
ಪಂಜ ಸೀಮೆಯ ದೇವರ ಆಲಯದಲ್ಲಿ ಅವ್ಯವಹಾರ ನಡೆದಿದೆ ಎಂದು ಭಕ್ತರ ಸೋಗಿನಲ್ಲಿ ಬಂದ ದೇಶಭಕ್ತರು ಒಂದು ಸೆಟ್ಟಿಂಗ್ ಮೀಟಿಂಗ್ ಮಾಡಿದ್ದು ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ರಾಜೀನಾಮೆ ಕೊಡಬೇಕೆಂದು ಒತ್ತಾಯ ಮಾಡಿದ ಘಟನೆ ಮೊನ್ನೆ ನಡೆದಿದೆ. ಅವ್ಯವಹಾರ ಮಾಡಿಲ್ಲ, ನಡೆದಿಲ್ಲ ಸತ್ಯ ಪ್ರಮಾಣಕ್ಕೆ ಸಿದ್ಧ ಎಂದು ದೇವಿ ಘೋಷಣೆ ಮಾಡಿದ್ದಾರೆ. ಅಷ್ಟೂ ಅಷ್ಟ ದಿಕ್ಕುಗಳಿಂದ ನೋಡಿದರೂ ದೇವಸ್ಥಾನದಲ್ಲಿ ಎಲ್ಲೆಲ್ಲಿ ಅವ್ಯವಹಾರ ಆಗಿದೆ ಎಂದು ಕೇಳಿದರೆ ಈ ಬಗ್ಗೆ ಕರೆಕ್ಟ್ ಮಾಹಿತಿ ಯಾರಲ್ಲೂ ಇಲ್ಲ. ಎಲ್ಲರೂ ಬಂದು ಗುಂಪಿನಲ್ಲಿ ಗೋವಿಂದ ಹಾಕಿದ್ದಾರೆ ಮತ್ತು ಮೊಸರಲ್ಲಿ ಕಲ್ಲು ಹುಡುಕಿದ್ದಾರೆ.

ಹಾಗೆಂದು ಪಂಜ ದೇವಸ್ಥಾನದಲ್ಲಿ ಇದೆಲ್ಲ ಕಿರಿಕ್ ಶುರುವಾಗಲು ಚಿಕ್ಕ ಚಿಕ್ಕ ಕಾರಣಗಳಿವೆ. ಕಾನತ್ತೂರು ಫ್ಯಾಮಿಲಿಯ ದೇವಿ ಪ್ರಸಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಡಳಿತ ಶುರು ಮಾಡಿದ ದಿನದಿಂದ ಕೆಲವು ಲೋಕಲ್ ನಂಜೆಲರಿಗೆ ಬಂಜಿಯಲ್ಲಿ ಪುರಿ ಪೆರ್ಚಿತ್ತು. ಯಾವಾಗ ದೇವಿಯನ್ನು ಲಗಾಡಿ ತೆಗೆಯುವುದು ಎಂದು ಸೂಕ್ತ ಸಮಯ ಸಂದರ್ಭಕ್ಕೆ ಬಕ ಪಕ್ಷಿಯಂತೆ ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ದೇವಿಯೂ ಅಧ್ಯಕ್ಷ ಪಟ್ಟ ಸಿಕ್ಕಿದ ಖುಷಿಯಲ್ಲಿ, ಕೆಲಸ ಮಾಡುವ ಗಡಿಬಿಡಿಯಲ್ಲಿ, ದೇವಸ್ಥಾನದ ಹೆಸರನ್ನು ಅಷ್ಟ ದಿಕ್ಕುಗಳಿಗೂ ಪಸರಿಸುವ ತರಾತುರಿಯಲ್ಲಿ ಕೆಲವು ಸ್ವಯಂ ನಿರ್ಧಾರಗಳನ್ನು ತೆಗೆದುಕೊಂಡು ಕಾಮಗಾರಿಗಳನ್ನು ಮಾಡಿಸಿದ್ದರು. ಹಾಗೆ ದೇವಿಯ ಸ್ವಯಂ ನಿರ್ಧಾರಗಳು ದೇವಸ್ಥಾನಕ್ಕೆ ಪೂರಕವಾಗಿದ್ದರೂ ಜನರಿಗೆ ಅದು ಸರ್ವಾಧಿಕಾರದ ಹಾಗೆ ಕಂಡಿತು. ಕಾಮಗಾರಿ ವಿಷಯಗಳಲ್ಲೂ ದೇವಿ ಒಳ್ಳೇಯ ಕೆಲಸಗಳನ್ನೇ ಮಾಡಿದ್ದಾರೆಯೇ ಹೊರತು ಕಳಪೆ ಕಾಮಗಾರಿ ಎಲ್ಲೂ ಮಾಡಿಲ್ಲ. ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸಿ ಜನರಿಂದ ಶಹಬ್ಬಾಸ್ ಗಿಟ್ಟಿಸಿಕೊಳ್ಳುವ ಭರದಲ್ಲಿ ಆಚೆ ಅಕೌಂಟಿದ ಈಚೆ ಅಕೌಂಟಿಗೆ, ಯಾವುದೋ ಫಂಡ್ಸ್ ತೆಗೆದು ಇನ್ಯಾವುದೋ ಕೆಲಸ ಮಾಡಿ ಮುಗಿಸಿದ್ದಾರೆ. ಈ ಗಡಿಬಿಡಿಯಲ್ಲಿ ಲೆಕ್ಕಪತ್ರ ಕೂಡ ಸರಿ ಮೈನ್ ಟೇನೆನ್ಸ್ ಮಾಡದಿರುವ ಬಗ್ಗೆ ಡೌಟ್ಸ್ ಇದೆ. ಯಾಕೆಂದರೆ ತಾನು ಮಾಡಿದ ಕೆಲಸಗಳ ಬಗ್ಗೆ ಜನ ನನಗೆ ಶಹಬ್ಬಾಸ್ ಗಿರಿ ಕೊಡುತ್ತಾರೆ, ಬೆನ್ನು ತಟ್ಟುತ್ತಾರೆ ಎಂದೇ ಭಾವಿಸಿದ್ದರು. ಆದರೆ ಈಗೀಗ ಜನರಿಗೆ ಮರೆವು ಜಾಸ್ತಿ. ಒಳ್ಳೇ ಕೆಲಸ ಮಾಡಿದ್ರೂ ಅದರಲ್ಲೂ ಏನೋ ಸಂಶಯ ಪಡುವಂತವರು. ಅದಕ್ಕೆ ಅವರು ದೇವಿಗೆ ಶಹಬ್ಬಾಸ್ ಗಿರಿ ಕೊಡಲಿಲ್ಲ, ಬೆನ್ನು ತಟ್ಟಲಿಲ್ಲ. ಲೆಕ್ಕ ಕೇಳಿದರು. ದೇವಿ ಬೆವರಿ ಬಿಟ್ಟರು. ಅಷ್ಟೇ.

ಹಾಗೆಂದು ಈ ಗಲಾಟೆ ಶುರುವಾಗಲು ಮೂಲ ಕಾರಣ ದೇವಿ ಹೊರಗಿನವರು ಎಂಬ ಅಭಿಪ್ರಾಯ. ಹೊರಗಿನವರ ಆಡಳಿತ ಇಲ್ಲಿ ಬೇಡ, ಊರಿನಲ್ಲಿ ಯಾರೂ ಇಲ್ವಾ, ಊರಿನ ಕಳ್ಳ ಆದರೂ ಆಗಬಹುದು ಪರವೂರಿನ ಸೊಬಗ ಬೇಡ ಅನ್ನೋ ಮೆಂಟಾಲಿಟಿ. ಇನ್ನು ದೇವಿ ಪ್ರಸಾದ್ ದೇವಸ್ಥಾನದ ಹಿತ ದೃಷ್ಟಿಯಿಂದ ಒಂದು ನಾಲಕ್ಕು ಜನ ನೌಕರರನ್ನು ಮನೆಗೆ ಕಳುಹಿಸಿದ್ದರು. ಅದರಲ್ಲಿ ಹದಿನಾಲ್ಕು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದ ಒಬ್ಬ ಅಡುಗೆ ಭಟ್ರ ಬಗ್ಗೆ, ಅವರ ರುಚಿ ರುಚಿಯಾದ ಅಡುಗೆ ಬಗ್ಗೆ ಕಂಪ್ಲೈಂಟ್ ಬಂದ ಕಾರಣ ಅವರ ಅಡುಗೆ ನಿಲ್ಲಿಸಿ ಟಾಟಾ ಮಾಡಲಾಗಿತ್ತು. ಮನೆಗೆ ಹೋದ ಇನ್ನೊಬ್ಬ ಯಾರೆಂದರೆ ತೋಟದ ಮಾಲಿ. ಪಂಜ ದೇವರಿಗೆ ಒಂದು ಎಂಟ್ನೂರು ಅಡಿಕೆ ಮತ್ತು ಇನ್ನೂರು ತೆಂಗಿನ ತೋಟವಿದೆ. ಅದನ್ನು ನೋಡಿಕೊಳ್ಳಲು ದೇವಸ್ಥಾನದ ವತಿಯಿಂದ ಒಬ್ಬ ಕೆಲಸಗಾರನನ್ನು ನೇಮಿಸಲಾಗಿತ್ತು ಮತ್ತು ಅವನಿಗೆ ತಿಂಗಳ ಇಪ್ಪತ್ತು ಸಾವಿರ ಸಂಬಳ ಕೊಡಲಾಗುತ್ತಿತ್ತು. ಇದೊಂದು ವೇಸ್ಟ್ ಬಾಡಿ, ಅವನು ಕೆಲಸ ಮಾಡಲ್ಲ ಎಂದು ಅವನನ್ನು ಮೆಲ್ಲ ನ್ಯೂಟ್ರಲ್ ಮಾಡಿ ಬಿಡಲಾಗಿತ್ತು. ಇನ್ನು ಚೆಂಡೆಯವನನ್ನು ಕೂಡ ಕೈಬಿಡಲಾಗಿದ್ದು