ಸುಬ್ರಹ್ಮಣ್ಯ ಸರ್ಪ ಸಂಸ್ಕಾರದಲ್ಲಿ 79 ನಂಬರ್ !

Pattler News

Bureau Report

ರಾಜ್ಯದ ನಂಬರ್ ವನ್ ದೇವರು ಸುಬ್ರಹ್ಮಣ್ಯನ ಸರ್ಪ ಸಂಸ್ಕಾರ ಪೂಜೆಯ ಮುಳುಗು ತಜ್ಞ ಭಟ್ರೊಬ್ಬರಿಗೆ ವಿಶೇಷ ಸ್ಥಾನಮಾನ ಒದಗಿಸಿರುವ ಬಗ್ಗೆ ಮಾಹಿತಿ ಬಂದಿದೆ. 79 ನಂಬ್ರದ ಭಟ್ರು ಬೇಲೂರಿನಿಂದ ಘಟ್ಟ ಜತ್ತ್ ಬಂದವರು.

ಹಾಗೆಂದು ಸುಬ್ರಹ್ಮಣ್ಯಕ್ಕೆ ಬಂದಿಳಿಯುವುದೇ ದುಡ್ಡು ಮಾಡಲೆಂದು ಈಗ ಎಲ್ಲರಿಗೂ ಗೊತ್ತಿರುವ ಸಂಗ್ತಿ. ದೇವಸ್ಥಾನದ ಯಾವ ವಿಭಾಗಕ್ಕೆ ಹೋದರೂ “ಅಮ್ಮಾ ತಾಯೇ” ಕೂಗು ಕೇಳಿಸುತ್ತಾ ಇರುತ್ತದೆ. ಇದೀಗ ಸರ್ಪ ಸಂಸ್ಕಾರದ ಬಗ್ಗೆ ಒಂದು ಮಾಹಿತಿ ಬಂದಿದ್ದು ಜರ್ಸಿ ನಂಬರ್ 79 ಆಡುವ ಆಟ ಎಲ್ಲರಿಗೂ ಗೊತ್ತಾಗಿದೆ. ಸದ್ರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾ ಸರ್ಪ ಸಂಸ್ಕಾರ ನಡೆಯುತ್ತಾ ಇರುತ್ತದೆ. ಅದರ ಸಂಖ್ಯೆ ಭಕ್ತರ ನೂಕುನುಗ್ಗಲನ್ನು ಅವಲಂಬಿಸಿರುತ್ತದೆ. ದಿನಕ್ಕೆ ಇನ್ನೂರು ಸರ್ಪಸಂಸ್ಕಾರ ಆದರೂ ಆಯ್ತು, ನೂರಾದರೂ ಆಯ್ತು. ಟೋಟಲೀ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಇದ್ದೇ ಇರುತ್ತದೆ. ಈ ಸರ್ಪಸಂಸ್ಕಾರ ಪೂಜೆಯ ಕ್ರಮದಲ್ಲಿ ಒಂದು ಮುಳುಗುವ ಕ್ರಮ ಇರುತ್ತದೆ. ಈ ಮುಳುಗುವ ಕ್ರಮಕ್ಕೆ ಒಬ್ಬ ಮಾಣಿಯನ್ನು ಅಥವಾ ಹೊಸದಾಗಿ ದೇವರ ಕೆಲಸಕ್ಕೆ ಸೇರಿದವರನ್ನು ಹಾಕಿರುತ್ತಾರೆ. ಸುಬ್ರಹ್ಮಣ್ಯ ಸರ್ಪಸಂಸ್ಕಾರದ ಲಿಸ್ಟಿನಲ್ಲಿ ಇಂಥ ಮುಳುಗು ತಜ್ಞ ಭಟ್ರುಗಳ ಸಂಖ್ಯೆ 220 ಇದೆ. ಇಲ್ಲಿ ಕ್ರಮ ಹೇಗೆ ಅಂದರೆ ಒಂದು ದಿನ ಇನ್ನೂರು ಸರ್ಪಸಂಸ್ಕಾರ ಬುಕ್ ಆಗಿದ್ದರೆ ಆ ಇನ್ನೂರು ಪೂಜೆಗೂ ಒಬ್ಬೊಬ್ಬ ಮುಳುಗು ತಜ್ಞ ಬೇಕು. ಒಬ್ಬೊಬ್ಬ ಭಟ್ರಿಗೂ ಇನ್ನೂರು ಪೂಜೆಯನ್ನು ಹಂಚಲಾಗುತ್ತದೆ. ಇವತ್ತು ಇನ್ನೂರು ಪೂಜೆ ಮಾತ್ರ ಆದರೆ ಉಳಿದ ಇಪ್ಪತ್ತು ಭಟ್ರುಗಳಿಗೆ ನಾಳೆಯ ಪೂಜೆಯಲ್ಲಿ ಮುಳುಗ್ಲಿಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.ಅದಕ್ಕೆ 220 ಭಟ್ರುಗಳಿಗೂ ಒಂದೊಂದು ಸಂಖ್ಯೆ ಕೊಡಲಾಗಿದೆ. ಉದಾಹರಣೆ ಕೆದಿಲಾಯರಿಗೆ ಜರ್ಸಿ ನಂಬರ್ ವನ್ ಕೊಟ್ಟಿದ್ದರೆ ಬೈಪಡಿತ್ತಾಯರಿಗೆ ಜರ್ಸಿ ನಂಬರ್ ಟೂ ಮತ್ತು ಕುದುರೆತ್ತಾಯರಿಗೆ ಜರ್ಸಿ ನಂಬರ್ ತ್ರೀ ಹೀಗೆ ಇನ್ನೂರ ಇಪ್ಪತ್ತು ಜನರಿಗೂ ಪರ್ಮನೆಂಟ್ ಜರ್ಸಿ ನಂಬರ್ ಕೊಡಲಾಗಿದೆ. ಈ ಇನ್ನೂರ ಇಪ್ಪತ್ತು ಜನರೂ ಮೂಂಕಿಗೆ ಕೈ ಹಿಡಿದು ಪುಳುಂಕ ಮುಳುಗ ಬೇಕು, ಏಳಬೇಕು ಅಷ್ಟೇ ಕೆಲಸ. ಅದು ಎಷ್ಟು ಸಲ ಅಂತ ಗೊತ್ತಿಲ್ಲ. ಇದಕ್ಕೆ ಇವರಿಗೆ ಸರ್ಪಸಂಸ್ಕಾರದ ಬಜೆಟ್ ನಲ್ಲಿ ಅನುದಾನ ಒದಗಿಸಲಾಗುತ್ತದೆ. ಮತ್ತೆ ಪಾರ್ಟಿ ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಏನಾದರೂ ಕೊಟ್ಟರೆ ಬಂತು ಅಷ್ಟೇ.

