
ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಚುಕ್ಕಾಣಿಯನ್ನು ಕೈ ನಾಯಕರು ಕೈ ಬಿಟ್ಟಿದ್ದು ಅಧ್ಯಕ್ಷರ ಸೀಟು ದೇಶಭಕ್ತರ ಪಾಲಾಗಿದೆ. ಕೈ ನಾಯಕರೇ ಅಧ್ಯಕ್ಷರ ಸೀಟನ್ನು ತಟ್ಟೆಯಲ್ಲಿ ಇಟ್ಟು ದೇಶಭಕ್ತರ ಕೈಗೆ ಕೊಟ್ಟಂತಾಗಿದೆ. ಯಾಕೆ ಕೊಡಗು ಸಂಪಾಜೆ ಕಾಂಗ್ರೆಸ್ನಲ್ಲಿ ಒಳ್ಳೇ ವಿಕೆಟ್ ಇಲ್ವಾ?

ಹಾಗೆಂದು ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನ ಜೈನ ಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಉತ್ತರ. ಕೊಡಗಿನ ಅರಸ ಲಿಂಗರಾಜ ಇಲ್ಲಿ ಈಶ್ವರನ ಹೂದೋಟ ನಿರ್ಮಾಣ ಮಾಡಿದ್ದು ಇಲ್ಲಿಂದಲೇ ಅರಸ ಕುದುರೆ ಮೂಲಕ ಅರಮನೆಗೆ ಹೂವು ತರಿಸಿಕೊಂಡು ಓಂಕಾರೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದ ಎಂದು ಪ್ರತೀತಿ ಇದೆ. ಮೊದಲಿಗೆ ಈ ದೇವಸ್ಥಾನ ಮಲ್ಲೇಶ್ವರನ ದೇವಸ್ಥಾನವಾಗಿದ್ದು ನಂತರದ ಕಾಲ ಘಟ್ಟದಲ್ಲಿ ಇದು ಶಿಥಿಲಗೊಂಡು ಅಜೀರ್ಣಾವಸ್ಥೆಗೆ ಹೋಗಿತ್ತು. ನಂತರ ಕೀಲಾರು ಮನೆತನದವರು ಈ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡು ಪುನಃ ಪ್ರತಿಷ್ಠಾ ಸಮಯದಲ್ಲಿ ಪಂಚಲಿಂಗೇಶ್ವರನನ್ನು ಪ್ರತಿಷ್ಠಾಪಿಸಿದರು ಎಂದು ತಿಳಿದುಬಂದಿದೆ. ಸದ್ರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಏಳು ಪ್ರತಿಷ್ಠಿತ ಮನೆತನಗಳಿದ್ದು ದೇವಸ್ಥಾನದ ಅಭಿವೃದ್ಧಿಗೆ ಆ ಮನೆತನಗಳ ಕೊಡುಗೆ ಅಪಾರ. ಕೀಲಾರು, ನಂಜಯ್ಯನ ಮನೆ, ಕೆರೆಮೂಲೆ, ಪಾಂಡಿ ಮನೆ, ಹೊದ್ದೆಟ್ಟಿ, ಗಬ್ಬಲಡ್ಕ, ದೇವಜನ ಮತ್ತು ಕಳ್ಗಿ ಮನೆತನಗಳು ಸದ್ರಿ ದೇವಸ್ಥಾನದ ಟಾಪ್ ಸೆವೆನ್ ಮನೆತನಗಳು. ಎಲ್ಲಾ ದೇವಸ್ಥಾನಗಳಂತೆ ಸಂಪಾಜೆ ಪಂಚಲಿಂಗೇಶ್ವರನಿಗೂ ಆಡಳಿತ ಸಮಿತಿ ಇದ್ದು ಸಮಿತಿ ಕೈ ನಾಯಕರ ಕೈಯಲ್ಲಿತ್ತು. ಓ ಮೊನ್ನೆ ಕಮಿಟಿ ಚೇಂಜ್ ಮೀಟಿಂಗ್. ಕೈಯಲ್ಲಿದ್ದ ಅಧಿಕಾರವನ್ನು ಕೈ ನಾಯಕರು ಕೈ ಚೆಲ್ಲಿದ್ದಾರೆ.

