
ಮಡಿಕೇರಿ ಗ್ರಾಮಾಂತರ ಪೋಲಿಸ್ ಸರಹದ್ದಿನ ಅಂಡರಲ್ಲಿ ಬರುವ ಇನ್ನವಳವಾಡಿ ಗ್ರಾಮದಲ್ಲಿ ಪಿಕಪ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಗಾಂಜಾ ಮೆನ್ ಗಳನ್ನು ಪೋಲಿಸರು ದಸ್ತಗಿರಿ ಮಾಡಿ ಬಂದೀಖಾನೆಗೆ ಸೆಂಡ್ ಮಾಡಿದ್ದಾರೆ. ಮಡಿಕೇರಿಯಲ್ಲಿ ಚಳಿ ಚಳಿಯೂ ಜೋರು ಮತ್ತು ಈಗೀಗ ಗಾಂಜಾ ಹೊಗೆಯೂ ಜೋರಾಗುತ್ತಿದೆ.

ಹಾಗೆಂದು ಕೊಡಗು ಪೋಲಿಸರು ಮಾದಕ ವಸ್ತುಗಳ ಹೊಗೆ ಸೇವಿಸಿ ಗಾಳಿಯಲ್ಲಿ ನಡೆಯುವ ಮತ್ತು ಮಾದಕವಸ್ತುಗಳ ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರ ಬಗ್ಗೆ ನಿಗಾ ಇಡಲು ತುರ್ತು ಸಹಾಯವಾಣಿಯನ್ನೇ ತೆರೆದು ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಿ ಲಾಠಿ ಹಿಡಿದು ಕಾದು ಕುಂತಿದ್ದರು. ರಿಸಲ್ಟ್ ಒಳ್ಳೆದಿದೆ. ಸಾರ್ವಜನಿಕರು ಮಡಿಕೇರಿ ಪೋಲಿಸರ ಅರ್ಜೆಂಟ್ ಸಹಾಯ ವಾಣಿ 112 ಗೆ ಪೋನ್ ಎತ್ತಿಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಇದೀಗ ಮಡಿಕೇರಿ ಗ್ರಾಮಾಂತರ ಪೋಲಿಸರ ಸರಹದ್ದಿನಲ್ಲಿ ಬರುವ ಇನ್ನವಳವಾಡಿ ಗ್ರಾಮದಲ್ಲಿ ಚಿಲ್ಲರೆ ಗಾಂಜಾ ವಹಿವಾಟು ಮಾಡುತ್ತಿದ್ದ ಮೂವರು ಗಾಂಜಾ ಮೆನ್ ಗಳ ಬಗ್ಗೆ ಪೋಲಿಸರಿಗೆ ಮಾಹಿತಿ ಬಂದಿತ್ತು. ಆಪರೇಷನ್ ಇನ್ನವಳವಾಡಿ ಎಂದು ಮಡಿಕೇರಿ ರೂರಲ್ ಪೋಲಿಸರು ಧಾಳಿ ನಡೆಸಿದರೆ ಗಾಂಜಾ ಮೆನ್ ಗಳು ಗಾಂಜಾ ಸಮೇತ ಸಿಕ್ಕಿ ಬಿದ್ದಿದ್ದಾರೆ. ಜೊತೆಗೆ ಒಂದು ಪಿಕಪ್ ಸಹ. ಹಾಗೆ ಇನ್ನವಳವಾಡಿಯಿಂದ ಮೂವರನ್ನೂ ಕರೆತಂದ ಪೋಲಿಸರು ಆರೋಪಿಗಳ ವಿರುದ್ಧ ಸೆಕ್ಷನ್ 66/2026, ಕಲಂ:20(B)(II)(A)NDPS act ಅಡಿಯಲ್ಲಿ ಕೇಸ್ ದಾಖಲಿಸಿ ಬಂದೀಖಾನೆಗೆ ಬಿಟ್ಟು ಬಂದಿದ್ದಾರೆ.

ಹಾಗೆ ಮಡಿಕೇರಿ ಗ್ರಾಮಾಂತರ ಪೋಲಿಸರು ಇನ್ನವಳವಾಡಿ ಗ್ರಾಮದಿಂದ ಕರೆತಂದ ಗಾಂಜಾ ಮೆನ್ ಗಳನ್ನು ಉಡತ್ ಮೊಟ್ಟೆ ಅಭಿಲಾಷ್, ಆಕಾಶ್ ಮಕ್ಕಂದೂರು ಮತ್ತು ಮಿಲನ್ ಯಾನೆ ಹಾಲೇರಿ ವಿಲನ್ ಎಂದು ಗುರುತಿಸಲಾಗಿದೆ. ಇವರಿಂದ ಪೋಲಿಸರು ಎರಡು ಕಿಲೋ 136 ಗ್ರಾಂ ಗಾಂಜಾ, ಒಂದು ಮಹೀಂದ್ರಾ ಪಿಕಪ್ಪು ಮತ್ತು ಚಡ್ಡಿಯ ಕಿಸೆಯಲ್ಲಿ ಅಡಗಿಸಿಟ್ಟಿದ್ದ ರೂಪಾಯಿ 1,310 ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಇನ್ನು ಪೋಲಿಸ್ ತನಿಖಾ ತಂಡದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಪಿ.ಎ, ಸರ್ಕಲ್ ಚಂದ್ರಶೇಖರ್, ಸಬ್ ಇನ್ಸ್ ಪೆಕ್ಟರ್ ಗೋಪಾಲ, ಎಎಸೈ ಚರ್ಮಣ್ಣ, ಹೆಡ್ ಕಾನ್ಸ್ ಟೇಬಲ್ ಗಳಾದ ಮಹೇಶ್, ರಾಯ್, ಯೋಗೇಶ್, ಪ್ರವೀಣ್, ರಾಜೇಶ್, ಶರತ್ ರೈ ಮತ್ತು ಪೋಲಿಸ್ ಕಾನ್ಸ್ ಟೇಬಲ್ ಗಳಾದ ಚೆನ್ನಕೇಶವ, ರುದ್ರ, ಮಲ್ಲಿಕಾರ್ಜುನ, ಈರಪ್ಪ ವಠಾರ ಕಾರ್ಯಾಚರಿಸಿದ್ದರು ಎಂದು ತಿಳಿದುಬಂದಿದೆ.