ಹಾಗೆ ಈ ಇನ್ನೂರ ಇಪ್ಪತ್ತು ಭಟ್ರುಗಳಲ್ಲಿ ಇನ್ನೂರ ಹತ್ತೊಂಬತ್ತು ಭಟ್ರುಗಳೂ ಕರೆಕ್ಟ್ ಪುಳುಂಕ ಮಾಡ್ತಾರೆ, ಏಳ್ತಾರೆ. ಒಬ್ಬನನ್ನು ಬಿಟ್ಟು. ಈ ಜರ್ಸಿ ನಂಬರ್ 79ರ ಬಗ್ಗೆ ಸ್ವಲ್ಪ ದಂತಕತೆಗಳಿವೆ. ಈ 79 ನಂಬರಿನ ಗೋಣೆಶ್ ಭಟ್ರು ಏನು ಮಾಡುತ್ತಿದ್ದರೆಂದರೆ ಏನೋ ಒಂದು ಮಾಡುತ್ತಿದ್ದಾರೆ. ಬಾಕಿ ಎಲ್ಲಾ 219 ಮುಳುಗು ತಜ್ಞರಿಗೂ ಸರ್ಪ ಸಂಸ್ಕಾರದಲ್ಲಿ ಗುಳುಗುಳು ಮುಳುಗಲು ಬಡವನ ಪೂಜೆ, ಕಡು ಬಡವನದ್ದು, ಬಸ್ಸಲ್ಲಿ ನೇತಾಡಿಕೊಂಡು ಬಂದವರದ್ದು, ಸೈಕಲ್ನಲ್ಲಿ ಬಂದವರದ್ದು, ನಡಕ್ಕೊಂಡು ಬಂದವರದ್ದು, ಮಧ್ಯಮ ವರ್ಗದ್ದು ಮತ್ತು ಶ್ರೀಮಂತರದ್ದು ಸಿಗುತ್ತದೆ. ಎಲ್ಲಾ ವರ್ಗದ ಪೂಜೆಯನ್ನು ಎಲ್ಲರಿಗೂ ಹಂಚಿಕೊಡಲಾಗುತ್ತದೆ. ಆದರೆ ಈ ಹೆಲಿಕಾಪ್ಟರ್ ನಲ್ಲಿ ಬರುವವರು, ಪ್ರೈವೇಟ್ ಜೆಟ್ ನಲ್ಲಿ ಬಂದು ಕುಲ್ಕುಂದದಲ್ಲಿ ಇಳಿಯುವವರು, ಪ್ಯಾರಾಚೂಟ್ ನಲ್ಲಿ ಇಳಿಯುವವರು, ಸ್ವರ್ಗದಿಂದ ಇಳಿದು ಬರುವವರು, ಇಂದ್ರಾದಿ ದೇವತೆಗಳ ಗೆಟಪ್ಪಿನವರು, ಕುಬೇರನ ಕಸಿನ್ಸ್ ಮತ್ತು ಕುಟುಂಬಸ್ಥರು ಮಾಡುವ ಎಲ್ಲಾ ಸರ್ಪಸಂಸ್ಕಾರದಲ್ಲಿ ಮುಳುಗಳು ಮಾತ್ರ ಜರ್ಸಿ ನಂಬರ್ 79ನ್ನು ಸೆಟ್ ಮಾಡಿಕೊಡಲಾಗುತ್ತದೆ. ಇದು ಯಾಕೆ ಅಂತ ಒಂದು ಪ್ರಶ್ನೆ. 79 ನಂಬರಿನ ಗೋಣೆಶ್ ಭಟ್ರನ್ನು ಯಾವುದೇ ಕಡು ಬಡವನ ಸರ್ಪ ಸಂಸ್ಕಾರದಲ್ಲಿ ಗುಳುಗುಳು ಮುಳುಗಿಸಿದ ಉದಾಹರಣೆಗಳಿಲ್ಲ. ಅವರದ್ದೇನಿದ್ದರೂ ಹೈಟೆಕ್ ಗುಳುಗುಳು.

