ಮಠಂತಬೆಟ್ಟು ಟೆಂಪಲ್ ಮೇಲೆ ಪ್ರಯೋಗ? ತಗಡ್, ಭಸ್ಮ ಸಿಕ್ಕಿದೆ !

Pattler News

Bureau Report

ಪುತ್ತೂರು ತಾಲೂಕ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಟೆಂಪಲ್ ಮೇಲೆ ಕೆಲವು ದಿನಗಳ ಹಿಂದೆ ಅದೇನೋ ಅಂಡಿಗುಂಡಿ ಪ್ರಯೋಗ ನಡೆದ ಬಗ್ಗೆ ಗುಸುಗುಸು ವೈರಲ್ ಆಗಿದೆ. ಇದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಆವರಣದಲ್ಲಿ ಕೆಲವು ವಸ್ತುಗಳು ಸಿಕ್ಕಿದೆ ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಅಲ್ಲಿ ಕೋಡಿಂಬಾಡಿಯ ಮಠಂತಬೆಟ್ಟುವಿನ ಫೇಮಸ್ ಟೆಂಪಲ್ ನ ಆವರಣದಲ್ಲಿ ಇರುವ ಸ್ಟೇಜ್ ಬದಿಯ ಸೆರೆಯಲ್ಲಿ ಅದೇನೋ ಒಂದು ವಸ್ತು ಗೋಚರಿಸಿದೆ. ಅದು ಏನೆಂದು ನೋಡಲಾಗಿ ಸೆರೆಯಲ್ಲಿ ಒಂದು ಕುಪ್ಪಿ ಮತ್ತು ಕಲರ್ ಕಲರ್ ಭಸ್ಮದ ಕಟ್ಟು ಕಾಣಿಸಿದೆ. ಕುಪ್ಪಿಯೊಳಗೆ ತಗಡ್ ಸುರುಳಿ ಸುತ್ತಿ ಇಡಲಾಗಿದ್ದು ಅದರಲ್ಲಿ ಅದೇನೋ ಕಾಗೆ ಕಾಲಲ್ಲಿ ಬರೆದ ಬಗ್ಗೆ, ಮಕ್ಕಳು ಗೋಡೆಯಲ್ಲಿ ಬರೆದ ವಿಚಿತ್ರ ಚಿತ್ರಗಳ ರೀತಿಯ ಕೆಲವು ರೇಖಾ ಚಿತ್ರಗಳು ಗೋಚರಿಸಿದೆ. ಎಂಥ ಬರೆದಿದ್ದಾನೆ ಅಂತ ಬರೆದವನಿಗೂ ಗೊತ್ತಿಲ್ಲದ ರೀತಿಯಲ್ಲಿ ಮೊಹೆಂಜೋದಾರೋ ಮತ್ತು ಹರಪ್ಪ ಜಂಟಿಯಾಗಿ ಬರೆದ ಬರವಣಿಗೆಯ ಹಾಗಿತ್ತು. ನಂತರ ಈ ಬಗ್ಗೆ ಆಡಳಿತ ಮಂಡಳಿ ಆಚೆ ಉಡುಪಿ ಕಡೆ ಪ್ರಶ್ನೆ ಚಿಂತನೆ ನಡೆಸಿದಾಗ ದೇವಸ್ಥಾನದ ಮೇಲೆ ಪ್ರಯೋಗ ನಡೆದ ಬಗ್ಗೆ, ಮಾಟ, ಮಂತ್ರ, ತಂತ್ರ ಮಾಡಲಾದ ಬಗ್ಗೆ ಕಂಡು ಬಂದಿದೆ. ಆದರೆ ಈ ಕೆಲಸ ಮಾಡಿದ ಕಂಡ್ರೆಕುಟ್ಟಿ ಯಾರೆಂದು ಪ್ರಶ್ನೆ ಚಿಂತನೆಯ ಬಚ್ಚಿರೆಯಲ್ಲಿ ಕಂಡು ಬಂದಿರಲಿಲ್ಲ.

