕೂಡ ರಜನೀಕಾಂತನ ಕ್ಯೂ. ಅದನ್ನು ಪಿಡಿಒ ಕೈಯಲ್ಲಿ ಕೊಟ್ಟರೆ ಆಗಲ್ವಾ? ಹೇಗೂ ಪಿಡಿಒ ವಾರಕ್ಕೊಮ್ಮೆ ಬೆಳ್ತಂಗಡಿ ಸಂತೆಗೆ ಬಂದೇ ಬರುತ್ತಾನೆ. ಹಾಗೆ ಬಂದವನು ಹೀಗೆ ತಾಲೂಕು ಪಂಚಾಯಿತಿ ಕಡೆ ಪಾದಬೆಳೆಸಿ ತನ್ನ ಪಂಚಾಯ್ತಿ ವ್ಯಾಪ್ತಿಯ ಫೈಲ್ ಗಳನ್ನು ಹೊತ್ಕೊಂಡು ಹೋಗಲು ಆಗಲ್ವಾ? ಈ ಎಲ್ಲಾ ಕೆಲಸಗಳು ಅಧಿಕಾರಿ ಮಟ್ಟದಲ್ಲಿ ಆಗಬೇಕೇ ಹೊರತು ಈ ಸಮಸ್ಯೆಯನ್ನು ಗುಂಡೂರಾಯರ ಮಗನ ಬಳಿ ಹೇಳಿ ಏನೂ ಸುಖವಿಲ್ಲ. ರಕ್ಷಿತ್ ಶಿವರಾಂ ಈ ಒಂದು ಲಟಾರಿ ಪ್ರಾಬ್ಲಮ್ಮನ್ನು ಭವಾನಿ ಕೈಯಲ್ಲಿ ಹೇಳಿಸಿ ಸಾಲ್ವ್ ಮಾಡಿಸಲೇ ಬೇಕು. ಭವಾನಿ ಕೂಡ ತನ್ನ ಇಲಾಖೆಯ ಪಿಡಿಒಗಳಿಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟರೆ ಮಾತ್ರ ಜನರ ಸಮಸ್ಯೆ ಮುಗಿಯ ಬಹುದು. ಇದನ್ನೊಂದು ಮುಗಿಸಲು ಆನೆ, ಕುದುರೆ ಯಾಕೆ?