ಯಾವಾಗ ನೋಡಿದರೂ 79ನಂಬರ್ ಕುಬೇರರಿಗೆ ಮೀಸಲು. ಇದು ಯಾಕೆ ಹೀಗೆ ಅಂತ ಹುಡುಕುತ್ತಾ ಹುಡುಕುತ್ತಾ ಹೋದಾಗ ಸಿಕ್ಕಿದ್ದು ಕೌಂಟರ್ ಕಿತಾಪತಿ. ಈ ಜರ್ಸಿ ನಂಬ್ರ 79 ಮತ್ತು ಕೌಂಟರ್ ಕಿತಾಪತಿಗೆ ಮುಳುಗುವ ವಿಷಯದಲ್ಲಿ ಅದೇನೋ ಲಿಂಕ್ ಇದೆ ಎಂಬ ದೂರಿದೆ. ಸರ್ಪಸಂಸ್ಕಾರದಲ್ಲಿ ಕುಬೇರನ ಕುಟುಂಬಸ್ಥರು 79ಕ್ಕೆ ಕೊಡುವ ಭಕ್ಷಿಸಿನಲ್ಲಿ ಚಿಕ್ಕ ಪರ್ಸಂಟೇಜ್ ಕೌಂಟರ್ ಕಿತಾಪತಿಗೆ ಸಲ್ಲುತ್ತದೆ ಎಂಬ ಗುಸುಗುಸು ಇದೆ. ಅದಕ್ಕೆ ಕೌಂಟರ್ ಕಿತಾಪತಿ ಕುಬೇರರ ಪೂಜೆಯಲ್ಲಿ ಮುಳುಗಲು ಜರ್ಸಿ ನಂಬರ್ 79 ನ್ನೇ ಸೆಟ್ ಮಾಡಿ ಕೊಡುತ್ತಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಜರ್ಸಿ ನಂಬ್ರ 79 ಬೇಲೂರಿನಿಂದ ಘಟ್ಟ ಇಳಿದು ಬಂದಿದ್ದು ಬೇಲೂರಿನ ಜನ್ಮ ಕುಂಡಲಿ ಮತ್ತು ಸುಬ್ರಹ್ಮಣ್ಯದ ಜಾತಕ ಎರಡರಲ್ಲೂ ಅನೇಕ ವಾಸ್ತುದೋಷಗಳು ಕಂಡುಬಂದಿದೆ. ಇನ್ನಾದರೂ 79 ನಂಬರ್ ಸೈಕಲ್ನಲ್ಲಿ ಬಂದವರಿಗೂ ಮುಳುಗಲಿ ಮತ್ತು ಏಳಲಿ. ಶೀತ ಗೀತ ಏನೂ ಆಗದು ಬಡವರದ್ದಕ್ಕೆ ಮುಳುಗಿದರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top