
ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ 9/11ಗೆ ಮಾಡಿರುವ ಟೋಕನ್ ಸಿಸ್ಟಂ ಜನರಿಗೆ ತೀರಾ ಕಿರಿಕಿರಿ ಮಾಡುತ್ತಿದ್ದು ಟೋಕನ್ ಗಾಗಿ ಜನ ನಸುಕಿನ ಜಾವವೇ ಬಂದು ರಜನೀಕಾಂತನ ಮ್ಯಾಟಿನಿಗೆ ಕ್ಯೂ ನಿಂತ ಹಾಗೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಈ ಒಂದು ಟೋಕನ್ ಸಿಸ್ಟಂಗೆ ಮೋಕ್ಷ ಕೊಡಬೇಕೆಂಬುದು ಸಾರ್ವಜನಿಕ ಆಗ್ರಹ ಇದೆ.
ಬೆಳ್ತಂಗಡಿ ದೊಡ್ಡ ತಾಲೂಕು. ಆದರೆ ತಾಲೂಕು ಹೆಡ್ ಕ್ವಾರ್ಟರ್ಸ್ ಇನ್ನೂ ಪಟ್ಟಣ ಪಂಚಾಯಿತಿ ಲೆವೆಲ್ ನಲ್ಲೆ ಇದೆ. ತಾಲೂಕು ಹೆಡ್ ಕ್ವಾರ್ಟರ್ಸ್ ನ ಸಿಟಿ ಲಿಮಿಟ್ಸ್ ಕೂಡ ದೊಡ್ಡದಿದ್ದರೂ ಬೆಳ್ತಂಗಡಿಗೆ ಬೂಡಾ ಇಲ್ಲ. (ಬೆಳ್ತಂಗಡಿ ನಗರಾಭಿವೃದ್ಧಿ ಪ್ರಾಧಿಕಾರ) ಬೆಳ್ತಂಗಡಿ ಜನರಿಗೆ ಸದ್ಯಕ್ಕೆ ಮೂಡಾವೇ (ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ)ಗತಿಯಂತಾಗಿದೆ. ಯಾಕೆಂದರೆ ಬೆಳ್ತಂಗಡಿಯನ್ನು ಮೂಡುಬಿದಿರೆಯೊಂದಿಗೆ ಲಿಂಕ್ ಮಾಡಲಾಗಿದೆ. ಇದು ಎತ್ತಿಂದೆತ್ತನ ಸಂಬಂಧ ಎಂದೇ ಅರ್ಥವಾಗುತ್ತಿಲ್ಲ.
ಹಾಗೆ ಬೆಳ್ತಂಗಡಿಯಲ್ಲಿ ಬೂಡಾ ಇಲ್ಲದ ಕಾರಣ ಜನ ತಮ್ಮ ಕೆಲಸಗಳಿಗೆ ಮೂಡಾಕ್ಕೆ ಹೋಗಬೇಕು. ಅಂದರೆ ಮೂಡುಬಿದಿರೆ ಬಸ್ ಹತ್ತಬೇಕು. ಈ ಸಮಸ್ಯೆಗೆ ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲೇ ಮೂರು ಕುರ್ಚಿ ಹಾಕಿ ಸ್ಟಾಫ್ ನಿಯೋಜನೆ ಮಾಡುವುದು ಮತ್ತು ಮೂಡಾ ಅಧಿಕಾರಿ ವಾರಕ್ಕೊಮ್ಮೆ ಬೆಳ್ತಂಗಡಿಯಲ್ಲಿ ದರ್ಶನ ಕೊಡಬೇಕೆಂದು ಗುರು ಹಿರಿಯರಿದ್ದು ನಿಶ್ಚಯಿಸಲಾಗಿತ್ತು. ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತಿಯ ಒಂದು ಕೋನದ ಕೋಣೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದ್ಯಾವನೋ ಪರಮ ಪುಣ್ಯಾತ್ಮನೊಬ್ಬ ಇಲ್ಲಿ ಟೋಕನ್ ಸಿಸ್ಟಂ ಜ್ಯಾರಿಗೆ ತಂದು ಜನರನ್ನು ಲಗಾಡಿ ತೆಗೆದು ಬಿಟ್ಟ.

