ಜೈನ ಧರ್ಮದ ಆಚರಣೆಗಳಲ್ಲಿ ಪುರೋಹಿತ ಶಾಹಿ ಹೇರಲು ಶ್ರವಣಬೆಳಗೊಳದ ಸ್ವಾಮಿ ಕರೆ ಕೊಟ್ಟ ಬಗ್ಗೆ ಅಪಸ್ವರ ಎದ್ದಿದ್ದು, ಈಗಾಗಲೇ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಜೈನರಲ್ಲಿ ಈ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ.
ಅದ್ಯಾವುದೋ ಜೈನ ಪುರೋಹಿತರ ಸಮ್ಮೇಳನದಲ್ಲಿ ಮೈಕ್ ಹಿಡಿದ ಶ್ರವಣಬೆಳಗೊಳದ ಸ್ವಾಮಿ ತನ್ನ ಗುರು ಪೀಠದಿಂದ ಕೆಲವೊಂದು ಆದೇಶಗಳ ಘೋಷಣೆ ಮಾಡಿದ್ದು ಈ ಆದೇಶಗಳು ಜೈನ ಧರ್ಮದ ಕಟ್ಟುಕಟ್ಟಳೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿದುಬಂದಿದೆ. ಈ ಆದೇಶಗಳು ಜೈನ ಶ್ರಾವಕರು ಮತ್ತು ಜೈನ ಪುರೋಹಿತರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿ ಬಿಡುವ ಅಪಾಯಗಳಿವೆ. ಮೊದಲೇ ಜೈನರಿಗೆ ಊರಿಲ್ಲದ ಪರಿಸ್ಥಿತಿ ಇದೆ, ಧರ್ಮಸ್ಥಳದಂತಹ ಧರ್ಮಸ್ಥಳವನ್ನೇ ಲಗಾಡಿ ತೆಗೆಯುವ ಪ್ಲಾನ್ ಚಾಲ್ತಿಯಲ್ಲಿರುವಾಗ ಸ್ವಾಮಿಯ ಈ ಆದೇಶ ಜೈನ ಧರ್ಮವನ್ನೇ ಒಡೆಯುವ ಆದೇಶ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.ಸ್ವಾಮಿ ಬಿಟ್ಟಿರುವ ಆದೇಶಗಳು ಈ ಕೆಳಗಿನಂತಿದೆ ಮತ್ತು ಈ ಆದೇಶದ ಬಗ್ಗೆ ಒಬ್ಬ ಸಾಮಾನ್ಯ ಜೈನ ಶ್ರಾವಕನ ಮನದಲ್ಲಿ ಮೂಡುವ ಅಭಿಪ್ರಾಯಗಳು ಹೀಗಿದೆ.
