ಗುಂಡ್ಯದಲ್ಲಿ ಕಳ್ಳಂಗಡಿಗಳಿಗೆ ಲೈಸೆನ್ಸ್ ?

Pattler News

Bureau Report

ಶಿರಾಡಿ ಘಾಟ್ ತಪ್ಪಲಿನ ಗುಂಡ್ಯದಲ್ಲಿ ಹೈವೇ ಸೈಡ್ ಇರುವ ಅಕ್ರಮ ಅಂಗಡಿಗಳಿಗೆ ಲೈಸೆನ್ಸ್ ಕೊಡುವ ಬಾಬ್ತು ದೊಡ್ಡ ಡೀಲಿಂಗ್ ನಡೆದಿದೆ ಎಂಬ ಗುಸುಗುಸು ವೈರಲ್ ಆಗುತ್ತಿದೆ. ಹೈವೇ ಸೈಡಲ್ಲಿ ರಿಸರ್ವ್ ಫಾರೆಸ್ಟ್ ಜಾಗದಲ್ಲಿ ಯಾರೇ ತಟ್ಟಿ ಅಂಗಡಿ ಕಟ್ಟಿದರೂ ಲೈಸೆನ್ಸ್ ಪಕ್ಕಾ. ಸಂಬಂಧ ಪಟ್ಟ ಪಂಚಾಯ್ತಿ ಭೂತಕ್ಕೆ ಕಟ್ಟಿ ನೇಮ, ಸಂಕ್ರಾಂತಿ ಅಗೆಲು, ಹೊಟ್ಟೆ ತುಂಬಾ ಬಾರ್ನೆ ಕೊಟ್ಟರೆ ಬಂಗಾರದ ಅಕ್ಷರಗಳಲ್ಲಿ ಲೈಸೆನ್ಸ್ ಬರೆದು ಕೊಡಲಾಗುವುದು.

ಇದು ಗುಂಡ್ಯ. ಶಿರಾಡಿ ಘಾಟಿಯ ತಪ್ಪಲು. ಈ ಗುಂಡ್ಯ ಶಿರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಓ ಮೊನ್ನೆಯಿಂದ ಶಿರಾಡಿ ಗ್ರಾಮ ಪಂಚಾಯಿತಿ ದೊಡ್ಡ ದೊಡ್ಡ ಸುದ್ದಿಯಾಗುತ್ತಿದೆ. ಪಂಚಾಯ್ತಿಯಲ್ಲಿ ವಿವಿಧತೆಯಲ್ಲಿ ಏಕತೆಯ ಸೈನ್ ಗಳು, ಡಬ್ಬಲ್ ಸೀಲ್ ಬಳಕೆ ಬಗ್ಗೆ ಈಗಾಗಲೇ ಪಂಚಾಯ್ತಿ ಹೆಸರು ಹರಿದು ಹೋಗಿದೆ. ಇದೀಗ ಅಕ್ರಮ ಅಂಗಡಿಗಳಿಗೆ ಲೈಸೆನ್ಸ್ ವಿಷಯ. ದೊಡ್ಡ ಕತೆ.

