ದೀದೀ ನಾಡಲ್ಲಿ ಸುಳ್ಯ ಪೋಲಿಸರು!

Pattler News

Bureau Report

ಸರಿ ಸುಮಾರು 2022ರಲ್ಲಿ ಸುಳ್ಯದ ಬಾರೊಂದರಲ್ಲಿ ಸಪ್ಲೈ ಕೆಲಸ ಮಾಡುತ್ತಾ ಇದ್ದು ತನ್ನ ಜೊತೆಗಾತಿಯನ್ನು ಮರ್ಡರ್ ಮಾಡಿ, ಗೋಣಿಚೀಲದಲ್ಲಿ ಪ್ಯಾಕ್ ಮಾಡಿ ಟಾಯ್ಲೆಟ್ ನಲ್ಲಿ ಅಡಗಿಸಿಟ್ಟು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ ಬೆಂಗಾಲೀ ಕೊಲೆಗಡುಕನೊಬ್ಬನನ್ನು ಸುಳ್ಯ ಪೋಲಿಸರು ಅಲ್ಲಿಂದ ಪ್ಯಾಕ್ ಮಾಡಿ ಸುಳ್ಯಕ್ಕೆ ವಾಪಾಸ್ ತಂದಿದ್ದಾರೆ. ಆಪರೇಷನ್ ನಲ್ಲಿ ಭಾಗವಹಿಸಿದ್ದು ಸುಳ್ಯ ಪೋಲಿಸ್ ಟೀಮಿನ ರಾಜು ನಾಯ್ಕ್, ಶ್ರೀಶೈಲ ಮತ್ತು ಸೋಮಯ್ಯ ಹಿರೆಮಠ. ಖಡಕ್ ಖಾಕಿ ಎಸ್ಸೈ ಉದಯ ರವಿ ಡೈರೆಕ್ಷನ್ನು.

ಹಿಂದೆ 2022ರಲ್ಲಿ ಸುಳ್ಯದ ಓಡಬಾಯಿಯ ಬಾರೊಂದರಲ್ಲಿ ಸಪ್ಲೈ ಕೆಲಸ ಮಾಡುತ್ತಿದ್ದ ದೂರದ ವೆಸ್ಟ್ ಬೆಂಗಾಲಿನ ಇಮ್ರಾನ್ ಶೇಖ್ ಎಂಬಾತ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜೊತೆಗೆ ಒಂದು ಪೆಟ್ಟಿಗೆ ಥರದ್ದು ಸಹ. ಅದು ಕಟ್ಟಿಕೊಂಡದ್ದೋ, ಇಟ್ಟು ಕೊಂಡದ್ದೋ ಒಂದೂ ಗೊತ್ತಿಲ್ಲ. ಅಲ್ಲಿ ಗಡಂಗಿನಲ್ಲಿ ಸಪ್ಲೈ ಮಾಡುತ್ತಾ ಇದ್ದ. ಒಂದು ಶುಭ್ರ ಮುಂಜಾನೆ ಬೀರಮಂಗಲದ ಬಾಡಿಗೆ ಮನೆಯಲ್ಲಿ ಪೆಟ್ಟಿಗೆಯನ್ನು ಮರಕಟ್ಟಿಸಿ ಗೋಣಿಯಲ್ಲಿ ತುಂಬಿಸಿ ಪ್ಯಾಕ್ ಮಾಡಿ ಟಾಯ್ಲೆಟ್ ನಲ್ಲಿ ಇಟ್ಟು ಪದ್ರಾಡ್ ಆಗಿ ಬಿಟ್ಟ. ಗೋಣಿಚೀಲದಲ್ಲಿ ಸಿಕ್ಕಿದ ಹುಡುಗಿ ಕೊಲೆಗಡುಕನನ್ನು ಸುಳ್ಯ ಪೋಲಿಸರು ತುಂಬಾ ತುಂಬಾ ಹುಡುಕಿ 2023ರಲ್ಲಿ ಶೇಖ್ ನನ್ನು ಅರೆಸ್ಟ್ ಮಾಡಿ ಹಿಡ್ಕೊಂಡು ಬಂದಿದ್ದರು. ನಂತರ ಶೇಕ್ ಹೈಗೆ ಅಪೀಲ್ ಮಾಡಿಕೊಂಡಿದ್ದು ಸದ್ರಿ ಕೇಸನ್ನು ಕ್ವೇಷ್ ಮಾಡುವಂತೆ ಬೇಡಿಕೊಂಡಿದ್ದ. ಈ ನಡುವೆ ಶೇಕನಿಗೆ ಜಾಮೀನಾಯ್ತು, ಅತ್ತ ಹೈ ಕೋರ್ಟ್ ಶೇಕನ ಅಪೀಲನ್ನು ತೆಗೆದ್ದು ಬಿಸಾಡಿ ಬಿಟ್ಟಿತು. ಶೇಕ್ ಮತ್ತೇ ಕಾಣೆಯಾಗಿ ಬಿಟ್ಟ. ಸುದ್ದಿ ಇಲ್ಲ.

ಹಾಗೆ ಹೈಕೋರ್ಟ್ ಶೇಕನ ಅರ್ಜಿಯನ್ನು ಯಾವಾಗ ಕಸದ ಬುಟ್ಟಿಗೆ ಹಾಕಿತೋ ಶೇಕ ಪಶ್ಚಿಮ ಬಂಗಾಳದ ಚುಕುಬುಕು ಹತ್ತಿ ಬಿಟ್ಟ. ಇತ್ತ ಸುಳ್ಯ ಪೋಲಿಸರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ತಗಡ್ ಬೆಚ್ಚ ಮಾಡಿಕೊಂಡರು.ಈ ಬಗ್ಗೆ ಸ್ಟಡಿ ಮಾಡಿದ ದೊಡ್ಡ ಟೊಪ್ಪಿಯ ಪೋಲಿಸರು ಶೇಕನ ಫೈಲ್ ಕ್ಲೋಸ್ ಮಾಡಲು ಸುಳ್ಯ ಠಾಣೆಯ ಮೂವರು ಖಡಕ್ ಖಾಕಿಗಳಿಗೆ ಜವಾಬ್ದಾರಿ ವಹಿಸಲಾಯಿತು. ಅವರು ಈ ಕೇಸಿಗೆ ಸಂಬಂಧ ಪಟ್ಟಂತೆ ಒಂದು ಸ್ಪೆಷಲ್ ಟೀಂ ಮಾಡಿದ್ದು ಅದರಲ್ಲಿ ಶೇಕನನ್ನು ಮತ್ತೇ ಖೆಡ್ಡಾಕ್ಕೆ ಕೆಡವಲು ಸ್ಕೆಚ್ ಹಾಕಲಾಯಿತು. ಆ ಟೀಂನಲ್ಲಿ HC 368 ರಾಜು ನಾಯ್ಕ್, PC 2283 ಶ್ರೀಶೈಲ ಮತ್ತು PC 1020 ಸೋಮಯ್ಯ ಹಿರೇಮಠ ಇದ್ದಿದ್ದು ಅವರು ಸುಳ್ಯ ಠಾಣೆಯಲ್ಲೇ ಕುಂತು ತಮ್ಮ ಅಷ್ಟೂ ಮಾಹಿತಿದಾರರ ಮೂಲಕ ಇಮ್ರಾನ್ ಶೇಖನ ಅಷ್ಟೂ ಜನ್ಮ ಜಾಲಾಡಿ ಜಾತಕ ತೆಗೆದು ಬಿಟ್ಟರು. ದೀದೀ ನಾಡಲ್ಲಿ ಶೇಕ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ, ಯಾವ ಮೊಬೈಲ್ ಹಿಡಿದಿದ್ದಾನೆ, ಏನು ಕೆಲ್ಸ ಹೀಗೆ ಎಲ್ಲಾ ಮಾಹಿತಿ, ಪಕ್ಕಾ ಮಾಹಿತಿ ಕಲೆಕ್ಟ್ ಆದ ಮೇಲೆಯೇ ಸುಳ್ಯ ಪೊಲೀಸರು ದೀದೀ ನಾಡಿಗೆ ರೈಲು ಹತ್ತಿದ್ದಾರೆ. ವಿಷಯ ಇಮ್ರಾನ್ ಗೆ ಗೊತ್ತೇ ಆಗಲಿಲ್ಲ. ಸುಳ್ಯ ಪೋಲಿಸರು ಅಲ್ಲಿಗೆಲ್ಲ ಬರುವ ಚಾನ್ಸೇ ಇಲ್ಲ ಎಂದು ಇಮ್ರಾನ್ ಗೆ ಹಂಡ್ರೆಡ್ ಪರ್ಸೆಂಟ್ ಇತ್ತು.

