ಬೆಳ್ಳಾರೆಯಲ್ಲಿ ಮತ್ತೇ ಆಪರೇಷನ್ ಟಿಂಬರ್ ನಡೆಸಿರುವ ಅರಣ್ಯ ಇಲಾಖೆ ಒಂದು ಲೋಡ್ ಮರ ಸಮೇತ ಒಂದು ಲಾರಿಯನ್ನು ಜಬಕ್ಕನೆ ಹಿಡಿದು ಕೊಂಡೋಗಿ ಪುತ್ತೂರು ಆಫೀಸಿನಲ್ಲಿ ಇಟ್ಟಿದ್ದಾರೆಂದು ಮಾಹಿತಿ ಬಂದಿದೆ. ಈ ಸಲ ಬಂದಿದ್ದು ಸಂಚಾರಿ ದಳ ಅಲ್ಲ, ಖುದ್ದು ಪುತ್ತೂರು ರೇಂಜೆರ್ ಕಿರಣ್. ಯಾಕೋ ಬೆಳ್ಳಾರೆಯಲ್ಲಿ ಮರಗಳ್ಳರ ದೆಸೆ ಚೆನ್ನಾಗಿಲ್ಲ.
ಓ ಮೊನ್ನೆ ತಾನೇ ಬೆಳ್ಳಾರೆಯಲ್ಲಿ ವಹಿದಾ ಮನೆ ಹತ್ತಿರ ಜಾಯಿಂಟ್ ಕಟ್ಟಾಗಿ ಕಂಜಿ ಹಾಕಿ ನಿಂತಿದ್ದ ಟಿಂಬರ್ ಲಾರಿಯನ್ನು ಮಂಗಳೂರು ಅರಣ್ಯ ಸಂಚಾರಿ ದಳದವರು ಬಂದು ಸೀಜ್ ಮಾಡಿ ಮರಗಳ್ಳರಿಗೆ ಮರ್ಮಾಘಾತ ನೀಡಿದ್ದರು. ಸಂಚಾರಿ ಸಂತೋಷ್ ರೇಂಜೆರ್ ಇನ್ನು ಬೆಳ್ಳಾರೆ ಕಡೆ ಅಪಗಪಗ ಬಂದು ಸಿಕ್ಸ್ ಫೋರ್ ಎತ್ತುತ್ತಾರೆ ಎಂದು ಆವತ್ತೇ ಎಲ್ಲರಿಗೂ ಮನವರಿಕೆಯಾಗಿತ್ತು. ಹಾಗಾಗಿ ಗರ್ಗಸ್ ಗಳು ರಜೆಯಲ್ಲಿತ್ತು. ಆದರೆ ಈ ಮಧ್ಯೆ ಬೆಳ್ಳಾರೆ ಸಮೀಪದ ಪಾಟಾಜೆಯ ಬಲ್ಲೆಯಲ್ಲಿ ಲಾರಿಯೊಂದಕ್ಕೆ ಮರ ಲೋಡ್ ಆಗುತ್ತಿದೆ ಎಂಬ ಮಾಹಿತಿ ಪುತ್ತೂರು ರೇಂಜೆರ್ ಕಿರಣ್ ಮೊಬೈಲಿಗೆ ಬಂದಿದೆ. ಕೂಡಲೇ ಬೆಳ್ಳಾರೆಯ ಪಾಟಾಜೆಗೆ ಧಾವಿಸಿ ಬಂದ ರೇಂಜೆರ್ ಕಿರಣ್ ಲೋಡ್ ಆಗಿ ರೆಡಿಯಾಗಿದ್ದ ಲಾರಿಯನ್ನು ಸೀಜ್ ಮಾಡಿದ್ದಾರೆ.

ಇದೀಗ ಮರವನ್ನು ಲಾರಿ ಸಮೇತ ಪುತ್ತೂರು ಅರಣ್ಯ ಇಲಾಖೆಯ ಆವರಣದಲ್ಲಿ ನಿಲ್ಲಿಸಲಾಗಿದೆ. ಮರ ಯಾರದ್ದು, ಯಾರು ಬ್ಯಾರ ಮಾಡಿದ್ದು, ಎಲ್ಲಿಗೆ ಹೋಗಲು ರೆಡಿಯಾಗಿತ್ತು, ಲಾರಿ ಯಾರದ್ದು, ಲೋಡ್ ಮಾಡಿದ ಕ್ರೇನ್ ಯಾರದ್ದು ಎಂದು ಎಲ್ಲಾ ಮಾಹಿತಿ ಇದೆ. ಆದರೆ ಮೊನ್ನೆಯ ಕೇಸಿನಲ್ಲಿ ವಿವರಗಳನ್ನು ಹಾಕಿದ ಕಾರಣ ನಮ್ಮ ವಿರುದ್ಧ ದೊಡ್ಡ ದೊಡ್ಡ ಭೂತಗಳಿಗೆ ಹರಿಕೆಗಳಾಗಿದ್ದು ಇದೀಗ ಭೂತಗಳೇ “ಜಾಸ್ತಿ ಒತ್ತಡ ಬಂದರೆ ನಮಗೂ ಏನು ಮಾಡಕ್ಕಾಗಲ್ಲ”ಎಂದು ಕೈಚೆಲ್ಲ ಬಹುದು ಎಂಬ ಕಾರಣಕ್ಕೆ ಯಾರ ವಿವರಗಳನ್ನೂ ಹಾಕಿಲ್ಲ. ಇವರು ಮರ ಕದಿಯಲಿ, ಕಡಿಯಲಿ ಬೇಕಾದರೆ ಮರದಲ್ಲಿ ನೇತಾಡಲಿ.
