
ಪೌರಾಡಳಿತ ಇಲಾಖೆಗೆ ಸಂಬಂಧಿಸಿದ ಬೆಳ್ತಂಗಡಿ ಜನರ 9/11 ಸಮಸ್ಯೆ ಬಗ್ಗೆ ಜನ, ಪತ್ರಿಕೆಗಳು ಬೊಬ್ಬೆ ಹೊಡೆಯಲು ಶುರುಮಾಡಿದರೆ ಪಂಚಾಯತ್ ರಾಜ್ ಇಲಾಖೆಯ ಸಾಹೇಬ್ರು ರಂಗಸ್ಥಳಕ್ಕೆ ಎಂಟ್ರಿ ಹಾಕಿ ಪೌರಾಡಳಿತ ನೌಕರರಿಗೆ ಶಹಬ್ಬಾಸ್ ಗಿರಿ ಕೊಟ್ಟ ವಿಲಕ್ಷಣ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. “ಅಂಬಿಗ್ ಬಜಂಟ್ ಸಾಕ್ಷಿ” ಯಾಕೆ?
ಹಾಗೆಂದು ಓ ಮೊನ್ನೆಯಿಂದ ಬೆಳ್ತಂಗಡಿ ತಾಲೂಕಿನ 9/11 ಸಮಸ್ಯೆ ಸದ್ದು ಮಾಡುತ್ತಿದೆ. ರಷ್ಯಾದಿಂದ ಸ್ವಲ್ಪ ಸಣ್ಣದು ಮತ್ತು ಚೀನಾಕ್ಕಿಂತ ಸ್ವಲ್ಪ ದೊಡ್ಡದಾಗಿರುವ ಬೆಳ್ತಂಗಡಿ ತಾಲೂಕಿಗೆ ಒಂದು ಬೂಡಾಕ್ಕೂ ಗತಿಕೇಟ್ ಇದ್ದ ಕಾರಣ ಜನರು 9/11 ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದಾರೆ. ಬೆಳ್ತಂಗಡಿಯಂತಹ ಓಬಿರಾಯನ ಕಾಲದ ತಾಲೂಕನ್ನು ನಿನ್ನೆ ಮೊನ್ನೆ ಹುಟ್ಟಿದ ಬೆದ್ರ ತಾಲೂಕಿನ ಮೂಡಾಕ್ಕೆ ಲಿಂಕ್ ಕೊಟ್ಟಿದ್ದು, ಆ ಬೆದ್ರದ ಮೂಡಾದ ಮೂಡಿ ಅಧಿಕಾರಿ ವಾರಕ್ಕೊಮ್ಮೆ ಬೆಳ್ತಂಗಡಿಯಲ್ಲಿ ದರ್ಶನ ಕೊಡೋದು, ಅದಕ್ಕೆ ಆಸ್ಪತ್ರೆಯ ಹಾಗೆ ಟೋಕನ್ ಸಿಸ್ಟಂ ಮಾಡಿದ್ದು, ಆ ಮೂಡಾದ ಅಧಿಕಾರಿ ಇಲ್ಲಿ ಕೆಲಸ ಮಾಡಲು ಮೂಡಿಲ್ಲದೆ ಅಮಾಯಕ ಜನರನ್ನು ಕುಣಿಸಿ ಕುಣಿಸಿ ಹೈರಾಣಾಗಿಸಿದ್ದು, ಫೈಲ್ ಕ್ಲೀಯರ್ ಮಾಡದ್ದು, ಹಿಂಬರಹ ಕೊಡದ್ದು, ಬ್ರಿಟಿಷ್ ಮರ್ಜಿ ಮಾಡಿದ್ದು ಇತ್ಯಾದಿ ಕತೆ.