ಹಾಗೆಂದು ಓ ಮೊನ್ನೆ ತನಕ ಸದ್ರಿ ದೇವಸ್ಥಾನದ ಆಡಳಿತ ಮಂಡಳಿಗೆ ಕೈ ಲೀಡರ್ ಚಿದ್ಕಾರ್ ಅಧ್ಯಕ್ಷರಾಗಿದ್ದರು. ಆದರೆ ಯಾಕೆ ಅಂತ ಗೊತ್ತಿಲ್ಲ ಒಮ್ಮೆಲೇ ಚಿದ್ಕಾರ್ ಬೇಡ, ಬೇಡವೇ ಬೇಡ ಅಂತ ಶುರುವಾಯಿತು. ಅದಕ್ಕೆ ಮೊನ್ನೆ ಮೀಟಿಂಗ್ ಇತ್ತು.

ಮೀಟಿಂಗ್ ನಲ್ಲೂ ಚಿದ್ಕಾರ್ ಬೇಡ ಎಂಬ ಕೂಗು. ಚಿದ್ಕಾರು ಎದ್ದು ನಿಂತು ಹೇಳಿದರು ” ಆಯಿತಪ್ಪ ಆಯ್ತು, ನಾನು ಅಧ್ಯಕ್ಷ ಪದ ಬಿಡಲು ರೆಡಿ, ಆದರೆ ನಾನು ಸೂಚಿಸಿದ ವ್ಯಕ್ತಿಯನ್ನು ಮುಂದಿನ ಅಧ್ಯಕ್ಷ ಅಂತ ನೀವು ಒಪ್ಪಿಕೊಳ್ಳಬೇಕು” ಎಂದು ಕಂಡೀಷನ್ ಹಾಕಿದರು. ಕಂಡೀಷನ್ ಎಲ್ಲರಿಗೂ ಓ.ಕೆ ಆಯ್ತು. ಆಗ ಚಿದ್ಕಾರು ಸಂಪಾಜೆಯ ಇನ್ನೊಬ್ಬ ಕೈ ನಾಯಕ, ಶಾಸಕ ಪೊನ್ನಣ್ಣ ಆಪ್ತ ಸೋನಾ ಹೆಸರನ್ನು ಅಧ್ಯಕ್ಷ ಪದವಿಗೆ ಸೂಚಿಸಿದ್ದಾರೆ. ಸೋನಾ ಹೆಸರು ಬರುತ್ತಿದ್ದಂತೆ ಇಡೀ ಸಭೆ ಚಪ್ಪಾಳೆ ತಟ್ಟಿ ಸೂಚನೆಯನ್ನು ಸ್ವಾಗತಿಸಿದೆ. ಈ ಬಗ್ಗೆ ಸೋನಾ ಬಳಿ ಅಭಿಪ್ರಾಯ ಕೇಳಿದಾಗ ಸೋನಾ ಕೂಡ ದೇವರ ಸೇವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಚಿದ್ಕಾರರ ಈ ಸೂಚನೆ ಸಂಪಾಜೆ ಕಾಂಗ್ರೇಸಿನ ಮೂವರು ಕೈ ನಾಯಕರಿಗೆ ಒಪ್ಪಿಗೆ ಆಗಿರಲಿಲ್ಲ. ಪಿ.ಎಲ್ಲು, ಕನ್ಯಾನ, ಡೆಮ್ಮಲೆ. ಮದ್ದು ಅರೆದು ಬಿಟ್ಟರು.