ಅವನು ಚೆಂಡೆಗಿಂತ ಜಾಸ್ತಿ ತೆಂಗಿನ ಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಎಂಬ ಕಾರಣಕ್ಕೆ ಡಿಶುಂ ಮಾಡಲಾಗಿತ್ತು. ಇನ್ನು ಇವರ ಜೊತೆ ಜೊತೆಗೆ ಒಬ್ಬಳು ಪೊಣ್ಣು ಸ್ಟಾಫನ್ನು ಕೂಡ ಕೈಬಿಡಲಾಗಿತ್ತು. ಈ ಪೊಣ್ಣು ಸ್ಟಾಫ್ ಕೈಬಿಟ್ಟ ವಿಚಾರಕ್ಕೆ ಸಂಬಂಧ ಪಟ್ಟಂತೆ ದೇವಸ್ಥಾನಕ್ಕೆ ಸಂಬಂಧ ಪಟ್ಟ ಪರಮ ಪೂಜ್ಯರೊಬ್ಬರು ಭಾರೀ ತಗಾದೆ ತೆಗೆದ ಬಗ್ಗೆ ಮಾಹಿತಿ ಇದೆ. “ಅವಳನ್ನು ಬಿಟ್ಟರೆ ದೇವಸ್ಥಾನದ ಕೀ ಕೊಟ್ಟು ಹೋಗುತ್ತೇನೆ” ಎಂದು ಪರಮ ಪೂಜ್ಯರು ಆಡಳಿತ ಮಂಡಳಿಗೆ ಬೆದರಿಕೆ ಕೂಡ ಹಾಕಿದ್ದರು ಎಂದು ತಿಳಿದುಬಂದಿದೆ. ಆದರೆ ಪರಮಪೂಜ್ಯರನ್ನು ಕ್ಯಾರೇ ಮಾಡದ ದೇವಿ ” ಹೋಗುವುದಿದ್ದರೆ ಹೋಗಿ, ಬೇರೆ ಜನ ರೆಡಿ ಉಂಟು” ಎಂದು ಪೂಜ್ಯರಿಗೇ ತಿರುಗೇಟು ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಪರಮಪೂಜ್ಯರು ದೇಶಭಕ್ತರಿಗೆ ಕಾಲ್ ಮಾಡಿದ್ದರು ಮತ್ತು ದೇವಿ ವಿರುದ್ಧ ಚಾಡಿ ಹೇಳಿದ್ದರು. ಹಾಗೆ ದೇವಿಯನ್ನು ಲಗಾಡಿ ತೆಗೆಯಲು ಬಹುಪಕ್ಷಿಯಂತೆ ಕಾಯುತ್ತಿದ್ದ ದೇಶಭಕ್ತರು ಒಮ್ಮೆಲೇ ಭಕ್ತರ ಸೋಗಿನಲ್ಲಿ ಒಂದು ಸೆಟ್ಟಿಂಗ್ ಮೀಟಿಂಗ್ ಮಾಡಿ ದೇವಿ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದಾರೆ. ಇದೇ ದೇಶಭಕ್ತರು ಪಂಜ ಸೊಸೈಟಿಯಲ್ಲಿ ಮಾಡಿದ ಕೆಲಸಗಳು, ಹಾಲಿನ ಸೊಸೈಟಿಯಲ್ಲಿ ಪುಂಡಿ ತಿಂದು ಹಾಲು ಕುಡಿದದ್ದು, ಪಂಚಾಯ್ತಿಯಲ್ಲಿ ಮಾಡಿದ ಕಾಮಗಾರಿಗಳು ಇವತ್ತಿಗೂ ಜನಜನಿತವಾಗಿದೆ. ಇದೀಗ ಇದೇ ದೇಶಭಕ್ತರು ಭಕ್ತರ ಸೋಗಿನಲ್ಲಿ ದೇವಸ್ಥಾನದಲ್ಲಿ ಲ್ಯಾಂಡ್ ಆಗಿದ್ದಾರೆ. ಅವ್ಯವಹಾರ ಮಾಡಿದವರೇ ಅವ್ಯವಹಾರ ಆಗಿದೆ ಎಂದು ಕೇಳಲು ಬಂದರೆ ಯಾಕೋ ಅಲಿಬಾಬಾ ಮತ್ತು ಅವನ ಸಂಗಡಿಗರ ನೆನಪಾಗುತ್ತದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅಂತ ಯಾರೋ ಹೇಳಿದ್ದಾರೆ. ಲೆಕ್ಕ ಇರಬಹುದು, ಲೆಕ್ಕಾಚಾರದಲ್ಲಿ ಸ್ವಲ್ಪ ತಪ್ಪಿರಬಹುದು ಅಷ್ಟೇ.