ಒಂದು ಊರಿನಲ್ಲಿ ಒಂದು ಸಾರ್ವಜನಿಕ ರಸ್ತೆ ಇದ್ದರೆ ಅದು ಯಾರ ಸುಪರ್ದಿಯಲ್ಲಿ ಬರುತ್ತದೆ ಎಂದು ಆ ರಸ್ತೆಯಲ್ಲಿ ದಿನಾ ಸಂಚರಿಸುವವರಿಗೆ ಗೊತ್ತಿರುತ್ತದೆ. ಸಾರ್ವಜನಿಕ ರಸ್ತೆ ಹೆಚ್ಚಾಗಿ ಪಂಚಾಯತ್ ಅಥವಾ ಪಿಡಬ್ಲ್ಯೂಡಿ ಒಡೆತನದಲ್ಲಿ ಇರುತ್ತದೆ.
ಆದರೆ ಅಲ್ಲಿ ಸುಬ್ರಹ್ಮಣ್ಯ-ದೇವರಗದ್ದೆ ರಸ್ತೆಗೆ ಓನರ್ ಯಾರು ಎಂದು ಗೊತ್ತಾಗುತ್ತಿಲ್ಲ. 500 ಮೀಟರ್ ಕಾಂಕ್ರೀಟ್ ರಸ್ತೆಯಲ್ಲಿ ಹತ್ತು ಕಡೆ ಡ್ರೈನೇಜ್ ಸಂಪರ್ಕಕ್ಕೆ ಕಾಂಕ್ರೀಟ್ ಮಾಡದೆ ಮಣ್ಣು ಹಾಕಿ ಬಿಡಲಾಗಿದೆ. ಇದೀಗ ಹಾಕಿದ ಮಣ್ಣೆಲ್ಲಾ ಮಳೆಗೆ ಕೊಚ್ಚಿಕೊಂಡು ಹೋಗಿ ರಸ್ತೆ ಮಧ್ಯೆ ಅಲ್ಲಲ್ಲಿ ದೊಡ್ಡ ದೊಡ್ಡ ತೆಂಗಿನ ಗುಂಡಿಗಳಾಗಿದೆ. ಅರ್ಧ ಕಿ.ಮಿ. ಹೋಗಲು ಹತ್ತು ಸಲ ಪಸ್ಟ್ ಗೇರ್ ಗೆ ಬರಬೇಕಾದ ಅನಿವಾರ್ಯತೆ ವಾಹನ ಚಾಲಕರಿಗೆ. ಒಂದೆರಡು ಕೆ.ಜಿ. ಕಾಂಕ್ರೀಟ್ ಆದ್ರೂ ಕಡ್ಲೆ ಬಜಿಲ್ ಮಾಡಿ ತಂದು ಹಾಕಿ ವಾಹನಗಳ ಗೇರ್ ಬಾಕ್ಸ್ ಉಳಿಸಿ ಅಂತ ಪಂಚಾಯತ್ ಗೆ ಸಂಬಂಧಪಟ್ಟವರಲ್ಲಿ ಹೇಳಿದರೆ ” ಓ.. ಅದಾ… ಅದು ನಮ್ಮ ರಸ್ತೆ ಅಲ್ಲ. ಅದು ದೇವಸ್ಥಾನದ್ದು”. ಅಂತಾರೆ. ಹಾಗೆಂದು ದೇವಸ್ಥಾನದಲ್ಲಿ ದುಡ್ಡಿಗೆ ಏನೂ ಕೊರತೆ ಇಲ್ಲ. ಸ್ಟೇಟ್ ನ ಸಿರಿವಂತ ದೇವರು.