ಹಾಗೆಂದು ಜನರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಸಂಬಂಧ ಪಟ್ಟಂತೆ ಅನೇಕ ಕೆಲಸಗಳಿರುತ್ತದೆ. ಅದರಲ್ಲೂ ಮುಖ್ಯವಾಗಿ 9/11 ಆಗದಿದ್ದರೆ ನಾಯಿಯೂ ಮೂಸುವುದಿಲ್ಲ. ಹಾಗಾಗಿ ಬೆಳ್ತಂಗಡಿ ಕಚೇರಿ ಕೂಡ ಜನರಿಂದ ಭರ್ತಿ ಆಗುತ್ತಿತ್ತು. ಅದಕ್ಕೆ ಒಬ್ಬ ಪರಬ್ಬ ಅಧಿಕಾರಿ ಟೋಕನ್ ಸಿಸ್ಟಂ ಜಾರಿ ಮಾಡಿ ರಿಟೈರ್ಡ್ ಆಗಿ ಹೋಗಿ ಬಿಟ್ಟ. ಹಾಗಾಗಿ ಜನ ತಮ್ಮ ದಾಖಲೆಗಳ ಮಂಡೆ ಬೆಚ್ಚಕ್ಕಿಂತ ಟೋಕನ್ ಮಂಡೆಬೆಚ್ಚದಲ್ಲೇ ಬಿಪಿ, ಶುಗರ್ ಏರಿಸಿಕೊಂಡರು. ಇಲ್ಲಿ ವಾರದಲ್ಲಿ ಒಮ್ಮೆ ಮೂಡಾ ಅಧಿಕಾರಿ ದರ್ಶನ ಕೊಡುವ ಕಾರಣ ಜನ ಟೋಕನ್ ಗಾಗಿ ಪುಲ್ಯೆಕ್ಕೆಲ್ ಐದು ಗಂಟೆಗೆ ಬಂದು ಕ್ಯೂ ನಿಂತು ಬಿಟ್ಟರು. ಅದರಲ್ಲೂ ದೂರದೂರದ ಗ್ರಾಮಗಳಿಂದ ಬಸ್ಸತ್ತಿ ಬರುವ ಜನ ಬೆಳ್ತಂಗಡಿ ತಲುಪುವ ವೇಳೆಗೆ ಟೋಕನ್ ಖಾಲಿ. ಟೋಕನ್ ಇಲ್ಲದೆ ದರ್ಶನ ಭಾಗ್ಯ ಇಲ್ಲ. ದರ್ಶನ ಇಲ್ಲದೆ ದಾಖಲೆ ಇಲ್ಲ. ಇದು ಹೀಗೆ ಮುಂದುವರೆಯುತ್ತಾ ಇದೆ.