ಹಾಗೆ ಕರ್ನಾಟಕ ಹೈಕೋರ್ಟ್ ತನ್ನ ಅರ್ಜಿಯನ್ನು ಕಸದ ಬುಟ್ಟಿಗೆ ಬಿಸಾಡಿದ ಮೇಲೆ ದೀದಿ ಊರಿಗೆ ರೈಲು ಹತ್ತಿದ್ದ ಇಮ್ರಾನ್ ಅಲ್ಲಿ ಪಶ್ಚಿಮ ಬಂಗಾಳದ 24 ನಾರ್ತ್ ಪರಗಣ ಜಿಲ್ಲೆಯ ಹಾದಿಪುರ್ ಗ್ರಾಮದಲ್ಲಿ ಗಡ್ಡ ತೆಗೆದು ಮೇಸ್ತ್ರಿ ಕೆಲಸದಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿಕೊಂಡಿದ್ದ. ಬೇರೇನೇ ಮೊಬೈಲ್, ಸ್ಪ್ಲೆಂಡರ್ ಬೈಕು, ಕೈತುಂಬಾ ಸಂಬಳ. ಸುಳ್ಯದ ಗೋಣಿ ಚೀಲ ಕೇಸು ಮರೆತೇ ಬಿಟ್ಟಿದ್ದ. ಹಾಗೆ ಸುಳ್ಯದಿಂದ ರೈಲು ಹತ್ತಿದ್ದ ಸುಳ್ಯ ಪೋಲಿಸ್ ಟೀಂ ಸೀದಾ ಬಂದು ಪಶ್ಚಿಮ ಬಂಗಾಳದ 24 ನಾರ್ತ್ ಪರಗಣ ಜಿಲ್ಲೆಯ ರಾಜಧಾನಿಯಲ್ಲಿ ಇಳಿದಿದೆ. ಅಲ್ಲೇ ಹೋಟೆಲ್ ರೂಂನಲ್ಲಿ ಕುಂತು ಇಮ್ರಾನ್ ಖಾನ್ ಚಲನವಲನ ಸ್ಟಡಿ ಮಾಡಿದೆ. ಇಮ್ರಾನ್ ಅಕ್ಕನ ಮೊಬೈಲ್ ಗೆ ಬಂದ ಕಾಲ್ ಗಳು,ಕಾಕನಿಗೆ, ಅಳಿಯಾಕನಿಗೆ, ಅಮ್ಮಾಯಿಗೆ, ಇಚ್ಚನಿಗೆ ಬಂದ ಕಾಲ್ ಗಳು, ಎಲ್ಲಾ ಸಂಬಂಧಿಕರಿಗೆ ಬರುವ ಕಾಲ್ ಗಳ ಲಿಸ್ಟ್ ಸ್ಟಡಿ ಮಾಡಿದ ಸುಳ್ಯ ಪೋಲಿಸರು ನಂತರ ಆ ಕಾಲ್ ಎಲ್ಲಿಂದ ಬರುತ್ತಿದೆ ಎಂದು ಟವರ್ ಲೊಕೇಶನ್ ತೆಗೆದು ಇಮ್ರಾನ್ ಎಲ್ಲಿದ್ದಾನೆ ಎಂದು ಕರೆಕ್ಟ್ ಸ್ಪಾಟ್ ಕಂಡು ಹಿಡಿದಿದ್ದಾರೆ. ನಂತರ ತಮ್ಮ ಬಗ್ಗೆ ಲೋಕಲ್ ಪೋಲಿಸರಿಗೆ ತಿಳಿಸಿದ್ದು ಅವರ ಸಹಾಯ ಕೇಳಿದ್ದಾರೆ. ಅದು 24 ಪರಗಣ ಜಿಲ್ಲೆಯ ಹಾದಿಪುರ್ ಗ್ರಾಮ. ಅಲ್ಲಿ ಇಮ್ರಾನ್ ಗಾರೆ ಕೆಲಸಕ್ಕೆ ಹೆಲ್ಪರ್ ಆಗಿದ್ದಾನೆ ಎಂದು ಪಕ್ಕಾ ಮಾಹಿತಿ ಓ.ಕೆ ಆಗುತ್ತಿದ್ದಂತೆ ಸುಳ್ಯ ಪೋಲಿಸರು ಲೋಕಲ್ ಪೋಲಿಸ್ ಜೊತೆ ಆಪರೇಷನ್ ಗೆ ರೆಡಿ ಆಗಿದ್ದಾರೆ.