ಆದೇಶ 1) ಪುರದ ಹಿತವನ್ನು ಬಯಸುವ ಪುರೋಹಿತರಿಗೆ ಕಣ್ಣೀರು ತರಿಸಿದರೆ ನಿಮ್ಮ ವಂಶ, ಮನೆತನ ಉದ್ದಾರ ಆಗಲ್ಲ. ನಿಮ್ಮ ವಂಶ, ಮನೆತನ ಬೆಳೆಯಬೇಕಾದರೆ ಪುರೋಹಿತರ ಮೇಲೆ ದಬ್ಬಾಳಿಕೆ ನಿಲ್ಲಿಸಿ, ಅವರಿಗೆ ಕಣ್ಣೀರು ತರಿಸ ಬೇಡಿ ಎಂದು ಸ್ವಾಮಿ ಆದೇಶಿಸಿದ್ದಾರೆ. ಇಷ್ಟಕ್ಕೂ ಪುರೋಹಿತರ ಕಣ್ಣಲ್ಲಿ ನೀರು ತರುವ ಕೆಲಸ ಯಾರು ಮಾಡಿದ್ದಾರೆ ಎಂದು ಸ್ವಾಮಿಗಳೇ ಹೇಳಬೇಕು. ಅಹಿಂಸೋ ಪರಮಧರ್ಮ, ಬದುಕು ಮತ್ತು ಬದುಕಲು ಬಿಡು ಎಂಬ ಸ್ಲೋಗನ್ ಇರುವ ಧರ್ಮದ ಗುರು ಪೀಠವೇ ಹೀಗೆಲ್ಲ ಗ್ಲೀಸರಿನ್ ವಿಷಯ ಮಾತಾಡಿದರೆ ಅದೂ ಒಂದು ಸೈಜಿನ ಹಿಂಸೆಯೇ ಅಲ್ಲವೇ. ಇನ್ನು ಪುರದ ಹಿತವನ್ನು ಬಯಸುವವವರನ್ನು ನಮ್ಮ ಮಠಗಳು, ಗುರು ಪೀಠಗಳು ಹೇಗೆ ನಡೆಸಿಕೊಂಡಿದೆ ಎಂಬುದರ ಅಂಕಿಅಂಶ ತೆಗೆದರೆ ಅದರಲ್ಲಿ ಕಣ್ಣೀರ ಕತೆಗಳೇ ತುಂಬಿ ತುಳುಕಾಡುವ ಅಪಾಯಗಳಿವೆ. ಪುರದ ಹಿತವನ್ನು ಬಯಸುವವವರನ್ನು ಇಲ್ಲಿತನಕ ಯಾವುದೇ ಕಷ್ಟಗಳು ಎದುರಾದರೂ, ಯಾವುದೇ ಕಾನೂನುಗಳು ಬಂದರೂ ಸಾಕಿ ಸಲಹಿದ್ದು ಇದೇ ಶ್ರಾವಕರು. ಪುರದ ಹಿತ ಬಯಸಲು ಆ ಒಂದು ಪಂಗಡ ಜೊತೆಗೆ ಇರಲಿ ಎಂದು ಇಲ್ಲಿ ತನಕ ಇಡೀ ಜೈನ ಸಮುದಾಯದವರು ಪುರೋಹಿತರನ್ನೂ ಸೇರಿಸಿ ಎಲ್ಲರೂ ಒಂದೇ ಎಂದು ಸಮಾಜದ ಮುಂದೆ ಒಗ್ಗಟ್ಟು ಪ್ರದರ್ಶಿಸಿದರೆ ಈ ಗುರು ಪೀಠದ ಸ್ವಾಮಿ ಜೈನರ ಒಗ್ಗಟ್ಟನ್ನು ಮುರಿದು ಪುರದ ಹಿತ ಬಯಸುವ ಜೈನರು, ಹಿತ ಬಯಸದ ಜೈನರು, ದಬ್ಬಾಳಿಕೆ ಜೈನರು, ಗ್ಲೀಸರಿನ್ ಜೈನರು, ರೌಡಿ ಶೀಟ್ ಜೈನರು, ಭೂಗತ ಜೈನರು, ಚಿಲ್ಲರೆ ಜೈನರು ಎಂದು ವಿವಿಧ ಕೆಟಗರಿ ಮಾಡಲು ನೋಡುತ್ತಿರುವುದು ವಿಪರ್ಯಾಸವೇ ಸರಿ.
ಆದೇಶ 2) ದೇಶದಾದ್ಯಂತ ಇರುವ ಜಿನ ಮಂದಿರಗಳ, ಜಿನ ಮೂರ್ತಿಗಳ ರಕ್ಷಣೆ ಮಾಡಿದ್ದು ಪುರೋಹಿತರು, ಅವರ ಆ ಒಂದು ಉಪಕಾರವನ್ನು ಯಾರೂ ಮರೆಯಬಾರದು. ಹೌದು ಸ್ವಾಮಿ, ದೇಶದಾದ್ಯಂತ ಇರುವ ಜಿನ ಮಂದಿರಗಳ, ಜಿನ ಮೂರ್ತಿಗಳ ರಕ್ಷಣೆ ಮಾಡಿದ್ದು ನಿಮ್ಮ ಪ್ರಕಾರ ಪುರೋಹಿತರೇ ಇರಬಹುದು. ಆದರೆ ಜಿನ ಮಂದಿರಗಳ, ಜಿನ ಮೂರ್ತಿಗಳನ್ನು ಉಳಿಸಿ ಕೊಳ್ಳಲು ಕೋರ್ಟ್ ಕಚೇರಿಗಳಿಗೆ ಅಲೆದಾಡಿದ್ದು, ಪ್ರತಿಭಟನೆಗಳನ್ನು ಹಮ್ಮಿಕೊಂಡದ್ದು, ಇಂಥ ಕೆಲಸಗಳಿಗೆ ಹಣವನ್ನು ಹೆಣ ಮಾಡದೆ ಹೊಳೆಯಂತೆ ಹರಿಸಿದ್ದು ಇದೇ ಶ್ರಾವಕರು ಎಂಬುದನ್ನು ಕೂಡ ಸ್ವಾಮಿಗಳು ಮರೆಯಬಾರದು. ಸ್ವಾಮಿಗಳ ಪ್ರಕಾರ ಜಿನ ಮಂದಿರಗಳ ರಕ್ಷಣೆಯನ್ನು ಪುರದ ಹಿತವನ್ನು ಬಯಸುವ ಜನ ಮಾಡಿರ ಬಹುದು ಆದರೆ ಮಠ ಮಾನ್ಯಗಳನ್ನು, ಗುರುಪೀಠಗಳನ್ನು ಉಳಿಸಿದ್ದೂ ಇದೇ ಶ್ರಾವಕರು ಸ್ವಾಮಿ. ಮಠಗಳಿಗೆ, ಗುರು ಪೀಠಗಳಿಗೆ ಪೀಠಾಧಿಪತಿಗಳು ಹೇಳಿದ ತಕ್ಷಣ ಗೋಣಿ ಗೋಣಿಗಳಲ್ಲಿ ತಂದು ದೇಣಿಗಳನ್ನು ಸುರಿದಿದ್ದು ಯಾರು ಸ್ವಾಮಿ? ಮಠಗಳಿಗೆ, ಪೀಠಗಳಿಗೆ ಆಸ್ತಿ ಮಾಡಿಕೊಟ್ಟಿದ್ದು, ಮಠಗಳಿಗೆ ಆದಾಯದ ಮೂಲ ಮಾಡಿದ್ದು,ಪರ್ಮನೆಂಟಾಗಿ ಒಂದು ದೊಡ್ಡ ಮೊತ್ತದ ಉತ್ಪತ್ತಿ ಮಾಡಿಕೊಟ್ಟಿದ್ದು, ಸ್ವಾಮಿಗಳಿಗೆ ಧರ್ಮ ಪ್ರಚಾರ ಮಾಡಲು ಐಶಾರಾಮಿ ಕಾರು ಒದಗಿಸಿ ಕೊಟ್ಟಿದ್ದು, ಮಠಾಧಿಪತಿಗಳು ಹೋದಲ್ಲಿ ಬಂದಲ್ಲಿ ಬ್ಯಾಂಡ್ ವಾಲಗ, ಕೊಂಬು ಕಹಳೆ, ಚಿತ್ತಾರದ ಛತ್ರಿಯ ಸ್ವಾಗತ ಸಿಗಲು ಕಾರಣೀಭೂತರು ಕೇವಲ ಪುರದ ಹಿತವನ್ನು ಬಯಸುವವರು ಮಾತ್ರ ಅಲ್ಲ ಸ್ವಾಮಿ. ಅಲ್ಲಿ ಬದಿಯಲ್ಲಿ ಶ್ರಾವಕ ಇದ್ದೇ ಇರುತ್ತಾನೆ.