ಹಾಗಂತ ಈ ಮೂಡಾದ ಮೂಡಿ ಅಧಿಕಾರಿ ಬಗ್ಗೆ, ಅವೈಜ್ಞಾನಿಕ ಸಿಸ್ಟಂ ಬಗ್ಗೆ ಪತ್ರಿಕೆಯಲ್ಲಿ, ಚಾನೆಲ್ ನಲ್ಲಿ, ವೆಬ್ ಸೈಟ್ ಗಳಲ್ಲಿ ವರದಿಗಳು ಬಿತ್ತರವಾದರೆ ಪಂಚಾಯತ್ ರಾಜ್ ಇಲಾಖೆಯ ಸಾಹೇಬ್ರು ಒಬ್ಬರು ದಢಕ್ಕೆಂದು ಎದ್ದು ಕುಂತು ಪೌರಾಡಳಿತ ಇಲಾಖೆಯ ನೌಕರರನ್ನು ಸಮರ್ಥಿಸಿಕೊಂಡಿದ್ದಾರೆ. ಬೆಳ್ತಂಗಡಿಯ ತಾಲೂಕು ಪಂಚಾಯಿತಿ ಸಿಇಒ ಸಾಹೇಬ್ರು ಪತ್ರಿಕಾ ಹೇಳಿಕೆ ಕೊಟ್ಟು “ಅಂಚ ದಾಲ ಇಜ್ಜಿ”ಎಂದು ವಿವಾದದಲ್ಲಿ ಮೂಗು ತೂರಿಸಿ ಮೂಡಾ ಅಧಿಕಾರಿಯ ರಕ್ಷಣೆಗೆ ನಿಂತಿದ್ದು ಯಾಕೆ ಎಂಬ ಸಂಶಯ ಎದ್ದಿದೆ. ಸಾಹೇಬ್ರ ಪ್ರಕಾರ ಮೂಡಾದಲ್ಲಿ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇಲ್ಲಂತೆ. ಹೆಚ್ಚು ಕಡತಗಳು ಅಂದ್ರೆ ಎಷ್ಟು? ಲೆಕ್ಕ ಮಾಡಿದ್ದು ಯಾರು, ಸಾಹೇಬ್ರಿಗೆ ಲೆಕ್ಕ ಕೊಟ್ಟಿದ್ದು ಯಾರು? ಹೆಚ್ಚು ಕಡತಗಳು ಅಂದ್ರೆ ನೂರಾರು, ಸಾವಿರಾರು ಅಂತ ಅರ್ಥನಾ? ಅಲ್ಲಾ ಮಾರಾಯ್ರೆ ಜನ ಮೂಡಾ ಕಚೇರಿಯಲ್ಲಿ ಪತ್ರಿಕೆಗಳ ಮುಂದೆ ಧಿರೀಲ್ಲನೆ ಊರೇ ಮುಳುಗಿದಂತೆ ಅತ್ತಿದ್ದಾರೆ, ಸಮಸ್ಯೆಯ ವಿರಾಟ ರೂಪದ ದರ್ಶನ ಮಾಡಿಸಿದ್ದಾರೆ, ಕಿರುಕುಳ, ಹಿಂಸೆಯ ಬಗ್ಗೆ ಮನವರಿಕೆ ಮಾಡಿದ್ದಾರೆ, ರಜನೀಕಾಂತನ ಮ್ಯಾಟಿನಿ ಶೋದ ಕ್ಯೂ ಸಿಸ್ಟಂ ಬಗ್ಗೆ ಗಮನ ಸೆಳೆದಿದ್ದಾರೆ. ಆದರೂ ಸಾಹೇಬ್ರು ಹೆಚ್ಚು ಕಡತಗಳು ಬಾಕಿ ಇಲ್ಲ ಅಂತ ಹೇಳುತ್ತಿದ್ದಾರೆ. ಸಾಹೇಬ್ರೆ, ಒಂದು ಕಡತ ಬಾಕಿ ಆದರೂ ಅದು ಬಾಕಿಯೇ. ಒಬ್ಬ ಜನ ಸಾಮಾನ್ಯನಿಗೆ ಸಮಸ್ಯೆ ಆದರೂ ಅದು ದೊಡ್ಡ ಸಮಸ್ಯೆಯೇ. ಅದಕ್ಕೆ ಸುಮ್ಮನೆ ಕೂರುವ ಹಾಗಿಲ್ಲ, ನೆಗ್ಲೆಕ್ಟ್ ಮಾಡುವ ಹಾಗಿಲ್ಲ.

