
ಸುಳ್ಯದಿಂದ ಕೊಯನಾಡಿಗೆ ಸಂಜೆ ಆರು ಗಂಟೆ ಮತ್ತು ಏಳು ಗಂಟೆಗೆ ಹೊರಡುವ ಕೆಎಸ್ಸಾರ್ಟಿಸಿ ಬಸ್ಸುಗಳು ಅತ್ತ ಕೊಯನಾಡಿಗೂ ಹೋಗದೆ ಇತ್ತ ಸುಳ್ಯಕ್ಕೂ ಬಾರದೆ ಕಲ್ಲುಗುಂಡಿಯಲ್ಲೇ ನಿದ್ದೆಗೆ ಜಾರುವ ಪ್ರಸಂಗಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಭಾರೀ ತೊಂದರೆಗೊಳಗಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗೆಂದು ಲಾಸ್ಟ್ ಬಸ್ಸು ಕೊಯನಾಡಲ್ಲೇ ಬಂದು ಸ್ನಾನ ಮಾಡಿ,ಊಟ ಮಾಡಿ ಗುಡ್ನೈಟ್ ಹೇಳುತ್ತದೆಯಂತೆ.

ಹಾಗೆಂದು ಸುಳ್ಯ ಸಿಟಿಯಿಂದ ಸಂಪಾಜೆ ಘಾಟ್ ಪ್ರಾರಂಭವಾಗುವ ಕೊಯನಾಡಿಗೆ ಅನೇಕ ಸೋಮಾರಿ ಸಟಲ್ ಬಸ್ಸುಗಳ ವ್ಯವಸ್ಥೆ ಇದೆ. ಇದಲ್ಲದೆ ಕೊಯನಾಡಿಗೆ ಹೋಗುವವರು ಕೊಯನಾಡನ್ನು ಹಾದು ಹೋಗುವ ಮೈಸೂರು, ಮಡಿಕೇರಿ ಎಕ್ಸ್ ಪ್ರೆಸ್ ಬಸ್ಸುಗಳಿಗೂ ಹತ್ತಿ ಕಲ್ಲುಗುಂಡಿಯಲ್ಲಿ ಇಳಿದು ಬೇರೆ ಸರ್ವಿಸ್ ರಿಕ್ಷಾಗಳ ಮುಖಾಂತರ ಅಥವಾ ವ್ಯಾನ್ ಗಳ ಮೂಲಕ ಕೊಯನಾಡಿನ ತಮ್ಮ ಮನೆಗೆ ಮುಟ್ಟಿಕೊಳ್ಳುವ ವ್ಯವಸ್ಥೆ ಇದೆ. ಈ ಕೊಯನಾಡಿನಿಂದ ಅನೇಕ ಜನ ವಿದ್ಯಾರ್ಥಿಗಳು,ಉದ್ಯೋಗಸ್ಥರು, ವ್ಯಾಪಾರಸ್ಥರು ಮತ್ತು ನಿರುದ್ಯೋಗಿಗಳೂ ಸುಳ್ಯಕ್ಕೆ ಬೆಳಿಗ್ಗೆದ್ದು ಬಂದಿರುತ್ತಾರೆ. ಅವರೆಲ್ಲ ವಾಪಾಸ್ ಆಗೋದು ಸಂಜೆಯೇ. ಹಾಗಾಗಿ ಸಂಜೆ ಕೊಯನಾಡಿಗೆ ಹೋಗುವ ಆರು ಗಂಟೆ ಬಸ್ಸು, ಏಳು ಗಂಟೆ ಬಸ್ಸು ಜಾಮ್ ಟೈಟ್. ಆದರೆ ಈ ಎರಡೂ ಬಸ್ಸುಗಳು ಪೂರ್ತಿ ಕೊಯನಾಡು ತನಕ ಹೋಗಲ್ಲ. ಆ ಎರಡೂ ಬಸ್ಸುಗಳು ಸುಳ್ಯದಿಂದ ಹೊರಟು ಅರಂತೋಡು ಹಾದು ಗೂನಡ್ಕ ದಾಟಿ ಬಂದು ಕಲ್ಲುಗುಂಡಿಯಲ್ಲಿ ಕಂಜಿ ಹಾಕಿ ಬಿಡುತ್ತದೆ. ಮುಂದೆ ಹೋಗೋದೇ ಇಲ್ಲ. ಬೋರ್ಡ್ ಕೊಯನಾಡು ಅಂತ ಇದ್ದರೂ ಬಸ್ಸು ಕಲ್ಲುಗುಂಡಿ ದಾಟಿ ಮುಂದೆ ಸುತಾರಾಂ ಬರಲ್ಲ. ಜೀವ ಕುತ್ತಿದರೂ ಬರಲ್ಲ. ಯಾಕೆ, ಯಾಕೆ ಎಂದು ವಿಚಾರಿಸಲಾಗಿ ಈ ಎರಡು ಬಸ್ಸುಗಳಿಗೆ ಒಂದು ವಿಚಿತ್ರ ಸಮಸ್ಯೆ ಕಂಡು ಬಂದಿದೆ.

ಹಾಗೆ ಸಂಜೆ ಆರು ಗಂಟೆ, ಏಳು ಗಂಟೆ ಕೊಯನಾಡು ಬೋರ್ಡ್ ಬಸ್ಸು ಕಲ್ಲುಗುಂಡಿಯಲ್ಲೇ ಬಂದು ಕಂಜಿ ಹಾಕುವುದರಿಂದ ಸಾರ್ವಜನಿಕರು ಭಾರೀ ತೊಂದರೆಗಳಿಗೆ ಒಳಗಾಗಿದ್ದಾರೆ. ಈ ಬಸ್ಸಿನಲ್ಲಿ ಬರುವ ಹೆಣ್ಣು ಮಕ್ಕಳು, ಫ್ಯಾಮಿಲಿ, ಮಕ್ಕಳು ಮರಿಗಳು ಹೀಗೆ ಎಲ್ಲರೂ ಕಲ್ಲುಗುಂಡಿಯಲ್ಲಿ ಇಳಿದು ಬೇರೆ ದಾರಿ ಹುಡುಕುವ ಅನಿವಾರ್ಯತೆ ಬರುತ್ತದೆ. ಒಂದೋ ಉಳಿದ ಐದು ಕಿಲೋ ಮೀಟರ್ ಸ್ಪೆಷಲ್ ರಿಕ್ಷಾ ಮಾಡಿ ಹೋಗಬೇಕು ಅಥವಾ ಮನೆಯವರು ಬಂದು ಕಲ್ಲುಗುಂಡಿಯಲ್ಲಿ ವಾಹನ ಹಿಡಕ್ಕೊಂಡು ಕಾಯಬೇಕು. ಅದರಲ್ಲೂ ಹೆಂಡ್ತಿ ಮಕ್ಕಳನ್ನ ಹೊತ್ತುಕೊಂಡಿರುವವರ ಕತೆ ಹೇಳಿ ಸುಖವಿಲ್ಲ. ಇದು ಪರಿಸ್ಥಿತಿ.

ಇಲ್ಲಿ ಯಾಕೆ ಈ ಸಮಸ್ಯೆ ಎಂದು ಬಸ್ಸಿನವರಲ್ಲಿ ಕೇಳಿದರೆ ಇಂಗ್ಲೀಷ್, ಪ್ರಾಕೃತ, ಜರ್ಮನ್ ಭಾಷೆಯಲ್ಲಿ ಎಲ್ಲಾ ಬೈದಾಡಿ ಬಿಡುತ್ತಾರೆ. ಕೊಯನಾಡಲ್ಲಿ ಬಸ್ಸು ತಿರ್ಗಿಸಲು ಆಗಲ್ಲ, ಅಲ್ಲಿ ಉಳಿದುಕೊಳ್ಳಲು ರೂಮಿಲ್ಲ, ಕಕ್ಕ ಮಾಡಲು ಟಾಯ್ಲೆಟ್ ಇಲ್ಲ, ಸ್ನಾನ ಮಾಡಲು ಶವರ್ ಫೆಸಿಲಿಟಿ ಇಲ್ಲ, ಊಟ ಸಿಗಲ್ಲ, ಟೀ ಇರಲ್ಲ, ಜಿಗಣೆ, ತಿಗಣೆ ನಿದ್ದೆ ಮಾಡಲು ಬಿಡಲ್ಲ ಇತ್ಯಾದಿ ಇತ್ಯಾದಿ ಸಮಸ್ಯೆ ಹೇಳಿ ಬಿಡುತ್ತಾರೆ. ಸುಳ್ಯದಿಂದ ಎಂಟು ಗಂಟೆಗೆ ಬಿಡುವ ಲಾಸ್ಟ್ ಬಸ್ ಕೊಯನಾಡು ತನಕ ಬಂದು, ಅಲ್ಲೇ ತಿರುಗಿ ನಿಂತು, ಹಾಲ್ಟ್ ಆಗಿ, ಸ್ನಾನ ಮಾಡಿ,ಊಟ ಮಾಡಿ, ಟೀ ಕುಡುದು, ಗಾಢ ನಿದ್ದೆ ಮಾಡಿ ಬೆಳಗ್ಗೆದ್ದು ಹೊರಟು ಹೋಗುತ್ತದೆ. ಇದು ಹೇಗೆ ಅಂತ?