ಆದೇಶ 3) ಪುರೋಹಿತರು ದೇಶದ ರಾಷ್ಟ್ರಪತಿ ಇದ್ದಂತೆ. ಅವರು ಯಾವ ರೀತಿ ದೇಶದ ಪ್ರಥಮ ಪ್ರಜೆಯೋ ಹಾಗೆ ಪುರೋಹಿತರು ಆ ಊರಿನ ಪ್ರಥಮ ಶ್ರಾವಕರಾಗಿರುತ್ತಾರೆ. ಮುನಿಗಳನ್ನು, ಮಠಾಧಿಪತಿಗಳನ್ನು ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸಲು ಶ್ರಾವಕರ ಕಮಿಟಿಯವರು ಮಠಗಳಿಗೆ ಹೋಗುವಾಗ ಪುರೋಹಿತರನ್ನು ಕರೆದುಕೊಂಡು ಹೋಗುವುದು ಕಡ್ಡಾಯ ಎಂದು ಸ್ವಾಮಿ ಘೋಷಿಸಿದ್ದಾರೆ. ಹೌದು ಸ್ವಾಮಿ! ಪುರೋಹಿತರನ್ನು ಊರಿನ ಪ್ರಥಮ ಶ್ರಾವಕರು ಎಂದು ನೀವೇನೋ ಘೋಷಿಸಿದ್ದೀರಿ. ಆದರೆ ಪ್ರಥಮ ಪ್ರಜೆಯನ್ನು ಹೊತ್ತುಕ್ಕೊಂಡು ಪ್ರಧಾನಿಯಾಗಲಿ, ಅವರ ಮಂತ್ರಿ ಮಂಡಲವಾಗಲಿ ಜಾತ್ರೆ ಮಾಡುವ ಕ್ರಮಗಳು, ಉಪಕ್ರಮಗಳು ಈ ಲೋಕದಲ್ಲಿ ಇಲ್ಲ. ಕ್ಯಾಬಿನೆಟ್ ಮೀಟಿಂಗಿಗೆ ದ್ರೌಪದಿ ಮುರ್ಮುಗೆ, ಪ್ರಿನ್ಸ್ ಚಾರ್ಲ್ಸ್ ಗೆ, ಎಲಿಜೆಬೆತ್ ರಾಣಿಗೆ ಯಾರೂ ಆಹ್ವಾನ ಕೊಡಲ್ಲ. ಹೊಯ್ಸಳರ ವಿಷ್ಣುವರ್ಧನ, ತಲಕಾಡಿನ ಗಂಗರಸ ರಾಚಮಲ್ಲ ಯುದ್ಧಕ್ಕೆ ಹೊರಡುವಾಗ ಸೇನಾಧಿಪತಿಗಳನ್ನು, ದಂಡನಾಯಕರನ್ನು ಕರೆದುಕೊಂಡು ಹೋಗಿದ್ದೇ ಉದಾಹರಣೆ ಹೊರತು ಪುರದ ಹಿತವನ್ನು ಬಯಸುವ ಜನರ ಜೊತೆ ಯುದ್ಧಕ್ಕೆ ಹೋದ ಉದಾಹರಣೆ ಇಲ್ಲ.