ಇನ್ನು ಈ ಮೂಡಾ ಬೆಳ್ತಂಗಡಿ ಬ್ರಾಂಚಿನ ಕತೆ ಹೇಳಿ ಸುಖವಿಲ್ಲ. ಮೂಡಾ ಅಧಿಕಾರಿಯ ವಾರದ ಒಂದು ದರ್ಶನದಲ್ಲಿ ಬೆಳ್ತಂಗಡಿಯ ಅಷ್ಟೂ ಗ್ರಾಮಗಳ ಮತ್ತು ಅಂಡಮಾನ್ ಗ್ರಾಮಗಳಾದ ಶಿಶಿಲ,ಶಿಬಾಜೆ, ಅರಸಿನ ಮಕ್ಕಿ,ಮಲವಂತಿಗೆ,ಮಿತ್ತಬಾಗಿಲುಗಳ ಫೈಲ್ ಕೂಡ ಕ್ಲೀಯರ್ ಆಗಬೇಕು. ಸ್ಟಾಫ್ ಇಲ್ಲ, ಸ್ಟಾಫ್ ಇಲ್ಲ ಎಂದು ಮೂಡಾ ಲೇಡಿ ಪಿಳ್ಳೆ ನೆವ ಹೇಳಿದರೂ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೂ ಅಷ್ಟೇ ಒಂದೆರಡು ಸ್ಟಾಫ್ ಇರೋದು. ಬೆಳ್ತಂಗಡಿ ಕಚೇರಿಯಲ್ಲೂ ಸೌಮ್ಯ ಮ್ಯಾಮ್ ಇದ್ದಾರೆ, ವಸಂತ ಸಾರು ಇದ್ದಾರೆ. ಆದರೂ ಕೆಲಸ ಆಗುತ್ತಿಲ್ಲ. ಕಳ್ಳನಿಗೆ ಒಂದು ಪಿಳ್ಳೆ ನೆವ ಅಂತ ಟೋಕನ್ ಪಡೆದು ಫೈಲು ತೋರಿಸಿದ ಜನರ ದಾಖಲೆಗಳಲ್ಲಿ ಏನಾದರೂ ತಪ್ಪು ಹುಡುಕಿ, ಹೆಕ್ಕಿ ಅವರನ್ನು ವಾಪಾಸ್ ಕಳಿಸೋದೇ ಈ ಕಚೇರಿಯ ಕೆಲಸವಾಗಿದೆ. ನಕ್ಷೆ ಸರಿ ಇಲ್ಲ, ನಕ್ಷೆಯ ಗೀಟ್ ಸರಿ ಇಲ್ಲ, ಗ್ರಾಮ ನಕ್ಷೆ ತಾ, ಅದು ತಾ, ಇದು ತಾ, ಸಂಜೀವಿನಿ ತಾ, ಟೈಗರ್ ಮಿಲ್ಕ್ ತಾ, ಅರ್ತಿದ ಪೂ ತಾ ಎಂದು ಜನರನ್ನು ನಟ್ಟ ತಿರ್ಗಿಸಿ ತಿರ್ಗಿಸಿ ಬಿಡುತ್ತಾರೆ. ಇದೆಲ್ಲವನ್ನೂ ಒಮ್ಮೆಲೇ ಹೇಳಲ್ಲ ಅವರು, ವಾರದ ಒಂದು ದರ್ಶನದಲ್ಲಿ ನಕ್ಷೆಯ ಗೀಟ್ ಸರಿ ಹಾಕಿಲ್ಲ ಎಂದು ವಾಪಾಸ್ ಕಳಿಸಿದರೆ ಮುಂದಿನ ದರ್ಶನದಲ್ಲಿ ಗ್ರಾಮ ನಕ್ಷೆ ತಾ ಎಂದು ಆದೇಶವಾಗುತ್ತದೆ. ಅಲ್ಲಾ ಮಾರಾಯ್ರೆ ಗ್ರಾಮ ನಕ್ಷೆ ಇವರಿಗೆ ಬೇಕಿದ್ರೆ ಇವರತ್ರನೇ ಎಲ್ಲಾ ಗ್ರಾಮಗಳ ನಕ್ಷೆ ಇರುವಾಗ ಪಾಪ ಬಡಪಾಯಿ ಜನರಿಂದ ಒಂದೂವರೆ ಸಾವ್ರ ಕಟ್ಟಿಸಿದ ಗ್ರಾಮ ನಕ್ಷೆ ಇವರಿಗೆ ಯಾಕೆ ಉಪ್ಪು ಹಾಕಿ ನೆಕ್ಲಿಕ್ಕಾ? ಇನ್ನು ಇಲ್ಲಿನ ಇನ್ನೊಂದು ಮೇಜರ್ ಸಮಸ್ಯೆ ಏನೆಂದರೆ ಈ ವಾರದ ದರ್ಶನಕ್ಕೆ ಪುಲ್ಯನ ಟೋಕನ್ ತೆಗೆದು ದರ್ಶನ ಪಡೆದು ನಕ್ಷೆಯ ಗೀಟ್ ಸರಿ ಇಲ್ಲ ಎಂದು ವಾಪಾಸ್ ಕಳಿಸಿದರೆ ಮುಂದಿನ ವಾರ ಸರಿ ಗೀಟ್ ಹಾಕಿಸಿಕೊಂಡು ಫೈಲ್ ಪ್ರೊಡ್ಯೂಸ್ ಮಾಡಲು ಪುನಃ ಅದೇ ನತದೃಷ್ಟ ವಾಪಸ್ ಟೋಕನ್ ಪಡೆದೇ ದೇವಿ ದರ್ಶನ ಮಾಡಬೇಕು. ಎರಡನೇ ದರ್ಶನದಲ್ಲೂ ಇನ್ನೊಂದು ಸಮಸ್ಯೆ ಕಂಡು ಬಂದರೆ ಮುಂದಿನ ವಾರ ಪುನಃ ಇನ್ನೊಮ್ಮೆ ಟೋಕನ್ ತೆಗೆದರೆ ಮಾತ್ರ ದರ್ಶನ ಭಾಗ್ಯ. ಹೀಗೆ ಬೆಳ್ತಂಗಡಿ ತಾಲೂಕು ಪಂಚಾಯತಿಯ ಈ ಕಚೇರಿಯಲ್ಲಿ ಅನೇಕ ಸಲ ಟೋಕನ್ ತೆಗೆದವರು, ಆರು ತಿಂಗಳು, ಒಂಭತ್ತು ತಿಂಗಳು, ಹತ್ತು ತಿಂಗಳು ಆದವರೆಲ್ಲ ಸಿಗುತ್ತಾರೆ. ಈ ಕಚೇರಿಗೆ ಪಾದಯಾತ್ರೆ ಮಾಡಿ ಮಾಡಿ ಗುರುಸ್ವಾಮಿ ಆದವರೂ ತುಂಬಾ ಜನ ಇದ್ದಾರೆ.

ಅಲ್ಲಾ ಮಾರಾಯ್ರೆ ಒಂದು ಪಾಯಸ ಮಾಡಬೇಕಿದ್ರೆ ಪಾಯಸಕ್ಕೆ ಏನೆಲ್ಲಾ ಬೇಕು ಎಂಬುದನ್ನು ಒಮ್ಮೆಲೇ ಹೇಳಿದ್ರೆ ಒಮ್ಮೆಗೇ ಎಲ್ಲವನ್ನೂ ದೆಯ್ಯರ ಅಂಗಡಿಯಿಂದ ತರಬಹುದು. ಇದು ಕ್ರಮ. ಆದರೆ ಬೆಳ್ತಂಗಡಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪಾಯಸಕ್ಕೆ ಒಮ್ಮೆ ಸೇಮಿಗೆ ತಾ ಎಂದು ಹೇಳಿದರೆ, ನಾಳೆ ಸಕ್ಕರೆ ತಾ ಎಂದೂ, ನಾಡಿದ್ದು ತೆಂಗಿನಕಾಯಿ, ನಂತರ ಹಾಲು, ಅನಂತರ ಬೀಜೊದ ಬೊಂಡು, ನುಂಗೆಲ್ ದ್ರಾಕ್ಷಿ ಅಂತೆಲ್ಲ ಹೇಳಿ ದಿನ ದೂಡಿ ಜನರನ್ನು ನಟ್ಟ ತಿರ್ಗಿಸಿ ತಿರ್ಗಿಸಿ, ಶುಗರ್ ಬಿಪಿ ಏರಿಸಿ, ಹಾರ್ಟ್ ಎಟಾಕ್ ಮಾಡಿಸಿ ಬಚ್ಚಿಸುವುದು ಬಿಟ್ಟರೆ ಪಾಯಸ ರೆಡಿ ಮಾಡಿ ಕೊಡುವುದೇ ಇಲ್ಲ. ಒಂದು ಫೈಲ್ ಒಂದು ಕಚೇರಿಯಲ್ಲಿ ಕೊಟ್ಟರೆ ಅದಕ್ಕೆ ರೂಲ್ಸ್ ಪ್ರಕಾರ ಏನೆಲ್ಲಾ ಆಗಬೇಕು ಎಂಬ ಒಂದು ಲಿಸ್ಟ್ ಕೊಟ್ಟರೆ ಬಡಪಾಯಿ ಅದನ್ನು ರೆಡಿ ಮಾಡಿಸಿಕೊಂಡು ಬರುತ್ತಾನೆ. ಅದು ಬಿಟ್ಟು ಒಮ್ಮೆ ಬಂದಾಗ ಒಂದು, ಇನ್ನೊಮ್ಮೆ ಬಂದಾಗ ಮತ್ತೊಂದು ಎಂದು ಕಾಲಹರಣ ಮಾಡೋದು ಅಕ್ಷಮ್ಯ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಯಾಕೆ ಮಾಡಿಸೋದು? ಡಿ.ಸಿ ಕನ್ವರ್ಷನ್, ತಹಶೀಲ್ದಾರ್ ಕನ್ವರ್ಷನ್ ಇರುವ ಫೈಲುಗಳಿಗೆ ಇವರ ಕೊಕ್ಕೆ ಯಾಕೆ? ಆಯಿತು ಎಲ್ಲಾ ಚೆಂಡೆ ಸುತ್ತು, ಭಜನೆ ಸುತ್ತು, ಬ್ಯಾಂಡ್ ಸುತ್ತು ಮುಗಿದು ಇನ್ನೇನು ಮುಂದಿನ ವಾರದ ದರ್ಶನದಲ್ಲಿ ಆರ್ಡರ್ ಸಿಗಲಿದೆ ಎಂದರೂ ಅದಕ್ಕೂ ಪುಲ್ಯನ ನರಿ ಮುಖ ನೋಡಿ ಬಂದು ಟೋಕನ್ ತೆಗೆದೇ ಆರ್ಡರ್ ಪಡೆಯುವ ತುಘಲಕ್ ದರ್ಬಾರ್ ಬೆಳ್ತಂಗಡಿ ತಾಲೂಕು ಪಂಚಾಯತಿಯಲ್ಲಿದೆ. ಇಲ್ಲಿ ಒಂದು ಫೈಲ್ ಕ್ಲೀಯರ್ ಆಗಬೇಕಿದ್ರೆ ಎರಡು ಸಾವ್ರ ವಂತಿಗೆ ಕೊಡಬೇಕಾದ ಅನಿವಾರ್ಯತೆ ಕೂಡ ಇದೆ ಎಂಬ ಮಾಹಿತಿ ಇದೆ. ಕೊಬ್ಬು, ಕೊಲೆಸ್ಟ್ರಾಲ್, ಚರ್ಬಿ ಮುಂತಾದ ಬಾಡಿ ವಾಸ್ತು ಸಮಸ್ಯೆಯಿಂದ ಬಳಲುತ್ತಿರುವ ಈ ಕಚೇರಿಯಲ್ಲಿ ಏನೋ ಸಮಸ್ಯೆ ಇದೆ. ಅದು ಯಾರು ಮಾರಾಯ್ರೆ ಇಲ್ಲಿ ರವಿಕೆ ಒಳಗೆ ದುಡ್ಡು ಹಾಕಿ ಕೊಳ್ಳೋದು. ಎಲ್ಲಿಯಾದರೂ ಬಿದ್ರೆ ದೇವರೇ ಗತಿ. ಅವ್ರಿಗೆ ಯಾರಾದರೂ ಒಂದು ಪರ್ಸ್ ತೆಗೆದು ಕೊಡಿಪ್ಪಾ.