ಹಾಗೆಂದು ಚಿದ್ಕಾರು ಸೋನಾ ಹೆಸರು ಸೂಚಿಸಲು ಕಾರಣಗಳೂ ಇತ್ತು. ಯಾಕೆಂದರೆ ಸೋನಾ ಮಿಸ್ಟರ್ ಕ್ಲೀನ್ ಜನ ನಾಯಕ. ರಾಜಕೀಯ ಇತಿಹಾಸದಲ್ಲಿ ಎಲ್ಲೂ ಕರಪ್ಟ್ ಪಟ್ಟದ ಆಸುಪಾಸಿನಲ್ಲೂ ಅಲೆದಾಡಿದವರಲ್ಲ. ಮತ್ತೆ ಶಾಸಕ ಪೊನ್ನಣ್ಣರಿಗೆ ಕೂಡ ಆಪ್ತರಿರುವ ಕಾರಣ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಂತ ಜನರೂ ಡಿಸೈಡ್ ಮಾಡಿದ್ದರು. ಆದರೆ ಈ ಸೆಲೆಕ್ಷನ್ ಒಪ್ಪಲು ಪಿ.ಎಲ್ ಬಣ ತಯಾರಿರಲಿಲ್ಲ. ಪಿ.ಎಲ್ಲು, ಕನ್ಯಾನ, ಡೆಮ್ಮಲೆ ಮುಣು ಮುಣು ಮಾಡಿದರು. ಅಷ್ಟರಲ್ಲಿ ಮೀಟಿಂಗ್ ನಲ್ಲಿ ಹಾಜರಿದ್ದ ದೇವಸ್ಥಾನದ ಅನುವಂಶೀಯ ಮೊಕ್ತೇಸರ ನಂಜಯ್ಯನ ಮನೆಯ ಎಂ.ಬಿ “ಕೋರಂ ಮಾಡಿ ಕಮಿಟಿಗೆ ಬಾಕಿ ಆಯ್ಕೆ ಮಾಡಿಕೊಳ್ಳಿ”ಎಂದು ಹೇಳಿದರು. ಅಲ್ಲೇ ಹತ್ತೇ ಹತ್ತು ನಿಮಿಷದಲ್ಲಿ ಕೋರಂ ಮೀಟಿಂಗ್ ನಡೆಯಿತು. ಮೊದಲು ಸೋನಾ ಹೆಸರನ್ನು ಸೂಚಿಸಿದ್ದ ಚಿದ್ಕಾರು ಕೋರಂ ಮೀಟಿಂಗ್ ನಲ್ಲಿ ಉಲ್ಟಾ ಹೊಡೆದು ಬಿಟ್ಟರು. ಅಧ್ಯಕ್ಷ ನಾನೇ ಎಂದು ಮುದದಿಂದ ಶುರು ಮಾಡಿದರು. ಕೋರಂ ಮೀಟಿಂಗ್ ನಲ್ಲಿ ಸೋನಾ ಹೆಸರು ಬೋರ್ಡಿಗೇ ಬರಲಿಲ್ಲ. ಚರ್ಚೆಗೆ ಚರ್ಚೆ, ಚರ್ಚೆಗೆ ಚರ್ಚೆ ನಡೆಯಿತು. ಅಷ್ಟರಲ್ಲಿ ಎದ್ದು ನಿಂತ ದೇಶಭಕ್ತರು ನಮ್ಮದೂ ಒಂದು ಕ್ಯಾಂಡಿಡೇಟ್ ಇದೆ ಎಂದು ಘೋಷಿಸಿ ಬಿಟ್ಟರು. ದೇಶಭಕ್ತರ ಕ್ಯಾಂಡಿ ಇದೆ ಎಂದು ಗೊತ್ತಾಗುತ್ತಲೇ ಚಿದ್ಕಾರೂ ಸುಮ್ಮನಾಗಿ ಬಿಟ್ಟರು. ಅಲ್ಲಿಗೆ ಆಡಳಿತ ಮಂಡಳಿ ಕೈಯಿಂದ ಜಾರಿ ದೇಶಭಕ್ತರ ಗ್ರೂಪಿಗೆ ಬಂದು ಬಿಟ್ಟಿತು.ಕಳಾಯಿ ವೀರಪ್ಪ ಯಾನೆ ಮಿಲ್ಟ್ರಿ ವೀರಪ್ಪಣ್ಣನನ್ನು ಹೊಸ ಅಧ್ಯಕ್ಷ ಎಂದು ಘೋಷಿಸಲಾಯಿತು.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ದೇವಸ್ಥಾನದ ಮೀಟಿಂಗ್ ನಲ್ಲಿ ಸೋನಾ ಹೆಸರು ಸೂಚಿಸಿ, ಆಯ್ಕೆಗೆ ಸಮ್ಮತಿಯನ್ನೂ ಸೂಚಿಸಿದ ಕಾಂಗ್ರೇಸಿಗರು, ಊರವರು, ಆಡಳಿತ ಮಂಡಳಿಯವರು ಮತ್ತು ಸಭೆಯಲ್ಲಿದ್ದ ದೇಶಭಕ್ತರೂ ಹತ್ತೇ ನಿಮಿಷದಲ್ಲಿ ನಡೆದ ಕೋರಂ ಮೀಟಿಂಗ್ ನಲ್ಲಿ ಯಾಕೆ ಪ್ಲೇಟ್ ಚೇಂಜ್ ಮಾಡಿದರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಈ ನಡೆ ಒಬ್ಬ ನಿಷ್ಠಾವಂತ, ಪ್ರಾಮಾಣಿಕ, ದಕ್ಷ ನಾಯಕನಿಗೆ ಮಾಡಿದ ಅವಮಾನ ಅಲ್ಲವೇ. ಸೋನಾ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಅವರ ಹೆಸರು ಸೂಚಿಸುವ ಅಗತ್ಯವಾದರೂ ಏನಿತ್ತು? ಅವರ ಆಯ್ಕೆಗೆ ಚಪ್ಪಾಳೆ ತಟ್ಟುವ ಜರೂರತ್ತಾದರೂ ಏನಿತ್ತು? ಇದೀಗ ದೇಶಭಕ್ತರ ಟೀಮಿನ ಕಳಾಯಿ ವೀರಪ್ಪಣ್ಣ ಅಧ್ಯಕ್ಷರಾಗಿದ್ದಾರೆ ಆದರೆ ಇದೇ ದೇಶಭಕ್ತರ ಟೀಮ್ ಹದಿನಾರು ವರ್ಷಗಳ ಕಾಲ ಇದೇ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಟೈಮಲ್ಲಿ ಒಂದು ಸೂತ ಪೆಟ್ಟಿಗೆಯ ಲೆಕ್ಕವನ್ನೂ ಕೊಟ್ಟಿರಲಿಲ್ಲ ಎಂಬ ದೂರಿದೆ. ಆಗ ಲೆಕ್ಕಾಚಾರ ಕೊಡದ ದೇಶಭಕ್ತರು ಮುಂದೆ ಹೇಗಂತ ಎಂಬ ಮುಣು ಮುಣು ಈಗಲೇ ಶುರುವಾಗಿದೆ. ಇನ್ನು ಹದಿನಾಲ್ಕು ಜನರ ಆಡಳಿತ ಮಂಡಳಿಯಲ್ಲಿ ಏಳು ಜನ ಮಹಿಳಾ ಮಣಿಗಳಿಗೆ ಸೀಟು ಸಿಕ್ಕಿದ್ದು ಫಿಫ್ಟಿ ಫಿಫ್ಟಿ ಯಾಕೆ ಎಂಬ ಮುಣು ಮುಣು ಸಹ ಗರಿಗೆದರಿದೆ.

ಹಾಗೆಂದು ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವರಿಗೆ ಒಂದೂವರೆ ಎಕರೆ ಜಾಗವಿದೆ. ದೇವರಿಗೆ ದೊಡ್ಡ ಇನ್ ಕಮ್ ಇಲ್ಲ ಎಂದು ಒಂದಷ್ಟು ಜನ ಹೇಳಿದರೆ ಇಪ್ಪತ್ತು ಲಕ್ಷ ವಾರ್ಷಿಕ ಆದಾಯ ದೇವರಿಗೆ ಇದೆ ಎಂಬ ಡೌಟೂ ಇದೆ. ಇಪ್ಪತ್ತು ಲಕ್ಷ ವಾರ್ಷಿಕ ಆದಾಯ ಇದ್ದರೆ ಸರ್ಕಾರ ಗಬಕ್ಕನೆ ಕೈಹಾಕುವ ಚಾನ್ಸ್ ಇದೆ. ಆದರೆ ಒಂದು ಊದುಬತ್ತಿ ಲೆಕ್ಕವೇ ಸಿಗದಿದ್ದರೆ ಹೇಗೆ ಅಂತ? ಇನ್ನು ದೇವಸ್ಥಾನ ಸರಿ ಮೈನ್ ಟೇನೆನ್ಸ್ ಇಲ್ಲ ಎಂಬ ಅಸಮಾಧಾನವೂ ಊರಲ್ಲಿ ಇದೆ. ಇನ್ನು ಭಟ್ರುಗಳ ಕೋಲ್ಡ್ ವಾರ್, ಭಕ್ತರ ಬರದಿಂದ ಪಂಚಲಿಂಗೇಶ್ವರ ದೇವಸ್ಥಾನ ಬಿಕೋ ಎನ್ನುತ್ತಿದೆ. ಮಿಲ್ಟ್ರಿ ವೀರಪ್ಪಣ್ಣ ಎಲ್ಲವನ್ನೂ, ಎಲ್ಲರನ್ನೂ ಸರಿ ಮಾಡಿಕೊಂಡು ಹೋಗಲೇ ಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಕೊಡಗು ಸಂಪಾಜೆ, ಚೆಂಬು ಗ್ರಾಮಗಳಿಗೆ ಬೇರೆ ದೇವರು ಇಲ್ಲ ಗಡ.