ಆದೇಶ 4) ಪುರೋಹಿತರು ಹಾಲು ಅಕ್ಷತೆಗಾಗಿ ಶ್ರಾವಕರ ಮನೆಗೆ ಹೋಗಬಾರದು, ಶ್ರಾವಕರೇ ಅದನ್ನು ಬಸದಿಗೆ ತಂದೊಪ್ಪಿಸ ಬೇಕು, ಎಲ್ಲಿಯಾದರೂ ಅಂಥ ಕಷ್ಟದ ಪರಿಸ್ಥಿತಿ ಬಂದರೆ, ಪುರೋಹಿತರಿಗೆ ಹಾಲು ಅಕ್ಷತೆಯ ಜರೂರತ್ತು ಇದ್ದರೆ ಬೆಳಗೊಳ ಮಠಕ್ಕೆ ಬನ್ನಿ, ಮಠ ಅಂತಹ ಬಡ ಪುರೋಹಿತರಿಗೆ ಹಾಲು ಅಕ್ಷತೆಯ ವ್ಯವಸ್ಥೆ ಮಾಡುತ್ತದೆ ಎಂದು ಸ್ವಾಮಿ ಘೋಷಿಸಿದ್ದಾರೆ. ಹೌದು ಸ್ವಾಮಿ! ಬಡ ಪುರೋಹಿತರಿಗೆ ಹಾಲು ಅಕ್ಷತೆಯ ವ್ಯವಸ್ಥೆ ಮಠದಲ್ಲಿ ಮಾಡುತ್ತೀರಿ ಎಂದು ಹೇಳುತ್ತೀರಿ ಹಾಗಾದರೆ ಮಠಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಪುರೋಹಿತರನ್ನು ಸಾಕಿ ಸಲಹಲು ದುಡ್ಡೆಲ್ಲಿಂದ ಸ್ವಾಮಿ? ಅಂಬಾನಿ ಕೊಡ್ತಾನಾ ಅಥವಾ ನಿಮ್ಮ ಪೂರ್ವಾಶ್ರಮದ ಮನೆಯಿಂದ ತಂದು ಕೊಡುತ್ತೀರಾ? ದೇವರ ಪ್ರತಿನಿಧಿಯಾಗಿ ಶ್ರಾವಕರ ಮನೆಗೆ ಬರುವ ಪುರೋಹಿತರ ನ್ನು ದೆವ್ವದ ಪ್ರತಿನಿಧಿ ಮಾಡಬೇಡಿ ಸ್ವಾಮಿ. ಹಾಲು ಅಕ್ಷತೆಗಾಗಿಯೇ ಎಂದು ಯಾವ ಪುರೋಹಿತರೂ ಬೆಳಿಗ್ಗೆದ್ದು ಬಂದು ಶ್ರಾವಕರ ಮನೆ ಕದ ತಟ್ಟಲ್ಲ. ಬದಲಾಗಿ ಯಾವುದೋ ಹಬ್ಬ ಹರಿದಿನದ ಹೇಳಿಕೆ ಕೊಡಲು ಬಂದಾಗ ಹಾಲು ಅಕ್ಷತೆಯ ಕಲೆಕ್ಷನ್ ಮಾಡೋದು ರೂಢಿ. ಪುರೋಹಿತರನ್ನು ಕೇವಲ ಹಾಲು ಅಕ್ಷತೆಗಾಗಿಯೇ ಬೆಳಗೊಳ ಬಸ್ ಹತ್ತಿಸುವಷ್ಟು ಬಡತನದಲ್ಲಿ ಜೈನ ಶ್ರಾವಕರು ಯಾವತ್ತೂ ಇಟ್ಟಿಲ್ಲ ಸ್ವಾಮಿ. ನಿಮ್ಮ ಘೋಷಣೆಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ನೋಡಿ. ಟಂಗನ್ನು ಟಾಂಗ ಮಾಡಿ ಓಡಿಸುವಾಗ ಕಡಿವಾಣ ಮುಖ್ಯ ಸ್ವಾಮಿ. “ಸಾಹೇಬ್ರೆ,ಕುದುರೆ ಎರ್ರಾಬಿರ್ರಿ ಓಡೀತು”.