ಯುವರ್ ಆನರ್,
ಬೆಳ್ತಂಗಡಿ ಒಂದು ದೊಡ್ಡ ತಾಲೂಕು ಆದರೂ ಹೆಡ್ ಕ್ವಾರ್ಟರ್ಸ್ ಇನ್ನೂ ಪಟ್ಟಣ ಪಂಚಾಯಿತಿ ಲೆವೆಲ್ ನಲ್ಲೇ ಇದೆ. ಸಿಟಿ ಲಿಮಿಟ್ಸ್ ದೂರ ದೂರ ಇದ್ದರೂ ಒಂದು ಬೂಡಾ ಆಫೀಸ್ ಇನ್ನೂ ಇಲ್ಲ. ಬೆಳ್ತಂಗಡಿ ದೊಡ್ಡ ದೊಡ್ಡ ನಾಯಕರ ತವರು ಆದರೂ ಈ ಒಂದು ಚಿಲ್ಲರೆ ವ್ಯವಸ್ಥೆ ಸರಿ ಪಡಿಸಲು ಇನ್ನೂ ಆಗಿಲ್ಲ. ಇಲ್ಲಿನ ಜನ ನಾಯಕರು, ಸ್ಟೇಟ್ ಲೆವೆಲ್ ಲೀಡರ್ಸ್ ಗೆ ಒಂದು ಬೂಡಾ ತರಲು ಆಗದಿರುವುದು ವಿಪರ್ಯಾಸವೇ ಸರಿ. ವೇದಿಕೆಗಳಲ್ಲಿ, ಪತ್ರಿಕೆಗಳಲ್ಲಿ, ಟಿವಿ ಪೆಟ್ಟಿಗೆಗಳಲ್ಲಿ ಬೆಳ್ತಂಗಡಿಯನ್ನು ಇಂದ್ರನ ರಾಜಧಾನಿ ಮಾಡುತ್ತೇವೆ, ಡೊನಾಲ್ಡ್ ಟ್ರಂಪನ ವಾಣಿಜ್ಯ ನಗರಿ ಮಾಡುತ್ತೇವೆ ಎಂದು ಕೊಚ್ಚಿ ಕೊಚ್ಚಿ ರಾಶಿ ಹಾಕಿದ್ದು ಬಿಟ್ಟರೆ ಬೆಳ್ತಂಗಡಿ ಬರಬರುತ್ತಾ ಬಾಕಿ ತಾಲೂಕುಗಳ ಮುಂದೆ ರಾಯರ ಕುದುರೆ ಕತ್ತೆಯಾದದ್ದು ಇವರಿಗೆ ಗೊತ್ತೇ ಆಗಲಿಲ್ಲ. ಬೆಳ್ತಂಗಡಿ ಜನ ತಮ್ಮ 9/11 ಕೆಲಸಗಳಿಗೆ ಮೂಡುಬಿದಿರೆ ಬಸ್ ಹತ್ತಬೇಕು ಎಂದಾದರೆ ಬೆಳ್ತಂಗಡಿ ತಾಲೂಕು ಎಲ್ಲಿಗೆ ಮುಟ್ಟಿದೆ ಎಂದು ಅರ್ಥವಾಗುತ್ತದೆ. ಬೆಳ್ತಂಗಡಿಯಲ್ಲಿ ದೊಡ್ಡ ದೊಡ್ಡ ನಾಯಕರು ಆಗಿ ಹೋಗಿದ್ದಾರೆ, ಈಗಲೂ ಇದ್ದಾರೆ, ಮುಂದೆ ಬರಲೂ ಇದ್ದಾರೆ. ಆದರೆ ಏನು ಪ್ರಯೋಜನ? ಹೆಡ್ಡು ಒಂದಂಕಿಗೆ ಔಟ್ ಆದಂತೆ.


