
ಫೋಟೋ: ಕೊಡಗು ನ್ಯೂಸ್ ಕೃಪೆ
ಮಡಿಕೇರಿ ಸಿಟಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಸೇಲ್/ ಸಪ್ಲೈ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಸ್ಥರನ್ನು ಮಡಿಕೇರಿ ಪೋಲಿಸರು ಒದ್ದು ಒಳಗೆ ಹಾಕಿ ಬಂದೀಖಾನೆಗೆ ಕಳಿಸಿದ್ದಾರೆ. ಕೊಡಗು ಜಿಲ್ಲೆಗೆ ಮಾದಕ ವಸ್ತುಗಳ ರಖಂ ಮಾರಾಟಗಾರರು ಯಾರು ಎಂದು ಅದರ ಹಿಂದೆ ಕೊಡಗು ಪೋಲಿಸರು ಬಿದ್ದಿದ್ದಾರೆ.
ಅಲ್ಲಿ ಮಡಿಕೇರಿ ಸಿಟಿ ಒಳಗೆ, ಕೊಡಗು ಜಿಲ್ಲೆಯ ಒಳಗೆ ನಿಷೇಧಿತ ಮಾದಕವಸ್ತುಗಳ ಸರಬರಾಜು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ ಎಂಬ ಮಾಹಿತಿ ಪೋಲಿಸರಿಗೆ ಆಗಿಂದಾಗ್ಗೆ ಬರುತ್ತಲೇ ಇತ್ತು. ಅದಕ್ಕಾಗಿ ಕೊಡಗು ಪೋಲಿಸರು ಬಿಸಿ ನೀರು ಕಾಯಿಸಿ ಕಾಯುತ್ತಾ ಇದ್ದರು. ಓ ಮೊನ್ನೆ ಕೂಡ ಅಲ್ಲಿ ಮಡಿಕೇರಿ ಸಿಟಿ ಪೋಲಿಸ್ ಲಿಮಿಟ್ಸ್ ನಲ್ಲಿ ಬರುವ ಸಂಪಿಗೆ ಕಟ್ಟೆ ರಸ್ತೆ ಸಮೀಪ ಸಂಪಿಗೆ ಪರಿಮಳಾ ಬರುತ್ತಿದೆ ಎಂದು ಮಡಿಕೇರಿ ಪೋಲಿಸರಿಗೆ ಪಕ್ಕಾ ಮಾಹಿತಿ ಬಂದಿದೆ. ಕೂಡಲೇ ಅಲರ್ಟ್ ಆದ ಪೋಲಿಸರು ಮಿಂಚಿನ ಧಾಳಿ ನಡೆಸಿ ಮೂವರು ಪೆಡ್ಲರ್ ಗಳನ್ನು ಬಲೆಗೆ ಹಾಕ್ಕೊಂಡು ಬಂದಿದ್ದಾರೆ. ಈ ಮೂವರು ಮಹಾನ್ ಚೇತನಗಳು ಸಂಪಿಗೆ ಕಟ್ಟೆ ರಸ್ತೆಯಲ್ಲಿ ನಿಷೇಧಿತ MDMAಯನ್ನು ರಿಡಕ್ಷನ್ ಸೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ತ್ರಿ ಈಡಿಯಟ್ಸ್ ಗಳಲ್ಲಿ ಒಬ್ಬ ಈಡಿಯಟ್ ಬೆಂಗಳೂರಿಗೆ ಸೇರಿದ್ದು, ಇನ್ನಿಬ್ಬರು ಪಿರಿಯಾಪಟ್ಟಣದವರು. ಈ ಮೂವರು ಬೆಂಗಳೂರಿನಿಂದ ಮಾಲು ಹಿಡಕ್ಕೊಂಡು ಮಡಿಕೇರಿಗೆ ಮೆರವಣಿಗೆ ಹೊರಟಾಗಲೇ ಕೊಡಗು ಪೋಲಿಸರು ಇವರಿಗೆ GPS ಫಿಕ್ಸ್ ಮಾಡಿದ್ದರು. ಹಾಗೆ ಅವರು ಬಂದು ಬಂದು ಕೊಡಗಿಗೆ ಬಂದು, ಮಡಿಕೇರಿಯೊಳಗೆ ಬಂದು ಸಂಪಿಗೆ ರಸ್ತೆ ಸಮೀಪ ಬರುವಾಗ ಪೋಲಿಸರು ಸಿಕ್ಕಿದ್ದಾರೆ. ಮೂವರ ಉಭಯ ಕುಶಲೋಪರಿ ವಿಚಾರಿಸಿಕೊಂಡು, ಠಾಣೆಗೆ ಕರೆತಂದು, ಬೆಂಡ್ ತೆಗೆದು, ಪೊಡಿ ಮಾಡಿ, ಮಾದಕವಸ್ತುಗಳ ಅಪ್ಪ ಯಾರು, ಅಮ್ಮ ಯಾರು, ಸೋದ್ರ ಮಾವ ಯಾರು ಎಂದು ಡೀಟೈಲ್ಸ್ ತೆಗೆದು ಬಂದೀಖಾನೆಗೆ ಕಳಿಸಿ ಕೊಟ್ಟಿದ್ದಾರೆ.

