ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಭಿವೃದ್ಧಿ ಪ್ರಾಧಿಕಾರದ ಘೋಷಣೆ ಮಾಡಿದ್ದರು. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತ್ವರಿತವಾಗಿ ಸೂಕ್ತ ಮೂಲಸೌಕರ್ಯ ಒದಗಿಸಲು ಇದು ಅನಿವಾರ್ಯವೂ ಆಗಿದೆ. ಆದರೆ ಇದೀಗ ಆ ಅಭಿವೃದ್ಧಿ ಪ್ರಾಧಿಕಾರ ಸುಬ್ರಹ್ಮಣ್ಯದಲ್ಲಿ ಆಗಬಾರದು ಎಂದು ಕೆಲವೊಂದು ಮಂದಿ ನಿರುದ್ಯೋಗಿಗಳು ಹೋರಾಟಕ್ಕೆ ಅಣಿಯಾಗಿದ್ದಾರೆ.

ಯಾತಕ್ಕಾಗಿ ಹೋರಾಟ…!? ಈ
ಹೋರಾಟಗಾರರು ಹೇಳುವುದು ಒಂದೇ ಮಾತು, ಅಭಿವೃದ್ಧಿ ಪ್ರಾಧಿಕಾರ ಜಾರಿಯಾದ್ರೆ. ಕ್ಷೇತ್ರದ ಅಭಿವೃದ್ಧಿಗೆ ಭೂ ಸ್ವಾಧೀನ ಅಡಿಯಲ್ಲಿ ನಿಮ್ಮ ಜಾಗ ಹೋಗ್ತದೆ. ಹಾಗಾಗಿ ಎಲ್ಲರೂ ಇದನ್ನು ವಿರೋಧಿಸಬೇಕು ಎಂದು. ಅಲ್ಲ ಮಾರ್ರೆ ಒಂದು ವೇಳೆ ಶ್ರೀ ದೇವಳದ ಅಭಿವೃದ್ಧಿಗೆ ನಿಮ್ಮ ಜಾಗ ಬೇಕು ಅಂತಾದರೆ ನೀವು ಬಿಟ್ಟು ಕೊಡಬೇಕು. ಅವರೇನು ಪುಕ್ಕಟೆ ಕೇಳ್ತಾ ಇದ್ದಾರ..? ಮಾರುಕಟ್ಟೆ ದರಕ್ಕಿಂತ ಐದು ಪಟ್ಟು ಹೆಚ್ಚು ನೀಡುತ್ತಾರೆ. ಇದರಿಂದ ನಿಮಗೆ ನಷ್ಟ ಏನು..? ಅಷ್ಟಕ್ಕೂ.. ಆ ಜಾಗ ಏನು ನಿಮ್ಮ ವಂಶಪಾರಂಪರ್ಯವಾಗಿ ಬಂದದ್ದ..!? ಹೆಚ್ಚೆಂದರೆ ನಿಮ್ಮ ಅಜ್ಜ, ಪಿಜ್ಜ ಶ್ರೀ ದೇವಳದ ಮತ್ತು ಸರ್ಕಾರದ ಜಾಗಕ್ಕೆ ಬೇಲಿ ಹಾಕಿ ತಮ್ಮ ಹೆಸರಿಗೆ ಮಾಡಿಕೊಂಡದ್ದು. ನಿಜವಾಗಿ ನೋಡಿದರೆ ನೀವು ಒಂದು ರೂಪಾಯಿ ಪಡೆದುಕೊಳ್ಳದೆ ಸ್ವ ಇಚ್ಛೆಯಿಂದ ಶ್ರೀ ದೇವಳದ ಜಾಗವನ್ನು ಶ್ರೀ ದೇವಳಕ್ಕೆ ನೀಡಬೇಕು.ಇನ್ನು ದೇವಳದ ಅಭಿವೃದ್ಧಿಗೆ ಪ್ರಾಧಿಕಾರ ಅತಿ ಅವಶ್ಯಕ. ನಾವು ಇಲ್ಲಿಂದ ಕಳುಹಿಸಿದ ಯಾವುದೇ ಅಭಿವೃದ್ಧಿಯ ಕೆಲಸದ ಫೈಲ್ ಗಳು ಮುಂದುವರಿಯುವುದಿಲ್ಲ. ಹಾಗಾಗಿ ಇಲ್ಲಿಯೇ ಪ್ರಾಧಿಕಾರ ಇದ್ದರೆ ತ್ವರಿತವಾಗಿ ನಿರ್ಣಯ ಕೈಗೊಂಡು ಬೇಗ ಕೆಲಸ ಆಗುತ್ತದೆ. ಹಾಗಾಗಿ ಇಲ್ಲಿ ಪ್ರಾಧಿಕಾರ ಆಗಲೇಬೇಕು ಎಂದು ಒತ್ತಾಯ ಮಾಡುತ್ತಿದ್ದವರೇ…, ಇಂದು ವಿರೋಧಿಸುವುದನ್ನು ಕಂಡಾಗ ಇಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡಿವೆ ಎಂದೆನಿಸುತ್ತದೆ.

