ಗುಂಡ್ಯದ ಅಂಡಿಗುಂಡಿ ಅಂಗಡಿಗಳಿಗೆ ಪೋಲಿಸ್ ನೋಟಿಸ್!

Pattler News

Bureau Report

ದಕ್ಷಿಣ ಕನ್ನಡದ ಗಡಿ ಗುಂಡ್ಯ ಜಂಕ್ಷನ್ ಮತ್ತು ನ್ಯಾಶನಲ್ ಹೈವೇ ಸೈಡಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಅಂಡಿಗುಂಡಿ ಅಂಗಡಿ ಇಟ್ಟುಕ್ಕೊಂಡು ಸಮಾಜ ಬಾಹಿರ ಚಟುವಟಿಕೆಗಳಿಗೆ, ಸಮಾಜ ಕಂಟಕರಿಗೆ ನೀರು ಮತ್ತು ರಸಗೊಬ್ಬರ ಹಾಕಿ ಪೋಷಿಸುತ್ತಿರುವ ಅಂಗಡಿ ಮಾಲೀಕರಿಗೆ ಉಪ್ಪಿನಂಗಡಿ ಪೋಲಿಸರು ನೋಟಿಸ್ ಜಾರಿ ಮಾಡಿದ್ದಾರೆ. “ಮೂಜಿ ದಿನೊತ್ತ ಉಲಾಯಿ ಬರೊಡು”. ಇಲ್ಲದಿದ್ದರೆ ನಾವೇ ಬರುತ್ತೇವೆ ಎಂದು ಪೋಲಿಸರು ನೋಟಿಸಲ್ಲಿ ಬರೆದಿದ್ದಾರೆ. ಅಂಡಿಗುಂಡಿಗಳ ಬಾಯಿ ಪಸೆ ಆಜಲು ಶುರುವಾಗಿದೆ.

ಅಲ್ಲಿ ಗುಂಡ್ಯ ಪೇಟೆಯಲ್ಲಿ ಅಧಿಕೃತ ಅಂಗಡಿಗಳಿಗಿಂತ ಅನಧಿಕೃತ ಅಂಗಡಿಗಳ ಸಾಲೇ ಜಾಸ್ತಿ. ರಿಸರ್ವ್ ಫಾರೆಸ್ಟ್, ನ್ಯಾಶನಲ್ ಹೈವೇ ಪರಂಬೋಕು,ಕಂದಾಯ ಸಚಿವರ ಇಲಾಖೆಯ ಜಾಗ ಹೀಗೆ ಒಂದು ಸೈಕಲ್ ಗ್ಯಾಪ್ ಸಿಕ್ಕಿದರೂ ಸಾಕು ಬಸಳೆ ದೊಂಪದಂತಹ ಅಂಗಡಿಗಳು ರೆಡಿಯಾಗಿ ಬಿಡುತ್ತದೆ. ನಂತರ ನಿಧಾನವಾಗಿ ಗಟ್ಟಿಯಾಗುತ್ತಾ ಹೋಗುವುದು ಇಲ್ಲಿ ವಾಡಿಕೆ. ಸ್ಥಳೀಯ ಆಡಳಿತ ಈ ಅಂಡಿಗುಂಡಿ ಅಂಗಡಿಗಳ ಮುಂದೆ ಒಂದು ನಿಮಿಷ ಕಣ್ಣು ಮುಚ್ಚಿ ಮೌನ ಪ್ರಾರ್ಥನೆ ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ. ಈ ಅಂಗಡಿಗಳಿಗೆ ಪಂಚಾಯತ್ ಲೈಸೆನ್ಸ್ ಇಲ್ಲ. ಆದರೂ ಕರೆಂಟ್ ಕನೆಕ್ಷನ್ ಇದೆ. ತಟ್ಟಿ ಭವನಗಳಿವೆ ಆದರೆ ಆರೋಗ್ಯ ಅಧಿಕಾರಿಗಳು ಈ ಕಡೆ ನೋಡಿ ಕೂಡ ಹೋಗಲ್ಲ. ಹೈವೇ ಸೈಡಲ್ಲಿ ಪಾರ್ಕಿಂಗ್, ಅಮಾಯಕ ಪ್ರಯಾಣಿಕರ ಸುಲಿಗೆ, ಸಮಾಜ ಕಂಟಕರ ಅಡ್ಡೆ ಹೀಗೆ ಈ ಅಂಗಡಿಗಳಿಂದಾಗಿ ಆಗುವ ಸಮಸ್ಯೆ ಒಂದೆರಡಲ್ಲ. ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಅನೇಕ ಸಲ ಧ್ವನಿ ಎತ್ತಿದರೂ ಅರಣ್ಯ ರೋಧನ ಆಗಿದ್ದು ಬಿಟ್ಟರೆ ರಿಸಲ್ಟ್ ಮಾತ್ರ ಶೂನ್ಯ. ಯಾಕೆಂದರೆ ಈ ಅಂಗಡಿಗಳು ಸ್ಥಳೀಯ ಆಡಳಿತಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಗಳಾಗಿದೆ. ಹಾಗಾಗಿ ಸ್ಥಳೀಯ ಆಡಳಿತ ಈ ವಿಷಯದಲ್ಲಿ ಪೊಟ್ಟ,ಕಿವುಡ, ಕುರುಡ ಅಷ್ಟೇ.