ಯುವರ್ ಆನರ್,
ಜೈನ ಧರ್ಮ ಒಂದು ಸ್ವತಂತ್ರ ಧರ್ಮ. ಅದು ಯಾವುದೇ ಮಠಮಾನ್ಯಗಳು, ಗುರುಪೀಠಗಳು, ದೊಣ್ಣೆ ನಾಯಕರು, ಪಾಳೇಗಾರರ ಅಂಡರ್ ನಲ್ಲಿ ಬರಲ್ಲ. ಪ್ರಿಯಕಾರಿಣಿಯ ಮಗನಿಗೆ ಮಾತ್ರ ಇಪ್ಪತ್ನಾಲ್ಕನೇ ನಮಸ್ಕಾರ ಹೊಡೆದದ್ದು ಬಿಟ್ಟರೆ ಜೈನರು ಬೇರೆ ಮಠಗಳ, ಗುರುಪೀಠಗಳ ಕಾವಿ ಧಣಿಗಳಿಗೆ ಕಡ್ಡಾಯವಾಗಿ ಸಲಾಂ ಹೊಡೆಯಲೇ ಬೇಕಾದ ಅನಿವಾರ್ಯತೆ ಇಲ್ಲ. ಜೈನ ಬಸದಿಗಳಲ್ಲಿ,ಪೂಜಾ ಮಂದಿರಗಳಲ್ಲಿ ಸ್ವತಂತ್ರ ಆಡಳಿತ ಇದೆಯೇ ಹೊರತು ಅವುಗಳು ಗುರು ಪೀಠಗಳಿಗೆ ನಮಸ್ಕಾರ ಹೊಡೆಯುತ್ತಾ ಇರಬೇಕಾದ ಅನಿವಾರ್ಯತೆ ಇಲ್ಲ. ಬಸದಿಗಳ, ಪೂಜಾ ಮಂದಿರಗಳ ಧಾರ್ಮಿಕ ವಿಧಿ ವಿಧಾನಗಳಲ್ಲಿ ಮಠಾಧೀಶರು, ಪೀಠಾಧಿಪತಿಗಳು ಸಲಹೆ ಸೂಚನೆ ಕೊಡಬಹುದೇ ವಿನಃ ಆಡಳಿತದಲ್ಲಿ ಮೂಗು ತೂರಿಸೋದು, ಮೀಸೆ ನುಗ್ಗಿಸೋದು, ಕೈಯಾಡಿಸೋದು,ಕಾಲು ಕೆರೆಯೋದು ವಿವಾದಗಳಿಗೆ ಕಾರಣವಾಗುತ್ತದೆ. ಜೈನ ಧರ್ಮ ಅಳಿವಿನಂಚಿನಲ್ಲಿದೆ. ಆ ಧರ್ಮಕ್ಕೆ ಹಾಲೆರೆದು,ನೀರೆರೆದು ಪೋಷಿಸಬೇಕಾದ ಗುರುಗಳೇ ವಿಷ ಬೀಜ ಬಿತ್ತಿದರೆ ಜೈನ ಧರ್ಮದ ಗತಿಯೇನು? ಎಲ್ಲವನ್ನೂ ತ್ಯಾಗ ಮಾಡಿ ಗುರು ಪೀಠಕ್ಕೆ ಏರಿರುವ ಯಾವುದೇ ಪೀಠಾಧಿಪತಿಗಳಿಗೆ ತಮ್ಮ ಪೂರ್ವಾಶ್ರಮದ ಸೆಳೆತ ಇರುವುದು ಸಹಜ ಕೂಡ. ತಮ್ಮ ಪಂಗಡಕ್ಕೆ,ತಮ್ಮ ಜನರಿಗೆ ಕಿಂಚಿತ್ ಒಳ್ಳೆದು ಮಾಡಿಯೇ ಮಾಡುವುದು ಮನುಷ್ಯ ಧರ್ಮ. ಆದರೆ ಅವರು ಮಾಡುವ ಉಪಕಾರದಲ್ಲಿ ಬಾಕಿಯವರಿಗೆ ಅಪಕಾರ ಆಗದಿದ್ದರೆ ಅಷ್ಟೇ ಸಾಕು.
