
ಸುಳ್ಯ – ಸುಬ್ರಹ್ಮಣ್ಯ ಸ್ಟೇಟ್ ಹೈವೇಯ ಪ್ರಮುಖ ಜಂಕ್ಷನ್, ಅರೆಭಾಷೆ ಕನ್ನಡಿಗರ ರೂರಲ್ ಕ್ಯಾಪಿಟಲ್, ದೇಶಭಕ್ತರ ಲೀಡರ್ಸ್ ಫ್ಯಾಕ್ಟರಿ ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ಡಾಕ್ಟರ್ ಇಲ್ಲದಿರುವ ಬಗ್ಗೆ ಮಾಹಿತಿ ಬಂದಿದೆ. ಗುತ್ತಿಗಾರಿನಲ್ಲಿ ಕಾಂಗ್ರೆಸ್ ಲೀಡರ್ಸ್ ಇಲ್ವಾ? ಆಡಳಿತ ಪಕ್ಷ ಇರುವಾಗ ಒಬ್ಬ ಡಾಕ್ಟ್ರನ್ನು ಹಾಕಿಸಿಕೊಳ್ಳೋಕೆ ಆಗಲ್ವಾ?
ಹಾಗೆಂದು ಗುತ್ತಿಗಾರು ಆಚೆ ಕಲ್ಮಕಾರಿನಿಂದ ಹಿಡಿದು, ಮಡಪ್ಪಾಡಿ , ಮರ್ಕಂಜ, ದೇವಚಲ್ಲ ಸಮೇತ ಹತ್ತೂರಿಗೆ ರಾಜಧಾನಿ ಇದ್ದ ಹಾಗೆ. ಸುಳ್ಯ ತಾಲೂಕಿಗೆ ದೊಡ್ಡ ದೊಡ್ಡ ಲೀಡರ್ಸ್ ಗಳನ್ನು ಕೊಟ್ಟ ಊರು ಗುತ್ತಿಗಾರು. ಆದರೆ ಸದ್ಯಕ್ಕೆ ಗುತ್ತಿಗಾರು ಆರೋಗ್ಯ ಕೇಂದ್ರದಲ್ಲಿ ಒಬ್ಬೇ ಒಬ್ಬ ಡಾಕ್ಟರ್ ಇಲ್ಲ. ಆಡಳಿತ ಪಕ್ಷದ ಘಟಾನುಘಟಿ ಲೀಡರ್ಸ್ ಗುತ್ತಿಗಾರಿನಲ್ಲಿ ಇದ್ದರೂ ಆರೋಗ್ಯ ಕೇಂದ್ರದ ಡಾಕ್ಟರ್ ಕುರ್ಚಿ ಮಾತ್ರ ಖಾಲಿ ಖಾಲಿ. ಬೂಸ್ಟ್ ಹಿಡಿದಿದೆ ಕುರ್ಚಿಗೆ.

ಹಾಗೆಂದು ಗುತ್ತಿಗಾರಿನಲ್ಲಿ ಒಂದು ವರ್ಕಿಂಗ್ ಆರೋಗ್ಯ ಕೇಂದ್ರದ ಜರೂರತ್ತು ಬಹಳಷ್ಟಿದೆ. ಇಡೀ ಗುತ್ತಿಗಾರು ಭಾಗದಲ್ಲಿ ಬೇರೆ ಒಬ್ಬೇ ಒಬ್ಬ ಪೊಟ್ಟು ಡಾಕ್ಟ್ರು ಕೂಡ ಇಲ್ಲದಿದ್ದು ಒಂಚೂರು ಜ್ವರ ಬಂದರೂ ಜ್ವರ ಹಿಡ್ಕೊಂಡು ಸುಳ್ಯಕ್ಕೆ ಓಡಬೇಕಾದ ಪರಿಸ್ಥಿತಿ ಇದೆ. ಆಚೆ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು ಭಾಗದಿಂದಲೂ ಯಾರಾದರೂ ಗ್ರಹಚಾರ ಹಿಡಿದವರು ಅಂಬುಲೆನ್ಸ್ ಹತ್ಕೊಂಡು ಬಂದರೆ ಅವರು ಗುತ್ತಿಗಾರಲ್ಲಿ ನಿಲ್ಲದೆ ಸೀದಾ ಸುಳ್ಯಕ್ಕೆ ನಾನ್ ಸ್ಟಾಪ್ ಆಗಿ ಹೋಗಬೇಕಷ್ಟೇ. ಯಾಕೆಂದರೆ ಗುತ್ತಿಗಾರಿನಲ್ಲಿ ಡಾಕ್ಟ್ರ್ ಇಜ್ಜೆರ್. ಹಾಗೆಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲವೂ ಇದೆ, ಸುಸಜ್ಜಿತವಾಗಿಯೂ ಇದೆ. ಆದರೆ ಡಾಕ್ಟ್ರಿಲ್ಲ. ಈ ಬಗ್ಗೆ ಸ್ಥಳೀಯ ಯೂಟ್ಯೂಬರ್, ಸಾಮಾಜಿಕ ಹೋರಾಟಗಾರ ನಿರಂತ್ ದೇವಸ್ಯ DHO,THO ಗಳಿಗೆ ಹಲವು ಬಾರಿ ಮನವಿ ಅರ್ಪಿಸಿದರೂ ಮುಂದಿನ ವಾರ ಕಳಿಸ್ತೇನೆ, ಎರಡು ದಿನದಲ್ಲಿ ಕಳಿಸ್ತೇನೆ, ಆಟಿ ಮುಗೀಲಿ, ಸೋಣ ಶನಿವಾರಕ್ಕೆ, ಚೌತಿಗೆ ಗ್ಯಾರೆಂಟಿ, ಸ್ವತಂತ್ರಕ್ಕೆ ಮೊದಲು ಎಂದೆಲ್ಲಾ ಕ್ಯಾಲೆಂಡರ್ ಡೇಟ್ ಕೊಟ್ಟಿದ್ದು ಬಿಟ್ಟರೆ ಇನ್ನೂ ಡಾಕ್ಟರ್ ಬಂದಿಲ್ಲ. ಇನ್ನು ಆಚೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ಡಾಕ್ಟರ್ ಸಮಸ್ಯೆ ಇದ್ದು ಕಡಬದಿಂದ ವಾರಕ್ಕೊಂದು ಟ್ರಿಪ್ ಸುಬ್ರಹ್ಮಣ್ಯಕ್ಕೆ ಬಂದು ಹೋಗುತ್ತಾರೆ ಎಂಬ ಮಾಹಿತಿ ಇದೆ. ಹಾಗಾಗಿ ಯಾರಿಗಾದರೂ ಕಲ್ಮಕಾರಲ್ಲಿ ತಿಗಲೆ ಬೇನೆ ಶುರುವಾದರೆ ಸುಳ್ಯಕ್ಕೆ ಬರುವುದಕ್ಕಿಂತ ಸ್ವರ್ಗ ಜಾಸ್ತಿ ಮುಟ್ಟ ಆಗುತ್ತದೆ ಎಂಬ ಜೋಕು ಪ್ರಚಲಿತದಲ್ಲಿದೆ. ಸುಳ್ಯಕ್ಕೆ ಅಂದಾಜು ಎಪ್ಪತ್ತು ಕಿ.ಮೀ ತನಕ ಇರಬೇಕು. ಸುಳ್ಯಕ್ಕಿಂತ ಸ್ವರ್ಗ ಕೈತಲ್.

ಇನ್ನು ಗುತ್ತಿಗಾರು ಆರೋಗ್ಯ ಕೇಂದ್ರ ಒಳ್ಳೇದಿದೆ, ಸುಸಜ್ಜಿತವಾಗಿದೆ, ಸ್ಟಾಫ್ ಕೂಡ ಒಳ್ಳೆದಿದೆ. ಈ ಹಿಂದೆ ಇಲ್ಲಿ ಕೆಲಸ ಮಾಡಿದ ಎಲ್ಲಾ ಡಾಕ್ಟರ್ ಗಳೂ ತಮ್ಮ ಕುರ್ಚಿಗೆ ನ್ಯಾಯ ಒದಗಿಸಿದವರೇ ಆಗಿದ್ದಾರೆ. ಡಾಕ್ಟರ್ ಹಿಮಕರ್, ಡಾಕ್ಟರ್ ನಂದಕುಮಾರ್ , ಡಾಕ್ಟರ್ ಚೈತ್ರಾ ಭಾನು ಮುಂತಾದವರ ಕಾಲದಲ್ಲಿ ಜ್ವರ ಗುತ್ತಿಗಾರು ಆಸುಪಾಸಿಗೂ ಬರುತ್ತಿರಲಿಲ್ಲ. ಇನ್ನು ಇಡೀ ಆರೋಗ್ಯ ಕೇಂದ್ರದ ಸ್ಟಾಫ್ ಬಗ್ಗೆಯೂ ಊರಲ್ಲಿ ಒಳ್ಳೇ ಅಭಿಪ್ರಾಯ ಇದೆ, ಅದು ಚೀಟಿ ಕೊಡುವ ತಿಮ್ಮಪ್ಪಣ್ಣನಿಂದ ಹಿಡಿದು, ಮರ್ದ್ ಕೊಡುವ ಬಾಲಭಟ್ರ ತನಕ ಊರವರಿಗೆ ಪ್ರೀತಿ ಇದೆ. ಇನ್ನು ಪ್ರೆಷರ್ ನೋಡುವ ಸವಿತಾ ಸಿಸ್ಟರ್, ರಕ್ತ ತೆಗೆಯುವ ವಿದ್ಯಾಕ್ಕ, ಕ್ಲೀನಿಂಗ್ ಪ್ರೇಮಕ್ಕ, ಮತ್ತೆ ಅವರು ಗುರುವಣ್ಣ ಹೀಗೆ ಇಡೀ ಆರೋಗ್ಯ ಕೇಂದ್ರ ಮತ್ತು ಊರವರು ಒಂದೇ ಕುಟುಂಬದ ಸದಸ್ಯರಂತಿದ್ದಾರೆ. ಆದರೆ ಡಾಕ್ಟರ್ ಇಲ್ಲ. ಏನು ಮಾಡೋಣ? ಗುತ್ತಿಗಾರು ಆರೋಗ್ಯ ಕೇಂದ್ರದ ಡಾಕ್ಟರಿಗೆಂದೇ ಸುಸಜ್ಜಿತ ವಸತಿಗೃಹ ಇದೆ. ಕೆಲವೊಮ್ಮೆ ಸುಳ್ಯದ ಕೆವಿಜಿಯಿಂದ ಜೋಕುಲು ಡಾಕ್ಟ್ರುಗಳು ಬರುವುದು ಬಿಟ್ಟರೆ ಗುತ್ತಿಗಾರಿಗರ ಆರೋಗ್ಯಕ್ಕೆ ದೇವರೇ ಗತಿ.