ಹಾಗೆಂದು ಗುಂಡ್ಯ ಎಂಬುದು ಒಂದು ಜಂಕ್ಷನ್. ಗುಂಡ್ಯದಲ್ಲಿ ಗೇಟ್ ಇದೆ, ಸುಬ್ರಹ್ಮಣ್ಯ ಕ್ರಾಸ್ ರೋಡಿದೆ, ಅರಣ್ಯ ಇಲಾಖೆಯವರೂ ಇದ್ದಾರೆ. ಹೀಗೆ ಯಾರಾದರೂ ಆಚೆ ಘಟ್ಟ ಹತ್ತುವವರು ಮತ್ತು ಇಳಿಯುವವರು ಒಂದು ನಿಮಿಷ ಗುಂಡು ಹಾಕಲಾದರೂ ಗುಂಡ್ಯ ಗೇಟಿನ ಆಚೀಚೆ ಹ್ಯಾಂಡ್ ಬ್ರೇಕ್ ಹಾಕುವುದು ಮಾಮೂಲು. ಹಾಗಾಗಿ ಗುಂಡ್ಯ ಸ್ವಲ್ಪ ಬ್ಯುಸಿ ಏರಿಯಾ. ಇದನ್ನು ಮನಗಂಡ ಕೆಲವರು ಗುಂಡ್ಯ ತುಂಬಾ ಹೈವೇ ಸೈಡಲ್ಲಿ ತಟ್ಟಿ ಕಟ್ಟಡ ಕಟ್ಟಿ ಕಟ್ಟಿ ಇದೀಗ ಐವತ್ತಕ್ಕೂ ಹೆಚ್ಚು ಅಂಗಡಿಗಳು ಪೂರ್ಣ ಪ್ರಮಾಣದ ಅಂಗಡಿಗಳಾಗಿ ಗುಂಡ್ಯ ತುಂಬಾ ಬೆಳೆದು ನಿಂತಿದೆ. ಆದರೆ ಈ ಅಂಗಡಿಗಳಿಗೆ ಲೈಸೆನ್ಸ್ ಇಲ್ಲ. ಲೈಸೆನ್ಸ್ ಯಾಕಿಲ್ಲ ಅಂದರೆ ಅದು ರಸ್ತೆ ಪರಂಬೋಕು ಮತ್ತು ಅರಣ್ಯ ಇಲಾಖೆ ಜಾಗ. ಹೈವೇ ಅಥಾರಿಟಿ ಮತ್ತು ಅರಣ್ಯ ಇಲಾಖೆಯ ಜಾಗೆಯಲ್ಲಿ ಕಟ್ಟಿದ ಅಕ್ರಮ ಅಂಗಡಿಗಳಿಗೆ ಪಂಚಾಯತ್ ರಾಜ್ ಇಲಾಖೆ ಲೈಸೆನ್ಸ್ ಕೊಡಲು ಬರಲ್ಲ. ಕೊಟ್ಟರೆ ಮುಂದಿನ ಕಷ್ಟ ನಷ್ಟಗಳಿಗೆ ಕೊಟ್ಟವರೇ ಜವಾಬ್ದಾರರು ಎಂಬ ನುಡಿಕಟ್ಟು ಇದೆ. ಹಾಗಾಗಿ ತುಂಬಾ ವರ್ಷಗಳ ಕಾಲ ಈ ಅಂಗಡಿಗಳಿಗೆ ಅಂಗಿ ಚಡ್ಡಿ ಹಾಕಿರಲಿಲ್ಲ.