ಹಾಗೆ ದೇವಸ್ಥಾನದ ಮೇಲೆ ಪ್ರಯೋಗ ನಡೆದಿದೆ ಎಂದು ಗೊತ್ತಾಗುತ್ತಲೇ ಆಡಳಿತ ಮಂಡಳಿಗೆ ಚಳಿ ಹಿಡಿದಿದೆ. ದೇವಸ್ಥಾನದ ಮೇಲೆ ಪ್ರಯೋಗ ಮಾಡಿದ, ಮಾಟ ಮಾಡಿದ ಉದ್ದೇಶ ಏನು, ಯಾವ ಕಡೆಯವನು, ಯಾವ ದಿಕ್ಕಿನವನು ಎಂಬ ಪ್ರಶ್ನೆಗೆ ಪ್ರಶ್ನೆಯವನ ಬಳಿ ಉತ್ತರ ಇರಲಿಲ್ಲ. ಪರಿಹಾರ ಮಾಡಿ, ಉಚ್ಚಾಟನೆ ಮಾಡಿ ಎಂದಷ್ಟೇ ಹೇಳಿ ಆಡಳಿತ ಮಂಡಳಿಯನ್ನು ವಾಪಾಸ್ ಕಳಿಸಿದ್ದ. ಹಾಗಾಗಿ ಆಡಳಿತ ಮಂಡಳಿ ಈ ಬಗ್ಗೆ ದೇವಸ್ಥಾನದಲ್ಲಿ ದೋಷ ಪರಿಹಾರ ಪೂಜೆ, ಆ ಪೂಜೆ, ಈ ಪೂಜೆ ಎಲ್ಲಾ ನಡೆಸಿ ಮಾಟವನ್ನು ಉಚ್ಚಾಟನೆ ಮಾಡಿತ್ತು. ಎಲ್ಲವೂ ಸರಿ ಆಯ್ತು ಅನ್ನುವಷ್ಟರಲ್ಲಿ ಕಾಕತಾಳೀಯ ಎಂಬಂತೆ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಿಗೇ ಹೃದಯಾಘಾತ ಆಗಿ ಬಿಡುತ್ತದೆ. ಈ ಬೆಳವಣಿಗೆ ಅವರ ಆರೋಗ್ಯ ಸಮಸ್ಯೆಯಿಂದ ಆಗಿದ್ದರೂ ಜನರಿಗೆ ಮಾತ್ರ “ಇದೆ, ಇಲ್ಲೊಂದು ಸಮಸ್ಯೆ ಇದೆ ” ಎಂಬ ಸಂಶಯ ಪಿಶಾಚಿ ಹೆಗಲೇರಿ ಕುಂತಿದೆ.

