
ಕಳೆದ ವರ್ಷ ವಿಜೃಂಭಣೆಯಿಂದ ಜರುಗಿದ ಅಮೃತ ಮಹೋತ್ಸವ ಒಂದರ ಉಳಿಕೆ ಹಣ ಬ್ಯಾಂಕ್ ಅಕೌಂಟ್ ಒಂದರಲ್ಲಿ ಕೊಳೆತು ಹೋಗುತ್ತಿರುವ ಬಗ್ಗೆ ಪಂಜದಿಂದ ಮಾಹಿತಿ ಬಂದಿದೆ. ದುಡ್ಡು ಕೊಳೆತು ಹೋಗಲು ಬಿಟ್ಟರೆ ಲಕ್ಷ್ಮೀಗೆ ಕೋಪ ಬರಬಹುದೆಂಬ ಸಾಮಾನ್ಯ ಕನಿಷ್ಠ ಜ್ಞಾನವಾದರೂ ಸಂಘಟಕರಿಗೆ ಇರಬೇಕಿತ್ತು.
ಅಲ್ಲಿ ಪಂಜ ಹೈಸ್ಕೂಲಿನಲ್ಲಿ ಕಳೆದ ವರ್ಷ ಅಮೃತ ಮಹೋತ್ಸವ ಆಚರಿಸಲಾಯಿತು. ಅತಿರಥ ಮಹಾರಥರನ್ನು ಸಮಾಜಕ್ಕೆ ಕೊಟ್ಟಿದ್ದ ಪಂಜ ಹೈಸ್ಕೂಲ್ ಆ ಭಾಗದ ಹೆಸರಾಂತ ವಿದ್ಯಾದೇಗುಲಗಳಲ್ಲಿ ಒಂದು. ತಾವು ವಿದ್ಯಾದಾನ ಸ್ವೀಕರಿಸಿದ ಹೈಸ್ಕೂಲು ಅಮೃತ ಮಹೋತ್ಸವದ ತಯಾರಿಯಲ್ಲಿದೆ ಎಂದು ಗೊತ್ತಾಗುತ್ತಲೇ ಅಮೃತ ಮಹೋತ್ಸವ ಆಚರಿಸಲು ದುಡ್ಡಿನ ಹೊಳೆಯೇ ಹರಿದಿದೆ. ಹೈಸ್ಕೂಲಿನಲ್ಲಿ ಕಳೆದ ವರ್ಷ ಅಮೃತ ಮಹೋತ್ಸವ. ಗೌಜಿಯೋ ಗೌಜಿ. ಊರಿಗೆ ಊರೇ ಹಿರಿ ಹಿರಿ ಹಿಗ್ಗಿಬಿಟ್ಟಿತು.

ಆಯಿತು ಅಮೃತ ಮಹೋತ್ಸವ ಬಹಳ ವಿಜೃಂಭಣೆಯಿಂದ ಮುಗಿಯಿತು. ಮುಗಿದು ಒಂದು ವರ್ಷವೂ ಕಳೆಯಿತು. ಆದರೆ ಅಮೃತ ಮಹೋತ್ಸವದಲ್ಲಿ ಉಳಿದ ದುಡ್ಡಿನ ಗತಿ? ಈ ಬಗ್ಗೆ ಯಾರೂ ಕೇಳಲೂ ಇಲ್ಲ, ಹೇಳಲೂ ಇಲ್ಲ. ಅಮೃತ ಮಹೋತ್ಸವದ ಉಳಿಕೆ ಹಣ ಅಂದಾಜು ಏಳೆಂಟು ಲಕ್ಷಗಳಿದ್ದು ಅದು ಇನ್ನೂ ಬ್ಯಾಂಕೊಂದರ ಅಕೌಂಟಲ್ಲಿದೆ ಮತ್ತು ಸುಮ್ಮನೆ ಕೊಳೆಯುತ್ತಿದೆ. ಈ ದುಡ್ಡಿನಲ್ಲಿ ಹೈಸ್ಕೂಲಿಗೆ ಏನಾದರೂ ಕೊಡುಗೆ ಅಥವಾ ಅಮೃತ ಮಹೋತ್ಸವದ ನೆನಪಿನಲ್ಲಿ ಏನಾದರೂ ಕಾಮಗಾರಿ ಮಾಡಿಸಬಹುದು ಎಂಬುದು ಪರತ್ ಸ್ಟೂಡೆಂಟ್ಸ್ ಗಳ ಅಭಿಪ್ರಾಯ. ಸುಮ್ಮನೆ ಬ್ಯಾಂಕಿಗೆ ಯಾಕೆ ಟರ್ನ್ ಅವರ್ ಮಾಡಲು ಅಲ್ಲಿ ಕೊಳೆಸುವುದು ಎಂಬ ಇರಾದೆಯೂ ಇದೆ.

ಇದೀಗ ಪಂಜ ಹೈಸ್ಕೂಲ್ ಕಡೆ ಕೆಪಿಎಸ್ ಸ್ಕೂಲ್ ಸ್ಯಾಂಕ್ಷನ್ ಆಗಿದ್ದು ಅಂದಾಜು ಮೂರೂವರೆ ಕೋಟಿ ಆ ಅನುದಾನದಲ್ಲಿ ದುಡ್ಡು ಹರಿಯಲಿದೆ. ಕೆಪಿಎಸ್ ಸ್ಕೂಲ್ ಬರುವಾಗ ಅಮೃತ ಮಹೋತ್ಸವದ ಉಳಿಕೆ ಹಣದಲ್ಲಿ ಹೈಸ್ಕೂಲಿಗೆ ಒಂದು ರೂಂ ಕಟ್ಟಿ ಕೊಡುವ ಪ್ಲಾನ್ ಅಮೃತ ಮಹೋತ್ಸವ ಸಂಘಟಕರಲ್ಲಿದೆ. ಅಲ್ಲಿ ತನಕ ಈ ದುಡ್ಡನ್ನು ಬ್ಯಾಂಕಲ್ಲಿ ಉಪ್ಪಡ್ ಹಾಕಿ ಇಡುವ ಲಕ್ಷಣಗಳಿವೆ. ಅಲ್ಲಿ ಪಂಜಕ್ಕೆ ಮೂರುವರೆ ಕೋಟಿಯ ಕೆಪಿಎಸ್ ಸ್ಕೂಲ್ ಬರುತ್ತದೆ ಎಂದು ಗೊತ್ತಾಗುತ್ತಲೇ ಲೋಕಲ್ ಡೀಲಿಂಗ್ ರಾಜಕಾರಣಿಗಳೆಲ್ಲ ಹಾಳೆ ತಟ್ಟೆ ಹಿಡ್ಕೊಂಡು ರೆಡಿಯಾಗಿ ಕುಂತಿದ್ದಾರೆ ಎಂಬ ಮಾಹಿತಿ ಇದೆ. ಅಮೃತ ಮಹೋತ್ಸವದ ಚಿಲ್ಲರೆ ಲಕ್ಷಗಳನ್ನೇ ಉಪ್ಪಿನಕಾಯಿ ಹಾಕಿದವರು ಇನ್ನು ಕೆಪಿಎಸ್ ಅನುದಾನವನ್ನು ಯಾವ ರೇಂಜಿನಲ್ಲಿ ಉಪ್ಪಡಚ್ಚಿರ್ ಹಾಕಿಯಾರು ಎಂಬುದನ್ನು ನೆನೆಸಿಕೊಂಡರೂ ವಾರಗಟ್ಟಲೆ ನಿದ್ದೆ ಬರಲ್ಲ.


