
ಕಳೆದ ಕೆಲವು ದಿನಗಳ ಹಿಂದೆ ಪಂಜದ ಚಿಕನ್ ಸೆಂಟರ್ ಒಂದರ ಮೇಲೆ ಸುಳ್ಯ ತಹಶೀಲ್ದಾರ್ ಧಾಳಿ ನಡೆಸಿದ್ದು ಚಿಕನ್ ಸೆಂಟರಲ್ಲಿದ್ದ ಇಪ್ಪತ್ತು ಗ್ಯಾಸ್ ಸಿಲಿಂಡರ್ ಗಳನ್ನು ಸೀಜ್ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ ನಂತರ ಗ್ಯಾಸ್ ಕೇಸ್ ಪುಸ್ಕ ಆದ ಬಗ್ಗೆ ಗುಸುಗುಸು ಇದ್ದು ತಹಶೀಲ್ದಾರ್ ಕೇಸನ್ನು ಯಾಕೆ ಪೆಂಡಿಂಗ್ ಇಟ್ಟಿದ್ದಾರೆ ಎಂದು ಒಂದು ಚಿಕ್ಕ ಅನುಮಾನ ಸಾರ್ವಜನಿಕರಲ್ಲಿ ಎದ್ದಿದೆ.
ಅಲ್ಲಿ ಪಂಜದ ಟೆಂಪಲ್ ರೋಡಿನ ಚಿಕನ್ ಸೆಂಟರ್ ಒಂದರಲ್ಲಿ ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ ಗಳ ವೈವಾಟ್ ನಡೆಯುವ ಬಗ್ಗೆ ಕಂಪ್ಲೈಂಟ್ ಗಳಿತ್ತು. ಚಿಕನ್ ಸೆಂಟರ್ ಧನಿಗಳು ತನ್ನ ಇಡೆಪುಡೆ ಖರ್ಚಿಗೆ ಅನಧಿಕೃತವಾಗಿ, ಅಕ್ರಮವಾಗಿ ಸಿಲಿಂಡರ್ ಶೇಖರಣೆ ಮಾಡಿ ಅದನ್ನು ಜಾಸ್ತಿ ಕ್ರಯಕ್ಕೆ ಮಾರುತ್ತಿದ್ದರು ಎಂದು ದೂರಿತ್ತು. ಸಿಂಗೊಡೆಗೊಮ್ಮೆ, ಸಂಕ್ರಾಂತಿಗೊಮ್ಮೆ ಗ್ಯಾಸ್ ಉರಿಸುವ ಪರಮ ಕುರೆಗಳ ಹೆಚ್ಚುವರಿ ಸಿಲಿಂಡರ್ “ಎಂಕಿಪ್ಪಡ್” ಎಂದು ಕಲೆಕ್ಷನ್ ಮಾಡಿಟ್ಟುಕ್ಕೊಂಡು, ಗ್ಯಾಸಿನಲ್ಲೇ ಬೆಂದ್ರ್ ಕಾಯಿಸಿ ಸ್ನಾನ ಮಾಡುವ ಪರಮ ಖರ್ಚಿಗಾರರಿಗೆ ತಿಂಗಳಿಗೆ ಎರಡು ಮೂರು ಅಂಡೆಗಳನ್ನು ಹೆಚ್ಚು ಹೆಚ್ಚು ರೇಟಿಗೆ ಈ ಚಿಕನ್ ಸೆಂಟರ್ ನಲ್ಲಿ ಸೇಲ್ ಮಾಡಲಾಗುತ್ತಿತ್ತು. ಒಮ್ಮೊಮ್ಮೆ ಭಾರೀ ಅರ್ಜೆಂಟ್ ಸಮಯದಲ್ಲಿ ಅಂಡೆ ರೇಟು ಬಂಟಮಲೆಯಷ್ಟು ಎತ್ತರಕ್ಕೆ ಏರುತ್ತಿತ್ತು ಎಂದು ತಿಳಿದುಬಂದಿದೆ. ಡೊಮೆಸ್ಟಿಕ್ ಮತ್ತು ಕಮರ್ಶಿಯಲ್ ಎರಡೂ ಅಂಡೆಗಳೂ ಈ ಚಿಕನ್ ಸೆಂಟರ್ ನಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳ ಬಹುದು ಎಂದು ಚಿಕನ್ ಧಣಿಗಳು ಡಂಗುರ ಸಾರಿದ್ದರು. ಅದೇ ಪ್ರಕಾರ ವಹಿವಾಟೂ ಎಗ್ಗಿಲ್ಲದೆ ನಡೆಯುತ್ತಿತ್ತು.

