ಅಮರ ಮುಡ್ನೂರು, ಪಡ್ನೂರು ಪಂಚಾಯ್ತಿ ವ್ಯಾಪ್ತಿಯ ಅಕ್ಕೋಜಿಪಾಲ್ ಸಮೀಪದ ಅಡಿಕೆ ತೋಟವೊಂದರಲ್ಲಿ ಒಬ್ಬ ಸ್ಥಳೀಯ ಮೆಂಬರ್ ಆಫ್ ಪಂಚಾಯತ್ (MP) ಅಡಿಕೆ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಅಡಿಕೆ ಕದಿಯಲು ಬೋಂಟೆಯೇ ನೆವ.
ಇವರು ಸನ್ಮಾನ್ಯ ರಾಡಣ್ಣ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು. ಜನ ಪ್ರತಿನಿಧಿ. ಸೂರ್ಯ ಇದ್ದಷ್ಟು ಹೊತ್ತು ಜನ ಸೇವೆ, ಮುಳುಗಿದ ಕೂಡಲೇ ಬೋಂಟೆ ಸೇವೆ, ಅಡಿಕೆ ಸೇವೆ, ದನ ಸೇವೆ, ರಬ್ಬರ್ ಸೇವೆ ಇತ್ಯಾದಿ ಇತ್ಯಾದಿ. ಹಾಗೆಂದು ಈ ಅಮರ ಮುಡ್ನೂರು ಪಡ್ನೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರೊಫೆಷನಲ್ ಕಳ್ಳರ ಒಂದು ನೈಟ್ ರೈಡರ್ಸ್ ಟೀಮೇ ಇದೆ. ಆ ಟೀಮಿನ ಆಲ್ ರೌಂಡರ್ ಇದೇ ರಾಡಣ್ಣ. ಈ ನೈಟ್ ರೈಡರ್ಸ್ ಟೀಂ ನೈಟ್ ನಲ್ಲಿ ನೈಂಟಿ ಹಾಕಿ ಬೋಂಟೆಗೆ ಹೊರಟು ಬಿಡುತ್ತದೆ. ಹಾಗೆಂದು ಈ ನೈಟ್ ರೈಡರ್ಸ್ ಮೂಲ ಉದ್ದೇಶ ಬೋಂಟೆ ಅಲ್ಲ. ಯಾರದೋ ಸೆಕೆಂಡ್ ಕೊಯ್ಲು ತೆಗೆಯದ, ಚೆನ್ನೆ ಮಣೆಯ ಪೆರ್ಗದಂತೆ ಕಂಗೊಳಿಸುವ ಅಡಿಕೆ ತೋಟವನ್ನು ಟಾರ್ಗೆಟ್ ಮಾಡಿ ನೈಟ್ ಆಪರೇಷನ್ ಮಾಡೋದು. ಹೇಗೂ ಸುಕ್ಕಕ್ಕೆ ಕೆ.ಜಿಗೆ ನಾಲ್ನೂರ ಚಿಲ್ಲರೆ ಇದೆ.
ಹಾಗೆ ಸೂರ್ಯ ಹೋಗಿ ಇಂಗ್ಲೇಂಡ್ ಕಡೆ ಮುಳುಗಿದ ಕೂಡಲೇ ನೈಟ್ ರೈಡರ್ಸ್ ನೈಂಟಿ ಇಳಿಸಿ ಮನೆ ಬಿಡುತ್ತಾರೆ. ಒಂದು ಕೂಕುಲು, ಒಂದು ಮೆಸೇಜ್. ಎಲ್ಲರೂ ಯಾರಾದೋ ಫಲಭರಿತ ತೋಟದ ಬದಿಯ ಕುಮ್ಕಿಯಲ್ಲಿ ಹಾಜರಾಗಿ ಬಿಡುತ್ತಾರೆ. ಸುಮ್ಮನೆ ಒಂದು ಗಾಳಿಯಲ್ಲಿ ಢಂ. ಶಬ್ದ ಕೇಳಿ ಸುತ್ತಮುತ್ತಲಿನ ಯಾರೂ ಬೋಂಟೆಯವರು ಇದ್ದಾರೆ ಎಂದು ಅಂಗಳಕ್ಕೆ ಇಳಿಯೋದಿಲ್ಲ. ಅದೇ ಸುಸಮಯ. ಬೋಂಟೆಯವರು ಕಂಗಿನ ಕೊಡಿ ತನಕ ಏರಿ ಬಿಡುತ್ತಾರೆ. ಇದು ಇಲ್ಲಿ ತನಕ ನಡೆದುಕೊಂಡು ಬಂದ ನೈಟ್ ರೈಡರ್ಸ್ ಬೋಂಟೆ ಸ್ಟೈಲ್.

