
ಅಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕದಲ್ಲಿ ಲೇಡಿ ಲಾಯರ್ ಒಬ್ಬರ ಮೇಲೆ ದೈಹಿಕ ಕಿರುಕುಳ,ಮಾರಣಾಂತಿಕ ಹಲ್ಲೆ, ಹಾಫ್ ಮರ್ಡರ್ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಲಾಯರ್ ಕೊಲೆ ಯತ್ನ ಮಾಡಿದವರೂ ಕೌಂಟರ್ ಕೇಸ್ ಕೊಟ್ಟಿದ್ದು ಸುಳ್ಯ ಪೋಲಿಸರು ಎರಡನ್ನೂ FIR ಮಾಡಿಕೊಂಡು ಕೈತೊಳೆದು ಕೊಂಡಿದ್ದಾರೆ. ಲಾಯರ್ ಮೇಲೆ ವರುಷಗಳಿಂದ ಹಲ್ಲೆ ಯತ್ನ, ಕೊಲೆ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ, ಆಸ್ತಿಪಾಸ್ತಿ ಹಾನಿ, ತೇಜೋವಧೆ ನಡೆಯುತ್ತಿದ್ದರೂ, ಈ ಬಗ್ಗೆ ಸರಣಿ ದೂರು ಕೊಟ್ಟರೂ ತಾಲೂಕು ಆಡಳಿತ ಕೈಕಟ್ಟಿ ಕುಳಿತು ಚೆಂದ ನೋಡಿದ್ದು ಬಿಟ್ಟರೆ ವಿವಾದಕ್ಕೆ ಫುಲ್ ಸ್ಟಾಪ್ ಹಾಕುವ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಸಮಸ್ಯೆ ಹೀಗೆ ಮುಂದುವರೆದರೆ ಮುಂದೊಂದು ದಿನ ದೊಡ್ಡ ಅನಾಹುತ ಆಗುವ ಅಪಾಯಗಳಿವೆ.
ಅಲ್ಲಿ ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕದಲ್ಲಿ ಒಂದು ಜಮೀನು ತಕರಾರು. ತಕರಾರು ಶುರುವಾಗಿ ಹಲವು ವರುಷಗಳು ಕಳೆದರೂ ಇನ್ನೂ ಇದು ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಗಲಾಟೆಯಲ್ಲಿ ಆಡಳಿತ ವ್ಯವಸ್ಥೆ ಮೂಕ ಪ್ರೇಕ್ಷಕನಾಗಿರುವ ಕಾರಣ ಗಲಾಟೆಯ ಪರಾಕಾಷ್ಠೆ ಮೊನ್ನೆ ನಡೆದು ಹೋಗಿದೆ. ಒಬ್ಬ ಮಹಿಳೆ ಮೇಲೆ ಅದರಲ್ಲೂ ಒಬ್ಬ ಲಾಯರ್ ಲೇಡಿ ಮೇಲೆ ಜಗಳಗಂಟನೊಬ್ಬ ಮೈಗೆ ಕೈಹಾಕಿ, ದೈಹಿಕ ಹಲ್ಲೆ ನಡೆಸಿ, ಜುಟ್ಟಿನಲ್ಲಿ ನೇತಾಡಿ, ವಸ್ತ್ರಗಳನ್ನು ಹರಿದು ಹಾಕಿ, ಕುತ್ತಿಗೆ ಹಿಡಿದು ಕೊಲೆ ಯತ್ನ ಮಾಡುತ್ತಾನೆ ಅಂದರೆ ಅವನ ಆ ಧಮ್ಮಿಗೆ ಮೂಲ ಕಾರಣ ಅಸ್ತವ್ಯಸ್ತ ವ್ಯವಸ್ಥೆ ಮತ್ತು ಪೊಟ್ಟ, ಕುರುಡ ಕಾನೂನು.