ಹಾಗೆ ಪಶ್ಚಿಮ ಬಂಗಾಳದ 24 ನಾರ್ತ್ ಪರಗಣ ಜಿಲ್ಲೆಯ ಹಾದಿಪುರ್ ಗ್ರಾಮದಲ್ಲಿ ಸಂಜೆ ಹೊತ್ತು. ಮನೆಯೊಂದರ ಗಾರೆ ಕೆಲಸ ಮುಗಿಸಿ ಇಮ್ರಾನ್ ಕೈಕಾಲು ತೊಳೆದು, ಡ್ರೆಸ್ ಚೇಂಜ್ ಮಾಡಿ ಬೈಕ್ ಸ್ಟಾರ್ಟ್ ಮಾಡಿದ್ದಾನೆ, ಅಷ್ಟೇ! ಒಂದು ಖಾಸಗೀ ಕಾರು ರೊಯ್ಯನೆ ಬಂದು ಬೈಕ್ ಮುಂದೆ ಬಂದು ನಿಂತಿದೆ. ಬಂದಿದ್ದು ಯಾರು ಎಂದು ಇಮ್ರಾನ್ ಮೆದುಳಿಗೆ ಮೆಸೇಜ್ ಹೋಗುವ ಮೊದಲೇ ಕಾರಿಂದ ದಡಬಡ ಇಳಿದಿದ್ದ ಸುಳ್ಯ ಪೋಲಿಸರ ಕೈ ಇಮ್ರಾನ್ ಹೆಗಲಿಗೆ ಬಿದ್ದಿದೆ. ಅದರಲ್ಲೂ ಬಂದಿದ್ದು ಸುಳ್ಯ ಪೋಲಿಸರು ಎಂದು ಗೊತ್ತಾಗುತ್ತಲೇ ಇಮ್ರಾನ್ ಗೆ ನಾಭಿ ಆಜಿ ಹೋಗಿದೆ. ಅಲ್ಲಿಂದ ಇಮ್ರಾನ್ ಬಾಡಿಯನ್ನು ಲೋಕಲ್ ಠಾಣೆಗೆ ಕೊಂಡೋಯ್ದು ಡ್ರೆಸ್ ಮಾಡಿಸಿ ಸ್ಥಳೀಯ ನ್ಯಾಯಾಧೀಶರ ಮುಂದೆ ಪ್ರೊಡ್ಯೂಸ್ ಮಾಡಲಾಗಿತ್ತು. ಆದರೆ ಅಲ್ಲಿನ ನ್ಯಾಯಾಧೀಶರು ಇಮ್ರಾನ್ ಬಾಡಿಯನ್ನು 42 ಗಂಟೆ ಒಳಗೆ ಸುಳ್ಯ ನ್ಯಾಯಾಲಯಕ್ಕೆ ಹಾಜರು ಮಾಡಲೇ ಬೇಕಾದ Transit ವಾರೆಂಟ್ ಇಶ್ಯೂ ಮಾಡಿ ಸುಳ್ಯ ಪೋಲಿಸರ ಕೈಗೆ ಕೊಟ್ಟಿದ್ದರು. ಆಗ ಪೇಚಿಗೆ ಸಿಲುಕಿದ ಸುಳ್ಯ ಪೋಲಿಸರು 42 ಗಂಟೆ ಒಳಗೆ ಪಶ್ಚಿಮ ಬಂಗಾಳದಿಂದ ಸುಳ್ಯಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮನಗಂಡು ಇಮ್ರಾನ್ ಬಾಡಿಯನ್ನು ಏರೋಪ್ಲೇನ್ ಹತ್ತಿಸಿ ಕರ್ನಾಟಕದಲ್ಲಿ ಲ್ಯಾಂಡ್ ಮಾಡಿಸಿ ನ್ಯಾಯಾಲಯಕ್ಕೆ ಪ್ರೊಡ್ಯೂಸ್ ಮಾಡಿದ್ದರು. ಇದೀಗ ಇಮ್ರಾನ್ ಒಳಗೆ ಹೋಗಿದ್ದು ಗೋಣಿ ಚೀಲ ಪ್ರಕರಣಕ್ಕೆ ಒಂದು ನ್ಯಾಯವಾದ ಅಂತ್ಯ ಮಾಡುವಲ್ಲಿ ಸುಳ್ಯ ಪೋಲಿಸರು ಪಟ್ಟ ಶ್ರಮ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top