ಈ ಒಂದು ಸಮಸ್ಯೆ ಬಗ್ಗೆ ಸುಳ್ಯ ಡಿಪೋ ಮ್ಯಾನೇಜರ್ ದಿವ್ಯಾ ಮ್ಯಾಡಂ ಅವರೂ ಸಮಸ್ಯೆ ಪರಿಹಾರಕ್ಕೆ ಭಗೀರಥ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಿವ್ಯಾ ಮ್ಯಾಡಂ ಈ ಬಗ್ಗೆ ಕೊಯನಾಡಿಗೆ ಹೋಗಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದರು. ಸ್ಥಳೀಯ ಪಂಚಾಯಿತಿ ಪ್ರಮುಖರನ್ನು ಭೇಟಿ ಆಗಿ ಪಂಚಾಯ್ತಿ ವತಿಯಿಂದ ಬಸ್ಸು ತಿರುಗಿಸಲು ಒಂದು ಚಿಕ್ಕ ಸ್ಥಳಾವಕಾಶ, ಡ್ರೈವರ್, ಕಂಡಕ್ಟರ್ ಗಳಿಗೆ ಉಳಿದು ಕೊಳ್ಳಲು ಒಂದು ವಸತಿ ವ್ಯವಸ್ಥೆ, ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿದ್ದರು. ಆದರೆ ಪಂಚಾಯ್ತಿ ಜನ ಆಕಳಿಸಿದ್ದು ಬಿಟ್ಟರೆ ಬೇರೆ ಯಾವುದೇ ಪೂರಕವಾದ ಪ್ರತಿಕ್ರೀಯೆ ತೋರಿಸದ ಕಾರಣ ದಿವ್ಯಾ ಮ್ಯಾಡಂ ಕೂಡ ಸುಮ್ಮನಾಗಿ ಬಿಟ್ಟಿದ್ದರು. ಇದೀಗ ಜನ ಬೊಬ್ಬೆ ಹೊಡೆಯುತ್ತಿದ್ದಾರೆ ಮತ್ತು ಬೊಬ್ಬೆ ಅರಣ್ಯ ರೋಧನವಾಗುತ್ತಿದೆ.
ಇಲ್ಲಿ ಇನ್ನೊಂದು ವಿಷಯ ಇದೆ. ಈ ಆರು ಗಂಟೆ ಬಸ್ಸು, ಏಳು ಗಂಟೆ ಬಸ್ಸು ಇದೆಯಲ್ಲ ಆ ಬಸ್ಸುಗಳಲ್ಲಿ ಒಂದು ಬಸ್ಸಿನ ಪೈಲೆಟ್ ಲೋಕಲ್ ಕಲ್ಲುಗುಂಡಿಯವನೇ ಆಗಿದ್ದು, ಬಸ್ಸಿನ ಕಂಡಕ್ಟರ್ ಕೂಡ ಲೋಕಲ್ ಜನ ಅಂತ ತಿಳಿದು ಬಂದಿದೆ. ಅವರಿಬ್ಬರಿಗೆ ಮನೆಗೆ ಹೋಗಿ ಹೆಂಡ್ತಿ ಮಕ್ಕಳೊಂದಿಗೆ ಸುಖವಾಗಿರಲು ಮಾವನ ಬಸ್ಸನ್ನು ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಬಯ್ಯುತ್ತಿದ್ದಾರೆ. ಅಲ್ಲಾ ಮಾರಾಯ್ರೆ ಲಾಸ್ಟ್ ಬಸ್ ಕೊಯನಾಡಿನಲ್ಲಿ ತಿರುಗುತ್ತದೆಯಂತೆ, ಅದರ ಪೈಲೆಟ್, ಕಂಡಕ್ಟರ್ ಬಸ್ಸಿನಲ್ಲಿ ಗಾಢ ನಿದ್ರೆ ಮಾಡಿ ಬೆಳಿಗ್ಗೆ ಎದ್ದು ಹೋಗುತ್ತಾರೆ ಎಂದಾದರೆ ಈ ಆರು ಗಂಟೆ ಬಸ್ಸು ಮತ್ತು ಏಳು ಗಂಟೆ ಬಸ್ಸಿಗೆ ಕೊಯನಾಡಿಗೆ ಬರಲು ಏನು ಮಂಡೆ ಸೀಕ್ ಎಂಬುದು ಸಾರ್ವಜನಿಕ ಪ್ರಶ್ನೆ. ಹಾಗೆಂದು ಕಲ್ಲುಗುಂಡಿಯ ಪೈಲೆಟ್ ಮತ್ತು ಕಂಡಕ್ಟರ್ ಕೊಯನಾಡು ತನಕ ಬಸ್ಸು ಕೊಂಡೋಗಿ ಅಲ್ಲಿ ಬಸ್ಸು ಬದಿಗೆ ಹಾಕಿ ನಂತರ ಕಲ್ಲುಗುಂಡಿಗೆ ಬಂದು ಹೆಂಡ್ತಿ ಮಕ್ಕಳೊಂದಿಗೆ ಗಾಢ ನಿದ್ರೆ ಮಾಡಲಿ ಎಂದು ಸಲಹೆ ಬಂದರೆ ಅದೂ ಕಂಪೆನಿ ರೂಲ್ಸ್ ಗೆ ವಿರುದ್ಧ ಅಂತೆ. ಕೆಎಸ್ಸಾರ್ಟಿಸಿ ಬಸ್ ಸಿಬ್ಬಂದಿ ಬಸ್ ಬಿಟ್ಟು ಬೇರೆ ಕಡೆ ಚಾಚಿ ಮಾಡಲು ಆಗಲ್ಲವಂತೆ. ಹಾಗಾದರೆ ಈ ಸಮಸ್ಯೆ ಹೇಗೆ ಮುಗಿಸ ಬಹುದು ಎಂದೇ ಅರ್ಥ ಆಗುತ್ತಿಲ್ಲ. ಸ್ಥಳೀಯ ಆಡಳಿತ ಮತ್ತು ಯಾವುದಾದರೂ ಸಂಘ ಸಂಸ್ಥೆಗಳು ಸೇರಿಕ್ಕೊಂಡು ಏನಾದರೂ ರೂಂ ವ್ಯವಸ್ಥೆ, ಟಾಯ್ಲೆಟ್ ವ್ಯವಸ್ಥೆ ಮಾಡಿದರೆ ಕೊಯನಾಡು ಜನ ಕಲ್ಲುಗುಂಡಿಯಲ್ಲಿ ಬಂದು ಇಳಿಯುವುದು, ಕಂಡ ಕಂಡ ವಾಹನಗಳಲ್ಲಿ “ಯಾನೊರಿ ಬರೊಲಿಯಾ” ಎಂದು ಅಂಗಲಾಚುವುದು, ರಿಕ್ಷಾ ಬಾಡಿಗೆ ಮಾಡುವುದು ಎಲ್ಲ ತಪ್ಪುತ್ತೆ. ಇನ್ನು ದಿವ್ಯ ಮ್ಯಾಡೀ ಕೂಡ ಸ್ವಲ್ಪ ಸ್ಟ್ರಿಕ್ಟ್ ಆಗಿ ಆರು ಗಂಟೆ ಬಸ್ಸು ಮತ್ತು ಏಳು ಗಂಟೆ ಬಸ್ಸು ಸಿಬ್ಬಂದಿಗೆ ಕೊಯನಾಡಿಗೆ ಹೋಗಲೇ ಬೇಕು ಎಂದು ಆರ್ಡರ್ ಮಾಡಲೇ ಬೇಕು. ಡ್ರೈವರ್ ಕಂಡಕ್ಟರ್ ಗಳಿಗೆ ಪಾಪ ತುಂಬಾ ಕಷ್ಟ ಆಗುವುದಿದ್ದರೆ, ಜಿಗಣೆ ತಿಗಣೆ ಪೆಟ್ಟು ಸಹಿಸಲಾಗದಿದ್ದರೆ ಮನೆಗೆ ಹೋಗಿ ಬಿಡಲಿ, ಕೆಲಸ ಮಾಡಲೇ ಬೇಕೆಂಬ ಒತ್ತಾಯ ಯಾರ ಸೈಡಿಂದಲೂ ಬರದು. ಜನ ದುಡ್ಡು ಕೊಟ್ಟು ಎಷ್ಟು ದಿನ ಅಂತ ಹೊಳೆ ಈಜ ಬಹುದು?