ಇದೀಗ ಈ ಕಳ್ಳಂಗಡಿಗಳಿಗೆ ಮುಹೂರ್ತ ಕೂಡಿ ಬಂದಿದೆ. ಈ ಎಲ್ಲಾ ಕಳ್ಳಂಗಡಿ ಮಾಲೀಕರು ಮತ್ತು ಲೋಕಲ್ ಆಡಳಿತ ಫೈನಲೀ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇವರೆಲ್ಲ ಸೇರಿಕ್ಕೊಂಡು ಗುಂಡ್ಯದಲ್ಲಿ ಗುಂಡು ತುಂಡು ಮೇಜಿನ ಪರಿಷತ್ತು ನಡೆಸಿ ಒಂದು ಒಪ್ಪಂದಕ್ಕೆ ಡಬ್ಬಲ್ ತ್ರಿಬ್ಬಲ್ ಸೈನ್ ಹಾಕಿದ್ದಾರೆ. ಮೂಲಗಳ ಪ್ರಕಾರ ಗುಂಡ್ಯದ ಕಳ್ಳಂಗಡಿಗಳ ಲೀಡರ್ ಜಿಮ್ಮು ಕಳ್ಳಂಗಡಿಗಳಿಗೆ ಲೈಸೆನ್ಸ್ ಮಾಡಿಸಿ ಕೊಡುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಮ್ಮು ಸಂಬಂಧ ಪಟ್ಟ ಕಳ್ಳಂಗಡಿಗಳ ಮಾಲೀಕರನ್ನು ಕನೆಕ್ಟ್ ಆಗಿದ್ದು ಕಳ್ಳಂಗಡಿ ಒಂದಕ್ಕೆ ರೂಪಾಯಿ ಆರೂವರೆ ಸಾವಿರ ಕಲೆಕ್ಷನ್ ಮಾಡಿದ್ದಾನೆ. ಆರೂವರೆಯಲ್ಲಿ ಒಂದೂವರೆ ಪಂಚಾಯ್ತಿ ರಶೀದಿಗೂ ಉಳಿದ ಐದು ಪಂಚಾಯ್ತಿ ಭೂತಕ್ಕೂ ಎಂದು ಮೇಲ್ಮೆಲ್ ಸುದ್ದಿಯಾಗಿದೆ. ಆ ಪ್ರಯುಕ್ತ ಕಲೆಕ್ಷನ್ ಆದ ಎರಡು ಲಕ್ಷ ನಲವತ್ತು ಸಾವಿರದಲ್ಲಿ ಅರ್ಧದಷ್ಟು ದುಡ್ಡು ಪಂಚಾಯ್ತಿ ಭೂತಕ್ಕೆ ಹೋಗಿದೆಯೆಂದೂ ಉಳಿದ ಚಿಲ್ಲರೆ ಕಳ್ಳಂಗಡಿಗಳ ಸೆಕ್ರೆಟ್ರಿ ಕೈಯಲ್ಲಿ ಟರ್ನವರ್ ಆಗುತ್ತಿದೆ ಎಂದೂ ಗಾಳಿ ಸುದ್ದಿ ಇದೆ. ಹಾಗೆ ಜಿಮ್ಮುಸನ್ನು ಕಳ್ಳಂಗಡಿಗಳ ಲೈಸೆನ್ಸ್ ಕಲೆಕ್ಷನ್ ಗೆ ಇಳಿಯುತ್ತಿದ್ದಂತೆ ಜಾಲತಾಣಗಳು ಮತ್ತು ಮಾಧ್ಯಮಗಳು ಓ… ಎಂದು ಬೊಬ್ಬೆ ಹೊಡೆದ ಕಾರಣ ಲೈಸೆನ್ಸ್ ಅಥಾರಿಟಿಗೆ ಯಾಕೋ ಪಂಚಾಯ್ತಿಯಲ್ಲೇ ಮನೆಯ ದಾರಿ ಸ್ಪಷ್ಟವಾಗಿ ಕಂಡ ಕಾರಣ ಪೊಡಿಗೆ ಆಗಿ ಲೈಸೆನ್ಸ್ ನೀಡುವ ಪ್ರಕ್ರಿಯೆಗೆ ಹ್ಯಾಂಡ್ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ಲೈಸೆನ್ಸ್ ವಿಳಂಬ, ಕೊಟ್ಟ ದುಡ್ಡಿನ ಬಗ್ಗೆ ಸಿಗದ ಸ್ಪಷ್ಟತೆ, ಕಲೆಕ್ಷನ್ ವೀರರ ಕಳ್ಳ ನಡೆಯಿಂದ ಬೇಸತ್ತ ಕಳ್ಳಂಗಡಿ ಓನರ್ಸ್ ಇದೀಗ ಜಿಮ್ಮು ಸನ್ನುವನ್ನು ಕೊಟ್ಟ ದುಡ್ಡಿಗಾಗಿ ಅಲ್ಲಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ‌. ಕೆಲವು ಪೆದಂಬು ಮಾತಾಡಿದವರಿಗೆ ದುಡ್ಡು ವಾಪಸ್ ಕೊಟ್ಟಿದ್ದು ಇನ್ನು ಕೆಲವು ವೆಜ್ ಮಾತಾಡಿದವರಿಗೆ ದುಡ್ಡೂ ಇಲ್ಲ, ಲೈಸೆನ್ಸೂ ಇಲ್ಲ ಎಂಬ ಪರಿಸ್ಥಿತಿ ಬರುವ ಕಾಲ ಹತ್ತಿರದಲ್ಲೇ ಇದೆ. ಕೈಯಿಂಡೇ ಕಾಸೂ ಪೋಯಿ… ಗಾದೆ ಮಾತು ನೆನಪಿಗೆ ಬರುತ್ತಿದೆ.

ಹಾಗೆಂದು ಗುಂಡ್ಯದಲ್ಲಿ ಹೈವೇ ಸೈಡಲ್ಲಿ ಐವತ್ತಕ್ಕೂ ಹೆಚ್ಚು ಕಳ್ಳಂಗಡಿಗಳಿವೆ. ಈ ಐವತ್ತೂ ಲೈಸೆನ್ಸ್ ಗಾಗಿ ಆರೂವರೆ ಜಿಮ್ಮು ಸನ್ನು ಕೈಗೆ ಕೊಡಲು ಮೀಟಿಂಗ್ ಆಗಿದೆ. ಈ ಐವತ್ತರಲ್ಲಿ ಕಳ್ಳಂಗಡಿ ನಾಯಕ ಜಿಮ್ಮುಸನ್ನುದ್ದೇ ಹತ್ತು ಅಂಗಡಿಗಳಿವೆ. ಇನ್ನು ಪರ್ಕು & ಸನ್ಸ್ ಮೂರಂಗಡಿ ಮಾಡಿದ್ರೆ, ಊರಿನ ಮಾಮು ಕೂಡ ಎರಡು ಕಳ್ಳಂಗಡಿ ಬಿಟ್ಟಿದ್ದಾರೆ. ಇತರೇ ಎಲ್ಲಾರದ್ದು ಮೂವತ್ತೈದು ಇದ್ದು ಇವರಿಗೆಲ್ಲ ಅಜ್ಜಿ ಪುಣ್ಯದಿಂದ ಲೈಸೆನ್ಸ್ ಸಿಕ್ಕಿದ ಮರುದಿನವೇ ಕಳ್ಳಂಗಡಿಗಳ ಸಾಲು ಮೇಲೆ ಕೆಂಪಳ್ಳ ತನಕ ಮುಟ್ಟುವ ಅಪಾಯಗಳಿವೆ.

ಒಂದು ವ್ಯವಸ್ಥಿತ ವ್ಯವಸ್ಥೆಯಲ್ಲಿ ದುಡ್ಡು ಕೊಟ್ಟರೆ ಏನೂ ಕೂಡ ಮಾಡಬಹುದು ಎಂಬ ಸಂದೇಶ ಸಮಾಜಕ್ಕೆ ಹೋದರೆ ಸಮಾಜಕ್ಕೆ ವ್ಯವಸ್ಥೆಯ ಮೇಲೆ ಸಂದೇಹ ಬಂದು ಬಿಡುತ್ತದೆ. ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಮಾಲೀಕತ್ವದ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಅಂಗಡಿಗಳಿಗೆ ಪಂಚಾಯತ್ ರಾಜ್ ಇಲಾಖೆ ಲೈಸೆನ್ಸ್ ಕೊಡುತ್ತದೆ ಅಂದರೆ ಇದಕ್ಕೆ ಸಮಾಜ, ಮಾಧ್ಯಮಗಳು, ಜಾಲತಾಣಗಳು ಬೊಬ್ಬೆ ಹೊಡೆಯ ಬೇಕಾದ ಜರೂರತ್ತು ಇಲ್ಲ. ಅರಣ್ಯ ಇಲಾಖೆಯೇ ಅಥವಾ ಹೆದ್ದಾರಿ ಪ್ರಾಧಿಕಾರವೇ ಒಮ್ಮೆ ಜೆಸಿಬಿಗೆ ಹೇಳಿದರೆ ಕತೆ ಫಿನಿಷ್. ಆದರೆ ಅವರು ಹಾಗೆ ಮಾಡಲ್ಲ. ಅವರು ಹಾಗೆ ಮಾಡದ ಕಾರಣ ಇವತ್ತು ಐವತ್ತಕ್ಕೂ ಹೆಚ್ಚು ಕಳ್ಳಂಗಡಿಗಳು ಲೈಸೆನ್ಸ್ ಗಾಗಿ ಪಂಚಾಯ್ತಿ ಮುಂದೆ ಕ್ಯೂ ನಿಂತಿವೆ. ಅರಣ್ಯ ಇಲಾಖೆ ಮತ್ತು ಹೆದ್ದಾರಿ ಇಲಾಖೆಯ ಈ ವೀಕ್ ನೆಸ್ಸನ್ನು ಪಂಚಾಯತ್ ರಾಜ್ ಅಧಿಕಾರಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಷ್ಟೇ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top