ಸುಳ್ಯ: ಯಮನ ಮನೆ ದಾರಿಯಲ್ಲಿ!

Pattler News

Bureau Report

ಸುಳ್ಯ ಸಿಟಿಯೊಳಗೆ ಒಂದು ಲೇಔಟ್ ನವರು ತಮ್ಮ ಸೈಟಿಗೆ ಹೋಗುವ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿದ್ದು ಇದೊಂದು ಶತಮಾನದ ರಸ್ತೆ ಎಂದು ಬಣ್ಣಿಸಲಾಗಿದೆ. ಕಲಿಯುಗದಲ್ಲಿ ಇಲ್ಲಿ ತನಕ ಇಂಥಹ ರಸ್ತೆ ಮಾಡಿದವರಿಲ್ಲ, ಮುಂದೆ ಮಾಡುವವರೂ ಇಲ್ಲ. ತ್ರೇತಾಯುಗದಲ್ಲಿ, ದ್ವಾಪರದಲ್ಲಿ ಮಾಡದ, ಅಮೇರಿಕನ್, ರಷ್ಯನ್ ಇಂಜಿನಿಯರಿಂಗ್ ಸಿಸ್ಟಮನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡಿದ ರಸ್ತೆ ಇದಾಗಿದೆ. ಈ ರಸ್ತೆ ಯಮನೂರಿನ ಹೆಬ್ಬಾಗಿಲು ಎಂದೇ ಪಂಡಿತ ಪಾಮರರಿಂದ ಕೊಂಡಾಡಿಸಲ್ಪಟ್ಟಿದೆ. ಸದ್ರಿ ಲೇಔಟ್ ರಸ್ತೆ ಯಾರನ್ನಾದರೂ ಔಟ್ ಮಾಡದಿದ್ದರೆ ಅಷ್ಟೇ ಸಾಕು.

ಹಾಗೆಂದು ಈ ರಸ್ತೆಯ ಕಾಂಕ್ರಿಟೀಕರಣವನ್ನು ಸುಳ್ಯ ಸಿಟಿಯ ಒಳಗೆ ಸಾವಿರಾರು ಬುದ್ಧಿವಂತರ ಎದುರೇ, ಹಗಲೇ ಮಾಡಲಾಗಿದೆ. ಪೊಯ್ಯೆ ಬಂದು ಬೀಳುವಾಗ, ಸಿಮೆಂಟು, ಕರ್ಬ ಬರುವಾಗ, ಸಿಮೆಂಟ್ ಮಿಕ್ಸರ್, ಮೇಸ್ತ್ರಿಗಳು, ಕೂಲಿಯಾಳುಗಳು ಬಂದಾಗ, ಕಾಂಕ್ರಿಟೀಕರಣ ಕೆಲಸ ಆಗುತ್ತಿರುವಾಗ ಸುಮ್ಮನೆ ನೋಡುತ್ತಾ ಕುಂತ ಜನ, ಕಾಂಕ್ರಿಟೀಕರಣ ಮುಗಿದು ಮೇಸ್ತ್ರೀ ಕೈಕಾಲು ತೊಳೆದ ಕೂಡಲೇ ಓ….ಎಂದು ಎದ್ದು ಕುಂತಿದ್ದಾರೆ. ಸುಳ್ಯದ ಗವರ್ನಮೆಂಟ್ ಆಸ್ಪತ್ರೆಯ ಹಿಂಬದಿಯಿಂದ ಜೂನಿಯರ್ ಕಾಲೇಜು ಕಡೆಗೆ ಹೋಗುವ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು ಇದೊಂದು ಸುಳ್ಯ ನಗರ ಪಂಚಾಯಿತಿಗೆ ಸೇರಿದ ಅಂಗಿ ಚಡ್ಡಿ ಇಲ್ಲದ ಉರ್ಬುಲಿ ರಸ್ತೆಯಾಗಿತ್ತು. ಅದಕ್ಕೆ ಯಾರೋ ಕುಬೇರನ ಕಸಿನು ಉದ್ಯಮಿ ಈಗ ಅಂಗಿ ಚಡ್ಡಿ ಹಾಕಿಸಿದ್ದಾನೆ ಅಷ್ಟೇ. ಆದರೆ ಕಾಂಕ್ರಿಟೀಕರಣ ಮಾಡಿದ್ದು ಮಾತ್ರ ಯಾವುದನ್ನೋ ತಪ್ಪಿಸಿ ಕೋಮಣ ಕಟ್ಟಿದ ಹಾಗೆ ಅಂತ ಹೇಳ್ತಾರಲ್ಲ, ಹಾಗೆ ಆಯ್ತು. ಒಮ್ಮೊಮ್ಮೆ ನಾವು ಕೆಲವು ಸರ್ಕಾರಿ ಅಧಿಕಾರಿಗಳಿಗೆ ತಲೆ ಸರಿ ಇಲ್ಲ ಅಂತ ಹೇಳುತ್ತಾ ಇರುತ್ತೇವೆ. ಈಗ ನೋಡಿದರೆ ನಮ್ಗೆ ಕೂಡ ಭರ್ತಿ ಇಲ್ಲ ಮಾರಾಯ್ರೆ. ಇಲ್ಲದಿದ್ದರೆ ಇಂಥ ಒಂದು ರಸ್ತೆಯನ್ನು ಯಾರಾದರೂ ಮಾಡಿಯಾರ?

ಹಾಗೆಂದು ಈ ರಸ್ತೆ ಮೊನ್ನೆಯಿಂದ ಸ್ಟೇಟ್ ಕ್ರಶ್ ಆಗಿದೆ. ಬರೆಯುವವರು ಬರೆದದ್ದೇ ಬರೆದದ್ದು, ಮಾತಾಡುವವರು ಮಾತಾಡಿದ್ದೇ ಮಾತಾಡಿದ್ದು. ಈಗ ಈ ರಸ್ತೆಯ ಕೆಲವೊಂದು ಸದುಪಯೋಗಗಳ ಬಗ್ಗೆಯೂ ಕಾಮಿಡಿ ಪೀಸ್ ಗಳು ಸಿಕ್ಕಸಿಕ್ಕಲ್ಲಿ ಮಿಡಿಮಿಡಿಯಾಗಿ ಕಾಮಿಡಿ ಬಿಡುತ್ತಿದ್ದಾರೆ. ಸದ್ರಿ ಕಾಮಿಡಿ ಕಿಂಗ್ ಗಳ ಪ್ರಕಾರ ಈ ರಸ್ತೆ ಅನೇಕರಿಗೆ ಉದ್ಯೋಗ ಸೃಷ್ಟಿ ಮಾಡುವ ರಸ್ತೆಯಾಗಿದ್ದು ಬದುಕು ಕಟ್ಟಿಕೊಳ್ಳಲು ಅನೇಕರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ಕಾಮಿಡಿ ಬಿಟ್ಟಿದ್ದಾರೆ. ಈಗ ಕರೆಂಟ್ ಕಂಬ ಮಿಡ್ಲಲ್ಲಿ ಬಿಟ್ಟು ನಗರ ಪಂಚಾಯಿತಿ ರಸ್ತೆಗೆ ಕಾಂಕ್ರೀಟ್ ಹಾಕುವಾಗ ಯಾರಿಗೆಲ್ಲ ಲಾಭ, ಹೇಗೆ ಉದ್ಯೋಗ ಸೃಷ್ಟಿ ಆಗಿದೆ ಎಂದು ಕೆದಕಿದರೆ ತುಂಬಾ ಕೂಲಿ ಬಡವಡೆ ಆಗಿರುವ ಗುಮಾನಿ ಇದೆ. ಒಂದು ನಗರ ಪಂಚಾಯಿತಿ ರಸ್ತೆಗೆ ನಟ್ಟ ನಡು ಸಿಟಿಯಲ್ಲಿ, ನಟ್ಟನಡು ಹಗಲಿನಲ್ಲಿ ವಿಥೌಟ್ ಪರ್ಮಿಷನ್ ಒಬ್ಬ ಪ್ರೈವೇಟ್ ಕುಬೇರ ಕಾಂಕ್ರಿಟೀಕರಣ ಮಾಡುವುದೆಂದರೆ ಅದು ಅಂಬಾನಿ, ಅದಾನಿಗೂ ಸಾಧ್ಯವಿಲ್ಲದ ಮಾತು ಮತ್ತು ಅಷ್ಟು ಬೆಟ್ರಿಯೂ ಯಾರಿಗೂ ಇರಲ್ಲ. ಹಾಗಾದರೆ ಕುಂತು ಮಾತಾಡಿ, ಇಷ್ಟಕ್ಕೆ ಇಷ್ಟು ಅಂತ ಸೆಟಲ್ಮೆಂಟ್ ಮಾಡಿ,ಮೌಖಿಕ ಪರ್ಮಿಷನ್ ತಗೊಂಡೇ ಪೊಯ್ಯೆ ಇಳಿಸಿರ ಬಹುದು. ಹಾಗಾದರೆ ಈ ಶತಮಾನದ ರಸ್ತೆಯ ಪ್ರಥಮ ಫಲಾನುಭವಿಗಳು ಸುಳ್ಯ ನಗರ ಪಂಚಾಯಿತಿ ಕಡೆಯವರು. ಯಾರೂಂತ ಗೊತ್ತಿಲ್ಲ.