ಒಂದು ನಾಲ್ಕು ಬಟ್ಟಿ ಕಾಂಕ್ರೀಟ್ ದೇವಸ್ಥಾನದವರಲ್ಲಿ ಕೇಳುವ ಅಂತ ವಿಚಾರಿಸಿದರೆ…, ಆ ರಸ್ತೆ ದೇವಸ್ಥಾನಕ್ಕೆ ಸೇರುವುದಿಲ್ಲ. ಅದು ಪಂಚಾಯತ್ ರಸ್ತೆ. ನಾವು ಅದಕ್ಕೆ ಡ್ರೈನೇಜ್ ಮಾಡಿ ಕಾಂಕ್ರೀಟ್ ಮಾಡಿದ್ದು ಮಾತ್ರ. ಪಂಚಾಯತ್ ದೇವಸ್ಥಾನಕ್ಕೆ ಬಿಟ್ಟು ಕೊಡಲಿಲ್ಲ ಅಂತ ಹೇಳ್ತಾರಂತೆ…
ಅಲ್ಲ ಮಾರಾಯ್ರೆ ಹಾಗಾದ್ರೆ ದೇವರಗದ್ದೆ ರಸ್ತೆಗೆ ಅಪ್ಪ ಯಾರು…!? ಅಮ್ಮ ಯಾರು? ಅಜ್ಜ,ಪಿಜ್ಜ ಯಾರು? ರಸ್ತೆ ರಿಪೇರಿಗೆ ಹೇಳಲು ನಾವು ಎಲ್ಲಿಗೆ ಬಸ್ಸತ್ತಿ ಹೋಗಬೇಕು..? ಯಾರ ಟೇಬಲ್ ಗೆ ನಮ್ಮ ಮನವಿ ಟೈಪ್ ಮಾಡಿಸ ಬೇಕು?ಗೊತ್ತಾಗ್ತಾ ಇಲ್ಲ. ಸದ್ಯದಲ್ಲೇ ದೇವರಗದ್ದೆ ಆದಿ ಮೊಗೆರ್ಕಳ ಕೊರಗಜ್ಜ ದೈವಸ್ಥಾನದ ನೇಮೋತ್ಸವ ಕೂಡ ಇದೆ. ನೇಮೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳು ಬರುತ್ತಾರೆ. ನೇಮೋತ್ಸವ ಸಮಿತಿಯವರು ಪಂಚಾಯತ್ ಗೆ ನೇಮೋತ್ಸವದ ಕಾಗಜಿ ಕೊಡುವಾಗ ರಸ್ತೆಯ ಅವಸ್ಥೆಯನ್ನೂ ತಿಳಿಸಿ ಆದಷ್ಟು ಬೇಗ ನಾಲ್ಕು ಬಟ್ಟಿ ಕಾಂಕ್ರೀಟ್ ಹಾಕುವಂತೆ ಮಾಡಿದರೆ ಊರಿಗೆ ನೆಮ್ಮದಿ. ಅಜ್ಜನ ದಯೆಯಿಂದ ಆದರೂ ರಸ್ತೆ ರಿಪೇರಿ ಆಗಲಿ. ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಇರುವ ಪಂಚಾಯತ್ ನ ಕಾರ್ಯವೈಖರಿ ಹೊರ ಊರಿನ ಜನರಿಗೆ ಗೊತ್ತಾಗುವುದು ಬೇಡ…., ಇನ್ನು ಈ ರಸ್ತೆಯ ಫಲಾನುಭವಿಗಳು ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವುದು ಪಂಚಾಯತ್ ಗೆ.., ಹೊರತು ದೇವಸ್ಥಾನಕ್ಕೆ ಅಲ್ಲ. ಹಾಗಾಗಿ ಒಂದು ವೇಳೆ ಈ ರಸ್ತೆ ದೇವಳಕ್ಕೆ ಸಂಬಂಧಿಸಿದ್ದರೂ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಪಂಚಾಯ್ತಿ ಕರ್ತವ್ಯ ಆಗಿರುತ್ತದೆ.

ಲಾಸ್ಟ್ ಬಾಲ್.
ಗ್ರಾಮ ಪಂಚಾಯಿತಿಯಲ್ಲಿ ಹೆಣ್ಣು ಹೆಗ್ಗಣ ವೊಂದು ಬಡವರಿಂದ-ಬಲ್ಲಿದರವರೆಗೇ ಯಾರದನ್ನೂ ಬಿಡದೆ ಬೇಕಾಬಿಟ್ಟಿ ತಿನ್ನುತ್ತಿದೆಯಂತೆ. ಬರುವಾಗ 40 ಕೆ.ಜಿ ಇದ್ದ ಪೆರ್ಗುಡೆ ಈಗ ತಿಂದು.. ತಿಂದು 80 ಕೆ.ಜಿ. ಆಗಿದೆಯಂತೆ. 100 ಬರ್ತಿ ಆಗಲಿ ಅಂತ ಜನ ಕಾಯ್ತಾ ಇದ್ದಾರೆ. ಶತಕ ಆದ ಕೂಡಲೇ ಸವಿಸ್ತಾರ ವರದಿ ವೈರಲ್ ಆಗುವ ಅಪಾಯಗಳಿವೆ.