ಅಲ್ಲಿ ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕದಲ್ಲಿ ಸುಳ್ಯದ ಲಾಯರ್ ವಸಂತಿ ಎಂಬವರಿಗೆ ಜಮೀನಿದ್ದು ಅವರ ಸಂಬಂಧಿಕರು ಮತ್ತು ಇವರೊಳಗೆ ಗಡಿ ಸಮಸ್ಯೆ ಇರುವುದು ಇಡೀ ಆಡಳಿತ ವ್ಯವಸ್ಥೆಗೆ ಗೊತ್ತಿರುವ ಸಂಗತಿ. ವಸಂತಿ ಸಿಂಗಲ್ಲಾಗಿ ಇವರನ್ನೆಲ್ಲ ಹ್ಯಾಂಡಲ್ ಮಾಡುತ್ತಿದ್ದು ಅವರ ಕೌರವ ಸೇನೆ ಲಾಯರ್ ಮೇಲೆ ದಶ ದಿಕ್ಕುಗಳಿಂದೂ ಅಟ್ಯಾಕ್ ಮಾಡುತ್ತಿದ್ದದ್ದು ಮಾಮೂಲು. ಆದರೆ ಈ ಗಲಾಟೆಯ ಪರಾಕಾಷ್ಠೆ ಮೊನ್ನೆ ನಡೆದಿದೆ. ಓ ಮೊನ್ನೆ ತಾರೀಕು 21 ಜುಲೈ ರಂದು ಸಂಜೆ ವಸಂತಿ ವಕೀಲೆರ್ ತನ್ನ ತೋಟದಲ್ಲಿ ಕೆಲಸ ಮುಗಿಸಿ ಸುಳ್ಯದ ತನ್ನ ಮನೆಯತ್ತ ಸ್ಕೂಟರ್ ನಲ್ಲಿ ಹೊರಟಿದ್ದರು. ಅಲ್ಲಿ ಬಡ್ಡಡ್ಕ ರಸ್ತೆಯಲ್ಲಿ ಕೆ.ಸಿ ಪ್ರಸನ್ನರ ಮನೆಯ ಬಳಿ ರಸ್ತೆಯಲ್ಲಿ ಒಂದು ಹಕ್ಕಿ ಸ್ನಾನ ಮಾಡುವ ಸ್ವಿಮ್ಮಿಂಗ್ ಪೂಲ್ ಇದೆ. ಅಲ್ಲಿ ಯಾವುದೇ ವಾಹನ ಟಾಪಿಂದ ಇಳಿದು ಫಸ್ಟಿಗೆ ಬರಲೇಬೇಕು. ಹಾಗೆ ತೋಟದಿಂದ ಹೊರಟ ವಸಂತಿ ಮ್ಯಾಡಂ ಪ್ರಸನ್ನರ ಮನೆಯ ಬಳಿ ಬರುತ್ತಿದ್ದಂತೆ ಅಲ್ಲೇ ನಿಂತಿದ್ದ ಮ್ಯಾಡಂ ಪರಮ ವಿರೋಧಿ ನಾಗಣ್ಣ. ನಾಗಣ್ಣನ ಕೈಯಲ್ಲಿ ಒಂದು ದೊಡ್ಡ ದೊಣ್ಣೆ. ಇನ್ನೇನು ಮ್ಯಾಡಂ ಟಾಪ್ ಗೇರಿಂದ ಇಳಿದು ಫಸ್ಟ್ ಹಾಕುತ್ತಿದ್ದಂತೆ ಮ್ಯಾಡಂ ಮೇಲೆ ದೊಣ್ಣೆಯಿಂದ ಒಂದೇಟು ಬಿದ್ದಿದೆ. ಗಾಡಿ ಸ್ಲೋ ಆಗುತ್ತಿದ್ದಂತೆ ನಾಗು ಮ್ಯಾಡಂ ಜರ್ಕಿನ್ ಗೆ ಕೈ ಹಾಕಿದ್ದಾನೆ. ಜರ್ಕಿನ್ ಹಿಡಿದು ಎಳೆದ ರಭಸಕ್ಕೆ ಜರ್ಕಿನ್ ಹರಿದು ನಾಗನ ಕೈಗೆ ಬಂದಿದೆ. ಈ ಉರ್ಡಪಟ್ಟದಲ್ಲಿ ವಕೀಲರ ಹೆಲ್ಮೆಟ್ ರಟ್ಟಿದೆ. ನಾಗಣ್ಣನಿಗೆ ಅಷ್ಟು