ಇನ್ನು ಒಂದು ಕರೆಂಟ್ ಕಂಬಕ್ಕೆ ಸೈಕಲ್ ಬ್ಯಾಲೆನ್ಸಿನ ನೋಟಿಸ್ ಅಂಟಿಸಿದರೂ ಕಿರಿಕ್ ಮಾಡುವ ಕರೆಂಟ್ ಇಲಾಖೆ ತನ್ನ ಮೂರ್ನಾಲ್ಕು ಕಂಬಗಳನ್ನು ಮಿಡ್ಲಲ್ಲಿ ಹಾಕಿ ಕಾಂಕ್ರೀಟ್ ಹಾಕಲು ಯಾರಿಗಾದರೂ ಬಿಡುತ್ತಾ? ನೋ! ಹಾಗಾದರೆ ಕರೆಂಟಿನವರಿಗೂ ಸುಮ್ಮನೆ ಕೂರಲು ಕುಂತು ಮಾತಾಡಿರುವ ಚಾನ್ಸಸ್ ಇದೆ. ಹಾಗಾಗಿ ಈ ಕಲಿಯುಗದ ರಸ್ತೆಯ ಎರಡನೇ ಫಲಾನುಭವಿಗಳು ಕರೆಂಟ್ ಇಲಾಖೆಯ ಅಧಿಕಾರಿಗಳು ಎಂದು ಎಡ್ಡೆಮರಿ ಮಂಡೆ ಮೇಲೆ ಕೈಯಿಟ್ಟೂ ಪ್ರಮಾಣ ಮಾಡಬಹುದು. ಇನ್ನು ಸಿಮೆಂಟ್ ಅಂಗಡಿ, ಜಲ್ಲಿ ಕ್ರಷರು, ಕರ್ಬದಂಗಡಿ, ಪೊಯ್ಯೆ ಕಳ್ಳರು ಮತ್ತು ಗುತ್ತಿಗೆದಾರರಿಗೆ ಲಾಟರಿ. ಕೂಲಿಗೆ ಕಾಳು.

