ಬೆಳ್ಳಾರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶುರುವಾದ ಆನ್ ಲೈನ್ ಟ್ರೇಡಿಂಗ್ ಎಂಬ ಒಂದು ವಿಚಿತ್ರ ರೋಗ ನಂತರದ ದಿನಗಳಲ್ಲಿ ಅದು ಸಾಂಕ್ರಾಮಿಕ ರೋಗವಾಗಿ ಹರಡಿ ಇಡೀ ಬೆಳ್ಳಾರೆಗೆ ಬೆಳ್ಳಾರೆಯನ್ನೇ ಗಂಭೀರ ಸ್ಥಿತಿಗೆ ತಲುಪಿಸಿದೆ ಎಂದು ತಿಳಿದುಬಂದಿದೆ. ಕೆಲವರು ಐಸಿಯೂ ಲೆವೆಲ್ ನಲ್ಲಿದ್ದರೆ ಇನ್ನು ಕೆಲವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಬೆಳ್ಳಾರೆಯಲ್ಲಿ ಸದ್ಯಕ್ಕೆ ಹಗ್ಗ ಸೇಲ್ ಇಲ್ಲ.
ಹಾಗೆಂದು ಈ ಆನ್ ಲೈನ್ ಟ್ರೇಡಿಂಗ್ ಅಪ್ಲಿಕೇಶನ್ ಅಂದರೆ ಏನು, ಅದಕ್ಕೆ ಹೇಗೆ ದುಡ್ಡು ಹಾಕೋದು, ರಿಸಲ್ಟ್ ಏನು, ಹೇಗೆ ಮಂಗ ಮಾಡಿ ಮುಳುಗಿಸುತ್ತಾರೆ ಎಂದೆಲ್ಲಾ ನಮ್ಮ ಮಾಹಿತಿದಾರ ಮಾಹಿತಿ ಕೊಟ್ಟಿದ್ದರೂ ಅದರ ತಲೆ ಬುಡ ಒಂಚೂರು ಅರ್ಥವಾಗದ ಕಾರಣ ಅದನ್ನು ಪ್ರಕಟಿಸಿಲ್ಲ. ಆದರೆ ಬೆಳ್ಳಾರೆಯಲ್ಲಿ ಕಂಡು ಬಂದ ಈ ಒಂದು ಸಮೂಹ ಸನ್ನಿ ಅನಾಮತ್ತು ಹದಿನೈದು ಕೋಟಿ ತನಕ ಮುಳುಗಿಸಿದೆ ಎಂಬ ಮಾಹಿತಿ ಇದೆ.

ಹಾಗೆಂದು ಬೆಳ್ಳಾರೆ ಡೈನೋಸಾರ್ಸ್ ಕಾಲದಿಂದಲೂ ಬುದ್ಧಿವಂತರ ಊರು. ಬುದ್ಧಿವಂತರು, ಅತೀ ಬುದ್ಧಿವಂತರು, ವಿಚಿತ್ರ ಬುದ್ಧಿವಂತರು ಎಂದೆಲ್ಲಾ ಇರುವ ಊರು. ಇಂಥ ಬೆಳ್ಳಾರೆಯಲ್ಲಿ ಅದ್ಯಾವನೋ ಪುಣ್ಯಾತ್ಮ ARB ಟ್ರೇಡಿಂಗ್ ಅಪ್ಲಿಕೇಶನ್ ಎಂಬ ಫೇಕ್ ಆನ್ ಲೈನ್ ಅಪ್ಲಿಕೇಷನ್ ಒಂದನ್ನು ಪರಿಚಯ ಮಾಡಿ ಬಿಟ್ಟ. ಇವರು ಅರ್ವತ್ತು ರೂಪಾಯಿ ವ್ಯಾಲ್ಯೂ ಇರುವ ಡಾಲರ್ ಗೆ ನೂರು ಕೊಡುತ್ತಾರೆ ಅಂತಲೂ, ಹಾಕಿದ ದುಡ್ಡಿಗೆ ಒಂದು ದಿನದಲ್ಲಿ ಎರಡು ಸಲ ಪ್ರಾಫಿಟ್ ಕೊಡುತ್ತಾರೆ ಅಂತಲೂ, ಒಂದು ಲಕ್ಷ ಹಾಕಿದರೆ, ಹಾಕಿಸಿದರೆ ಏಳು ಸಾವ್ರ ಕಮಿಷನ್ ಕೊಡಲಾಗುವುದು ಎಂದೂ, ಲಕ್ಷಕ್ಕೆ ತಿಂಗಳಿಗೆ ಏಳು ಸಾವ್ರ ಬರುತ್ತದೆ ಎಂದೂ,ಹಾಕಿದ ದುಡ್ಡು ತಿಂಗಳೊಳಗೆ ಡಬ್ಬಲ್ ಮರಿ, ತ್ರಿಬಲ್ ಮರಿ ಇಡುತ್ತದೆ ಎಂದೂ ಟ್ರೇಡಿಂಗ್ ಅಪ್ಲಿಕೇಶನಿನ ಕ್ಯಾಪ್ಟನ್ ಗಳು ಬೆಳ್ಳಾರೆಯ ಬುದ್ಧಿವಂತರನ್ನು ಮಂಗ ಮಾಡಿದರು.ಕ್ಯಾಪ್ಟನ್ ಗಳ ಮಾತು ಕೇಳಿ ಬುದ್ಧಿವಂತರು ಹಗಲಲ್ಲೇ ಕನಸು ಕಂಡರು. ಬೆಳ್ಳಾರೆಯಲ್ಲಿ ಸ್ಟಾರ್ ಹೋಟೆಲ್ ಕಟ್ಟಿದ ಹಾಗೆ, ಮಾಧವ ಗೌಡರನ್ನು ಸೈಡ್ ಹೊಡೆದ ಹಾಗೆ, ರೆಡ್ಡಿ ಸ್ಟೈಲ್ ನಲ್ಲಿ ಮಿಂಚಿದ ಹಾಗೆ, ರಚಿತಾ ರಾಮ್ ಜೊತೆ ಸಿಂಗಾಪೂರ್ ಪ್ರವಾಸ ಕೈಗೊಂಡ ಹಾಗೆ, ಬೆಂಜ್ ಕಾರಲ್ಲಿ ಸುಳ್ಯಕ್ಕೆ ಚಾ ಕುಡಿಯಲು ಹೋದ ಹಾಗೇ ಅಲ್ಲಿ ಸೋಮಾರಿ ಕಟ್ಟೆಯ ಬೆಂಚ್ ಮೇಲೆ ಕುಂತು ಕನಸು ಕಂಡಿದ್ದೇ ಕಂಡಿದ್ದು, ಕನಸಿನಲ್ಲೇ ತೇಲಾಡಿದ್ದು ಮತ್ತು ತಂದು ತಂದು ದುಡ್ಡು ಹಾಕಿದ್ದು. ಅದರಲ್ಲೂ ಆ DSJ ಅಪ್ಲಿಕೇಶನ್ ಇಡೀ ಬೆಳ್ಳಾರೆಗೆ ಬೆಳ್ಳಾರೆಯನ್ನೇ ಮುಂಡಾಮೋಚಿ ಬಿಟ್ಟಿತು. ಅಡಿಕೆ ಮಾರಿದ ದುಡ್ಡು, ಬೀಜ ಮಾರಿದ್ದು, ಕುದಿದ್ದು, ಅಡಗಿಸಿಟ್ಟಿದ್ದ ದುಡ್ಡು, ಬುಡೆದಿಯ ಬೆಂಡ್ ಮಾರಿದ ದುಡ್ಡು, ಕಾಜಿ ಅಡವಿಟ್ಟದ್ದು, ಬಿಸಿನೆಸ್ ದುಡ್ಡು, ಸಾಲ ಮಾಡಿ ಹಾಕಿದ್ದು, ಸೇವಿಂಗ್ಸ್ ಅಕೌಂಟಲ್ಲಿದ್ದದ್ದು ಹೀಗೆ ಎಲ್ಲಾ ದುಡ್ಡೂ ತಂದು ತಂದು ಜನ ಹಾಕಿ ಬಿಟ್ಟರು. ಅದರಲ್ಲೂ ಚಿನ್ನ ಅಡಮಾನದ ಫೈನಾನ್ಸ್ ಒಂದಕ್ಕೆ ವಾರದೊಳಗೆ ಐದು ಕೆಜಿ ಚಿನ್ನ ಅಡಮಾನ ಆಯಿತು ಮತ್ತು ಇದೆಂಥ ಕತೆ ಎಂದು ನೋಡಲು ಆ ಫೈನಾನ್ಸ್ ಜಿಎಂ ಖುದ್ದಾಗಿ ಬೆಳ್ಳಾರೆಗೆ ಓಡಿ ಬರುವಷ್ಟು ಜನರಿಗೆ ಹುಚ್ಚು ಹಿಡಿದು ಬಿಟ್ಟಿತು.