ಹಾಗೆ ಸಂಪಿಗೆ ಕಟ್ಟೆ ರಸ್ತೆಯಲ್ಲಿ ಸಿಕ್ಕಿ ಬಿದ್ದ ಮಹಾನ್ ವ್ಯಕ್ತಿಗಳ ನಾಮಧೇಯ ಇಂತಿದೆ. MDMA ಮುತ್ತುರಾಜ ಕೆ.ಆರ್. 24 ವರ್ಷ, ಪಿರಿಯಾಪಟ್ಟಣ ತಾಲೂಕಿನ ಕುಂದನ ಹಳ್ಳಿ ಗ್ರಾಮದವನು. ಇನ್ನೊಬ್ಬ ಪಿರಿಯಾಪಟ್ಟಣ ಚಿಟ್ಟೆನ ಹಳ್ಳಿ ಪ್ರಶಾಂತ, ಇವನಿಗೆ 34 ವರ್ಷ ಮತ್ತು ಮೂರನೇಯವನು ಪೂಣಚ್ಚ ಅಂತ. ಇವನು ಬೆಂಗಳೂರಿಗೆ ಸೇರಿದವನು ಮತ್ತು ಕೊಡಗು ಜಿಲ್ಲೆಯ ಮೈನ್ ಡೀಲರ್ ಗಳಲ್ಲಿ ಒಬ್ಬನು. ಇವರ ಕಡೆಯಿಂದ ಪೋಲಿಸರು 10.05 MDMA, ಒಂದು ರಿಕ್ಷಾ, ಒಂದು ಕಾರು ವಶಪಡಿಸಿಕೊಂಡಿದ್ದಾರೆ. ಈ ಆಪರೇಷನ್ ಮಡಿಕೇರಿ ಡಿವೈಎಸ್ಪಿ ಸೂರಜ್ ಅವರ ಮಾರ್ಗದರ್ಶನದಲ್ಲಿ, ಸರ್ಕಲ್ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ, ಮ್ಯಾಡಂ ಅನ್ನಪೂರ್ಣ ಪಿಎಸೈ ಅವರ ನೇತೃತ್ವದಲ್ಲಿ ನಡೆದಿತ್ತು. ಇನ್ನು ಪೋಲಿಸ್ ದಾಳಿಯಲ್ಲಿ ಡಿಸಿಆರ್ಬಿ ಪೋಲಿಸರಾದ ಯೋಗೇಶ್ ಹೆಚ್ಸಿ, ನಿರಂಜನ್ ಹೆಚ್ಸಿ, ಪ್ರವೀಣ್ ಹೆಚ್ಸಿ, ರಾಜೇಶ್ ಹೆಚ್ಸಿ, ಶರತ್ ರೈ ಪಿ.ಸಿ, ಮುನೀರ್ ಪಿ.ಸಿ ಸಂಚಾರಿ ಪೊಲೀಸ್ ಮತ್ತು ರಂಜಿತ್ ಪಿ.ಸಿ ಮಡಿಕೇರಿ ಠಾಣೆ ಭಾಗವಹಿಸಿದ್ದರು. ಈ ಧಾಳಿಯ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದ್ದು ಓ ಮೊನ್ನೆ ತಾನೇ ದಕ್ಷಿಣ ಕನ್ನಡದಲ್ಲಿ ಕಳ್ಳ ನೋಟಿನ ಖದೀಮರನ್ನು ಹಿಡಿಯುವಲ್ಲಿ ಕೂಡ ಕೊಡಗು ಪೋಲಿಸರು ಮಾಡಿದ ಕೆಲಸ ಪೋಲಿಸ್ ದಾಖಲೆಗಳಲ್ಲಿ ಎವರ್ ಗ್ರೀನ್.