ಹಾಗೆ ದೇವಸ್ಥಾನದಲ್ಲಿ ಸಿಕ್ಕಿದ ಮಾಟ ಪ್ರಯೋಗದ ವಸ್ತುಗಳಿಂದ ಹಿಡಿದು, ನಂತರ ನಡೆದ ಪ್ರಶ್ನೆ ಚಿಂತನೆ, ಪರಿಹಾರದ ತನಕ ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳು ಎದ್ದಿದೆ. ಪ್ರಶ್ನೆ 1) ದೇವಸ್ಥಾನದ ಮೇಲೆ, ದೇವರ ಮೇಲೆ ಯಾರಾದರೂ ಮಾಟ ಪ್ರಯೋಗ ಮಾಡುತ್ತಾರಾ? ಮಾಡಿದ್ರೂ ಯಾಕಾಗಿ ಮಾಡಿರಬಹುದು? ಉದ್ದೇಶ ಏನು?ದೇವರಿಗೆ ಮಾಟ ಹಿಡಿಯುತ್ತಾ? ಮಾಟ ಫಾರ್ ಗೈನಿಂಗ್ ಆಗಿದ್ದರೆ ಏನು ಗೈನಿಂಗು? 2) ಮಾಟ ಮಾಡಿರುವ ಮಾಟಗಾರ ಯಾರು? ದೇವಿ ದೇವಸ್ಥಾನಕ್ಕೆ ಮಾಟ ಪ್ರಯೋಗ ಮಾಡಿ ಕೊಟ್ಟ ಆ ಕ್ಷುದ್ರ ಮಾಂತ್ರಿಕ ಯಾರು? ಅಡ್ರೆಸ್ ಬೇಕಿತ್ತು ಅವಂದು.3) ಪ್ರಶ್ನೆ ಚಿಂತನೆ ಮಾಡಿದ ಉಡುಪಿಯವರಿಗೆ ಮಾಟಗಾರನ ಬಗ್ಗೆ ಮಾಹಿತಿ ಇದೆಯಾ? ಇದ್ದಿದ್ದರೂ ಆಡಳಿತ ಮಂಡಳಿಯವರಿಗೆ “ಹೆಸರು ಬೇಡ, ಊರು ಬೇಡ” ಅಂತ ಯಾಕೆ ಹೇಳಿದ್ದು? ಕಡೇ ಪಕ್ಷ ಇಂಥ ದಿಕ್ಕಿನಿಂದ ಮಾಟ ಮಾಡಲಾಗಿದೆ ಎಂದು ಪ್ರಶ್ನೆಯವರು ಹೇಳಿದ್ದರೂ ಆ ಕಡೆ ನಾಯಿ ಬಿಡಬಹುದಿತ್ತು. ಆದರೆ ಪ್ರಶ್ನೆಯವರು ಯಾಕೆ ಮಾಟಗಾರನ ಹೆಸರು ಹೈಡ್ ಮಾಡಿದರು? 4) ದೇವರ ಮೇಲೆ ಪ್ರಯೋಗ ಮಾಡಿದ್ದಾ ಅಥವಾ ಆಡಳಿತ ಮಂಡಳಿ ಮೇಲೆಯಾ? 5) ಸದ್ರಿ ದೇವಸ್ಥಾನದ ಪೂಜೆಯ ಭಟ್ರೇ ಅದು ಇದು ಹೇಳ್ತಾರಂತೆ ಅವರಿಗೆ ಪ್ರಯೋಗ ನಡೆಯುವ ಸಾಧ್ಯತೆ ಬಗ್ಗೆ ಏನೂ ಗೊತ್ತಾಗಿಲ್ವಾ? ಅವರ ಮೇಲೆ ಏನಾದರೂ ತಿರ್ಗಿಸಿ ಪ್ರಯೋಗ ಮಾಡಲಾಯಿತಾ? ದೇವಸ್ಥಾನವನ್ನು ನಂಬಿಕೆಯ,ಭಕ್ತಿಯ ಮಂಡಿ ಮಾಡಿಕ್ಕೊಂಡಿದ್ದಕ್ಕೆ ಏನಾದರೂ ಯಾರಾದರೂ ಕೋಪಗೊಂಡರಾ? 6) ಮಾಟ ಪ್ರಯೋಗದ ಉಚ್ಚಾಟನೆ ಸರಿ ಆಗಿಲ್ವಾ? ಚಂದ್ರ ಲೋಕಕ್ಕೆ ಉಪಗ್ರಹ ಬಿಟ್ಟ ಹಾಗೆ ಆಯ್ತಾ? ನಿರುದ್ಯೋಗಿ ಕ್ಷುದ್ರ ಶಕ್ತಿಗಳು ಇನ್ನೂ ಅಲ್ಲೇ ಇದೆಯಾ? ಉಚ್ಚಾಟನೆ ಪ್ರಹಸನ ದುಡ್ಡು ಕೊಟ್ಟು ನದಿ ಈಜಿದ ಹಾಗೆ ಆಯ್ತಾ? 7) ಆಡಳಿತ ಮಂಡಳಿ ಅಧ್ಯಕ್ಷರ ಹೃದಯಾಘಾತಕ್ಕೂ ಈ ಪ್ರಯೋಗಕ್ಕೂ ಏನಾದರೂ ಲಿಂಕ್ ಇದೆಯಾ ಅಥವಾ ಆ ಘಟನೆ ಕೇವಲ ಕಾಕತಾಳೀಯ ಮಾತ್ರಾನಾ? 8) ದೇವಸ್ಥಾನದ ವಿರೋಧಿಗಳು, ಜಾಮೀನು ಸಂಬಂಧಿತ, ಏಳ್ಗೆಯನ್ನು ಸಹಿಸದವರು ಏನಾದರೂ ಮಂತ್ರಿಸಿ ತಂದು ಹಾಕಿದ್ದಾರಾ? ಬಗಲಿನ ದುಷ್ಮನ್ ಗಳು ಮತ್ತು ಹೊರಗಿನ ದುಷ್ಮನ್ ಗಳು ಕೈಜೋಡಿಸಿ ಜಂಟಿ ಕಾರ್ಯಾಚರಣೆ ನಡೆಸಿದರಾ? 9) ಅದು ನಾಯಿ ಕೆಲಸ ಅಂತಲೂ ಅಭಿಪ್ರಾಯ ಇದೆ. ಆದರೆ ನಾಯಿ ಅದನ್ನು ಹೊತ್ಕೊಂಡು ತಂದು ಸ್ಟೇಜ್ ಪಕ್ಕದ ಸೆರೆಯಲ್ಲಿ ಇಡುವಷ್ಟು ಅದಕ್ಕೂ ಪುರುಸೊತ್ತು ಇರಲ್ಲ. 10) ಯಾರೋ ಭಕ್ತರು ಎಲ್ಲಿಂದಲೋ ತಾರಾಯಿ ಮಂತ್ರಿಸಿ ಮನೆಗೆ ಹೋಗುವವರು ದೇವಿ ದರ್ಶನಕ್ಕೆ ಬಂದು ತಗಡಿನ ಬಾಟ್ಲಿ ಮತ್ತು ಭಸ್ಮದ ಕಟ್ಟನ್ನು ಸ್ಟೇಜ್ ಪಕ್ಕದ ಸೆರೆಯಲ್ಲಿ ಇಟ್ಟು ವಾಪಾಸ್ ಹೋಗುವ ಅಂಬೆರೆಪ್ಪಿನಲ್ಲಿ ಭಸ್ಮದ ಕಟ್ಟನ್ನು ಮರೆತು ಹೋಗಿರುವ ಶಂಕೆ. ಇತ್ಯಾದಿ .

ಹಾಗೆ ಕೋಡಿಂಬಾಡಿಯ ಈ ಪ್ರಸಿದ್ಧ ದೇವಸ್ಥಾನದ ಬಗ್ಗೆ ಈಗ ಎದ್ದಿರುವ ಎಲ್ಲಾ ಗುಸುಗುಸುಗಳು ಸಂಪೂರ್ಣ ಉಚ್ಚಾಟನೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ದೇವಸ್ಥಾನದ ಮೇಲೆ ಪ್ರಯೋಗ ಮಾಡಿದವನು ಯಾರು ಮತ್ತು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ತನಕ ಈ ಪ್ರಶ್ನೆ ತಲೆಯಲ್ಲಿ ಜುಂ ಜುಂ ಮಾಡುತ್ತಾ ಇರುವ ಸಾಧ್ಯತೆ ಇದೆ. ಯಾಕೆಂದರೆ “ಇದೆ, ಇಲ್ಲಿ ಏನೋ ಇದೆ, ಇಲ್ಲೊಂದು ಸಮಸ್ಯೆ ಇದೆ”.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top