ಹಾಗೆ ಓ ಮೊನ್ನೆ ಕೂಡ ಅಕ್ಕೊಜೀ ಪಾಲ್ ಬಳಿ ಯಾರದೇ ಕುಮ್ಕಿ ಬದಿಯಲ್ಲಿ ಯಾವುದೇ ಢಂ ಆಗಿರಲಿಲ್ಲ. ಅಲ್ಲೇ ತೋಟವೊಂದರಲ್ಲಿ ತೋಟದ ಧನಿಕ್ಕುಲು ಲಾಸ್ಟ್ ಟ್ರಿಪ್ ಜೆಟ್ ಚೇಂಜ್ ಮಾಡಲು ಬಂದಾಗ ತೋಟದಲ್ಲಿ ರಾಡಣ್ಣನ ಬಾಡಿ ಗೋಚರಿಸಿದೆ. ಯಾರು ಯಾರು ತೋಟದಲ್ಲಿ ಎಂದು ಮೋನೆಗೆ ಲೈಟ್ ಹಾಕಿದರೆ ರಾಡಣ್ಣ. ನೀನು ಎಂಥ ಮಾಡೋದು ತೋಟದಲ್ಲಿ, ಅದೂ ಈ ಗರ್ಗುಂಡಿ ಕತ್ತಲೆಯಲ್ಲಿ ಎಂದು ಧನಿಕ್ಕುಲು ಕೇಳಲಾಗಿ ರಾಡಣ್ಣ ಬೆಬ್ಬೆಬ್ಬೆ ಆಗಿದ್ದಾರೆ. ಬೋ…ಬೋ…ಬೋಂಟೆಗೆ ಬಂದಿದ್ದು ಎಂದು ರಾಡಣ್ಣ ರೈಲು ಬಿಟ್ಟಿದ್ದಾರೆ. ಸಂಶಯ ಬಂದ ತೋಟದ ಮಾಲೀಕ ರಾಡಣ್ಣನ ಕೈಯಲ್ಲಿ ಏನೆಂದು ನೋಡಲಾಗಿ ಕೈಯಲ್ಲಿ ಗೋಣಿ ಚೀಲ, ಕಂಗಿಗೆ ಹತ್ತುವ ತಲೆ ಸಿಕ್ಕಿದೆ. ಕೂಡಲೇ ತೋಟದ ಮಾಲೀಕ ಅಚಿಂಚಿಯ ಜನ ಸೇರಿಸಿ ರಾಡಣ್ಣನ ಬೆವರಿಳಿಸಿದ್ದಾರೆ. ನಂತರ ರಾಡಣ್ಣ ತೋಟದ ಮಾಲೀಕನ ಕಾಲಿಗೆ ಬಿದ್ದು, ದಮ್ಮಯ್ಯ ಧಕ್ಕಯ್ಯ ಒದರಿ, ಬಸ್ಕಿ ತೆಗೆದು ಬಚಾವಾಗಿದ್ದ ಎಂದು ತಿಳಿದುಬಂದಿದೆ. ಹಾಗೆಂದು ಈ ನೈಟ್ ರೈಡರ್ಸ್ ಟೀಂ ಕೇವಲ ಅಡಿಕೆ ಮಾತ್ರ ಅಲ್ಲ, ರಬ್ಬರ್ ಕದಿಯುವಲ್ಲಿ ಕೂಡ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ದನ ಸಾಗಿಸುವುದರಲ್ಲಿ ಇವರು ಕಸಾಯಿಗಳಿಗಿಂತ ಒಂದು ಪಜ್ಜೆ ಮುಂದೆ.
ಹಾಗೆಂದು ಅಲ್ಲಿ ಅಮರ ಮುಡ್ನೂರು ಪಡ್ನೂರು ಪಂಚಾಯ್ತಿ ವ್ಯಾಪ್ತಿಯ ಕಾಲೋನಿಗಳ ಕೆಲವು ಮನೆಗಳಲ್ಲಿ ಬೋರಿ ಸಾಕುವ ಸಾಂಕ್ರಾಮಿಕ ರೋಗ ಇದೆ. ಈ ಬೋರಿ ಮಕ್ಕಳು ದನ ಸಾಕಲ್ಲ, ಬದಲಾಗಿ ಬೋರಿ ಸಾಕಾಣೆ ಮತ್ತು ಬೋರಿ ಸಾಗಾಣೆ ಇವರ ಸೈಡ್ ಬಿಸಿನೆಸ್. ಈ ಬೋರಿ ಮಕ್ಕಳು ಸಾಕಿದ ಬೋರಿಗಳನ್ನು ಸೇಫಾಗಿ ಕೇರಳ ಗಡಿ ದಾಟಿಸಿ ಬರೋದು ಇದೇ ನೈಟ್ ರೈಡರ್ಸ್ ಟೀಂ ಎಂದು ತಿಳಿದುಬಂದಿದೆ. ರಾಡಣ್ಣ ಈ ವಹಿವಾಟಿನ ಕಿಂಗ್ ಪಿನ್ ಅಂತೆ. ಈ ರಾಡಣ್ಣನ ಮಗನ ಕತೆ ಕೂಡ ದೊಡ್ಡದಿದೆ. ಎಲ್ಲಾ ಹೇಳಿದರೆ ರಾಡಣ್ಣನಿಗೆ ಜ್ವರ ಬಂದೀತು.
……………………………………………….

ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕು. ಧನಲಕ್ಷ್ಮಿ ಪೂಜಾರಿ ಇವರು ಇತ್ತೀಚೆಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ ಕರಿಮಜಲು ಹಾಗೂ ಸಂದೀಪ್ ರೈ ಪಲ್ಲೋಡಿ ಉಪಸ್ಥಿತರಿದ್ದರು