ಮುಂದುವರೆದು ಸಾಹೇಬ್ರು, ಮೂಡುಬಿದಿರೆಯ ಮೂಡಾ ಇಂಜಿನಿಯರ್ ಒಬ್ಬರನ್ನು ನೇಮಿಸಲಾಗಿದೆ, ಅವರು ಗುರುವಾರ ಬೆಳ್ತಂಗಡಿಯಲ್ಲಿ ಹಾಜರಿರುತ್ತಾರೆ, ಶನಿವಾರ ಸೈಟ್ ವಿಸಿಟ್ ಮಾಡುತ್ತಾರೆ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಪೌರಾಡಳಿತ ಇಲಾಖೆಯ ಮೂಡಾ ಅಧಿಕಾರಿಯ ಬಗ್ಗೆ ಸ್ಟೇಟ್ ಮೆಂಟ್ ಕೊಡಲು ಪಂಚಾಯತ್ ರಾಜ್ ಇಲಾಖೆಯ ಸಾಹೇಬ್ರು ಯಾರು? ಗುರುವಾರ ಹಾಜರಿರುತ್ತಾರೆ ಸರಿ, ಆ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂದು ಯಾರಾದರೂ ಇಣುಕಿ ನೋಡಿದವರು ಇದ್ದಾರಾ? ಗುರುವಾರದ ರಾಯರ ದರ್ಶನ ಓ.ಕೆ. ಆದರೆ ಶನಿವಾರದ ಸೈಟ್ ವಿಸಿಟ್? ಶನಿವಾರವೇ ಸೈಟ್ ವಿಸಿಟ್ ಯಾಕೆ ಅಂತ ಕೇಳಿದರೆ ಮೂಡಾ ಅಧಿಕಾರಿಯ ಮನೆ ಬೆಳ್ತಂಗಡಿ ಆಸುಪಾಸಿನಲ್ಲಿಯೇ ಇರುವ ಕಾರಣ ಶನಿವಾರದ ಸೈಟ್ ವಿಸಿಟ್ ನೆಪದಲ್ಲಿ ಆದಷ್ಟು ಬೇಗ ಮಳೆ ಬರುವ ಮೊದಲೇ ಮನೆ ಸೇರಿಕೊಳ್ಳುವ ಮಾಸ್ಟರ್ ಪ್ಲಾನ್ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು ಅರ್ಜಿದಾರರ ದಾಖಲೆ ಸರಿ ಇದ್ದಲ್ಲಿ ಎರಡು ದರ್ಶನದಲ್ಲೇ ಕಡತ ವಿಲೇವಾರಿ ಮಾಡಲಾಗುವುದು ಎಂದು ಸಾಹೇಬ್ರು ಹೇಳಿದ್ದಾರೆ. ಹೌದು ಮಾರಾಯ್ರೆ, ದಾಖಲೆ ಸರಿ ಮಾಡಬೇಕಾದ್ದು ಯಾರು? ಒಂದು 9/11ಫೈಲ್ ಗೆ ಏನೆಲ್ಲಾ ದಾಖಲೆಗಳು ಬೇಕು ಎಂಬುದರ ಬಗ್ಗೆ ಪಂಚಾಯ್ತಿ ಮಟ್ಟದಲ್ಲೇ ಲಿಸ್ಟ್ ಕೊಟ್ಟರೆ ಬಡಪಾಯಿ ಜನ ಅದನ್ನು ರೆಡಿ ಮಾಡಿ ಕೊಟ್ಟೇ ಕೊಡುತ್ತಾರೆ. ಅದು ಬಿಟ್ಟು ಪಂಚಾಯ್ತಿಗೆ ವರ್ಷಗಟ್ಟಲೆ ಅಲೆದಾಡಿ, ನಂತರ ಮೂಡಾಕ್ಕೆ ಬಂದರೆ ಇಲ್ಲಿ ಮ್ಯಾಡಂ ಕಿರುಕುಳ. ಹಿಂಬರಹ ಕೊಡಲ್ಲ, ಫೈಲ್ ಕ್ಲೀಯರೆನ್ಸ್ ಇಲ್ಲ, ಪಂಚಾಯ್ತಿಗೆ ಹೋಗಿ ಎಂಬ ಉಡಾಫೆ ಉತ್ತರ. ತಾಲೂಕು ಪಂಚಾಯತ್ ಸಾಹೇಬ್ರು ತಮ್ಮ ಇಲಾಖೆಗೆ ಸಂಬಂಧಿಸಿದ ಪಂಚಾಯ್ತಿ ಲೆವೆಲ್ ನಲ್ಲಿ ಪೀಡಿಸುವ ಪಿಡಿಒಗಳ ಬಗ್ಗೆ ಮಾತಾಡಲಿ, ಅದು ಬಿಟ್ಟು ಬೇರೆ ಇಲಾಖೆಗಳ ಬಗ್ಗೆ ಸಮರ್ಥನೆ ಕೊಡುವುದು ನಿಲ್ಲಿಸಿದರೆ ಆರೋಗ್ಯಕ್ಕೆ ಉತ್ತಿಮ.
ಇನ್ನು ಮೂಡಾ ಕೆಲಸಗಳಿಗೆ ಒಂದು ಕೋಣೆ ಕೊಡಲಾಗಿದೆ, ಒಬ್ಬ ಕಾರ್ಯದರ್ಶಿಯನ್ನು ನೇಮಿಸಲಾಗಿದೆ, ಆ ಕಾರ್ಯದರ್ಶಿ ಇಡೀ ವಾರ ಕಚೇರಿಯಲ್ಲಿಯಲ್ಲೇ ಇದ್ದು ಜನರ ಅರ್ಜಿ ಸ್ವೀಕರಿಸುತ್ತಾರೆ ಎಂದು ಸಾಹೇಬ್ರು ಹೇಳಿದ್ದಾರೆ. ಕಾರ್ಯದರ್ಶಿ ಯಾರು ಮಾರಾಯ್ರೆ? ಯಾರಾದರೂ ಒಳ್ಳೇ ವಿದ್ಯಾವಂತನೂ, ಬುದ್ಧಿವಂತರೂ ಆಗಿರುವ ಸಮರ್ಥರನ್ನು ನೇಮಿಸಿದರೆ ಒಳ್ಳೆದು. ಇಲ್ಲದಿದ್ದರೆ ಆತ ಕೂಲಿಗೆ ಕಡ್ಡಿ ಹಾಕ್ಕೊಂಡು ಇಡೀ ತಾಲೂಕು ಪಂಚಾಯಿತಿಗೆ ಬಾರ್ದನ್ ಆಗುವ ಅಪಾಯಗಳಿವೆ. ಇನ್ನು ಈ ಮೂಡಾ ಕಚೇರಿಯಲ್ಲಿ ಯಾರ್ಯಾರು, ಎಷ್ಟೆಷ್ಟು ಮಾಡುತ್ತಿದ್ದಾರೆ, ಮಾಡಿದ ದುಡ್ಡು ಹೇಗೆ ವಿಲೇವಾರಿ ಆಗುತ್ತಿದೆ, ಶನಿವಾರ ಎಷ್ಟು ಸೈಟ್ ವಿಸಿಟ್ ಮಾಡುತ್ತಾರೆ ಎಂಬ ಬಗ್ಗೆ ಅನೇಕ ದಂತಕತೆಗಳೀದ್ದು ಎಲ್ಲವನ್ನೂ ಬರೆದರೆ ಮುಳುಗ್ಲಿಕ್ಕೆ ಈ ಮರ್ಯಲದ ನೀರು ಸಾಕಾಗಲ್ಲ.