ಹಾಗೆಂದು ಈ ಹಿಂದೆ ಇಲ್ಲಿಗೆ ಒಬ್ಬಳು ವೀಕ್ ಡಾಕ್ಟರ್ ಬರುತ್ತಿದ್ದಳು. ವಾರಕ್ಕೊಮ್ಮೆ ಅವಳ ವಿಸಿಟ್. ಜನ ಜ್ವರ ಹಿಡಕ್ಕೊಂಡು, ಲೂಸ್ ಮೊಸನ್ ಕಟ್ಟಿಕ್ಕೊಂಡು, ತಿಗಲೆ ಬೇನೆಗೆ ಕೊತ್ತಂಬರಿ-ಜೀರ್ದರಿ ಕಸಾಯ ಕುಡಿದು, ಶೀತಕ್ಕನನ್ನು ಮೇಲೆ ಎಳೆದುಕೊಂಡು ಶಬರಿ ಕಾಯುವ ಹಾಗೆ ಕಾಯುತ್ತಿದ್ದರು. ಅವಳು ದೊಡ್ಡ ಗವರ್ನರ್ ಬಂದ ಹಾಗೆ ಬಂದು ಹೋಗಿ ಮಾಡುತ್ತಿದ್ದಳು. ಆಮೇಲೆ ಅವಳಿಗೆ ಏನಾಯ್ತೊ ಗೊಂತಿಲ್ಲ. ಬರುವುದು ನಿಂತಿತು. ನಿಂತಿತು ನಿಂತಿತೇ. ಆಮೇಲೆ ಡಾಕ್ಟರ್ ಇಲ್ಲ. ಇದೀಗ ಯಾರೋ ಡಾಕ್ಟರ್ ಕೆರ್ಪೆರ್ ನೇಮಕಕ್ಕೆ ಹುಡುಕಾಟ ನಡೆದಿದ್ದು ಟೆಂಪರರಿ ಡಾಕ್ಟರ್ ಬೇಡ ಎಂದು ಗುತ್ತಿಗಾರು ಜನ ಮುಣು ಮುಣು ಶುರುಮಾಡಿದ್ದಾರೆ. ಇನ್ನು ಯಾರೋ ಟೆಂಪರರಿ ಡಾಕ್ಟರ್ ಕೆರ್ಪೆರ್ ಬಂದು ಇಲ್ಲಿ ಇಲ್ಲದ ಅವಾಂತರ ಮಾಡೋದು ಬೇಡ ಎಂದು ಜನ ಮಾತಾಡುತ್ತಿದ್ದಾರೆ. ಹಾಗೆಂದು ಅಲ್ಲೇ ಗುತ್ತಿಗಾರಿನಲ್ಲಿ ಆಡಳಿತ ಪಕ್ಷ ಕಾಂಗ್ರೆಸಿನ ಎರಡು ಶಕ್ತಿ ಕೇಂದ್ರಗಳಿವೆ. ಅಲ್ಲಿ ಅವರ ರಬ್ಬರ್ ತೋಟದಿಂದಲೇ ಒಂದು ಕಾಲ್ ಮಾಡಿದ್ರೂ ಸಾಕು. ಗುತ್ತಿಗಾರಿಗೆ ಪರ್ಮನೆಂಟ್ ಡಾಕ್ಟರ್ ಮಾಡಿಸುವ ತಾಕತ್ತು ಇದೆ, ಪ್ರಭಾವ ಇದೆ. ಆದರೆ ಮನೆಗೆ ರೇಂಜ್ ಸಿಕ್ತಾ ಇಲ್ಲ. ಏನ್ಮಾಡೋಣ?