ಸಾಕಿತ್ತು. ಹೆಲ್ಮೆಟ್ ರಟ್ಟುತ್ತಿದ್ದಂತೆ ಮ್ಯಾಡಂ ಜಡೆಗೆ ಕೈಹಾಕಿದ ನಾಗ ಜಡೆಯಲ್ಲೇ ಹಿಡಿದು ಅವರನ್ನು ಸ್ಕೂಟರಿಂದ ಎಳೆದು ಹಾಕಿದ್ದಾನೆ. ಎಳೆದು ಹಾಕಿದವನು ಕೆಳಗೆ ಬಿದ್ದ ಲಾಯರ್ ಎದೆಗೆ ಕೈ ಹಾಕಿದ್ದಾನೆ ಮತ್ತು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಪ್ರತಿರೋಧಿಸಿದಾಗ ಬೌಬೌ ಎಂದು ವಕೀಲರ ಕೈಗಳಿಗೆ, ಕಾಲುಗಳಿಗೆ ಮರ್ಲ್ ನಾಯಿ ಕಚ್ಚಿದ ಹಾಗೆ ಕಚ್ಚಿದ್ದಾನೆ. ವಕೀಲರನ್ನು ಇಡೀ ರಸ್ತೆಯಲ್ಲಿ ಪೆರೆಲ್ತ್ ಪೆರೆಲ್ತ್ ಹಲ್ಲೆ ನಡೆಸಿದ್ದಾನೆ. ಮ್ಯಾಡಂ ಮುಸುಂಟು ಮಲ್ಲಿಗೆ ಮಾಡಿ ಎರಡು ಹಲ್ಲು ಕಿತ್ತು ಹಾಕಿದ್ದಾನೆ. ಮ್ಯಾಡಂ ಬಾಯಿಂದ ಧಾರಾಕಾರ ರಕ್ತ ಬರುತ್ತಿದ್ದಂತೆ ನರಸಿಂಹ ಹಿರಣ್ಯಕಚಿಪುವನ್ನು ಕೊಲ್ಲಲು ಹಡ್ಯದಲ್ಲಿ ಕುಂತಂತೆ ಮ್ಯಾಡಂ ಮೇಲೆ ಕುಂತು ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಅದುಮಿ ದಮ್ಮು ಕಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಇನ್ನು ಇವನು ನನ್ನನ್ನು ಬಿಡುವುದಿಲ್ಲ ಎಂದು ಅರಿತ ವಕೀಲರು ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಒಂದೇ ಕಿಕ್ಕಿಗೆ ನಾಗನನ್ನು ತುಳಿದು, ಮಗುಚಿ ಹಾಕಿ ಸ್ಕೂಟರ್ ಹತ್ತಿ ತಪ್ಪಿಸಿಕೊಂಡು ಓಡಿ ಬಂದಿದ್ದರು. ಬಿದ್ದ ಕಡೆಯಿಂದ ಏಳುತ್ತಿದ್ದ ನಾಗಣ್ಣ ” ಇನ್ನು ಈ ಕಡೆ ಬಂದರೆ ನಿನ್ನನ್ನು ಕೊಲ್ಲದೆ ಬಿಡಲ್ಲ, ಬಂದರೆ ಜಾಗ್ರತೆ” ಎಂದು ಆವಾಜ್ ಹಾಕಿದ್ದ. ಇತ್ತ ಜಗಳ ಜಾಗೆಯಿಂದ ಓಡಿ ಬಂದ ವಕೀಲರು ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು.