ಈ ಬಗ್ಗೆ
ಸುಬ್ರಹ್ಮಣ್ಯದ ನೂರು ಜನರನ್ನು ಭೇಟಿಯಾಗಿ ಪ್ರಾಧಿಕಾರದ ಬಗ್ಗೆ ಅಭಿಪ್ರಾಯ ಕೇಳಿದರೆ 30% ಜನ ಆದ್ರೂ ತೊಂದರೆ ಇಲ್ಲ. ಆಗದಿದ್ರೂ ತೊಂದರೆ ಇಲ್ಲ ಅಂದರೆ. 60% ಜನ ಪ್ರಾಧಿಕಾರ ಆಗಲೇಬೇಕು ಎಂದು ಹೇಳಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಆಗ್ತದೆ. ದೂರದ ಊರಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗತ್ತದೆ. ಊರು ಅಭಿವೃದ್ಧಿ ಆದರೆ ನಾವೂ ಅಭಿವೃದ್ಧಿ ಆದಂತೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಇನ್ನುಳಿದ 10% ಜನ ಮಾತ್ರ ಯಾರದ್ದೋ ಒತ್ತಡಕ್ಕೆ ಮಣಿದ ವಿರೋಧಿಸುತ್ತಿದ್ದಾರೆ. ಈ ಸಮೀಕ್ಷೆಯಿಂದ ಕಂಗೆಟ್ಟ ಪ್ರಾಧಿಕಾರ ವಿರೋಧಿ ಪಡೆ ಸುಬ್ರಹ್ಮಣ್ಯದ ಜನರನ್ನು ನಂಬಿದ್ರೆ ಆಗಲ್ಲ.. ಅಂತ ಪಕ್ಕದ ಐನೆಕಿದು ಹಾಗು ಏನೆಕಲ್ಲು ಗ್ರಾಮದತ್ತ ತನ್ನ ಕಾಕ ದೃಷ್ಟಿ ಬೀರಿದ್ದಾರೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅನುದಾನದಿಂದ ಅವರು ರಸ್ತೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಈ ಹೋರಾಟಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಅಲ್ಲ ಸ್ವಾಮಿ.., ಪಂಚಾಯತ್ ಅನುದಾನದಿಂದ ರಸ್ತೆ ಮಾಡಿಕೊಂಡ ಮಾತ್ರಕ್ಕೆ ಅವರಿಗೆ ಇಷ್ಟ ಇಲ್ಲದಿದ್ದರೂ ಹೋರಾಟದಲ್ಲಿ ಭಾಗವಹಿಸಬೇಕು ಎನ್ನುವುದು ಯಾವ ಸೀಮೆ ನ್ಯಾಯ..!? ನೀವು ಕರೆದ ಕೂಡಲೇ ಬರಲು ಅವರಿಗೆ ರಸ್ತೆ ಏನು ನಿಮ್ಮ ಕಿಸೆಯಿಂದ ದುಡ್ಡು ಕೊಟ್ಟು ಮಾಡಿಸಿದ್ದೀರ..!?

ಕ್ಷೇತ್ರದ ಅಭಿವೃದ್ಧಿಗೆ ಅಂತ ಇರುವ ಮಾಸ್ಟರ್ ಪ್ಲಾನ್ ಸಮಿತಿಯವರೇ.., ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸುತ್ತಿರುವುದನ್ನು ಕಂಡು ಸುಬ್ರಹ್ಮಣ್ಯ ದೇವರೇ.. ತನ್ನ ಆರು ತಲೆಗಳ ಮೇಲೆ ತನ್ನೆರಡು ಕೈ ಇಟ್ಟು ಹನ್ನೆರಡು ಕಣ್ಣುಗಳನ್ನು ಕೆಂಪು ಮಾಡಿಕೊಂಡು ಕುಳಿತ್ತಿದ್ದಾನಂತೆ. ದೇವಸ್ಥಾನಕ್ಕೆ ದೇವರೇ ಗತಿ.