ಬೆಳ್ತಂಗಡಿಯಲ್ಲಿ ಇಷ್ಟೆಲ್ಲ ನಡೆದರೂ, ನಡೆಯುತ್ತಿದ್ದರೂ ದೊಡ್ಡವರು ಈ ಕಡೆ ಇನ್ನೂ ತಲೆ ಹಾಕಿಲ್ಲ. ಯಾಕೆಂದರೆ ಅವರಿಗೆ ಇನ್ನೂ ಟೋಕನ್ ಸಿಕ್ಕಿಲ್ಲ ಅಂತ ಕಾಣ್ಸುತ್ತೆ.ಬೆಳ್ತಂಗಡಿಯಲ್ಲಿ ಜಾತಿ ಪ್ರೇಮ, ಸ್ವಜನ ಪಕ್ಷಪಾತ ಜಾಸ್ತಿ ಆಗುತ್ತಿದೆಯಾ? ಅಮಾಯಕ ಜನರ ಮೇಲಿನ ಬ್ರಿಟಿಷ್ ಮರ್ಜಿ ತಮ್ಮ ಮುಂದೆಯೇ ನಡೆಯುತ್ತಿದ್ದರೂ, ಕೊಬ್ಬು, ಕೊಲೆಸ್ಟ್ರಾಲ್ ಏರಿಸಿಕೊಂಡಿರುವ ಅಧಿಕಾರಿಗಳು ಜನರ ಕುತ್ತಿಗೆಗೆ ಕೈ ಹಾಕಿದ್ದರೂ, ತಾಲೂಕು ಆಡಳಿತದಲ್ಲಿ ಲಂಚಾವತಾರ ಭರತನಾಟ್ಯ, ಕೂಚುಪುಡಿ ಮಾಡುತ್ತಿದ್ದರೂ ಜನ ನಾಯಕರು ಮಾತ್ರ ಟೋಕನ್ ಸಿಗದಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಪೌರಾಡಳಿತ ಇಲಾಖೆಯ ವಿಷಯದಲ್ಲಿ ನೋಟಿಸಿಲ್ಲದೆ ಹಾಜರಾಗಿರುವ ಪಂಚಾಯತ್ ರಾಜ್ ಸಾಹೇಬ್ರು ಮೊದಲು ತಮ್ಮ ಹಡಗಿನಲ್ಲಿ ಬಿದ್ದಿರುವ ತೂತುಗಳಿಗೆ ಬೂಚಿ ಹಾಕಿಕೊಳ್ಳಲಿ. ಅಮಾಯಕರನ್ನು ಪೀಡಿಸುವ ಪಿಡಿಒಗಳ ಬಗ್ಗೆ ಮಾತಾಡಲಿ, ಅವರಿಗೆ ಖಡಕ್ ವಾರ್ನಿಂಗ್ ಗಳನ್ನ ಕೊಡಲಿ. ಬೆಳ್ತಂಗಡಿಯಲ್ಲಿ ಇನ್ನೂ ಈ ಸಮಸ್ಯೆ ಬಗೆಹರಿಯದಿದ್ದರೆ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯ ಅಂತಲೇ ಅರ್ಥ. ಡ್ರೈವಿಂಗ್ ಸೀಟಿನಲ್ಲಿ ಕುಂತಿರುವವರು ಗಾಡಿ ಡ್ಯಾಮೇಜ್ ಆಗುತ್ತೆ ಎಂದು ಫಸ್ಟ್ ಗೇರಲ್ಲೇ ಗಾಡಿ ಓಡಿಸಿದರೆ ಗುರಿ ಮುಟ್ಟುವುದು ಯಾವಾಗ? ಡ್ರೈವಿಂಗ್ ಕುಂತವನು ಟಾಪ್ ಗೇರಲ್ಲಿ ಓಡಿಸಲೇ ಬೇಕು. ಬಹುಶಃ ಬೆಳ್ತಂಗಡಿಯಲ್ಲಿ ಇಂಜಿನ್ ಸ್ಟಾರ್ಟಲ್ಲಿ ಇಟ್ಟು ರನ್ನಿಂಗ್ ಆಗುತ್ತಿದೆ ಎಂದು ಜನರ ದಾರಿ ತಪ್ಪಿಸಲಾಗುತ್ತಿದೆ.