ಹಾಗೆ ಜಗಳ ಜಾಗೆಯಿಂದ ಓಡಿ ಬಂದ ವಕೀಲರು ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅಲ್ಲಿಂದ ಸೀದಾ ಸುಳ್ಯ ಪೋಲಿಸ್ ಠಾಣೆಗೆ ಬಂದು ಕಂಪ್ಲೈಂಟ್ ಕೊಟ್ಟಿದ್ದಾರೆ. ಅಷ್ಟರಲ್ಲಿ ಬುಸ್ ಬುಸ್ ಎಂದು ಬುಸುಗುಡುತ್ತಾ ನಾಗಣ್ಣನೂ ಓಡಿ ಬಂದು ಮೇಡಂ ಮೇಲೆ ಒಂದು ಪೊಕ್ಕಡೆ ಕಂಪ್ಲೈಂಟ್ ಕೊಟ್ಟಿದ್ದಾನೆ. ಸುಳ್ಯ ಪೋಲಿಸರಿಗೆ ಸ್ವಲ್ಪ ದಾಕ್ಷಿಣ್ಯ ಜಾಸ್ತಿ. ಅವರು ಎರಡೂ ಕಡೆಗೂ FIR ಮಾಡಿ ಪೆನ್ನು ಮುರಿದಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಒಬ್ಬಳು ಮಹಿಳೆ ಮೇಲೆ ಹಲ್ಲೆ ನಡೆದಿದೆ, ಕೊಲೆ ಯತ್ನ ನಡೆದಿದೆ, ದೈಹಿಕ ಹಿಂಸೆ ಕೊಡಲಾಗಿದೆ, ಹಲ್ಲು ಕಿತ್ತು ಬಂದು ಧಾರಾಕಾರ ರಕ್ತ ಹರಿದು ಹೋಗಿದೆ, ವಕೀಲೆಯ ಬಟ್ಟೆಬರೆ ಹರಿದು ಹಾಕಲಾಗಿದೆ ಮತ್ತು ಎಲ್ಲವೂ ಕಣ್ಣಿಗೆ ಕಾಣುತ್ತಿದೆ, ಕಣ್ಣಿಗೆ ರಾಚುತ್ತಿದೆ. ಮಹಿಳೆಗೆ ಹೊಡೆದವನು, ಕೊಲೆ ಯತ್ನ ನಡೆಸಿದವನು, ದೈಹಿಕ ಹಿಂಸೆ ಕೊಟ್ಟವನು ಕೂಡ ಠಾಣೆಗೆ ಬಂದಿದ್ದಾನೆ.ಅವನನ್ನು ಪೋಲಿಸ್ ಸ್ಟೈಲಲ್ಲಿ ಸ್ವಾಗತಿಸಿ, ಬೆಂಡ್ ತೆಗೆದು ಒದ್ದು ಒಳಗೆ ಹಾಕಿ BNS 109 ಮತ್ತು BNS 63, 64 ಜಡಿದು ಆಟಿ ಕೂರಲು ಜೈಲಿಗೆ ಕಳಿಸೋದು ಬಿಟ್ಟು ಸುಳ್ಯ ಪೋಲಿಸರು ಅವನ ರೈಲನ್ನೂ ಕಿವಿಯಾರೆ ಕೇಳಿ, ವಕೀಲೆ ಮೇಲೆ ಹಲ್ಲೆ ನಡೆಸುವಾಗ ಆದ ಗಾಯಗಳಿಗೆ ಅಯ್ಯೋ ಪಾಪ ಅಂದು ಕೌಂಟರ್ ಕೇಸ್ ದಾಖಲಿಸಿಕೊಂಡಿದ್ದು, ಎರಡೂ ಕಡೆ FIR ಮಾಡಿದ್ದು ಯಾಕೋ ವಾಸ್ತು ದೋಸದಂತೆ ಕಾಣುತ್ತಿದೆ. ವ್ಯವಸ್ಥೆಯ ಈ ನಡೆ ಸಮಾಜಘಾತುಕ ಶಕ್ತಿಗಳಿಗೆ ಸುಫಲಾ ಹಾಕಿದಂತೆ. ನಟ್ಟ ನಡು ರಸ್ತೆಯಲ್ಲಿ ವಕೀಲರಿಗೆ ಹೊಡೆದು ದಕ್ಕಿಸಿಕೊಂಡವನು ನಾಳೆ ಪೋಲಿಸರ ಮೇಲೂ ಕೈ ಮಾಡಲ್ಲ ಅನ್ನುವುದಕ್ಕೆ ಗ್ಯಾರೆಂಟಿ ಏನು? ಈ ಗಲಾಟೆ ಇನ್ನೂ ಮುಗಿಯಲ್ಲ. ಜೋರಾಗುತ್ತಲೇ ಹೋಗಿ ಎಲ್ಲಿಗೆ ಹೋಗಿ ನಿಲ್ಲಬಹುದು ಎಂದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಸುಳ್ಯ ವಕೀಲರ ಸಂಘವೂ ಸುಮ್ಮನೆ ಕುಂತಿರುವುದು ಅಚ್ಚರಿ ತಂದಿದೆ.