ಹಾಗೆ ಪಂಜದ ಟೆಂಪಲ್ ರೋಡಿನ ಚಿಕನ್ ಸೆಂಟರ್ ನಲ್ಲಿ ಅಂಡೆ ವೈವಾಟ್ ನಡೆಯುವ ಬಗ್ಗೆ ಸುಳ್ಯ ತಹಶೀಲ್ದಾರ್ ಗೆ ಸುದ್ದಿ ಮುಟ್ಟಿಸಲಾಗಿತ್ತು. ಹಾಗೆ ಕಳೆದ ಜೂನ್ ತಿಂಗಳಲ್ಲಿ ತಹಶೀಲ್ದಾರ್ ಚಿಕನ್ ಸೆಂಟರ್ ಮೇಲೆ ಧಾಳಿ ನಡೆಸಿ ಇಪ್ಪತ್ತು ಅಂಡೆಗಳನ್ನು ಸೀಜ್ ಮಾಡಿ ಮಾವಿನ ಕಟ್ಟೆ ಗೋಡೌನ್ ಗೆ ಸಾಗಿಸಿದ್ದರು. ನಂತರ ಸುದ್ದೀ ಇಲ್ಲ. ಅಂಡೆ ಏನಾಯ್ತು? ಚಿಕನ್ ಧಣಿಗೆ ಏನಾಯ್ತು, ಗ್ಯಾಸ್ ಕೇಸ್ ಏನಾಯ್ತು? ಫೈನ್ ಎಷ್ಟು ಹಾಕಿದ್ರು? ಎಂಥ ಕೂಡ ಇಲ್ಲ. ಈ ಬಗ್ಗೆ ಚಿಕನ್ ಧಣಿಗೆ ಫೋನ್ ಮಾಡಲಾಗಿ ತಹಶೀಲ್ದಾರ್ “ಬೇಕೂಂತ ಬಂದದ್ದಲ್ಲ, ಎಲ್ಲಿಗೋ ಹೋದವರು ಬಂದದ್ದು”ಎಂದು ವಂದೇ ಭಾರತ್ ಬಿಟ್ಟಿದ್ದಾನೆ. ತಹಶೀಲ್ದಾರ್ ಎಲ್ಲಿಗೋ ಹೋದವರು ಯಾಕೆ ಚಿಕನ್ ಸೆಂಟರ್ ಗೆ ಬರಬೇಕು? ದಾರಿ ತಪ್ಪಿ ಬರ್ಲಿಕ್ಕೆ ಇಲ್ಲ. ಆಯ್ತು ಬಂದವರು ಈಗ ಯಾಕೆ ಸುಮ್ಮನೆ ಕುಂತಿದ್ದಾರೆ ಎಂಬುದೇ ಪ್ರಶ್ನೆ. ಕೇಸ್ ಲೂಸ್ ಮಾಡಿದ್ರಾ?
ಅಲ್ಲ ಮಾರಾಯ್ರೆ, ಆ ನಟ್ಟ ನಡು ಪೇಟೆಯಲ್ಲಿ ರಾಜಾರೋಷವಾಗಿ ಅಂಡೆ ಸ್ಟಾಕ್ ಮಾಡಿಕೊಂಡು ವೈವಾಟ್ ಮಾಡುತ್ತಾರಲ್ಲ ಮತ್ತು ಅದನ್ನು ನೋಡಿಕೊಂಡು ಈ ವ್ಯವಸ್ಥೆ ಸುಮ್ಮನೆ ಕುಂತಿದೆಯಲ್ಲ. ಜನನಿಬಿಡ ಪೇಟೆ, ಮಕ್ಕಳು ಮರಿಗಳು ಅಡ್ಡಾಡುವ ಪ್ರದೇಶ, ದೇವಸ್ಥಾನದ ದಾರಿ, ವಾಹನಗಳ ದಟ್ಟಣೆ ಈ ಎಲ್ಲದರ ನಡುವೆ ಇವನ ಅಂಡೆ ಸ್ಟಾಕ್. ಎಲ್ಲಿಯಾದರೂ ಢಂ ಅಂದರೆ?