ಹಾಗೆಂದು ಯಮನೂರಿನ ಈ ರಸ್ತೆ ಬಗ್ಗೆ ಬೇರೊಂದು ಯಾಂಗಲ್ ನಲ್ಲಿ ಥಿಂಕ್ ಮಾಡಿದರೆ ಈ ರಸ್ತೆಯನ್ನು ಭಾರೀ ಮುಂದಾಲೋಚನೆ, ದುರಾಲೋಚನೆ ಇಟ್ಟೇ ಕಾಂಕ್ರಿಟೀಕರಣ ಮಾಡಿದ ಬಗ್ಗೆ ಗುಮಾನಿಗಳಿವೆ. ಯಾಕೆಂದರೆ ಮೂರ್ನಾಲ್ಕು ಕರೆಂಟ್ ಕಂಬ ಮಧ್ಯೆ ಬಿಟ್ಟು ರಸ್ತೆ ಮಾಡುವ ಜರೂರತ್ತಾದರೂ ಏನಿತ್ತು ಎಂಬುದು ಪ್ರಶ್ನೆ. ಅದೂ ಈಗ ಮಳೆಗಾಲ ಶುರುವಾಗಿದ್ದು ಯಾರಾದರೂ ಜಿರಿಕೂಟ ಮಳೆಗೆ ಈ ರಸ್ತೆಯಲ್ಲಿ ಟೂವೀಲ್, ಫೋರ್ ವೀಲ್ ನಲ್ಲಿ ಸ್ಪೀಡಾಗಿ ಬಂದು ಕರೆಂಟ್ ಕಂಬಕ್ಕೆ ಹೊಡೆದು ಪಡ್ಚ ಆದರೆ ಆಗುವ ಲಾಭದ ಬಗ್ಗೆ, ಉದ್ಯೋಗ ಸೃಷ್ಟಿಯ ಬಗ್ಗೆ ಮುಂದಾಲೋಚನೆ, ದುರಾಲೋಚನೆ ಮಾಡಿರುವ ಸಾಧ್ಯತೆ ಇದೆ. ಕಂಬಕ್ಕೆ ಹೊಡೆದು ಪಡ್ಚ ಆದವನು ಸರ್ಕಾರಿ ನೌಕರ ಆಗಿದ್ದರೆ ಅವನ ಉದ್ಯೋಗ ಮಗನಿಗೆ ಸಿಗುತ್ತದೆ. ಆಗ ಒಂದು ಉದ್ಯೋಗ ಸೃಷ್ಟಿ ಆದದಂತಾಯಿತು. ಇನ್ನು ಹೊಡೆದ ವಾಹನದ ರಿಪೇರಿಯಲ್ಲಿ ಗ್ಯಾರೇಜ್ ನವರಿಗೆ, ಸ್ಪೇರ್ ಪಾರ್ಟ್ಸ್ ಅಂಗಡಿಗಳಿಗೆ, ಕಂಬಕ್ಕೆ ಹೊಡೆದವನು ಜೀವ ಬಿಡುವ ತನಕದ ಆಸ್ಪತ್ರೆಯ ಬಿಲ್ಲು, ಡಾಕ್ಟ್ರೇಗಳಿಗೆ, ಮೆಡಿಕಲ್ಸ್, ಸೌದೆಯವನಿಗೆ, ಊದುಬತ್ತಿ , ಮಾಲಾರ್ಪಣೆ,ಪುಣತ್ತ ಕುಂಟು ಮಾತ್ರ ಹೋಗುವ ಬಟ್ಟೆ ಅಂಗಡಿಗಳಿಗೆ, ವೈಕುಂಠ ಸಮಾರಾಧನೆಗೆ ಸಂಬಂಧ ಪಟ್ಟ ವಸ್ತುಗಳ ಅಂಗಡಿಗಳಿಗೆ ಮತ್ತು ಉಪ್ಪಿನಂಗಡಿಯಲ್ಲಿ ಪಿಂಡ ಪ್ರದಾನದಲ್ಲಿ ಅನ್ನ ತಿನ್ನಲು ಬರುವ ಕಕ್ಕೆಗಳ ತನಕ ಈ ರಸ್ತೆಯ ಲಿಂಕ್ ಕೊಡಲಾಗಿದೆ. ಇನ್ನು ಯಾರೋ ಹೊಡೆದು ಮುರಿದ ಕಂಬದ ಲಾಭ ಯಾರಿಗೆಲ್ಲ ಅಂತ ಬರೆಯಲು ಕೂತರೆ ಎಸಿಸಿ ಸಿಮೆಂಟ್ ಫ್ಯಾಕ್ಟರಿ ತನಕ ಹೋಗಿ ನಿಲ್ಲುತ್ತದೆ. ಟೋಟಲಿಯಾಗಿ ಇದೊಂದು ಉದ್ಯೋಗ ಸೃಷ್ಟಿಯ ದೂರಾಲೋಚನೆ, ದುರಾಲೋಚನೆ, ಮುಂದಾಲೋಚನೆಯ ರಸ್ತೆ. ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿದವನ ಮಂಡೆಯನ್ನು ಹೋಗಳಲು ಪದಪುಂಜದಲ್ಲಿ ಎಕ್ಸ್ ಟ್ರಾ ಅಕ್ಷರಗಳೇ ಇಲ್ಲ. ಕಾಂಕ್ರಿಟೀಕರಣ ಮಾಡಿದ ಗುತ್ತಿಗೆದಾರ ಮತ್ತು ಮಾಡಿಸಿದವನ ಫೋಟೋ ಇದ್ದರೆ ಫ್ರೇಂ ಹಾಕಿಸಿ ಬರ್ಮಿಂಗ್ಹ್ಯಾಮ್ ಪ್ಯಾಲೇಸಲ್ಲಿ ಇಡಬಹುದಿತ್ತು. ಎಲ್ಲಿಯಾದರೂ ವಿಶ್ವೇಶ್ವರಯ್ಯ ಇರುತ್ತಿದ್ದರೆ?


ಖಾಸಗಿ ಬಸ್ ಡ್ರೈವರನಿಂದ ಕ್ಯಾನ್ಸರ್ ರೋಗಿಗಳಿಗೆ ತಲೆ ಕೂದಲು ದಾನ !

ಮೂಲತಃ ಸುಳ್ಯ ನೀರಬಿದಿರೆಯವರಾದ ಜಗದೀಶ್ ವೃತ್ತಿಯಿಂದ ಬಸ್ ಡ್ರೈವರ್. ತುಳುವರ ರಾಜಧಾನಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಜಗ್ಗು ಸಿಟಿ ಬಸ್ ರೂಟ್ ನಂಬರ್ 21 ರಲ್ಲಿ ಪೈಲೆಟ್. ಜಗ್ಗುಗೆ ತನ್ನ ಹೇರ್ ಸ್ಟೈಲ್ ಬಗ್ಗೆ ವಿಶೇಷ ಆಸಕ್ತಿ.

ಅದಕ್ಕೆಂದೇ ಕಳೆದ ಒಂದು ವರ್ಷದಿಂದ ಕೆಜಿಎಫ್ ಸ್ಟೈಲಲ್ಲಿ, ರಜತ್ ಪಟಿದಾರ್ ಗೆಟಪ್ಪಿನಲ್ಲಿ, ಕೃಣಾಲ್ ಪಾಂಡ್ಯ ಮರ್ಜಿಯಲ್ಲಿ ಕೂದಲು ಬೆಳೆಸಿದ್ದರು. ಇದೀಗ ತಾನು ಪ್ರೀತಿಯಿಂದ ಬೆಳೆಸಿದ ತಲೆ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top