ಹಾಗೆ ಬೆಳ್ಳಾರೆಯಲ್ಲಿ ಎಲ್ಲಾ ವರ್ಗದ ಜನರು ಜಾತ್ಯಾತೀತವಾಗಿ, ಪಕ್ಷ ಭೇದ ಮರೆತು, ವರ್ಣ ಭೇದವಿಲ್ಲದೆ, ಯೋಚಿಸದೆ, ಕುಂತು ಯೋಚಿಸದೆ, ಬಲಿಮ್ಮೆಯವರ ಬಾಗಿಲು ಬಡಿಯದೆ, ಭೂತದತ್ರ ಕೇಳದೆ, ಪುಷ್ಪ ತೆಗೆದು ನೋಡದೆ, ದೇವರ ಮುಂದೆ ಕೇಳದೆ,ಬುಡೆದಿಗೆ ಗೊತ್ತಾಗದ ಹಾಗೆ, ಲೀಗಲ್ ಓಪಿನಿಯನ್ ತೆಗೆಯದೆ ಅಪ್ಲಿಕೇಶನಿಗೆ ದುಡ್ಡು ಹಾಕಿ ಬಿಟ್ಟರು. ದೊಡ್ಡವರೂ ಹಾಕಿದರು, ಚಿಕ್ಕವರೂ ಹಾಕಿದರು. ಗಂಡನಿಗೆ ಗೊತ್ತಾಗದಂತೆ ಹೆಂಡ್ತಿ, ಹೆಂಡ್ತಿಗೆ ಗೊತ್ತಾಗದಂತೆ ಗಂಡ, ಇಬ್ಬರಿಗೂ ಗೊತ್ತಾಗದಂತೆ ಮಗ ಹೀಗೆ ದುಡ್ಡಿನ ಹೊಳೆಯೇ ಕಂಪ್ಯೂಟರ್ ಒಳಗೆ ಹರಿದು ಬಿಟ್ಟಿತು. ದುಡ್ಡು ಹಾಕಿದ ಮೊದಲ ವಾರ ಹೇಳಿದ ದುಡ್ಡು ವಾಪಸ್ ಬಂತು. ಎರಡನೇ ಸಲ ಬಂಗದಲ್ಲಿ ಬಂತು. ಇದರಿಂದ ಪ್ರೇರಿತರಾಗಿ ಜನ ಸಾಗರೋಪಾದಿಯಲ್ಲಿ ದುಡ್ಡು ಹಾಕಿದರು. ಒಂದು ಶುಭ ಮುಂಜಾನೆ ಅಪ್ಲಿಕೇಶನ್ ಮನಿಪ್ಪುಜಿ. ಬುಕ್ಕ ಸರಿ ಅವು ಅಂತ ಜನ ಬುಕ್ಕೊಲ ಬುಕ್ಕೊಲ ದುಡ್ಡು ಹಾಕಿದರು. ಆದರೆ ಅಪ್ಲಿಕೇಶನ್ ಐಸಿಯೂಗೆ ಹೋಯ್ತು, ಅಲ್ಲಿಂದ ಸೀದಾ ವೆಂಟಿಲೇಟರ್ ಮತ್ತು ಈಗ ಸತ್ತೇ ಹೋಗಿದೆ ಅಂತ ಸುದ್ದಿ. ಆ ಅಪ್ಲಿಕೇಶನಿನ ಬೆಳ್ಳಾರೆ ಕ್ಯಾಪ್ಟನ್ ಗಳು ಅದರ ಅಂತ್ಯ ಸಂಸ್ಕಾರ ನೆರವೇರಿಸಿ, ಮೂಜಿ ಮುಗಿಸಿ, ಹದಿನಾರರ ಸೂತಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಲಿಮ್ಮೆಯಲ್ಲಿ ವಿಚಾರಿಸಲಾಗಿ ಬೆಳ್ಳಾರೆಯಲ್ಲಿ ಅಂದಾಜು ಹದಿನೈದು ಕೋಟಿ ಟೋಟಲ್ ಲಾಸ್ ಎಂದು ತೋರಿಸಿದೆ. ಸದ್ರಿ ವಿಷಯದಲ್ಲಿ ಬೆಳ್ಳಾರೆ ಪೋಲಿಸರೂ ಎಂಟ್ರಿ ಹಾಕಿದ್ದು ಕ್ಯಾಪ್ಟನ್ ಗಳನ್ನು ಠಾಣೆಗೆ ಕರೆಸಿ ಕುಂತು ಮಾತಾಡಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲ ಮಾರಾಯ್ರೆ ಈ ಜನಗಳಿಗೆ ಆಡಲೇ ಬೇಕು ಅಂತ ಹಠ ಇದ್ದಿದ್ದರೆ ಇದೇ ದುಡ್ಡನ್ನು ಕಡೇ ಪಕ್ಷ ಕೋಳಿ ಕಟ್ಟಕ್ಕಾದರೂ ಹಾಕುತ್ತಿದ್ದರೆ ಒಟ್ಟೆ ಕೋರಿಯಾದರೂ ಸಿಗುತ್ತಿತ್ತು.ತಿಂದುಂಡು ಪುಡ್ಕೆನ ಪುಡ್ಕೆನ ಆಗಬಹುದಿತ್ತು. ಇದೀಗ ಕಡ್ಚೆದೂ ಇಲ್ಲ,ಪುಡ್ಚೆದೂ ಇಲ್ಲ ಎಂಬಂತಾಗಿದೆ.