ಇದೀಗ ಈ ಅಂಡಿಗುಂಡಿ ಅಂಗಡಿಗಳ ಬಗ್ಗೆ ಪೋಲಿಸ್ ಇಲಾಖೆ ಎಚ್ಚೆತ್ತಿದೆ. ಹೈವೇ ತುಂಬಾ ಬ್ಲಾಕ್ ಗಳು, ಸಮಾಜ ಘಾತುಕ ಶಕ್ತಿಗಳ ಅಡ್ಡೆಯಾಗಿ ಈ ಅಂಗಡಿಗಳು ಇರುವುದರಿಂದ ಉಪ್ಪಿನಂಗಡಿ ಪೋಲಿಸರು ತಗಡ್ ಬೆಚ್ಚ ಮಾಡಿಕ್ಕೊಂಡು ಈ ಎಲ್ಲಾ ಅಂಡಿಗುಂಡಿಗಳಿಗೆ ಪೋಲಿಸ್ ನೋಟಿಸ್ ಜಾರಿ ಮಾಡಿದ್ದಾರೆ. ಪೋಲಿಸರು ನೋಟಿಸ್ ನಲ್ಲಿ ಬರೆದಿರುವಂತೆ ಈ ಅಂಡಿಗುಂಡಿ ಅಂಗಡಿಗಳು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವ ಬಗ್ಗೆ ಪೋಲಿಸರಿಗೆ ಗೊತ್ತಾಗಿದೆ. ಇನ್ನು ಪಾರ್ಕಿಂಗ್ ವಿಷಯದಲ್ಲಿ ಪೋಲಿಸರಿಗೆ ಭಯಂಕರ ಬೆಚ್ಚ ಆಗಿದ್ದು ಅಂಡಿಗುಂಡಿ ಅಂಗಡಿಗಳ ಉಪದ್ರವ ದ ಬಗ್ಗೆ ನೋಟಿಸಲ್ಲಿ ಅಂಡರ್ ಲೈನ್ ಹಾಕಿ ಬರೆದಿದ್ದಾರೆ. ಈ ಅಂಗಡಿಗಳಿಂದ ಹೈವೇಯಲ್ಲಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡೆತಡೆ ಆಗುತ್ತಿದೆ ಎಂದು ಪೋಲಿಸರು ಹೇಳಿದ್ದಾರೆ. ಹಾಗಾಗಿ ಪೋಲಿಸರು BNSS 23 ರ ಸೆಕ್ಷನ್ 94 ಅಡಿಯಲ್ಲಿ ಸದ್ರಿ ಅಂಗಡಿಗಳಿಗೆ ನೋಟಿಸ್ ಮಾಡಿದ್ದು ಮೂರು ದಿನಗಳ ಒಳಗೆ ಅಂಗಡಿಗಳ ಜಾತಕ, ಜನ್ಮ ಕುಂಡಲಿ, ಬರ್ತ್ ಸರ್ಟಿಫಿಕೇಟ್ ಹೀಗೆ ಎಲ್ಲಾ ಹಿಡಕ್ಕೊಂಡು ಉಪ್ಪಿನಂಗಡಿ ಬಸ್ ಹತ್ತಬೇಕು ಎಂದು ಹೇಳಿದ್ದಾರೆ. ಪೋಲಿಸರು ಅಂಗಡಿಗಳ ಲೈಸೆನ್ಸ್, ಪಾರ್ಕಿಂಗ್ ನಕ್ಷೆ, ಮತ್ತು ಹೆದ್ದಾರಿ ಬದಿಯಲ್ಲಿ ವಹಿವಾಟು ಮಾಡಲು ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಇತ್ಯಾದಿ ಕೇಳಿದ್ದು ಪುಣ್ಯಕ್ಕೆ ಪೋಲಿಸರು ಕೇಳಿದ ಯಾವುದೇ ದಾಖಲೆಗಳು ನೋಟಿಸ್ ಪಡೆದ ಅಂಡಿಗುಂಡಿ ಮಾಲೀಕರಲ್ಲಿ ಇರೋದು ನೂರಕ್ಕೆ ನೂರು ಡೌಟು. ಮುಂದುವರಿದು ಪೋಲಿಸರು ಪಾರ್ಕಿಂಗ್ ಮಾಡಲು ಸ್ಥಳ ಮತ್ತು ಸಿಬ್ಬಂದಿ ನಿಯೋಜನೆ ಮಾಡುವಂತೆ ಸೂಚಿಸಿದ್ದಾರೆ. ಪಾರ್ಕಿಂಗ್ ಆದರೂ ಅಲ್ಲೇ ಗುಂಡ್ಯದಲ್ಲೇ ಮಿಲ್ಟ್ರಿಯವರ ಏಳು ಎಕರೆ ಖಾಲಿ ಜಾಗ ಇದ್ದು ಅಲ್ಲಿ ವ್ಯವಸ್ಥೆ ಮಾಡಲು ಅಂಡಿಗುಂಡಿ ಅಂಗಡಿ ಮಾಲೀಕರು ತಯಾರಿದ್ದಾರೆ. ಆದರೆ ಲೈಸೆನ್ಸ್ ಪೋಲಿಸರಿಗೆ ಎಲ್ಲಿಂದ ಕೊಡೋಣ ಎಂಬ ಸಮಸ್ಯೆ ಎದುರಾಗಿದೆ. ಎಲ್ಲಿಯಾದರೂ ಅಂಗಡಿ ಮಾಲೀಕರು ಪೋಲಿಸರು ಹೇಳಿದ ದಾಖಲೆ ಕೊಡಲು ಫೈಲ್ಯೂರ್ ಆದರೆ ಅವರ ವ್ಯಾಪಾರ ಸಂಪೂರ್ಣ ಕಾನೂನು ಬಾಹಿರ ಮತ್ತು ಪೋಲಿಸರು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬದ್ದರು ಎಂದು ಪೋಲಿಸರು ನೋಟಿಸ್ ಬಿಟ್ಟಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡುವ ತಂತ್ರಕ್ಕೆ ಸಾರ್ವಜನಿಕರು ಶರಣಾಗಿದ್ದಾರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top